ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಉಡುಪಿ: ಕಳವಾಗಿದ್ದ ₹ 74.52 ಲಕ್ಷ ಮೌಲ್ಯದ ಸ್ವತ್ತು ಹಸ್ತಾಂತರ

40 ಕಳವು ಪ್ರಕರಣಗಳಲ್ಲಿ ಆಭರಣ, ಬೈಕ್‌, ಮೊಬೈಲ್‌ ನಗದು ವಶಪಡಿಸಿಕೊಂಡಿದ್ದ ಪೊಲೀಸ್ ಇಲಾಖೆ
Last Updated 21 ಮಾರ್ಚ್ 2023, 13:59 IST
ಅಕ್ಷರ ಗಾತ್ರ

ಉಡುಪಿ: ಜಿಲ್ಲೆಯ ವಿವಿಧ ಠಾಣೆಗಳಲ್ಲಿ ದಾಖಲಾಗಿದ್ದ ಕಳವು ಪ್ರಕರಣಗಳಲ್ಲಿ ಆರೋಪಿಗಳಿಂದ ವಶಪಡಿಸಿಕೊಳ್ಳಲಾದ ₹ 74.52 ಲಕ್ಷ ಮೌಲ್ಯದ ಸ್ವತ್ತುಗಳನ್ನು ಮಂಗಳವಾರ ಪೊಲೀಸ್ ಕವಾಯತು ಮೈದಾನದಲ್ಲಿ ನಡೆದ ಕಾರ್ಯಕ್ರಮದಲ್ಲಿ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಮಾಲೀಕರಿಗೆ ಹಸ್ತಾಂತರ ಮಾಡಿದರು.

ಬಳಿಕ ಮಾತನಾಡಿ, ಸಾರ್ವಜನಿಕರು, ವಾಣಿಜ್ಯ ಮಳಿಗೆಗಳ ಮಾಲೀಕರು ಸ್ವತ್ತುಗಳ ರಕ್ಷಣೆಗೆ ಮನೆಯ ಸುತ್ತ ಹಾಗೂ ಅಂಗಡಿ ಮುಂಗಟ್ಟುಗಳ ಬಳಿ ಸಿಸಿಟಿವಿ ಕ್ಯಾಮೆರಾಗಳನ್ನು ಹಾಕಬೇಕು. ಕಳವು ನಡೆದ ಬಳಿಕ ಎಚ್ಚೆತ್ತುಕೊಳ್ಳುವ ಬದಲು ಕಳವು ನಡೆಯದಂತೆ ಸುರಕ್ಷತಾ ಕ್ರಮಗಳನ್ನು ಅಳವಡಿಸಿಕೊಳ್ಳಬೇಕು.

ಕಳ್ಳರಿಂದ ಎಚ್ಚರಿಸುವ ಅಲಾರಂ, ಸಿಸಿಟಿವಿ ಸೆನ್ಸಾರ್ ಕ್ಯಾಮೆರಾಗಳು ಇದ್ದರೆ ಕಳವು ನಡೆಯುವುದಿಲ್ಲ. ನಡೆದರೂ ಆರೋಪಿಗಳನ್ನು ಪತ್ತೆಹಚ್ಚಿ ಕದ್ದ ಮಾಲುಗಳನ್ನು ವಶಪಡಿಸಿಕೊಳ್ಳಲು ಸಹಕಾರಿಯಾಗಲಿದೆ ಎಂದರು.

ಹೆಚ್ಚು ಜನಸಂದಣಿ ಇರುವ ಪ್ರದೇಶಗಳಲ್ಲಿ ಸಿಸಿಟಿವಿ ಕ್ಯಾಮೆರಾಗಳ ಅಳವಡಿಸಬೇಕು ಎಂಬ ನಿಯಮವಿದ್ದು ಕಟ್ಟುನಿಟ್ಟಾಗಿ ಪಾಲನೆಯಾದರೆ ಅಪರಾಧ ಪ್ರಕರಣಗಳ ಪತ್ತೆಗೆ ಅನುಕೂಲವಾಗುತ್ತದೆ. ಸಾರ್ವಜನಿಕರ ಚಲನ ವಲನಗಳನ್ನು ಗಮನಿಸಬಹುದು ಎಂದರು.

ಗ್ರಾಮೀಣ ಪ್ರದೇಶಗಳಲ್ಲಿ ಕಳವು ಪ್ರಕರಣಗಳು ಹೆಚ್ಚಾಗುತ್ತಿದ್ದು ಮನೆಯ ಮಾಲೀಕರ ನಿರ್ಲಕ್ಷ್ಯವೂ ಇದಕ್ಕೆ ಕಾರಣವಾಗಿದೆ. ಮನೆಯ ಬೀಗ ಹಾಕಿ ಕೀಲಿಕೈ ಅನ್ನು ಮನೆಯ ಬಳಿಯೇ ಇಟ್ಟು ಹೋಗುವುದು ಕಳವು ಮಾಡಲು ಅನುಕೂಲ ಮಾಡಿಕೊಟ್ಟಂತಾಗುತ್ತದೆ.

ಸಾರ್ವಜನಿಕರು ಸಂಶಯಾಸ್ಪದ ವ್ಯಕ್ತಿಗಳ ಚಲನ ವಲನಗಳ ಬಗ್ಗೆ ಮಾಹಿತಿ ಸಿಕ್ಕರೆ ಕೂಡಲೇ ಸ್ಥಳೀಯ ಪೊಲೀಸ್ ಠಾಣೆಗಳಿಗೆ ಮಾಹಿತಿ ನೀಡಬೇಕು. ಇದರಿಂದ ಮುಂದಾಗುವ ಕಳವು ಸೇರಿದಂತೆ ಅಪರಾಧ ಕೃತ್ಯಗಳನ್ನು ತಡೆಯಲು ಸಾಧ್ಯವಾಗಲಿದೆ ಎಂದು ಮನವಿ ಮಾಡಿದರು.

40 ಪ್ರಕರಣಗಳಲ್ಲಿ ಸ್ವತ್ತುಗಳ ವಶ:

ಜಿಲ್ಲೆಯ ವಿವಿಧ ಠಾಣೆಗಳಲ್ಲಿ ದಾಖಲಾಗಿದ್ದ 40 ಪ್ರಕರಣಗಳಲ್ಲಿ ಆರೋಪಿಗಳಿಂದ ಸ್ವತ್ತುಗಳನ್ನು ವಶಪಡಿಸಿಕೊಳ್ಳಲಾಗಿದೆ. ಮಣಿಪಾಲ ಠಾಣೆ 10, ಬ್ರಹ್ಮಾವರ 5, ಕುಂದಾಪುರ ಠಾಣೆ 5, ಕುಂದಾಪುರ ಗ್ರಾಮೀಣ ಠಾಣೆ, ಪಡುಬಿದ್ರಿ ಠಾಣೆ ತಲಾ 4, ಉಡುಪಿ ನಗರ 3, ಮಲ್ಪೆ 2, ಕೋಟ, ಕಾಪು, ಕೊಲ್ಲೂರು, ಬೈಂದೂರು, ಹಿರಿಯಡ್ಕ ಹಾಗೂ ಕಾರ್ಕಳ ಗ್ರಾಮಾಂತ ಠಾಣೆಗಳಲ್ಲಿ ತಲಾ ಒಂದು ಪ್ರಕರಣಗಳಲ್ಲಿ 74,52,170 ಮೌಲ್ಯದ ಸ್ವತ್ತುಗಳನ್ನು ವಶಪಡಿಸಿಕೊಳ್ಳಲಾಗಿದೆ ಎಂದು ಎಸ್‌ಪಿ ಮಾಹಿತಿ ನೀಡಿದರು.

ಸ್ವತ್ತುಗಳ ವಿವರ:

2.94 ಲಕ್ಷ ಮೌಲ್ಯದ 7 ದ್ವಿಚಕ್ರ ವಾಹನಗಳು, 68.23 ಲಕ್ಷ ಮೌಲ್ಯದ 1 ಕೆ.ಜಿ 195 ಗ್ರಾಂ ಚಿನ್ನ, 88,510 ಮೌಲ್ಯದ ಬೆಳ್ಳಿ ವಸ್ತುಗಳು, 75,700 ಮೌಲ್ಯದ 10ಮೊಬೈಲ್, 1,70,150 ನಗದು ಪಡಿಸಿಕೊಳ್ಳಲಾಗಿದೆ. ನ್ಯಾಯಾಲಯದಿಂದ ಅನುಮತಿ ಪಡೆದುಕೊಂಡು ಸ್ವತ್ತುಗಳನ್ನು ಮಾಲೀಕರಿಗೆ ಹಿಂದಿರುಗಿಸಲಾಗಿದೆ ಎಂದು ಎಸ್‌ಪಿ ತಿಳಿಸಿದರು.

ಕಾರ್ಯಕ್ರಮದಲ್ಲಿ ಹೆಚ್ಚುವರಿ ಎಸ್‌ಪಿ ಸಿದ್ದಲಿಂಗಪ್ಪ, ಡಿವೈಎಸ್‌ಪಿ ಪಿ.ಕೆ.ದಿನಕರ್, ಕೆ.ವಿ.ಬೆಳ್ಳಿಯಪ್ಪ, ಅರವಿಂದ್‌, ಇನ್‌ಸ್ಪೆಕ್ಟರ್‌ಗಳು, ಪಿಎಸ್‌ಐಗಳು ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT