ಸೋಮವಾರ, ಏಪ್ರಿಲ್ 12, 2021
26 °C
ಮಹಿಳೆಯರಿಂದ ಅಣಕು ಶವ ಪ್ರತಿಭಟನೆ, ಮೆರವಣಿಗೆಯಲ್ಲಿ ಭಜನೆ

ತೈಲ ಬೆಲೆ ಏರಿಕೆ: ತಳ್ಳುವ ಗಾಡಿಯಲ್ಲಿ ಪ್ರತಿಭಟನೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಉಡುಪಿ: ಪೆಟ್ರೋಲ್‌, ಡೀಸೆಲ್‌, ಸಿಲಿಂಡರ್‌ ಬೆಲೆ ಏರಿಕೆ, ಅಗತ್ಯ ವಸ್ತುಗಳ ದರ ಹೆಚ್ಚಳ ಹಾಗೂ ಅತಿಥಿ ಉಪನ್ಯಾಸಕರ ಸಮಸ್ಯೆಗೆ ಸ್ಪಂದಿಸದ ಸರ್ಕಾರದ ಧೋರಣೆ ಖಂಡಿಸಿ ಉಡುಪಿ ಜಿಲ್ಲಾ ನಾಗರಿಕ ಸಮಿತಿಯಿಂದ ಗುರುವಾರ ವಿಭಿನ್ನವಾಗಿ ಪ್ರತಿಭಟನಾ ಪಾದಯಾತ್ರೆ ನಡೆಸಲಾಯಿತು.

ತಳ್ಳುವ ಗಾಡಿಯಲ್ಲಿ ಬೈಕ್‌ ಹಾಗೂ ಸಿಲಿಂಡರ್ ಇಟ್ಟು ನಗರದ ಜೋಡುಕಟ್ಟೆಯಿಂದ ಹುತಾತ್ಮ ಸ್ಮಾರಕದವರೆಗೆ ಭಜನೆಯೊಂದಿಗೆ ಮೆರವಣಿಗೆ ನಡೆಸಲಾಯಿತು. ಅಗತ್ಯ ವಸ್ತುಗಳ ಬೆಲೆ ಏರಿಕೆ ಖಂಡಿಸಿ ಕೇಂದ್ರ ಹಾಗೂ ರಾಜ್ಯ ಸರ್ಕಾರದ ವಿರುದ್ಧ ಮಹಿಳೆಯರು ಅಣಕು ಶವಯಾತ್ರೆ ನಡೆಸಿದ್ದು ವಿಶೇಷವಾಗಿತ್ತು.

‘ಅಡುಗೆ ಅನಿಲ ಬೆಲೆ ಇಳಿಸಬೇಕು ಬಡವರ ಮನೆಯ ಒಲೆ ಉರಿಸಬೇಕು’, ‘ಕೊರೊನಾ ವ್ಯಾಧಿಯಿಂದ ಜನರು ತತ್ತರ, ಈಗ ಬೆಲೆ ಏರಿಕೆಯಿಂದ ದೇಶ ತತ್ತರ’, ‘ಇಂಧನ ಬೆಲೆ ಇಳಿಸಬೇಕು ಬಡವರು ಸಂಚರಿಸಬೇಕು’ ಎಂಬ ಘೋಷಣೆಗಳನ್ನೊಳಗಂಡ ಫಲಕಗಳನ್ನು ಮೆರವಣಿಗೆಯುದ್ದಕ್ಕೂ ಪ್ರದರ್ಶಿಸಲಾಯಿತು.

ಪ್ರತಿಭಟನೆಯಲ್ಲಿ ಮಾತನಾಡಿದ ಜಿಲ್ಲಾ ನಾಗರಿಕ ಸಮಿತಿಯ ನಿತ್ಯಾನಂದ ಒಳಕಾಡು ‘ಕೊರೊನಾ ಸಂಕಷ್ಟದಿಂದ ಜನ ತತ್ತರಿಸುತ್ತಿರುವಾಗ ತೈಲ ಬೆಲೆ ಏರಿಕೆಯ ಜತೆಗೆ, ಅಗತ್ಯ ವಸ್ತುಗಳ ದರವೂ ಗಗನಕ್ಕೇರಿರುವುದು ಜನಸಾಮಾನ್ಯರಿಗೆ ದೊಡ್ಡ ಹೊರೆಯಾಗಿದೆ. ಜನರ ಸಂಕಷ್ಟಗಳಿಗೆ ಕೇಂದ್ರ ಸರ್ಕಾರ ತಕ್ಷಣ ಸ್ಪಂದಿಸಿ ತೈಲ ಬೆಲೆ ಇಳಿಸಬೇಕು ಎಂದು ಆಗ್ರಹಿಸಿದರು.

ಕೊರೊನಾ ಬಳಿಕ ಅತಿಥಿ ಉಪನ್ಯಾಸಕರು ಕೆಲಸ ಕಳೆದುಕೊಂಡು ಬೀದಿಗೆ ಬಿದ್ದಿದ್ದಾರೆ. ಜೀವನ ನಿರ್ವಹಣೆಗೆ ಸಂಕಷ್ಟಪಡುತ್ತಿದ್ದಾರೆ. ಸರ್ಕಾರ ಕೂಡಲೇ ಅವರ ನೆರವಿಗೆ ಧಾವಿಸಬೇಕು ಎಂದು ಒತ್ತಾಯಿಸಿದರು.

ಪ್ರತಿಭಟನೆಯ ನೇತೃತ್ವವನ್ನು ತಾರಾನಾಥ್, ಬಾಲಗಂಗಾಧರ್ ರಾವ್‌, ಸುಧೀರ್ ಶೇಟ್‌, ಗಣೇಶ್ ರಾಜ್ ಸರಳೆಬೆಟ್ಟು ವಹಿಸಿದ್ದರು.

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.