ಸೋಮವಾರ, 20 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕಟಪಾಡಿ: ನನೆಗುದಿಗೆ ಬಿದ್ದ ಅಂಡರ್‌ಪಾಸ್ ಕಾಮಗಾರಿ

Published 19 ಏಪ್ರಿಲ್ 2024, 4:53 IST
Last Updated 19 ಏಪ್ರಿಲ್ 2024, 4:53 IST
ಅಕ್ಷರ ಗಾತ್ರ

ಶಿರ್ವ: ರಾಷ್ಟ್ರೀಯ ಹೆದ್ದಾರಿ 66ರ ಕಟಪಾಡಿ ಜಂಕ್ಷನ್‌ನಲ್ಲಿ ವಾಹನ ದಟ್ಟಣೆಯಿಂದ ದಿನನಿತ್ಯ ವಾಹನ ಚಾಲಕರಿಗೆ, ಪಾದಾಚಾರಿಗಳಿಗೆ ಟ್ರಾಫಿಕ್ ಜಾಂ ಕಿರಿಕಿರಿ ಉಂಟಾಗುತ್ತಿದೆ.

ಶಿರ್ವ, ಮಟ್ಟು, ಉಡುಪಿ, ಕಾಪುವಿನಿಂದ ಬರುವ ವಾಹನಗಳು ಕಟಪಾಡಿ ಜಂಕ್ಷನ್‌ನಲ್ಲೇ ಜಮಾವಣೆಯಾಗುವುದರಿಂದ ಅಂಡರ್‌ಪಾಸ್ ವ್ಯವಸ್ಥೆಯಿಲ್ಲದೆ ವಾಹನಗಳ ನಿಯಂತ್ರಣ ಕಷ್ಟಸಾಧ್ಯವಾಗಿದೆ. ಕಟಪಾಡಿ ಪೇಟೆಯಲ್ಲಿ ಟೆಂಪೊ, ಕಾರು ನಿಲ್ಲಿಸಲು ಸ್ಥಳಾವಕಾಶ ಇಲ್ಲವಾಗಿದೆ.

ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರದಿಂದ ನೂತನ ಅಂಡರ್‌ಪಾಸ್ ನಿರ್ಮಾಣ ಕಾಮಗಾರಿ ಯೋಜನೆ ಮಂಜೂರಾಗಿ 2 ವರ್ಷ ಸಂದಿದೆ. ಈ ನಡುವೆ ಸಂತೆಕಟ್ಟೆಯಲ್ಲಿ ಅಂಡರ್‌ಪಾಸ್ ನಿರ್ಮಾಣಗೊಂಡು ಸಾರ್ವಜನಿಕ ಸಂಚಾರಕ್ಕೆ ಮುಕ್ತವಾಗಿದೆ. ಆದರೆ, ಕಟಪಾಡಿಯ ಅಂಡರ್‌ಪಾಸ್ ಕಾಮಗಾರಿ ಮಾತ್ರ ನನೆಗುದಿಗೆ ಬಿದ್ದಿದೆ.

ಚತುಷ್ಪಥ ಹೆದ್ದಾರಿ ಕಾಮಗಾರಿ ವೇಳೆ ಕಟಪಾಡಿ ಪೇಟೆ ಸಮೀಪ ಹೆದ್ದಾರಿ ದಾಟಿ ಹೋಗಲು ಸಮರ್ಪಕ ವ್ಯವಸ್ಥೆ ಕಲ್ಪಿಸದೆ ಅವೈಜ್ಞಾನಿಕವಾಗಿ ಜಂಕ್ಷನ್ ನಿರ್ಮಿಸಿರುವುದರಿಂದ ವಾಹನ ಚಾಲಕರು, ಪಾದಾಚಾರಿಗಳು ಸಮಸ್ಯೆ ಎದುರಿಸುವಂತಾಗಿದೆ ಎಂಬುದು ಸಾರ್ವಜನಿಕರ ದೂರು. ಬೆಳಿಗ್ಗೆಯಿಂದ ಸಂಜೆವರೆಗೆ ವಾಹನ ನಿಬಿಡತೆ ಅಧಿಕವಾಗಿರುವುದರಿಂದ, ಹೆದ್ದಾರಿಯಲ್ಲಿ ಸಂಚರಿಸುವ ಘನ ವಾಹನಗಳಿಂದಾಗಿ ಕಟಪಾಡಿ ಜಂಕ್ಷನ್‌ನಲ್ಲಿ ಆಗಾಗ ವಾಹನ ಅಪಘಾತಗಳೂ ಸಂಭವಿಸುತ್ತಿವೆ. ಹೆದ್ದಾರಿಗೆ ಬ್ಯಾರಿಕೇಡ್‌ಗಳನ್ನು ಹಾಕಿ ಜಂಕ್ಷನ್‌ನಲ್ಲಿ ಪೊಲೀಸರು ಕಾವಲು ನಿಂತು ವಾಹನಗಳನ್ನು ನಿಯಂತ್ರಿಸದೆ ಇದ್ದಲ್ಲಿ ನಿತ್ಯ ಒಂದಲ್ಲ ಒಂದು ರೀತಿಯಲ್ಲಿ ಅವಘಡಗಳು ಸಂಭವಿಸುತ್ತವೆ.

ಕಟಪಾಡಿಯಲ್ಲಿ ದಿನದಿಂದ ದಿನಕ್ಕೆ ವಾಹನಗಳ ಸಂಖ್ಯೆ ಜಾಸ್ತಿಯಾಗಿ ಸಮಸ್ಯೆ ಉಂಟಾಗುತ್ತಿದ್ದು, ಇದಕ್ಕೆ ಶಾಶ್ವತ ಪರಿಹಾರದ ಅಗತ್ಯವಿದೆ. ಹೆದ್ದಾರಿ ಬದಿಯಲ್ಲೇ ವಾಣಿಜ್ಯ ಸಂಕೀರ್ಣ, ಗೂಡಂಗಡಿಗಳು ನಿರ್ಮಾಣಗೊಂಡಿರುವುದರಿಂದ ಸ್ಥಳಾವಕಾಶವಿಲ್ಲದೆ ಹೆದ್ದಾರಿ ಜಂಕ್ಷನ್‌ನಲ್ಲಿ ವಾಹನ ದಟ್ಟಣೆ ಹೆಚ್ಚಾಗಿದೆ. 4 ಕಡೆಗಳಿಂದ ಸಾಗಿಬರುವ ವಾಹನಗಳನ್ನು ನಿಯಂತ್ರಿಸಲು ಸೀಮಿತ ಪೊಲೀಸ್ ಸಿಬ್ಬಂದಿ, ಗೃಹರಕ್ಷಕ ದಳದ ಸಿಬ್ಬಂದಿಗೆ ಸಮಸ್ಯೆಯಾಗುತ್ತಿದ್ದು, ಹೆದ್ದಾರಿಯಲ್ಲಿ ಚಲಿಸುವ ಘನ ವಾಹನಗಳಿಗೂ ಜಂಕ್ಷನ್‌ನಲ್ಲಿನ ಬ್ಯಾರಿಕೇಡ್ ಸಮೀಪ ವಾಹನವನ್ನು ನಿಯಂತ್ರಿಸಲು ತ್ರಾಸದಾಯಕ ಪರಿಸ್ಥಿತಿ ನಿರ್ಮಾಣವಾಗಿದೆ. ಈ ನಡುವೆ ಎರಡೂ ಕಡೆಗಳಿಂದ ಹೆದ್ದಾರಿ ದಾಟುವ ಪಾದಾಚಾರಿಗಳ ಪಾಡು ಹೇಳತೀರದು.

‘ಅಂಡರ್‌ಪಾಸ್ ನಿರ್ಮಾಣ ಕಾಮಗಾರಿ ಶೀಘ್ರ ಆರಂಭಿಸಿ’

ಕಟಪಾಡಿಯಲ್ಲಿ ಅವೈಜ್ಞಾನಿಕವಾಗಿ ಜಂಕ್ಷನ್ ನಿರ್ಮಿಸಿದ್ದರಿಂದ ಈ ತೊಂದರೆ ಎದುರಾಗಿದೆ. ಉಡುಪಿ–ಕಿನ್ನಿಮೂಲ್ಕಿ ಮಾದರಿಯಲ್ಲಿ ಓವರ್‌ಬ್ರಿಡ್ಜ್ ನಿರ್ಮಿಸಲು ಅವಕಾಶವಿದ್ದರೂ ಹೆದ್ದಾರಿ ಕಾಮಗಾರಿ ಆರಂಭದ ವೇಳೆ ಕಟಪಾಡಿಯನ್ನು ನಿರ್ಲಕ್ಷಿಸಲಾಗಿದೆ. ಅಂಡರ್‌ಪಾಸ್ ನಿರ್ಮಾಣದ ಬಗ್ಗೆ ಜನಪ್ರತಿನಿಧಿಗಳು ನೀಡುತ್ತಿರುವ ಹೇಳಿಕೆ ಕೇಳಿ ಕೇಳಿ ಸಾರ್ವಜನಿಕರು ಬೇಸತ್ತಿದ್ದಾರೆ. ಆದ್ದರಿಂದ ನನೆಗುದಿಗೆ ಬಿದ್ದ ಕಾಮಗಾರಿ ಶೀಘ್ರ ಆರಂಭಿಸಬೇಕು ಎಂದು ಕಟಪಾಡಿ ಕಟ್ಟಡ ಸಾಮಾಗ್ರಿ ಸಾಗಾಟ ಲಾರಿ ಮಾಲಕರ ಸಂಘದ ಅಧ್ಯಕ್ಷ ಚಂದ್ರ ಪೂಜಾರಿ ಸರ್ಕಾರಿಗುಡ್ಡೆ ಒತ್ತಾಯಿಸಿದ್ದಾರೆ.

‘ವೈಜ್ಞಾನಿಕವಾಗಿ ಅಂಡರ್‌ಪಾಸ್ ನಿರ್ಮಿಸಿ’

ಕಟಪಾಡಿ ಜಂಕ್ಷನ್‌ನಲ್ಲಿ ವಾಹನ ದಟ್ಟಣೆಯಿಂದ ದಿನನಿತ್ಯ ಒಂದಲ್ಲಾ ಒಂದು ಅವಾಂತರಗಳು ಸೃಷ್ಟಿಯಾಗುತ್ತಿವೆ. ಪಾದಾಚಾರಿಗಳಿಗೆ, ವಾಹನ ಸವಾರರಿಗೆ ತೊಂದರೆಯಾಗುತ್ತಿರುವುದು ಒಂದೆಡೆಯಾದರೆ, ಹೆದ್ದಾರಿ ಪಕ್ಕದಲ್ಲೇ ಇರುವ ಸರ್ವಿಸ್ ರಸ್ತೆಗಳು ಮತ್ತು ಅದಕ್ಕೆ ತಾಗಿಕೊಂಡೇ ಇರುವ ಕಟಪಾಡಿ ಬಸ್ ನಿಲ್ದಾಣ ಕೂಡಾ ಪಾರ್ಕಿಂಗ್ ಸ್ಥಳವಾಗಿ ಪರಿವರ್ತನೆಗೊಂಡಿದೆ. ಆದ್ದರಿಂದ ಶೀಘ್ರ ವೈಜ್ಞಾನಿಕವಾಗಿ ಅಂಡರ್‌ಪಾಸ್, ಮೇಲ್ಸೇತುವೆ ನಿರ್ಮಾಣ ಮಾಡಬೇಕು. ಸಂತೆಕಟ್ಟೆ, ಕಿನ್ನಿಮೂಲ್ಕಿ ಮಾದರಿಯಲ್ಲಿ ಹೆದ್ದಾರಿ ದಾಟಲು ವ್ಯವಸ್ಥೆ ಕಲ್ಪಿಸಬೇಕು ಎಂದು ರಾಷ್ಟ್ರೀಯ ಹೆದ್ದಾರಿ ಸಮಿತಿ ಕೋಶಾಧಿಕಾರಿ ಯು.ಕೆ.ಶೆಟ್ಟಿ ಕಟಪಾಡಿ ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT