ಸೋಮವಾರ, 16 ಸೆಪ್ಟೆಂಬರ್ 2024
×
ADVERTISEMENT
ಈ ಕ್ಷಣ :
ADVERTISEMENT

ಉಡುಪಿ | ಬಿಕನಿ ಫೋಟೊ ಶೂಟ್‌ಗೆ ಪೊಲೀಸರಿಂದ ತಡೆ: ಯುವತಿ ಆರೋಪ

Published : 30 ಆಗಸ್ಟ್ 2024, 22:30 IST
Last Updated : 30 ಆಗಸ್ಟ್ 2024, 22:30 IST
ಫಾಲೋ ಮಾಡಿ
Comments

ಉಡುಪಿ: ಪಡುಬಿದ್ರಿ ಬೀಚ್‌ನಲ್ಲಿ ಬಿಕನಿ ಹಾಕಿ ಫೋಟೊ ತೆಗೆದುಕೊಳ್ಳುವಾಗ ಪೊಲೀಸರು ತಡೆದಿದ್ದಾರೆ ಎಂದು ಯುವತಿಯೊಬ್ಬರು ಇನ್‌ಸ್ಟಾಗ್ರಾಂನಲ್ಲಿ ಬರೆದುಕೊಂಡಿದ್ದಾರೆ.

ಖ್ಯಾತಿಶ್ರೀ ಹೆಸರಿನ ಇನ್‌ಸ್ಟಾಗ್ರಾಂ ಖಾತೆ ಹೊಂದಿರುವ ಯುವತಿ, ಬೀಚ್‌ನಲ್ಲಿ ಬಿಕನಿ ಹಾಕಿ ತೆಗೆದಿರುವ ಫೋಟೊವನ್ನೂ, ಇಬ್ಬರು ಪೊಲೀಸರು ಅವರ ಬಳಿ ಬರುತ್ತಿರುವ ಮತ್ತು ಬೀಚ್‌ನಲ್ಲಿ ಕುಳಿತಿದ್ದ ಕೆಲವರ ಫೋಟೊಗಳನ್ನೂ ಪೋಸ್ಟ್‌ ಮಾಡಿದ್ದಾರೆ.

‘ಪಡುಬಿದ್ರಿ ಬೀಚ್‌ನಲ್ಲಿ ಗಂಡ ನನ್ನ ಫೋಟೊ ತೆಗೆಯುತ್ತಿದ್ದರು. ಆಗ ಅಲ್ಲಿಗೆ ಇಬ್ಬರು ಪೊಲೀಸರು ಬಂದು ಬಿಕನಿ ಯಾಕೆ ಧರಿಸಿದ್ದೀರಿ. ಅದಕ್ಕೆ ಅನುಮತಿ ಇದೆಯಾ ಎಂದು ಪ್ರಶ್ನಿಸಿದರು’ ಎಂದು ಬರೆದುಕೊಂಡಿದ್ದಾರೆ.

‘ಬಿಕನಿ ಹಾಕಿಕೊಂಡು ಬೀಚ್‌ಗೆ ಬರೋದು ಕಾನೂನುಬದ್ಧ. ಅದಕ್ಕೆ ಯಾವುದೇ ಅನುಮತಿ ಬೇಡ ಎಂದು ನನ್ನ ಗಂಡ ಪೊಲೀಸರಿಗೆ ತಿಳಿಸಿದರು. ಆಗ ಪೊಲೀಸರು ದೂರದಲ್ಲಿ ಕುಳಿತಿದ್ದ ಗುಂಪೊಂದನ್ನು ತೋರಿಸಿ, ನೀವು ಬಟ್ಟೆ ಬದಲಾಯಿಸದಿದ್ದರೆ ಅವರು ನಿಮ್ಮ ಮೇಲೆ ಹಲ್ಲೆ ನಡೆಸಬಹುದು ಎಂದರು. ನನ್ನ ಹಕ್ಕುಗಳನ್ನು ರಕ್ಷಣೆ ಮಾಡಬೇಕಾದ ಪೊಲೀಸರು ಆ ರೀತಿ ವರ್ತಿಸಿದ್ದಾರೆ’ ಎಂದು ಯುವತಿ ಅಸಮಾಧಾನ ತೋಡಿಕೊಂಡಿದ್ದಾರೆ.

‘ನಾವು ಅಲ್ಲಿಂದ ನಮ್ಮ ರೂಮ್‌ಗೆ ಬಂದೆವು. ಅಲ್ಲಿಂದ ನೋಡಿದಾಗ ಪೊಲೀಸರು ಆ ರೌಡಿಗಳ ಜೊತೆಗೆ ಮಾತನಾಡುತ್ತಿದ್ದರು. ಆ ಸ್ಥಳ ಸುರಕ್ಷಿತವಲ್ಲ ಎಂದು ಅರಿತು ನಮ್ಮ ಬ್ಯಾಗ್‌ಗಳನ್ನು ಪ್ಯಾಕ್‌ ಮಾಡಿ ಮುಂದಿನ ಗ್ರಾಮಕ್ಕೆ ಹೊರಟೆವು’ ಎಂದು ಯುವತಿ ಫೋಟೊದ ಮೇಲೆ ಬರೆದುಕೊಂಡಿದ್ದಾರೆ.

ಯುವತಿಯು ತನ್ನ ಪ್ರೊಫೈಲ್‌ನಲ್ಲಿ ಡಿಜಿಟಲ್‌ ಕ್ರಿಯೇಟರ್‌ ಎಂದು ಬರೆದುಕೊಂಡಿದ್ದಾರೆ.

ವಸತಿ ಪ್ರದೇಶದಲ್ಲಿ ಫೋಟೊ ಶೂಟ್‌:

ಆರೋಪ ಮಾಡಿರುವ ದೆಹಲಿ ಮೂಲದ ಯುವತಿ ವಸತಿ ಪ್ರದೇಶದಲ್ಲಿರುವ ಕಡಲ ತೀರದಲ್ಲಿ ಸಂಜೆ ವೇಳೆ ಬಿಕನಿ ಹಾಕಿಕೊಂಡು ಫೋಟೊ ತೆಗೆಸಿಕೊಂಡಿದ್ದಾರೆ. ಆಗ ಸಾರ್ವಜನಿಕರು ಪೊಲೀಸರಿಗೆ ಕರೆ ಮಾಡಿದ್ದಾರೆ. ಪೊಲೀಸರು ಹೋಗಿ ಸಾರ್ವಜನಿಕರು ಆಕ್ಷೇಪ ವ್ಯಕ್ತಪಡಿಸಿರುವುದರಿಂದ ಅಲ್ಲಿಂದ ತೆರಳಬೇಕೆಂದು ಸೂಚಿಸಿದ್ದಾರೆ ಎಂದು ಪೊಲೀಸ್‌ ಮೂಲಗಳು ತಿಳಿಸಿವೆ.

ಪಡುಬಿದ್ರಿಯ ಬ್ಲೂ ಫ್ಲಾಗ್ ಬೀಚ್‌ನಲ್ಲಿ ಇದೇ ಯುವತಿ ಬಿಕನಿ ಹಾಕಿ ಫೋಟೊ ಶೂಟ್‌ ಮಾಡಿದ್ದಾರೆ. ಅದಕ್ಕೆ ಯಾರೂ ಆಕ್ಷೇಪ ವ್ಯಕ್ತಪಡಿಸಿರಲಿಲ್ಲ. ಸಾರ್ವಜನಿಕ ವಲಯದಲ್ಲಿರುವ ಸಮುದ್ರತೀರದಲ್ಲಿ ಫೋಟೊ ಶೂಟ್‌ ಮಾಡಿರುವುದರಿಂದ ಸ್ಥಳೀಯರು ಆಕ್ಷೇಪ ವ್ಯಕ್ತಪಡಿಸಿದ್ದಾರೆ ಎಂದೂ ಪೊಲೀಸ್‌ ಮೂಲಗಳು ಹೇಳಿವೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT