ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮರೆಯಾದ ಸಸ್ಯಶಾಸ್ತ್ರ ಕ್ಷೇತ್ರದ ದಿಗ್ಗಜ: ಸಂಶೋಧಕ ಡಾ.ಕೆ.ಜಿ.ಭಟ್ ಇನ್ನಿಲ್ಲ

ಅಪರೂಪದ ಸಸ್ಯಶಾಸ್ತ್ರಜ್ಞ, ಸಂಶೋಧಕ ಡಾ.ಕೆ.ಜಿ.ಭಟ್ ಇನ್ನಿಲ್ಲ
Last Updated 7 ಏಪ್ರಿಲ್ 2022, 22:00 IST
ಅಕ್ಷರ ಗಾತ್ರ

ಉಡುಪಿ: ಪಶ್ಚಿಮ ಘಟ್ಟದ ಅಪರೂಪದ ಸಸ್ಯಪ್ರಬೇಧಗಳ ಜಾತಕವನ್ನು ಅತ್ಯಂತ ನಿಖರವಾಗಿ ಹೇಳಬಲ್ಲ ಕೆಲವೇ ಸಸ್ಯಶಾಸ್ತ್ರಜ್ಞರಲ್ಲಿ ಉಡುಪಿಯ ಡಾ.ಕೆ.ಗೋಪಾಲ ಕೃಷ್ಣ ಭಟ್‌ (ಡಾ.ಕೆ.ಜಿ.ಭಟ್‌) ಮುಂಚೂಣಿಯಲ್ಲಿ ನಿಲ್ಲುತ್ತಾರೆ. ಸಸ್ಯಶಾಸ್ತ್ರ ಅಧ್ಯಯನ ಹಾಗೂ ಸಂಶೋಧನೆಗೆ ಜೀವನವನ್ನೇ ಮುಡಿಪಿಟ್ಟಿದ್ದ ಅಪರೂಪದ ಸಸ್ಯ ವಿಜ್ಞಾನಿಯಾಗಿದ್ದವರು ಡಾ.ಕೆ.ಜಿ.ಭಟ್‌.

ಸತತ 12 ವರ್ಷಗಳ ಕಾಲ ಪಶ್ಚಿಮಘಟ್ಟ ಹಾಗೂ ಉಡುಪಿ, ದಕ್ಷಿಣ ಕನ್ನಡ ಜಿಲ್ಲೆಗಳ ಸಮಗ್ರ ಸಸ್ಯ ಸಂಕುಲವನ್ನು ಅಧ್ಯಯನ ನಡೆಸಿದ್ದ ಡಾ.ಕೆ.ಜಿ.ಭಟ್ಟರು ‘ಫ್ಲೋರಾ ಆಫ್‌ ಉಡುಪಿ’ ಹಾಗೂ ‘ಫ್ಲೋರಾ ಆಫ್‌ ಸೌಥ್ ಕೆನರಾ’ ಎಂಬ ಅತ್ಯಮೂಲ್ಯ ಸಸ್ಯಶಾಸ್ತ್ರೀಯ ಕೃತಿಗಳನ್ನು ರಚಿಸಿದ್ದರು.

‘ಫ್ಲೋರಾ ಆಫ್‌ ಉಡುಪಿ’ ಕೃತಿಯು 913 ಪುಟಗಳ ಬೃಹತ್ ಸಂಪುಟವಾಗಿದ್ದು ಪಶ್ಚಿಮ ಘಟ್ಟದಲ್ಲಿ ಕಾಣಸಿಗುವ ಅಪರೂಪದ ಸಸ್ಯ ಪ್ರಬೇಧಗಳ ಸಮಗ್ರ ಮಾಹಿತಿ ಒಳಗೊಂಡಿದೆ. ಚಿಕ್ಕ ಹುಲ್ಲಿನಿಂದ ಹಿಡಿದು ದೈತ್ಯ ಮರಗಳವರೆಗಿನ ಸ್ಥೂಲ ಮಾಹಿತಿ ಇಲ್ಲಿ ಲಭ್ಯ.

‘ದ ಫ್ಲೋರಾ ಆಫ್‌ ಸೌತ್ ಕೆನರಾ’ ಕೃತಿಯು 928 ಪುಟಗಳನ್ನು ಹೊಂದಿದ್ದು ಉಡುಪಿ ಹಾಗೂ ದಕ್ಷಿಣ ಕನ್ನಡ ಜಿಲ್ಲೆಗಳ ಸಮಗ್ರ ಸಸ್ಯಪ್ರಬೇಧಗಳ ಮಾಹಿತಿ ಒಳಗೊಂಡಿದೆ. 1,888 ಹೂವಿನ ಗಿಡಗಳ ಪ್ರಬೇಧಗಳ ಚಿತ್ರಸಹಿತ ವಿವರಗಳನ್ನು ಹೊಂದಿರುವ ಈ ಪುಸ್ತಕವು ಅವಿಭಜಿತ ದಕ್ಷಿಣ ಕನ್ನಡದ ಜೀವವೈವಿಧ್ಯವನ್ನು ಪರಿಚಯಿಸುತ್ತದೆ.

ಪಶ್ಚಿಮಘಟ್ಟದ ಕಾಡುಗಳಲ್ಲಿ ಅಲೆದಾಡಿ, ಕಾಡುವಾಸಿಗಳನ್ನು ಭೇಟಿಯಾಗಿ ಅಪರೂಪದ ಸಸ್ಯ ಪ್ರಬೇಧಗಳ ಕುರಿತು ಅತ್ಯಂತ ನಿಖರ ಮಾಹಿತಿ ಕಲೆಹಾಕಿ ‘ದ ಫ್ಲೋರಾ ಆಫ್‌ ಸೌತ್ ಕೆನರಾ’ ಕೃತಿ ರಚಿಸಿದ್ದಾರೆ ಡಾ.ಜಿ.ಜಿ.ಭಟ್‌. ಸಸ್ಯಶಾಸ್ತ್ರ ವಿಭಾಗದ ವಿದ್ಯಾರ್ಥಿಗಳಿಗೆ, ಪ್ರಾಧ್ಯಾಪಕರಿಗೆ ಹಾಗೂ ಸಂಶೋಧಕರಿಗೆ ಈ ಪುಸ್ತಕ ಮಹತ್ವದ ಕೈಪಿಡಿ ಎಂದೇ ಕರೆಯಲಾಗುತ್ತದೆ.

ಭಟ್ಟರ ಹೆಸರಿನಲ್ಲಿ ಸಸ್ಯ:

ಡಾ.ಕೆ.ಜಿ.ಭಟ್ಟರು ಮಣಿಪಾಲದ ಬಳಿ ಪತ್ತೆ ಹಚ್ಚಿದ್ದ ಒಂದು ಸಸ್ಯಕ್ಕೆ ಲಂಡನ್‌ನ ಬಯಾಲಜಿಕಲ್ ಸೊಸೈಟಿಯು ಭಟ್ಟರ ಹೆಸರನ್ನೇ ಸಸ್ಯಕ್ಕೆ ನಾಮಕಾರಣ ಮಾಡುವ ಮೂಲಕ ಅವರ ಪಾಂಡಿತ್ಯಕ್ಕೆ ಗೌರವ ಸಲ್ಲಿಸಿತ್ತು. (ಪ್ಯಾರಾಕೈಟ್ಲಿಯ ಭಟ್ಟಿಯೈ–ವೈಜ್ಞಾನಿಕ ಹೆಸರು).

ಆಯುರ್ವೇದ ಕಾಲೇಜುಗಳ ವಿದ್ಯಾರ್ಥಿಗಳು, ಸಂಶೋಧಕರು, ಅರಣ್ಯ ಇಲಾಖೆಯ ಸಿಬ್ಬಂದಿ ಚೀಲದಲ್ಲಿ ಸಸ್ಯಗಳನ್ನು ತಂದು ಗುರುತಿಸುವಂತೆ ಡಾ.ಕೆ.ಜಿ.ಭಟ್ಟರ ಮನೆಗೆ ಸುರಿದು ಹೋಗುತ್ತಿದ್ದರು. ಬಹಳ ತಾಳ್ಮೆ ಹಾಗೂ ಪ್ರೀತಿಯಿಂದ ಅಧ್ಯಯನ ನಡೆಸಿ ಸಸ್ಯಗಳ ನಿಖರವಾದ ಮಾಹಿತಿ ನೀಡುತ್ತಿದ್ದರು ಭಟ್ಟರು ಎಂದು ಸ್ಮರಿಸುತ್ತಾರೆ ಅವರ ಒಡನಾಡಿ ಹಾಗೂ ಜೀವ ವಿಜ್ಞಾನಿ ಡಾ.ಎನ್‌.ಎ.ಮಧ್ಯಸ್ಥ.

ಸರಳ,ನಿಗರ್ವಿ, ಹಾಗೂ ಸಜ್ಜನ ವ್ಯಕ್ತಿತ್ವದ ಡಾ.ಕೆ.ಜಿ.ಭಟ್ಟರ ನಿಧನ ಸಸ್ಯಶಾಸ್ತ್ರ ಕ್ಷೇತ್ರದಲ್ಲಿ ನಿರ್ವಾತ ಸೃಷ್ಟಿಸಿದೆ. ಅವರ ಸ್ಥಾನ ತುಂಬಬಲ್ಲವರು ಯಾರು ಎಂಬ ಪ್ರಶ್ನೆ ಕಾಡುತ್ತಿದೆ. ಪಶ್ಚಿಮಘಟ್ಟದಲ್ಲಿ ಹಲವು ವರ್ಷಗಳ ಕಾಲ ಅವರೊಂದಿಗೆ ಸುತ್ತಾಡಿದ ನೆನಪುಗಳು ಇನ್ನೂ ಮಾಸಿಲ್ಲ. 32 ವರ್ಷಗಳ ಕಾಲ ಉಡುಪಿಯ ಪೂರ್ಣಪ್ರಜ್ಞ ಕಾಲೇಜಿನಲ್ಲಿ ಸಹೋದ್ಯೋಗಿಯಾಗಿದ್ದ ಹಾಗೂ ನಿವೃತ್ತಿಯ ಬಳಿಕವೂ ನೆರೆ ಮನೆಯ ಸ್ನೇಹಿತರಾಗಿದ್ದ ಕೆ.ಜಿ.ಭಟ್ಟರ ಅಗಲಿಕೆ ಬಹಳ ನೋವು ತಂದಿದೆ ಎನ್ನುತ್ತಾರೆ ಅವರು.

‘ಪ್ರಶಸ್ತಿ ಹಿಂದೆ ಹೋದವರಲ್ಲ’

ಅಂತರ ರಾಷ್ಟ್ರೀಯ ಮಟ್ಟದ ಸಸ್ಯಶಾಸ್ತ್ರಜ್ಞರಾಗಿದ್ದ ಡಾ.ಕೆ.ಜಿ.ಭಟ್ಟರ ಪ್ರತಿಭೆಯನ್ನು ಗುರುತಿಸುವಲ್ಲಿ ಸರ್ಕಾರ ಸೇರಿದಂತೆ ಸಂಘ ಸಂಸ್ಥೆಗಳು ವಿಫಲವಾಗಿದ್ದು ಬೇಸರ ತಂದಿದೆ. ಅವರ ಯೋಗ್ಯತೆಗೆ ಸಲ್ಲಬೇಕಾದ ಪುರಸ್ಕಾರಗಳು ಸಲ್ಲಲಿಲ್ಲ. ಜಾಗತಿಕ ಪ್ರಶಸ್ತಿಗಳು ಸಲ್ಲಬೇಕಾದ ವ್ಯಕ್ತಿಗೆ ಕನಿಷ್ಠ ಜಿಲ್ಲಾಮಟ್ಟದ ಪುರಸ್ಕಾರಗಳು ಸಿಗದಿರುವುದು ನೋವಿನ ಸಂಗತಿ. ಡಾ.ಕೆ.ಜಿ.ಭಟ್ಟರು ಎಂದೂ ಪ್ರಶಸ್ತಿ ಹಿಂದೆ ಹೋದವರಲ್ಲ, ಎಲೆಮರೆ ಕಾಯಿಯಂತೆ ಬದುಕಿ, ಮರೆಯಾದವರು ಎಂದು ಅವರ ಒಡನಾಡಿ ಡಾ.ಎನ್‌.ಎ.ಮಧ್ಯಸ್ಥ ಸ್ಮರಿಸಿದರು.

ಡಾ.ಕೆ.ಜಿ.ಭಟ್ಟರ ಪರಿಚಯ

ಡಾ.ಕೆ.ಗೋಪಾಲಕೃಷ್ಣ ಭಟ್ ಮೂಲತಃ ಕಾಸರಗೋಡು ಜಿಲ್ಲೆಯ ಪೆರಡಾಲ ಗ್ರಾಮದ ಕಾಕುಂಜೆಯವರಾದರೂ ಜೀವಿತದ ಬಹುಪಾಲು ಅವಧಿಯನ್ನು ಉಡುಪಿಯಲ್ಲಿ ಕಳೆದಿದ್ದಾರೆ. ಜೀವಶಾಸ್ತ್ರದಲ್ಲಿ ಸ್ನಾತಕೋತ್ತರ ಪದವಿ, ಸಸ್ಯಶಾಸ್ತ್ರ ಉನ್ನತ ಸಂಶೋಧನೆಗೆ ಡಾಕ್ಟರೇಟ್ ಪದವಿ ಪಡೆದಿದ್ದಾರೆ. ಉಡುಪಿಯ ಪೂರ್ಣಪ್ರಜ್ಞ ಕಾಲೇಜಿನಲ್ಲಿ ಸಸ್ಯಶಾಸ್ತ್ರ ಪ್ರಾಧ್ಯಾಪಕ ಹಾಗೂ ವಿಭಾಗ ಮುಖ್ಯಸ್ಥರಾಗಿ 38 ವರ್ಷ ಸೇವೆ ಸಲ್ಲಿಸಿದ್ದರು. ರಾಜ್ಯ ಹಾಗೂ ರಾಷ್ಟ್ರಮಟ್ಟದ ಸಸ್ಯ ಶಾಸ್ತ್ರೀಯ ಸಮ್ಮೇಳನಗಳಲ್ಲಿ ಪ್ರಬಂಧ, ಉಪನ್ಯಾಸ ನೀಡಿದ್ದಾರೆ. ಜೀವರ್ಗೀಕರಣ ಶಾಸ್ತ್ರದ ವಿಶೇಷ ಸಂಶೋಧನೆಗೆ ಪ್ರತಿಷ್ಠಿತ ಡಾ.ಶಿವರಂಜನ್ ಸ್ಮಾರಕ ಶ್ರೇಷ್ಠ ವಿಜ್ಞಾನಿ ರಾಷ್ಟ್ರೀಯ ಪ್ರಶಸ್ತಿ, ಪುತ್ತಿಗೆ ಮಠದಿಂದ ಜೈ ವಿಜ್ಞಾನ್ ಪ್ರಶಸ್ತಿ ಲಭಿಸಿದೆ. ಮಂಗಳೂರು ವಿಶ್ವವಿದ್ಯಾಲಯ ವಿಜ್ಞಾನ ಪ್ರಾಧ್ಯಾಪಕರ ಸಂಘ ಹಾಗೂ ಹಲವು ಸಂಘಗಳಿಂದ ಸನ್ಮಾನಿಸಲಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT