ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ನರೇಗಾದಲ್ಲಿ ಶಾಶ್ವತ ಕಾಲುಸಂಕ ನಿರ್ಮಾಣ: ಸಚಿವ ಎಸ್.ಅಂಗಾರ

ಶೀಘ್ರ ವರದಿ ಸಿದ್ಧಪಡಿಸುವಂತೆ ಜಿಲ್ಲಾ ಉಸ್ತುವಾರಿ ಸಚಿವ ಎಸ್.ಅಂಗಾರ ಸೂಚನೆ
Last Updated 11 ಆಗಸ್ಟ್ 2022, 4:46 IST
ಅಕ್ಷರ ಗಾತ್ರ

ಕುಂದಾಪುರ: ಮುಂದಿನ ದಿನಗಳಲ್ಲಿ ಮತ್ತೆ ದುರಂತಗಳು ಪುನರಾವರ್ತನೆ ಆಗಬಾರದು ಎನ್ನುವ ಕಾರಣಕ್ಕಾಗಿ ಉಡುಪಿ ಜಿಲ್ಲೆಯ ವಿವಿಧ ಗ್ರಾಮ ಪಂಚಾಯಿತಿ ವ್ಯಾಪ್ತಿಗಳಲ್ಲಿ ಎಲ್ಲೆಲ್ಲಿ ಸಣ್ಣ ನದಿ, ತೋಡು ಹಾಗೂ ಹಳ್ಳಗಳನ್ನು ದಾಟಲು ಕಾಲುಸಂಕದ ಅವಶ್ಯಕತೆ ಇದೆ ಎಂಬುದನ್ನು ಪರಿಶೀಲಿಸಲು ಜಿಲ್ಲಾಡಳಿತಕ್ಕೆ ಸೂಚಿಸಲಾಗಿದೆ. ನರೇಗಾ ಯೋಜನೆಯಡಿಯಲ್ಲಿ ತುರ್ತಾಗಿ ಕಾಲು ಸಂಕಗಳನ್ನು ನಿರ್ಮಿಸಲು ಅವಕಾಶ ಮಾಡಿಕೊಡಲಾಗಿದೆ ಎಂದು ಉಡುಪಿ ಜಿಲ್ಲಾ ಉಸ್ತುವಾರಿ ಸಚಿವ ಎಸ್.ಅಂಗಾರ ತಿಳಿಸಿದರು.

ಇಲ್ಲಿನ ಪ್ರವಾಸಿ ಮಂದಿರದಲ್ಲಿ ಬುಧವಾರ ಅಧಿಕಾರಿಗಳ ಸಭೆ ನಡೆಸಿದ ಬಳಿಕ, ಮಾಧ್ಯಮ ಪ್ರತಿನಿಧಿಗಳೊಂದಿಗೆ ಅವರು ಮಾತನಾಡಿದರು. ಕಾಲುಸಂಕಕ್ಕೆ ಅಂದಾಜು ₹ 4.5 ಲಕ್ಷ ಮೊತ್ತವನ್ನು ನರೇಗಾ ಯೋಜನೆಯಲ್ಲಿ ಒದಗಿಸಲು ಅವಕಾಶವಿದೆ. ತಾಲ್ಲೂಕು ಪಂಚಾಯಿತಿ ಕಾರ್ಯನಿರ್ವಹಣಾಧಿಕಾರಿಗಳಿಗೆ ಸೂಚನೆ ನೀಡಲಾಗಿದ್ದು, 20 ದಿನಗಳ ಒಳಗಾಗಿ ವರದಿ ಸಿದ್ಧಪಡಿಸಿ, ಕಾಲುಸಂಕ ಕಾಮಗಾರಿಗೆ ಕ್ರಮವಹಿಸುವಂತೆ ತಿಳಿಸಲಾಗಿದೆ. ನಿರ್ಲಕ್ಷ್ಯ ತೋರುವ ಅಧಿಕಾರಿಗಳ ವಿರುದ್ಧ ನಿರ್ದಾಕ್ಷಿಣ್ಯ ಕ್ರಮ ಕೈಗೊಳ್ಳಲಾಗುವುದು ಎಂದರು.

ರಾಜ್ಯದ ಕರಾವಳಿ ಪ್ರದೇಶದ ಅಭಿವೃದ್ಧಿಗಾಗಿ ಪ್ರಸ್ತಾಪಿಸಿರುವ ಯೋಜನೆಗಳಲ್ಲಿ ₹ 381 ಕೋಟಿ ವೆಚ್ಚದ 9 ಯೋಜನೆಗಳಿಗೆ ಅನುಮೋದನೆ ದೊರಕಿದೆ. ಮೀನುಗಾರರಿಗೆ ಯಾವುದೇ
ರೀತಿಯ ತೊಂದರೆ ನೀಡದೆ, ಅಭಿ
ವೃದ್ಧಿಯ ಯೋಜನೆ ಅನುಷ್ಠಾನಗೊಳಿ
ಸಲು ಸರ್ಕಾರ ಬದ್ಧವಾಗಿದೆ. ಯೋಜನೆ ಅನುಷ್ಠಾನದ ವೇಳೆಯಲ್ಲಿ
ಮೀನುಗಾರರು ಸಹಕಾರ ನೀಡ
ಬೇಕು. ಸಮುದ್ರ ತೀರ ಪ್ರದೇಶದ ರಸ್ತೆಗಳ ಅಭಿವೃದ್ಧಿ ಹಾಗೂ ಸಮುದ್ರ ತಡೆಗೋಡೆಗಳಿಗೆ ಕಲ್ಲು ಹಾಕುವ ಕಾಮಗಾರಿಗೆ ಚಾಲನೆ ನೀಡಲಾಗುವುದು. ಪಂಜರ ಮೀನು ಕೃಷಿಗೆ ಸಂಬಂಧಿಸಿದಂತೆ ಸರ್ಕಾರದ ಕೆಲವು ನಿಯಮಗಳನ್ನು ಬದಲಾವಣೆ ಮಾಡಬೇಕು. ಕರಾವಳಿ ಹಾಗೂ ಒಳನಾಡು ಮೀನುಗಾರಿಕೆಗೆ ಸಂಬಂಧಿಸಿದಂತೆ ನಿಯಮಾವಳಿಗಳನ್ನು ರೂಪಿಸಲು ಕರಡು ಪ್ರತಿಯನ್ನು ತಯಾರಿಸಲಾಗಿದೆ. ಮೀನುಗಾರರ ಸಂಘಟನೆಯ ಪ್ರತಿನಿಧಿಗಳಿಂದ ಅಭಿಪ್ರಾಯ ಪಡೆದು, ಸರ್ಕಾರದ ಬೊಕ್ಕಸಕ್ಕೆ ಆದಾಯ ಕ್ರೋಡೀಕರಣ ಆಗುವುದನ್ನು ಗಮನದಲ್ಲಿಟ್ಟು ನಿಯಮಗಳನ್ನು ಜಾರಿಗೆ ತರಲಾಗುವುದು ಎಂದು ತಿಳಿಸಿದರು.

ತೀರ ಪ್ರದೇಶಗಳಲ್ಲಿ ನಡೆಸಲು ಉದ್ದೇಶಿಸಿರುವ ಯೋಜನೆಗಳಿಗೆ ಸಂಬಂಧಿಸಿದಂತೆ ಸಿಆರ್‌ಝಡ್ ಹಾಗೂ ಸರ್ಕಾರದ ವಿವಿಧ ಇಲಾಖೆಗಳ ಪೂರ್ವಾನುಮತಿ ಪಡೆದುಕೊಳ್ಳದೆ ಇರುವುದರಿಂದ ಮಂಜೂರಾಗಿರುವ ಯೋಜನೆಗಳು ನಿರ್ದಿಷ್ಟ ಸಮಯದಲ್ಲಿ ಅನುಷ್ಠಾನಗೊಳ್ಳಲು ತೊಡಕಾಗುತ್ತಿದೆ. ನ್ಯಾಯಾಲಯದಲ್ಲಿ ಕೆಲವು ಪ್ರಕರಣಗಳು ಬಾಕಿ ಇರುವುದರಿಂದ ಕೆಲವು ಯೋಜನೆಗಳು ಬಾಕಿ ಉಳಿದಿವೆ. ಮೀನುಗಾರರ ಹಾಗೂ ತೀರ ಪ್ರದೇಶವಾಸಿಗಳನ್ನು ವಿಶ್ವಾಸಕ್ಕೆ ಪಡೆದು, ಅಭಿವೃದ್ಧಿ ಯೋಜನೆ ಹಾಗೂ ರಫ್ತು ಮಾರುಕಟ್ಟೆ ಒದಗಿಸಲು ಕ್ರಮ ಕೈಗೊಳ್ಳಲಾಗುತ್ತದೆ ಎಂದು ಹೇಳಿದರು.

ಬೈಂದೂರಿನ ಶಿರೂರು ಹಾಗೂ ಇತರ ಭಾಗಗಳಲ್ಲಿ ಪ್ರಾಕೃತಿಕ ವಿಕೋಪಗಳ ಕಾರಣದಿಂದ ಹಾನಿಗೊಳಗಾಗಿರುವ ನಾಡದೋಣಿಗಳಿಗೆ ಎನ್‌ಡಿಆರ್‌ಎಫ್ ಹಾಗೂ ಸರ್ಕಾರದ ಪ್ರಾಕೃತಿಕ ವಿಕೋಪ ನಿಧಿಯಡಿ ಕೇವಲ ₹ 4,500 ನೀಡಲು ಅವಕಾಶವಿದ್ದು, ಅಂದಾಜು ₹ 26 ಲಕ್ಷದ ಮಾರುಕಟ್ಟೆ ಬೆಲೆಯ ದೋಣಿ ಹಾಗೂ ಬಲೆಗಳ ಹಾನಿಯ ವಾಸ್ತವ ವಿವರ ಪಡೆದು, ಸದ್ಯ ನಡೆಯಲಿರುವ ಸಂಪುಟ ಸಭೆಯಲ್ಲಿ ವಿಷಯ ಮಂಡಿಸಿ, ಗರಿಷ್ಠ ಪರಿಹಾರ ನೀಡಲು ಪ್ರಯತ್ನಿಸ
ಲಾಗುವುದು ಎಂದು ಅಂಗಾರ ಹೇಳಿದರು.

ಕೋಡಿಗೆ ಸಚಿವರ ಭೇಟಿ: ಕೋಡಿ ಸಮುದ್ರ ಕಿನಾರೆ ಪ್ರದೇಶಗಳಿಗೆ ಭೇಟಿ ನೀಡಿದ ಸಚಿವ ಎಸ್‌.ಅಂಗಾರ ಅವರು ಸಮುದ್ರ ಕೊರೆತದಿಂದ ಹಾನಿಗೊಳಗಾದ ಪ್ರದೇಶಗಳನ್ನು ಪರಿಶೀಲಿಸಿದರು. ಶಾಸಕ ಹಾಲಾಡಿ ಶ್ರೀನಿವಾಸ ಶೆಟ್ಟಿ, ಜಿಲ್ಲಾ ಪಂಚಾಯಿತಿ ಕಾರ್ಯನಿರ್ವಹಣಾಧಿಕಾರಿ ಎಚ್‌.ಪ್ರಸನ್ನ, ಅಧಿಕಾರಿ ಗಣೇಶ್ ಕೆ.ಕೆ, ಸುಮಲತಾ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT