ಬುಧವಾರ, ಜನವರಿ 22, 2020
16 °C
ಪರ್ಯಾಯ ಪಲಿಮಾರು ವಿದ್ಯಾಧೀಶ ಶ್ರೀಗಳ ಅಭಿಮತ

ವಿದ್ಯಾಧೀಶ ಶ್ರೀಗಳ ಸಂದರ್ಶನ: ಭಕ್ತರ ಸಹಕಾರದಿಂದ ಈಡೇರಿದ ಸಂಕಲ್ಪಗಳು

ಬಾಲಚಂದ್ರ ಎಚ್‌. Updated:

ಅಕ್ಷರ ಗಾತ್ರ : | |

Prajavani

ಉಡುಪಿ: ಕೃಷ್ಣನ ಗರ್ಭಗುಡಿಯ ಗೋಪುರಕ್ಕೆ 100 ಕೆ.ಜಿ ಚಿನ್ನ ಸಮರ್ಪಣೆ, ಸುವರ್ಣ ತುಲಾಭಾರ ಮಾಡುವ ಮೂಲಕ ಪರ್ಯಾಯ ಪಲಿಮಾರು ಮಠದ ವಿದ್ಯಾಧೀಶ ತೀರ್ಥರು ಸುವರ್ಣ ಶ್ರೀಗಳು ಎಂದೇ ಪ್ರಸಿದ್ಧರಾದರು. ‘ಕೃಷ್ಣನಿಗೇಕೆ ಚಿನ್ನ’ ಎಂಬ ಟೀಕೆಗಳು ಎದುರಾದಾಗ ಕಿವಿಗೊಡದೆ ಸುವರ್ಣ ಸಂಕಲ್ಪ ನೆರವೇರಿಸಿದರು. ಅಖಂಡ ಭಜನೆ, ನಿತ್ಯ ಲಕ್ಷ ತುಳಸಿ ಅರ್ಚನೆ ನಡೆಸಿ ಭಕ್ತರ ಪ್ರೀತಿಗೆ ಪಾತ್ರರಾದರು. ಪರ್ಯಾಯದ ಅಂತಿಮ ಘಟ್ಟದಲ್ಲಿರುವ ಶ್ರೀಗಳು ‘ಪ್ರಜಾವಾಣಿ’ ಜತೆ ಮಾತನಾಡಿದರು.

* ಪರ್ಯಾಯ ಅವಧಿಯ ಕಾರ್ಯಗಳು ತೃಪ್ತಿ ನೀಡಿವೆಯೇ ?

ಈ ಪ್ರಶ್ನೆಗೆ ಭಕ್ತರು ಉತ್ತರಿಸಬೇಕು. ಪರ್ಯಾಯ ಸಂಕಲ್ಪಗಳನ್ನು ಕೃಷ್ಣ ಪ್ರೀತಿಯಿಂದ ಸ್ವೀಕಾರ ಮಾಡಿದ್ದಾನೆ. ಪರ್ಯಾಯ ಅವಧಿಯ ಮೂರು ಮುಖ್ಯ ಸಂಕಲ್ಪಗಳಾದ ಅಖಂಡ ಭಜನೆ, ನಿತ್ಯ ಲಕ್ಷ ತುಳಸಿ ಅರ್ಚನೆ ಹಾಗೂ ಸುವರ್ಣ ಗೋಪುರ ಸಮರ್ಪಣೆ ಯಶಸ್ವಿಯಾಗಿ ನೆರವೇರಿದ್ದು ತೃಪ್ತಿಕೊಟ್ಟಿದೆ. ಸುವರ್ಣ ಗೋಪುರ ನಿರ್ಮಾಣ ಮಠಕ್ಕೆ ಶಾಶ್ವತ ಆಸ್ತಿಯಾದರೆ, ಕೃಷ್ಣನಿಗೆ ಅರ್ಪಿತವಾದ ತುಳಸಿ ವ್ಯರ್ಥವಾಗದೆ ಆಯುರ್ವೇದ ಬಳಕೆಗೆ ಹೋಗುತ್ತಿದೆ. ಅಖಂಡ ಭಜನೆ ಜನರ ಮನಸ್ಸಿನಲ್ಲಿ ಶಾಂತಿ, ನೆಮ್ಮದಿ ನೀಡಿದೆ. 

* ಯಾವ ಕಾರ್ಯಗಳನ್ನು ಮಾಡಲು ಸಾಧ್ಯವಾಗಲಿಲ್ಲ ಎಂಬ ಕೊರಗಿದೆ ?

ಬಡ ವಿದ್ಯಾರ್ಥಿಗಳಿಗೆ ವಿದ್ಯಾರ್ಥಿ ವೇತನ ಹಾಗೂ ಅನಾರೋಗ್ಯ ಪೀಡಿತರಿಗೆ ನಿರೀಕ್ಷೆಯಷ್ಟು ಸಹಾಯಧನ ಕೊಡಲಾಗಲಿಲ್ಲ ಎಂಬ ಕೊರಗಿದೆ. ಮುಂದೆ, ಈ ಎರಡೂ ಸಾಮಾಜಿಕ ಕಾರ್ಯಗಳಿಗೆ ನಿರ್ಧಿಷ್ಟ ನಿಧಿಯನ್ನು ಮೀಸಲಿಡಲಾಗುವುದು. ಈ ಕೊರಗಿನ ಮಧ್ಯೆಯೂ ಧನ್ವಂತರಿ ಚಿಕಿತ್ಸಾಲಯದ ಮೂಲಕ ಉಚಿತ ವೈದ್ಯಕೀಯ ನೆರವು ನೀಡಿದ ಸಮಾಧಾನವಿದೆ.   

* ನಿರಂತರ ಭಜನೆ, ನಿತ್ಯ ಲಕ್ಷ ತುಳಸಿ ಅರ್ಚನೆ ಕಷ್ಟವಾಗಲಿಲ್ಲವೇ ?

ಆರಂಭದಲ್ಲಿ ಕಷ್ಟವಾಯಿತು. ತುಳಸಿ ಬೆಳೆಸುವುದು, ಬಿಡಿಸುವುದು, ಸಮರ್ಪಿಸುವುದು, ನಿರಂತರ ಭಜನೆ ಸುಲಭವಲ್ಲ. ರಾತ್ರಿಯ ಹೊತ್ತು ಕೇಳುಗರು ಇಲ್ಲದಿದ್ದರೂ ಭಜನೆ ನಡೆಯಿತು. ಅಸಾಧ್ಯವಾದ ಕಾರ್ಯಗಳನ್ನು ದೇವರೇ ಮಾಡಿಸಿಕೊಂಡಿದ್ದಾನೆ.

* ಸುವರ್ಣ ಗೋಪುರ ಸಮರ್ಪಣೆ ಯೋಜನೆಯಿಂದ ಸಾಲ ಹೊತ್ತುಕೊಳ್ಳಬೇಕಾಯಿತೇ ?

ಕೃಷ್ಣನಿಗೆ ಸುವರ್ಣ ಗೋಪುರ ನಿರ್ಮಿಸಿದ್ದು ಪಲಿಮಾರು ಶ್ರೀಗಳಲ್ಲ; ಭಕ್ತರ ಸಹಕಾರದಿಂದ ಯೋಜನೆ ಸಾಕಾರವಾಯ್ತು. ಯೋಜನೆಗೆ ಚಿನ್ನದ ಕೊರತೆಯಾಗಿದ್ದು ನಿಜ. ಸಾಲವಾಗಿ ಪಡೆದ ಚಿನ್ನವನ್ನು ಸ್ವಲ್ಪ ಸ್ವಲ್ಪ ತೀರಿಸಲಾಗುತ್ತಿದೆ. ಕೃಷ್ಣನ ಪೂಜೆ ಮಾಡಿ ಸಾಲಹೊತ್ತುಕೊಳ್ಳುವ ಸಂದರ್ಭ ಬರುವುದಿಲ್ಲ. ಭಕ್ತರು ಅದಕ್ಕೆ ಅವಕಾಶವನ್ನೂ ಕೊಡುವುದಿಲ್ಲ.

*ಪರ್ಯಾಯ ನಂತರ ಮುಂದಿನ ಕಾರ್ಯ ಯೋಜನೆಗಳು ಏನು ?

ಕುಂಜಾರಿನಲ್ಲಿ ಮಧ್ವಾಚಾರ್ಯರ ವಿಗ್ರಹ ಪ್ರತಿಷ್ಠಾಪನೆಯಾಗಿದ್ದು, ಅಲ್ಲಿ ಸುಂದರ ಉದ್ಯಾನ ನಿರ್ಮಿಸುವ ಯೋಚನೆ ಇದೆ. ಹರಿದ್ವಾರದಲ್ಲಿ ಭಕ್ತರಿಗೆ ವಸತಿ ವ್ಯವಸ್ಥೆ ಮಾಡುವ ಚಿಂತನೆ ಇದೆ. ಜತೆಗೆ, ನಿರಂತರ ಸಂಚಾರದ ಮೂಲಕ ತತ್ವ ಪ್ರಸಾರ ನಡೆಯಲಿದೆ.

* ಕೃಷ್ಣನಿಗೆ ಸಲ್ಲಿಸಿದ ಪ್ರಾರ್ಥನೆಗಳು ಫಲಕೊಟ್ಟಿವೆಯೇ ?

ಖಂಡಿತ, ದಶಕಗಳಿಂದ ಕಗ್ಗಂಟಾಗಿ ಉಳಿದಿದ್ದ ರಾಮಮಂದಿರ ನಿರ್ಮಾಣ ವಿವಾದ ಬಗೆಹರಿದು, ಮಂದಿರ ನಿರ್ಮಾಣ ಕಾಲ ಸನ್ನಿಹಿತವಾಗಿದೆ. ಕಾಶ್ಮೀರ ಸಮಸ್ಯೆಯೂ ಪರಿಹಾರ ಹಂತದಲ್ಲಿದೆ. ಪೌರತ್ವ ನೋಂದಣಿ ಕಾಯ್ದೆ ಜಾರಿಗೆ ಬರುತ್ತಿದೆ. ದೇಶಕ್ಕೆ ಸಮರ್ಥ ನಾಯಕತ್ವ ಸಿಕ್ಕಿದೆ. ಇವೆಲ್ಲವೂ ಪ್ರಾರ್ಥನೆಯ ಫಲಗಳು ಎನ್ನಬಹುದು. 

* ಕಿರಿಯ ಶ್ರೀಗಳಿಗೆ ಯಾವ ಹೊಣೆಗಾರಿಕೆ ನೀಡುತ್ತೀರಿ ?

ಸಂಸ್ಕೃತ ಪಾಠ, ತರ್ಕ ಶಾಸ್ತ್ರ, ಮೀಮಾಂಸೆ ಶಾಸ್ತ್ರ, ವೇದ, ಉಪನಿಷತ್ತುಗಳ ಅಧ್ಯಯನಕ್ಕೆ ಕನಿಷ್ಠ 12 ವರ್ಷಗಳ ಕಲಿಕೆ ಅಗತ್ಯ. ಹಾಗಾಗಿ, ಸಂಚಾರಕ್ಕೆ ಹೆಚ್ಚು ಒತ್ತುಕೊಡುವ ಬದಲು ಕಿರಿಯ ಶ್ರೀಗಳಿಗೆ ಪಾಠ ಹೇಳಲಾಗುವುದು. ಅದಮಾರು ಕಿರಿಯ ಶ್ರೀಗಳಿಗೂ ಪಾಠ ಮಾಡಬೇಕಾದ ಹೊಣೆಗಾರಿಕೆ ಇದೆ.

* ಭಕ್ತರಿಗೆ ನೀಡುವ ಸಂದೇಶಗಳು ಏನು ?

ಪರಿಸರ ರಕ್ಷಣೆಗೆ ಒತ್ತು, ಆಧ್ಯಾತ್ಮದತ್ತ ಒಲವು, ಅವಿಭಕ್ತ ಕುಟುಂಬಗಳು ಬೆಳೆಯಬೇಕು ಎಂಬುದು ಅಪೇಕ್ಷೆ. ಉಡುಪಿಯ ಜನರು ಸಾಮಾಜಿಕ, ಧಾರ್ಮಿಕ, ಶೈಕ್ಷಣಿಕ ಕಾರ್ಯಗಳಿಗೆ ಯಾವತ್ತಿಗೂ ಮುಂದೆ ಬಂದಿದ್ದಾರೆ. ಈ ಕಾರ್ಯ ನಿರಂತರವಾಗಿರಲಿ. 

* ‘ಪೇಜಾವರ ಶ್ರೀ ಅಷ್ಟಮಠಗಳ ಸಂಪತ್ತು’

ಯತಿಧರ್ಮಕ್ಕೆ ಚ್ಯುತಿಬಾರದಂತೆ ಪೇಜಾವರ ಶ್ರೀಗಳು ಮಾಡಿದ ಸಮಾಜಸೇವೆ  ಅನುಕರಣೀಯ. ಸಾಮಾಜಿಕವಾಗಿ ಅವರಷ್ಟು ತೊಡಗಿಸಿಕೊಳ್ಳುವ ಧೈರ್ಯ ಯಾವ ಯತಿಗಳಿಗೂ ಇಲ್ಲ. ಆದರೆ, ಅವರು ಹಾಕಿಕೊಟ್ಟ ದಾರಿಯಲ್ಲಿ ಸ್ವಲ್ಪ ದೂರವಾದರೂ ಸಾಗುತ್ತೇನೆ ಎಂಬ ವಿಶ್ವಾಸವಿದೆ. ಪೇಜಾವರ ಶ್ರೀಗಳು ಅಷ್ಟಮಠಗಳ ದೊಡ್ಡ ಸಂಪತ್ತು. ಮಠಗಳಲ್ಲಿ ಭಿನ್ನಾಭಿಪ್ರಾಯ ಮೂಡಿದಾಗ ಹಿರಿಯಣ್ಣನಂತೆ ಮುಂದೆ ನಿಂತು ಸಮಸ್ಯೆ ಬಗೆಹರಿಸಿದರು. ‘ನ ಭೂತೋ ನ ಭವಿಷ್ಯತಿ’ ಎಂಬಂತೆ ಪೇಜಾವರ ಶ್ರೀಗಳಂತಹ ಯತಿಗಳು ಸಿಗಲು ಸಾಧ್ಯವಿಲ್ಲ.

ಪ್ರತಿಕ್ರಿಯಿಸಿ (+)