ಬುಧವಾರ, ಸೆಪ್ಟೆಂಬರ್ 22, 2021
21 °C
ಕರಾವಳಿ ಬೈಪಾಸ್‌, ಇಂದ್ರಾಳಿ ಸರ್ಕಲ್‌ ರಸ್ತೆಯ ತುಂಬೆಲ್ಲ ಗುಂಡಿಗಳು: ವಾಹನ ಸವಾರರ ಗೋಳು

ಉಡುಪಿ | ಹದಗೆಟ್ಟ ರಸ್ತೆ: ಹೊಂಡ ಗುಂಡಿಗಳ ದರ್ಬಾರ್‌

ಬಾಲಚಂದ್ರ ಎಚ್‌. Updated:

ಅಕ್ಷರ ಗಾತ್ರ : | |

Prajavani

ಉಡುಪಿ: ಪ್ರಸಿದ್ಧ ಪ್ರವಾಸಿ ತಾಣಗಳನ್ನು ಹೊಂದಿರುವ ಉಡುಪಿ ಜಿಲ್ಲೆಗೆ ಹೊರ ಜಿಲ್ಲೆ ಹಾಗೂ ಹೊರ ರಾಜ್ಯಗಳಿಂದ ಸಾವಿರಾರು ಪ್ರವಾಸಿಗರು ಬರುತ್ತಾರೆ. ಹೀಗೆ ಬರುವ ಪ್ರವಾಸಿಗರಿಗೆ ನಗರದ ಪ್ರವೇಶ ದ್ವಾರದಲ್ಲೇ ಹೊಂಡ–ಗುಂಡಿಗಳು ಸ್ವಾಗತ ಕೋರುತ್ತವೆ.

ರಾಷ್ಟ್ರೀಯ ಹೆದ್ದಾರಿ 66ರ ಮೂಲಕ ಮಂಗಳೂರು ಕಡೆಯಿಂದ ಮಲ್ಪೆ ಹಾಗೂ ಉಡುಪಿಗೆ ಬರುವ ವಾಹನಗಳಿಗೆ ಕರಾವಳಿ ಜಂಕ್ಷನ್‌ನಲ್ಲಿರುವ ದೈತ್ಯ ಗುಂಡಿಗಳು ಬರಮಾಡಿಕೊಳ್ಳುತ್ತವೆ. ಹಾಗೆಯೇ, 169 ‘ಎ’ ಮಾರ್ಗವಾಗಿ ಶಿವಮೊಗ್ಗ ಕಡೆಯಿಂದ ಬರುವ ವಾಹನಗಳಿಗೆ ಮಣಿಪಾಲ ಸಮೀಪದ ಪರ್ಕಳದ ಗುಂಡಿಗಳು ಎದುರುಗೊಳ್ಳುತ್ತವೆ. ಜಿಲ್ಲೆಯ ಸೌಂದರ್ಯ ಸವಿಯಲು ಬರುವ ಪ್ರವಾಸಿಗರಿಗೆ ಹದಗೆಟ್ಟ ರಸ್ತೆಗಳಿಂದ ಕಿರಿಕಿರಿ ಉಂಟಾಗುತ್ತಿದೆ.

ಜಿಲ್ಲೆಯಲ್ಲಿ ಎಡೆಬಿಡದೆ ಸುರಿಯುತ್ತಿರುವ ಮಳೆಯಿಂದ ಪ್ರಮುಖ ರಸ್ತೆಗಳು, ಮುಖ್ಯ ವೃತ್ತಗಳಲ್ಲಿ ಗುಂಡಿಗಳು ನಿರ್ಮಾಣವಾಗಿವೆ. ಇದರಿಂದ ವಾಹನ ಸವಾರರಿಗೆ ನಿತ್ಯ ನರಕಯಾತನೆ. ಕರಾವಳಿ ಜಂಕ್ಷನ್‌ ಬಳಿ ರಸ್ತೆಯೇ ಕಾಣದಷ್ಟು ಗುಂಡಿಗಳಿವೆ. ಸಣ್ಣ ಮಳೆ ಸುರಿದರೂ ಗುಂಡಿಗಳು ತುಂಬಿಕೊಳ್ಳುತ್ತಿದ್ದು, ಇದರ ಅರಿವಿಲ್ಲದೆ ವಾಹನ ಸವಾರರು ಬಿದ್ದು ಆಸ್ಪತ್ರೆಗೆ ಸೇರುವಂತಾಗಿದೆ.

ಮತ್ತೊಂದೆಡೆ, ಪರ್ಕಳ ರಸ್ತೆಯ ಪರಿಸ್ಥಿತಿ ಭಿನ್ನವಾಗಿಲ್ಲ. ಉಡುಪಿ–ಹೆಬ್ರಿ–ತೀರ್ಥಹಳ್ಳಿ ಮಧ್ಯೆ ಸಂಪರ್ಕ ಕಲ್ಪಿಸುವ ರಾಷ್ಟ್ರೀಯ ಹೆದ್ದಾರಿ 169 ‘ಎ’ ಕಾಮಗಾರಿ ನಿಧಾನಗತಿಯಲ್ಲಿ ಸಾಗಿದ್ದು, ಕಾಮಗಾರಿಗೆ ಭೂ ಸ್ವಾಧೀನವು ಅಡ್ಡಿಯಾಗಿರುವುದರಿಂದ ಮಣಿಪಾಲ ಹಾಗೂ ಪರ್ಕಳದ ಮಧ್ಯೆ ಇರುವ ರಸ್ತೆ ಹಾಳಾಗಿದೆ. ಶಿವಮೊಗ್ಗ, ಚಿತ್ರದುರ್ಗ, ದಾವಣಗೆರೆ, ಹಾವೇರಿ ಸೇರಿದಂತೆ ಹಲವು ಜಿಲ್ಲೆಗಳಿಂದ ಮಣಿಪಾಲದ ಆಸ್ಪತ್ರೆಗಳಿಗೆ ಹೆಚ್ಚಿನ ಚಿಕಿತ್ಸೆ ಪಡೆಯಲು ಆಂಬುಲೆನ್ಸ್‌ಗಳಲ್ಲಿ ಬರುವ ರೋಗಿಗಳಿಗೆ ಗುಂಡಿಗಳಿಂದ ತೀವ್ರ ತೊಂದರೆಯಾಗಿದೆ.

ಹೆದ್ದಾರಿ ನಿರ್ಮಾಣ ಮಾಡುವ ಹೊಣೆ ಹೊತ್ತಿರುವ ಗುತ್ತಿಗೆದಾರರು ಮಳೆಗಾಲದಲ್ಲಿ ಗುಂಡಿಗಳನ್ನು ಮುಚ್ಚಬೇಕು. ಜಿಲ್ಲಾಡಳಿತ ಈ ಬಗ್ಗೆ ಗಮನ ಹರಿಸಬೇಕು ಎಂದು ಒತ್ತಾಯಿಸುತ್ತಾರೆ ವಾಹನ ಸವಾರರು.

ಇಂದ್ರಾಳಿ ವೃತ್ತದಲ್ಲಿ ಕೂಡ ಯಮಸ್ವರೂಪಿ ಗುಂಡಿಗಳು ಬಾಯ್ತೆರೆದುಕೊಂಡಿದ್ದು, ಸವಾರರು, ಪಾದಚಾರಿಗಳು ಹಾಗೂ ಶಾಲೆಯ ಮಕ್ಕಳಿಗೆ ತೊಂದರೆಯಾಗಿದೆ. ಉಡುಪಿ ಹಾಗೂ ಮಣಿಪಾಲ ಕಡೆಯಿಂದ ವೇಗವಾಗಿ ಬರುವ ವಾಹನಗಳು ಗುಂಡಿಗಳಲ್ಲಿ ವಾಹನಗಳನ್ನು ಇಳಿಸುವುದರಿಂದ, ರಸ್ತೆ ಬದಿಯಲ್ಲಿ ಸಂಚರಿಸುವ ಪಾದಚಾರಿಗಳಿಗೆ ಹಾಗೂ ಶಾಲಾ ಮಕ್ಕಳಿಗೆ ಕೆಸರು ನೀರಿನ ಅಭಿಷೇಕವಾಗುತ್ತಿದೆ. ಇಂದ್ರಾಳಿ ವೃತ್ತದಲ್ಲೇ ಇರುವ ಶಾಲೆಗೆ ತೆರಳಲು ರಸ್ತೆ ದಾಟಲು ಮಕ್ಕಳು ಹರಸಾಹಸ ಪಡಬೇಕು ಎನ್ನುತ್ತಾರೆ ಸ್ಥಳೀಯ ಆಟೊ ಚಾಲಕರಾದ ಬಾಲು.

ಇಂದ್ರಾಳಿ ರೈಲ್ವೆ ಸೇತುವೆ ಕಾಮಗಾರಿ ನಿಧಾನಗತಿಯಲ್ಲಿ ಸಾಗುತ್ತಿರುವುದರಿಂದ ಸಮಸ್ಯೆ ಗಂಭೀರವಾಗಿದೆ. ವಾರಕ್ಕೊಮ್ಮೆ ಗುಂಡಿಗಳಿಗೆ ಮಣ್ಣು ತಂದು ಸುರಿಯಲಾಗುತ್ತದೆ. ಒಂದೇ ಮಳೆಗೆ ಮಣ್ಣು ಕೊಚ್ಚಿಕೊಂಡು ಹೋಗುತ್ತದೆ. ಸೇತುವೆ ಕಾಮಗಾರಿ ಮುಗಿಯುವವರೆಗೂ ಗುಂಡಿಗಳಿಗೆ ಕಾಂಕ್ರಿಟ್‌ ಹಾಕಬೇಕು ಎಂದು ಒತ್ತಾಯಿಸುತ್ತಾರೆ ಇಲ್ಲಿನ ಆಟೋ ಚಾಲಕರು.

ಇಂದ್ರಾಳಿ ವೃತ್ತದಲ್ಲಿ ಸದಾ ವಾಹನ ದಟ್ಟಣೆ ಇರುತ್ತದೆ. ಗುಂಡಿಗಳಿಂದಾಗಿ ಪ್ರತಿದಿನ ಸವಾರರು ಬಿದ್ದು ಗಾಯ ಮಾಡಿಕೊಳ್ಳುತ್ತಿದ್ದಾರೆ. ಮಹಿಳೆಯರು ಹಾಗೂ ವೃದ್ಧರು ಸ್ಕೂಟರ್ ಚಲಾಯಿಸುವುದು ತ್ರಾಸದಾಯಕವಾಗಿದೆ. ಸ್ವಲ್ಪ ಎಚ್ಚರ ತಪ್ಪಿದರೂ ಪ್ರಾಣಕ್ಕೆ ಸಂಚಕಾರವಾಗಲಿದೆ. ಇಂದ್ರಾಳಿ ರೈಲು ನಿಲ್ದಾಣಕ್ಕೆ ಸಾಗುವ ರಸ್ತೆ ಹಾಗೂ ಹೆದ್ದಾರಿಗೆ ಸಂಪರ್ಕ ಕಲ್ಪಿಸುವ ಬಹುತೇಕ ರಸ್ತೆಗಳು ಹದಗೆಟ್ಟಿವೆ. ಗುಂಡಿ ಮುಚ್ಚುವಂತೆ ಮನವಿ ಮಾಡಿದರೂ ಸ್ಪಂದನ ಸಿಕ್ಕಿಲ್ಲ ಎನ್ನುತ್ತಾರೆ ಸ್ಥಳೀಯರು.

ಪೆರಂಪಳ್ಳಿಯಿಂದ ಮಣಿಪಾಲ ಸಂಪರ್ಕಿಸುವ ರಸ್ತೆಯೂ ಗುಂಡಿಗಳಿಂದ ಕೂಡಿದೆ. ಕಡಿದಾದ ರಸ್ತೆಯಲ್ಲಿ ಗುಂಡಿಗಳು ಕಾಣದೆ ಸವಾರರು ಅಪಘಾತಗಳನ್ನು ಮಾಡಿಕೊಳ್ಳುತ್ತಿದ್ದಾರೆ. ಅನತಿ ದೂರದಲ್ಲೇ ಜಿಲ್ಲಾಧಿಕಾರಿ ಕಚೇರಿ ಇದ್ದರೂ ಈ ರಸ್ತೆಯ ಗೋಳು ಯಾರಿಗೂ ಕೇಳದಂತಾಗಿದೆ.

ಮಣಿಪಾಲ ಹಾಗೂ ಉಡುಪಿ ನಗರದ ರಸ್ತೆಗಳ ಸ್ಥಿತಿಯೂ ಹಾಳಾಗಿದೆ. ಬಿಗ್ ಬಜಾರ್ ವೃತ್ತ, ಬ್ರಹ್ಮಗಿರಿ ರಸ್ತೆ, ಕೆಎಂ ಮಾರ್ಗ, ಮಣಿಪಾಲದ ಮಾಧವ ಕೃಪ ಶಾಲೆಯ ಬಳಿಯ ವೃತ್ತ, ಸಗ್ರಿ, ಇಂದ್ರಾಳಿ ನಗರದ ರಸ್ತೆಗಳ ಸ್ಥಿತಿಯೂ ಚಿಂತಾಜನಕವಾಗಿದೆ.‌ ಸ್ಥಳೀಯಾಡಳಿತ ಶೀಘ್ರ ಗುಂಡಿಗಳನ್ನು ಮುಚ್ಚಲು ಕ್ರಮಕೈಗೊಳ್ಳಬೇಕು ಎಂದು ಒತ್ತಾಯಿಸುತ್ತಾರೆ ಸಾರ್ವಜನಿಕರು.

‘ವಾಹನಗಳು ಹಾಳಾಗುತ್ತಿವೆ’

ಹೊಂಡ ಗುಂಡಿಗಳಿಗೆ ತಾತ್ಕಾಲಿಕವಾಗಿ ಮಣ್ಣು ಸುರಿದರೆ ಪ್ರಯೋಜನವಿಲ್ಲ. ಕಾಂಕ್ರಿಟ್ ತುಂಬಿಸಿ ಮಳೆಗಾಲ ಮುಗಿಯುವವರೆಗೂ ನಿರ್ವಹಣೆ ಮಾಡಬೇಕು. ಗುಂಡಿಗಳಿಂದ ಆಟೊ ಓಡಿಸುವುದೇ ಕಷ್ಟವಾಗಿದ್ದು, ವಾಹನಗಳ ಶಾಕ್ ಅಬ್ಸರ್, ಟೈರ್‌ಗಳು ಹಾಳಾಗುತ್ತಿದೆ. ಇಂದ್ರಾಳಿ ಸರ್ಕಲ್‌ನಲ್ಲಿರುವ ನಿಲ್ದಾಣದಲ್ಲಿ ಆಟೊ ನಿಲ್ಲಿಸಿದರೆ ವಾಹನಗಳಿಂದ ಕೆಸರಿನ ನೀರು ಸಿಡಿದು ಬಟ್ಟೆ ಹಾಳಾಗುತ್ತದೆ. ಬೆಳಗಿನ ಸಮಯದಲ್ಲಿ ಶಾಲಾ ಮಕ್ಕಳು ರಸ್ತೆ ದಾಟಲು ಕಷ್ಟಪಡುವುದನ್ನು ನೋಡಿದರೆ ಮನಸ್ಸಿಗೆ ಬೇಜಾರಾಗುತ್ತದೆ. ರೈಲ್ವೆ ಸೇತುವೆ ಕಾಮಗಾರಿ ಪೂರ್ಣಗೊಂಡರೆ ಸಮಸ್ಯೆ ಬಗೆಹರಿಯುತ್ತದೆ ಎನ್ನುತ್ತಾರೆ ಆಟೊ ಚಾಲಕ ರಘು.

‘ಶಾಶ್ವತ ಪರಿಹಾರ ಒದಗಿಸಿ’

ಗುಂಡಿಗಳಿಗೆ ತಾತ್ಕಾಲಿಕವಾಗಿ ತೇಪೆಹಾಕುವ ಬದಲಾಗಿ ಶಾಶ್ವತ ಪರಿಹಾರ ಒದಗಿಸಬೇಕು. ರೈಲ್ವೆ ಸೇತುವೆ ಕಾಮಗಾರಿ ಮುಗಿಯುವವರೆಗೆ ಕಾಯದೆ ಗುಂಡಿಗಳನ್ನು ಜಲ್ಲಿ ಹಾಗೂ ಸಿಮೆಂಟ್‌ ಹಾಕಿ ಮುಚ್ಚಿಸಬೇಕು. ತಗ್ಗಿನ ಭಾಗದಲ್ಲಿ ಮಳೆ ನೀರು ನಿಲ್ಲದಂತೆ ರಸ್ತೆಯನ್ನು ಎತ್ತರಗೊಳಿಸಬೇಕು ಎನ್ನುತ್ತಾರೆ ಆಟೊ ಚಾಲಕ ಬಾಲು

ಗುಂಡಿ ಮುಚ್ಚಲು ಕ್ರಮ: ಜಿಲ್ಲಾಧಿಕಾರಿ

ಮಳೆಗಾಲದಲ್ಲಿ ರಸ್ತೆಯಲ್ಲಿ ಗುಂಡಿಗಳು ಹೆಚ್ಚು ನಿರ್ಮಾಣವಾಗಿ ಸಂಚಾರಕ್ಕೆ ಸಮಸ್ಯೆಯಾಗುತ್ತಿರುವ ವಿಚಾರ ಗಮನಕ್ಕೆ ಬಂದಿದೆ. ನಗರಸಭೆ ವ್ಯಾಪ್ತಿಗೊಳಪಡುವ ರಸ್ತೆಗಳಲ್ಲಿರುವ ಗುಂಡಿಗಳನ್ನು ಮುಚ್ಚುವಂತೆ ನಗರಸಭೆ ಪೌರಾಯುಕ್ತರಿಗೆ ಸೂಚನೆ ನೀಡಲಾಗುವುದು. ಹಾಗೆಯೇ ಹೆದ್ದಾರಿ ಪ್ರಾಧಿಕಾರದ ವ್ಯಾಪ್ತಿಗೊಳಪಡುವ ರಸ್ತೆಗಳಲ್ಲಿ ಗುಂಡಿಗಳಿದ್ದರೆ ತಕ್ಷಣವೇ ಮುಚ್ಚಿಸಲು ಕ್ರಮಕೈಗೊಳ್ಳಲಾಗುವುದು ಎಂದು ಜಿಲ್ಲಾಧಿಕಾರಿ ಎಂ. ಕೂರ್ಮಾರಾವ್ ತಿಳಿಸಿದರು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು