ಭಾನುವಾರ, ಜನವರಿ 19, 2020
28 °C
ಜಿಲ್ಲಾ ಉಸ್ತುವಾರಿ ಸಚಿವ ಬಸವರಾಜ ಬೊಮ್ಮಾಯಿ

ಉಡುಪಿ: ನಾಡಹಬ್ಬದಂತೆ ವಿಜೃಂಭಣೆಯ ಪರ್ಯಾಯ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಉಡುಪಿ: ಉಡುಪಿಯ ಪರ್ಯಾಯ ಮಹೋತ್ಸವ ನಾಡಹಬ್ಬದಂತೆ ವಿಜೃಂಭಣೆಯಿಂದ ನಡೆಯಬೇಕು. ಹೊರ ಜಿಲ್ಲೆಗಳಿಂದ ಬರುವ ಭಕ್ತರಿಗೆ ತೊಂದರೆಗಳಾಗದಂತೆ ಸೂಕ್ತ ವ್ಯವಸ್ಥೆ ಕಲ್ಪಿಸಬೇಕು ಎಂದು ಜಿಲ್ಲಾ ಉಸ್ತುವಾರಿ ಸಚಿವ ಬಸವರಾಜ ಬೊಮ್ಮಾಯಿ ಜಿಲ್ಲಾಧಿಕಾರಿ ಜಿ.ಜಗದೀಶ್ ಅವರಿಗೆ ಸೂಚನೆ ನೀಡಿದರು.

ಮಂಗಳವಾರ ಕೃಷ್ಣಮಠದ ಅಥಿತಿ ಗೃಹದಲ್ಲಿ ನಡೆದ ಪರ್ಯಾಯ ಪೂರ್ವಭಾವಿ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿ, ಪರ್ಯಾಯ ಮಹೋತ್ಸವಕ್ಕೆ ರಾಜ್ಯ ಸರ್ಕಾರದಿಂದ ₹ 3 ಕೋಟಿ, ಜಿಲ್ಲಾಡಳಿತ, ನಗರಸಭೆಯಿಂದ ₹ 11 ಕೋಟಿ ಅನುದಾನ ನೀಡಲಾಗಿದೆ. ಕುಂದು–ಕೊರತೆ ಬಾರದಂತೆ ಅಧಿಕಾರಿಗಳು ಹಾಗೂ ಸಂಬಂಧಪಟ್ಟ ಇಲಾಖೆಗಳು ಮುತುವರ್ಜಿಯಿಂದ ಕಾರ್ಯನಿರ್ವಹಿಸಬೇಕು ಎಂದರು.

ಭಕ್ತರಿಗೆ ವಸತಿ, ಕುಡಿಯುವ ನೀರು, ಶೌಚಾಲಯ ಹಾಗೂ ಸಂಚಾರ ವ್ಯವಸ್ಥೆ ಸೂಕ್ತ ರೀತಿಯಲ್ಲಿರಬೇಕು. ಜಿಲ್ಲಾಡಳಿತ ಹಾಗೂ ಸಂಬಂಧಪಟ್ಟ ಇಲಾಖೆಗಳು ಪರ್ಯಾಯದ ಯಶಸ್ಸಿಗೆ ಶ್ರಮಿಸಬೇಕು ಎಂದು ಹೇಳಿದರು.

ಶಾಸಕ ರಘಪತಿ ಭಟ್ ಮಾತನಾಡಿ, ಜ.8 ಬುಧವಾರ ಮಧ್ಯಾಹ್ನ 2ಕ್ಕೆ ಅದಮಾರು ಮಠದ ಕಿರಿಯ ಯತಿ ಈಶಪ್ರಿಯ ತೀರ್ಥ ಸ್ವಾಮೀಜಿ ಪುರಪ್ರವೇಶ ಮಾಡಲಿದ್ದಾರೆ. ಜೋಡುಕಟ್ಟೆಯಿಂದ ಮೆರವಣಿಗೆಯ ಮೂಲಕ ಪುರ ಪ್ರವೇಶ ನಡೆಯಲಿದೆ. ರಾತ್ರಿ 8ಕ್ಕೆ ರಥಬೀದಿಯಲ್ಲಿ ಈಶಪ್ರಿಯ ತೀರ್ಥರಿಗೆ ಪಲಿಮಾರು ಮಠದ ವಿದ್ಯಾಧೀಶ ತೀರ್ಥರಿಂದ ಪೌರ ಸನ್ಮಾನ ನೆರವೇರಲಿದೆ ಎಂದರು.

ಇದೇ ಮೊದಲ ಬಾರಿಗೆ ಜ.15 ರಂದು ಅದಮಾರು ಮಠ ಹಾಗೂ ಮಲ್ಪೆ ಭಾಗದಿಂದ ಮಾತ್ರ ಹೊರೆ ಕಾಣಿಕೆ ಸ್ವೀಕರಿಸಲಾಗುವುದು. ಪರ್ಯಾಯದ ಬಳಿಕ ಪ್ರತಿ 15 ದಿನಗಳಿಗೊಮ್ಮೆ (ಏಕಾದಶಿ, ರವಿವಾರ ಹೊರತುಪಡಿಸಿ) ಹೊರೆ ಕಾಣಿಕೆ ಸ್ವೀಕರಿಸಲಾಗುವುದು ಎಂದು ಹೇಳಿದರು.

ಜ.18ರಂದು ಬೆಳಗ್ಗಿನ ಜಾವ 2ಕ್ಕೆ ಪರ್ಯಾಯ ಮೆರವಣಿಗೆ ಆರಂಭವಾಗಲಿದ್ದು, ಮಧ್ಯಾಹ್ನ 2.30ಕ್ಕೆ ಪರ್ಯಾಯ ದರ್ಬಾರ್ ನಡೆಯಲಿದೆ. ದರ್ಬಾರಿನ ಅಧ್ಯಕ್ಷತೆಯನ್ನು ಈಶಪ್ರಿಯ ತೀರ್ಥರು, ಮುಖ್ಯಮಂತ್ರಿ ಯಡಿಯೂರಪ್ಪ, ಕೇಂದ್ರ ಸಚಿವೆ ನಿರ್ಮಲಾ ಸೀತರಾಮನ್ ಸೇರಿದಂತೆ ಹಲವು ಗಣ್ಯರು ಭಾಗವಹಿಸಲಿದ್ದಾರೆ.

18 ರಿಂದ 22 ವರೆಗೆ ಸಾಂಸ್ಕಂತಿಕ ಕಾರ್ಯಕ್ರಮಗಳು ನಡೆಯಲಿವೆ. ಈ ಬಾರಿಯ ಪರ್ಯಾಯದಲ್ಲಿ ಪರಿಸರ ಸ್ನೇಹಿ ಬ್ಯಾನರ್‌ಗಳನ್ನು ಬಳಸುತ್ತಿರುವುದು ವಿಶೇಷ ಎಂದರು.

ಹೆಚ್ಚುವರಿ ಜಿಲ್ಲಾಧಿಕಾರಿ ಸದಾಶಿವ ಪ್ರಭು ಮಾತನಾಡಿ, ಪರ್ಯಾಯ ಹಿನ್ನೆಲೆಯಲ್ಲಿ ನಗರದ ರಸ್ತೆಗಳ ದುರಸ್ತಿ ಕಾರ್ಯ ನಡೆದಿದ್ದು, ದಾರಿ ದೀಪಗಳನ್ನು ರಿಪೇರಿ ಮಾಡಲಾಗಿದೆ. ನೈರ್ಮಲ್ಯಕ್ಕೆ ಆದ್ಯತೆ ನೀಡಲಾಗಿದ್ದು, ಶೌಚಾಲಯಗಳನ್ನು ನಿರ್ಮಾಣ ಮಾಡಲಾಗುತ್ತಿದೆ. ಪೊಲೀಸ್ ಇಲಾಖೆಯಿಂದ ಬೆಂಗಾವಲು ವ್ಯವಸ್ಥೆ ಮಾಡಲಾಗಿದೆ ಎಂದರು.‌

ಪರ್ಯಾಯಕ್ಕಾಗಿ 3 ತಿಂಗಳಿನಿಂದ ತಯಾರಿಗಳು ನಡೆಯುತ್ತಿದ್ದು, ಅಂತಿಮ ಹಂತದ ಕೆಲಸಗಳು ಶೀಘ್ರ ಮುಕ್ತಾಯವಾಗಲಿವೆ. ನಗರದ ಸೌಂದರ್ಯಕ್ಕೆ ಹಾಗೂ ನೈರ್ಮಲ್ಯಕ್ಕೆ ಟೆಂಡರ್ ಕರೆಯಲಾಗಿದೆ. 12 ಸ್ಥಳಗಳಲ್ಲಿ 30ಕ್ಕಿಂತ ಹೆಚ್ಚು ಶೌಚಾಲಯಗಳ ನಿರ್ಮಾಣ ಹಾಗೂ ನೀರಿನ ವ್ಯವಸ್ಥೆ ಮಾಡಲಾಗಿದೆ ಎಂದು ಹೇಳಿದರು.

ಸಚಿವರು, ಶಾಸಕರು ಅದಮಾರು ಮಠಕ್ಕೆ ಭೇಟಿನೀಡಿ ವಿಶ್ವಪ್ರಿಯ ತೀರ್ಥರ ಆರ್ಶೀವಾದ ಪಡೆದರು.

ಸಭೆಯಲ್ಲಿ ಜಿಲ್ಲಾ ಪಂಚಾಯಿತಿ ಸಿಇಒ ಪ್ರೀತಿ ಗೆಹ್ಲೋಟ್‌, ಕಾರ್ಕಳ ಶಾಸಕ ಸುನೀಲ್ ಕುಮಾರ್, ಎಸ್‍ಪಿ ವಿಷ್ಣುವರ್ಧನ್, ನಗರಸಭೆ ಪೌರಾಯುಕ್ತ ಆನಂದ್ ಕಲ್ಲೋಳಿಕರ್, ಶ್ರೀಕೃಷ್ಣ ಸೇವಾ ಸಮಿತಿಯ ಸದಸ್ಯರು, ಮಠದ ಸಿಬ್ಬಂದಿ, ಅಧಿಕಾರಿಗಳು ಹಾಜರಿದ್ದರು.

ಪ್ರತಿಕ್ರಿಯಿಸಿ (+)

ಈ ವಿಭಾಗದಿಂದ ಇನ್ನಷ್ಟು