ಗುರುವಾರ , ಫೆಬ್ರವರಿ 25, 2021
19 °C
ಅರ್ಚಕರ ಸಮಾವೇಶ

ಅರ್ಚಕರಿಗೆ ಮಂತ್ರಗಳ ಜ್ಞಾನದ ಅರಿವು ಅಗತ್ಯ: ವಿಶ್ವಪ್ರಿಯತೀರ್ಥ ಸ್ವಾಮೀಜಿ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಉಡುಪಿ: ಭಕ್ತರು ಹಾಗೂ ಭಗವಂತನ ನಡುವಿನ ಸೇತುವೆಯಂತಿರುವ ಅರ್ಚಕರು ಮಂತ್ರಗಳನ್ನು ಸರಿಯಾಗಿ ಅಭ್ಯಾಸ ಮಾಡಿ ಮಂತ್ರಗಳ ಜ್ಞಾನ ಅರಿಯಬೇಕು ಎಂದು ಅದಮಾರು ಮಠದ ವಿಶ್ವಪ್ರಿಯತೀರ್ಥ ಸ್ವಾಮೀಜಿ ಸಲಹೆ ನೀಡಿದರು.

ಪರ್ಯಾಯ ಅದಮಾರು ಮಠದ ಆಶ್ರಯದಲ್ಲಿ ಧಾರ್ಮಿಕ ಪರಿಷತ್ ಜಿಲ್ಲಾ ಘಟಕ ಹಾಗೂ ಜಿಲ್ಲಾ ಅರ್ಚಕರ ಸಂಘದ ಸಹಯೋಗದೊಂದಿಗೆ ರಾಜಾಂಗಣದಲ್ಲಿ ಶನಿವಾರ ನಡೆದ ಅರ್ಚಕರ ಸಮಾವೇಶ ಉದ್ಘಾಟಿಸಿ ಮಾತನಾಡಿದರು.

ಸ್ವಾರ್ಥ ಚಿಂತನೆ ಬದಿಗಿಟ್ಟು ಎಲ್ಲರ ಒಳಿತಿಗಾಗಿ ಭಗವಂತನಲ್ಲಿ ಪ್ರಾರ್ಥಿಸಬೇಕಾದುದು ಅರ್ಚಕರ ಕರ್ತವ್ಯ. ಸಮಾಜದಲ್ಲಿ ಅರ್ಚಕರಿಗೆ ಗೌರವದ ಸ್ಥಾನಮಾನವಿದ್ದು, ಮನಃ ಶುದ್ಧಿ ಪಾಲಿಸಬೇಕು ಎಂದು ಸಲಹೆ ನೀಡಿದರು.

ಅದಮಾರು ಮಠದ ಈಶಪ್ರಿಯತೀರ್ಥ ಸ್ವಾಮೀಜಿ ಮಾತನಾಡಿ, ಅರ್ಚಕರ ಆಹಾರ ಶುದ್ಧವಾಗಿರಬೇಕು, ನಿದ್ರೆ, ವ್ಯಾಯಾಮಗಳ ಮೂಲಕ ಶರೀರಿಕ ಸದೃಢತೆ ಕಾಪಾಡಿಕೊಳ್ಳಬೇಕು ಎಂದರು.

ಪುತ್ತೂರು ವಿವೇಕಾನಂದ ವಿದ್ಯಾವರ್ಧಕ ಸಂಘದ ಅಧ್ಯಕ್ಷ ಕಲ್ಲಡ್ಕ ಪ್ರಭಾಕರ ಭಟ್ ಮಾತನಾಡಿ, ಮನೆ ಹಾಗೂ ಶಾಲೆಗಳಲ್ಲಿ ಮಕ್ಕಳಿಗೆ ಸಂಸ್ಕಾರದ ಪಾಠ ಸಿಗುತ್ತಿಲ್ಲ. ಪಠ್ಯದಲ್ಲಿ ರಾಮಾಯಣ, ಮಹಾಭಾರತಗಳ ಉಲ್ಲೇಖವಿಲ್ಲ. ದೇವಾಲಯಗಳು ಸಂಸ್ಕೃತಿ ಬೋಧಿಸುವ ಕೇಂದ್ರಗಳಾಗಬೇಕು. ಅರ್ಚಕರು ಈ ಕೆಲಸ ಮಾಡಬೇಕು ಎಂದರು.

ಮಣಿಪಾಲ ಎಂಐಟಿ ಪ್ರಾಧ್ಯಾಪಕ ಡಾ. ನಾರಾಯಣ ಶೆಣೈ, ಉಡುಪಿ ಜಿಲ್ಲಾ ಧಾರ್ಮಿಕ ದತ್ತಿ ಇಲಾಖೆ ಸಹಾಯಕ ಆಯುಕ್ತ ಶೇಷಪ್ಪ ಮಾತನಾಡಿದರು.

ರಾಜ್ಯ ಧಾರ್ಮಿಕ ಪರಿಷತ್ ಸದಸ್ಯ ಸೂರ್ಯನಾರಾಯಣ ಭಟ್ ಕಶೆಕೋಡಿ ಮಾತನಾಡಿ, ಅರ್ಚಕರು ವಸ್ತ್ರ ಸಂಹಿತೆ ಪಾಲಿಸಬೇಕು. ಯೋಗಾಭ್ಯಾಸ ಮಾಡಬೇಕು, ವೃತ್ತಿಗೆ ಪೂರಕವಾದ ವರ್ತನೆ ಇರಬೇಕು ಎಂದರು.

ಸಚಿವ ಕೋಟ ಶ್ರೀನಿವಾಸ ಪೂಜಾರಿ ಶುಭ ಸಮಾವೇಶದಲ್ಲಿ ಶುಭ ಹಾರೈಸಿದರು. ಜಿಲ್ಲಾ ಧಾರ್ಮಿಕ ದತ್ತಿ ಇಲಾಖೆ ವ್ಯಾಪ್ತಿಯ ಅರ್ಚಕರ ಸಂಘದ ಅಧ್ಯಕ್ಷ ಮುಂಡ್ಕೂರು ರಾಮದಾಸ ಆಚಾರ್ಯ, ದಕ್ಷಿಣ ಕನ್ನಡ ಜಿಲ್ಲಾ ಧಾರ್ಮಿಕ ಪರಿಷತ್ ಸದಸ್ಯ ಗಿರಿಪ್ರಸಾದ ತಂತ್ರಿ, ಜಿಲ್ಲಾ ಪಂಚಾಯಿತಿ ಉಪಾಧ್ಯಕ್ಷೆ ಶೀಲಾ ಕೆ. ಶೆಟ್ಟಿ ಇದ್ದರು.

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು