ಸೋಮವಾರ, ಮಾರ್ಚ್ 27, 2023
31 °C
ಸಿದ್ದಾಪುರದ ಪೂರ್ಣಿಮಾ ಭಟ್‌ಗೆ ಪ್ರಶಸ್ತಿ

ದಕ್ಷಿಣ ಭಾರತ ವಿಜ್ಞಾನ ವಸ್ತು ಪ್ರದರ್ಶನ: ಗಣಿತ ಸ್ವಕಲಿಕೆಯ ಮಾದರಿಗೆ ಪ್ರಥಮ ಸ್ಥಾನ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಉಡುಪಿ: ಕೇರಳದ ತ್ರಿಶೂರಿನಲ್ಲಿ ಈಚೆಗೆ ನಡೆದ ದಕ್ಷಿಣ ಭಾರತ ಮಟ್ಟದ ವಿಜ್ಞಾನ ವಸ್ತು ಪ್ರದರ್ಶನದಲ್ಲಿ ಸಿದ್ಧಾಪುರದ ಸರ್ಕಾರಿ ಪ್ರೌಢಶಾಲೆಯ ಶಿಕ್ಷಕಿ ಪೂರ್ಣಿಮಾ ಭಟ್‌ ಪ್ರಥಮ ಸ್ಥಾನ ಪಡೆದಿದ್ದಾರೆ.

ಕೇಂದ್ರ ಸರ್ಕರದ ಸಂಸ್ಕೃತಿ ಸಚಿವಾಲಯ, ವಿಶ್ವೇಶ್ವರಯ್ಯ ಕೈಗಾರಿಕಾ ಮತ್ತು ತಂತ್ರಜ್ಞಾನ ವಸ್ತು ಸಂಗ್ರಹಾಲಯ, ಕೇರಳ ಸರ್ಕಾರದ ಶಿಕ್ಷಣ ಸಚಿವಾಲಯ ಜಂಟಿಯಾಗಿ ಆಯೋಜಿಸಿದ್ದ ಈ ವಸ್ತು ಪ್ರದರ್ಶನದಲ್ಲಿ ಪೂರ್ಣಿಮಾ ಭಟ್ ಕರ್ನಾಟಕ ರಾಜ್ಯವನ್ನು ಪ್ರತಿನಿಧಿಸಿ ಸ್ವಕಲಿಕಾ ಸಾಮಾಗ್ರಿಗಳನ್ನು ಪ್ರದರ್ಶಿಸಿದ್ದರು.

ಗಣಿತ ಕಲಿಕೆಯ ಬಗ್ಗೆ ಆಸಕ್ತಿ ಹಾಗೂ ಪ್ರೀತಿ ಮೂಡಿಸಬಲ್ಲ ಪೂರ್ಣಿಮಾ ಅವರ ಸ್ವಕಲಿಕಾ ಸಾಮಗ್ರಿಗಳ ಬಗ್ಗೆ ತೀರ್ಪುಗಾರರು ಮೆಚ್ಚುಗೆ ವ್ಯಕ್ತಪಡಿಸಿದರು.

ಏನಿದು ಸ್ವಕಲಿಕಾ ಸಾಮಗ್ರಿ: ಸಂಕಲನ ಹಾಗೂ ಗುಣಾಕಾರದಲ್ಲಿ ಬರುವ ಚಿಹ್ನೆಗಳ ಪರಿಕಲ್ಪನೆಯನ್ನು ಮೂಡಿಸುವುದು, ತ್ರಿಭುಜದ ಮೂರು ಕೋನಗಳ ಮೊತ್ತವನ್ನು ಚಟುವಟಿಕೆಗಳ ಮೂಲಕ ತಿಳಿಸುವುದು, ಬೀಜೋಕ್ತಿಗಳ ಗುಣಾಕಾರ, ಬೀಜೋಕ್ತಿಗಳ ಸಾಮಾನ್ಯ ಅಪವರ್ತನ, ಭಿನ್ನರಾಶಿಗಳ ಕುರಿತು ಸ್ಪಷ್ಟ ಪರಿಕಲ್ಪನೆ ಮೂಡಿಸುವುದು, ಸಂಖ್ಯೆಗಳ ಮಸಾಅ ಹಾಗೂ ಲಸಾಅ ಕಂಡು ಹಿಡಿಯುವುದು, ಎರಡು ಸಮಾಂತರ ರೇಖೆಗಳನ್ನು ಒಂದು ಛೇದಕವು ಕತ್ತರಿಸಿದಾಗ ಉಂಟಾಗುವ ವಿವಿಧ ಬಗೆಯ ಕೋನಗಳ ಲಕ್ಷಣಗಳನ್ನು ತಿಳಿಸುವುದು, ವಿವಿಧ ವೃತ್ತ ಖಂಡದಲ್ಲಿ ಉಂಟಾಗುವ ಕೋನದ ಲಕ್ಷಣಗಳು, ಸರ್ವ ಸಮ ಆಕೃತಿಗಳು, ಸಮ ಮಿತಿಯ ಅಕ್ಷ ಹಾಗೂ ಅವುಗಳಲ್ಲಿ ಉಂಟಾಗುವ ಕೋನದ ಬೆಲೆ ಕಂಡು ಹಿಡಿಯುವುದು, ವಿವಿಧ ಮಾದರಿಯ ಕೋನಗಳನ್ನು ಗುರುತಿಸುವ ಪರಿಕಲ್ಪನೆಯನ್ನು ವಿದ್ಯಾರ್ಥಿಗಳಲ್ಲಿ ಮೂಡಿಸುವ ಚಟುವಟಿಕೆಯ ಮಾದರಿಯನ್ನು ಪೂರ್ಣಿಮಾ ಭಟ್‌ ರಚಿಸಿದ್ದರು.

ಪೂರ್ಣಿಮಾ ಭಟ್‌ ಗಣಿತ ವಿಷಯ ಕಬ್ಬಿಣದ ಕಡಲೆ ಎಂಬ ಭಯವನ್ನು ವಿದ್ಯಾರ್ಥಿಗಳಲ್ಲಿ ಹೋಗಲಾಡಿಸಲು ಹಲವು ಸ್ವಕಲಿಕೆಯ ಮಾದರಿಗಳನ್ನು ರಚಿಸಿದ್ದಾರೆ. ಆಯ್ದ ಕೆಲವು ಮಾದರಿಗಳನ್ನು ಚಲದೀನ್‌ ಸಿರಿಯನ್‌ ಹೈಯರ್‌ ಸೆಕೆಂಡರಿ ಶಾಲೆಯಲ್ಲಿ ನಡೆದ ದಕ್ಷಿಣ ಭಾರತ ವಿಜ್ಞಾನ ವಸ್ತು ಪ್ರದರ್ಶನದಲ್ಲಿ ಪ್ರದರ್ಶಿಸಿದ್ದಾರೆ.‌

ಪೂರ್ಣಿಮಾ ಭಟ್‌ ಹಿಂದೆ ನಡೆದ ಜಿಲ್ಲಾ ಮಟ್ಟದ ಮತ್ತು ರಾಜ್ಯ ಮಟ್ಟದ ಸ್ಪರ್ಧೆಗಳಲ್ಲಿ ಪ್ರಥಮ ಸ್ಥಾನ ಪಡೆದು ದಕ್ಷಿಣ ಭಾರತ ಮಟ್ಟದ ಸ್ಪರ್ಧೆಗೆ ಆಯ್ಕೆಯಾಗಿದ್ದರು.

ಈ ವರ್ಷದ ಮಕ್ಕಳ ವಿಜ್ಞಾನ ಸಮಾವೇಶದಲ್ಲಿ ಪೂರ್ಣಿಮಾ ಭಟ್ ಮಾರ್ಗದರ್ಶನದಲ್ಲಿ ಮಳೆ ನೀರು ಇಂಗಿಸುವ ಕುರಿತು ಅಧ್ಯಯನ ನಡೆಸಿರುವ ಶಾಲೆಯ ವಿದ್ಯಾರ್ಥಿನಿ ಶ್ರೀನಿಧಿ ದಕ್ಷಿಣ ಭಾರತ ಮಟ್ಟದ ಸ್ಪರ್ಧೆಯಲ್ಲಿ ಭಾಗವಹಿಸಿದ್ದಾರೆ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು