ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಉಡುಪಿ: ಬಿರುಸುಗೊಂಡ ಮಳೆ

ಜೂನ್‌ 19ರವರೆಗೆ ಭಾರಿ ಮಳೆ: ಹವಾಮಾನ ಇಲಾಖೆ ಮುನ್ಸೂಚನೆ
Last Updated 14 ಜೂನ್ 2020, 14:38 IST
ಅಕ್ಷರ ಗಾತ್ರ

ಉಡುಪಿ: ಜಿಲ್ಲೆಯಲ್ಲಿ ಮುಂಗಾರು ಚುರುಕಾಗಿದ್ದು ಬಿರುಸಾಗಿ ಮಳೆ ಸುರಿಯುತ್ತಿದೆ. ಭಾನುವಾರ ಜಿಲ್ಲೆಯಾದ್ಯಂತ ಉತ್ತಮ ಮಳೆಯಾಗಿದೆ.

ಮರ ಬಿದ್ದು ಹಾನಿ

ಮೂರು ದಿನಗಳಿಂದ ಸುರಿಯುತ್ತಿರುವ ಮಳೆಯಿಂದ ಜಿಲ್ಲೆಯಾದ್ಯಂತ ಹಾನಿ ಸಂಭವಿಸಿದೆ. ಮರಗಳು ಬಿದ್ದು ಮನೆಗಳಿಗೆ ಭಾಗಶಃ ಹಾನಿಯಾಗಿದೆ. ಬ್ರಹ್ಮಾವರ ತಾಲ್ಲೂಕಿನ ಕೋಟತಟ್ಟು ಗ್ರಾಮದಲ್ಲಿ ಸುಮತಿ ಎಂಬುವರ ಮನೆ ಹಾಗೂ ಹಲುವಳ್ಳಿ ಗ್ರಾಮದಲ್ಲಿ ರತ್ನ ಎಂಬುವರ ಮನೆಗೆ ಭಾಗಶಃ ಹಾನಿಯಾಗಿದೆ.

ಶನಿವಾರ ಸುರಿದ ಮಳೆಯೂ ಅವಾಂತರಗಳನ್ನು ಸೃಷ್ಟಿಸಿದ್ದು, ಕುಂದಾಪುರ ತಾಲ್ಲೂಕಿನ ಉಳ್ತೂರು ಗ್ರಾಮದಲ್ಲಿ ಮರಗಳು ಬಿದ್ದು 7 ಮನೆಗಳಿಗೆ ಹಾನಿಯಾಗಿದೆ. ತೆಕ್ಕಟ್ಟೆ ಗ್ರಾಮದಲ್ಲಿ ಕೊಟ್ಟಿಗೆ ಬಿದ್ದಿದೆ.

ಬೈಂದೂರು ತಾಲ್ಲೂಕಿನ ಉಪ್ಪುಂದ, ಶಿರೂರು, ಕಾಪು ತಾಲ್ಲೂಕಿನ ನಂದಿಕೂರು, ಉಡುಪಿ ತಾಲ್ಲೂಕಿನ 76 ಬಡಗಬೆಟ್ಟು ಗ್ರಾಮ, ಬಡಾನಿಡಿಯೂರಿನಲ್ಲಿ ಮನೆಗಳಿಗೆ ಹಾನಿಯಾಯಾಗಿದೆ. ಕುಂದಾಪುರದಲ್ಲಿ ತೋಟಗಾರಿಕಾ ಬೆಳೆ ಹಾಳಾಗಿದೆ. ಶನಿವಾರ ಸುರಿದ ಮಳೆಗೆ ₹ 6.12 ಲಕ್ಷ ನಷ್ಟ ಸಂಭವಿಸಿದೆ. ಭಾನುವಾರ 45,000 ನಷ್ಟ ಅಂದಾಜಿಸಲಾಗಿದೆ.

ಕಳೆದ 24 ಗಂಟೆಗಳಲ್ಲಿ ಜಿಲ್ಲೆಯಲ್ಲಿ 5.5 ಸೆ.ಮೀ ಮಳೆಯಾಗಿದ್ದು, ಉಡುಪಿಯಲ್ಲಿ 6.7, ಕುಂದಾಪುರ 4.9, ಕಾರ್ಕಳದಲ್ಲಿ 5.1 ಸೆ.ಮೀ ಮಳೆ ಬಿದ್ದ ವರದಿಯಾಗಿದೆ.

ನೀರಿನ ಹರಿವು ಹೆಚ್ಚಳ

ಎಡೆಬಿಡದೆ ಮಳೆ ಸುರಿಯುತ್ತಿರುವ ಹಿನ್ನೆಲೆಯಲ್ಲಿ ಸ್ವರ್ಣಾ ನದಿಯ ಹರಿವು ಹೆಚ್ಚಾಗಿದ್ದು ನಗರಕ್ಕೆ ನೀರು ಪೂರೈಸುವ ಬಜೆ ಜಲಾಶಯದಲ್ಲಿ ಹೆಚ್ಚಿನ ಪ್ರಮಾಣದಲ್ಲಿ ನೀರು ಸಂಗ್ರಹವಾಗುತ್ತಿದೆ. ಹೆಬ್ರಿಯ ಸೀತಾ ನದಿಯಲ್ಲೂ ಹರಿವು ಹೆಚ್ಚಾಗಿದೆ. ಮಳೆಯ ಆರ್ಭಟ ಮುಂದುವರಿದರೆ ನದಿಗಳು ತುಂಬಿ ಹರಿಯಲಿವೆ.

ವಿದ್ಯುತ್ ವ್ಯತ್ಯಯ

ಗಾಳಿ ಮಳೆ ಹೆಚ್ಚಾಗಿರುವ ಹಿನ್ನೆಲೆಯಲ್ಲಿ ವಿದ್ಯುತ್ ವ್ಯತ್ಯಯ ಸಾಮಾನ್ಯವಾಗಿದೆ. ಹಳ್ಳಿಗಳಲ್ಲಿ ಮರ ಬಿದ್ದು, ವಿದ್ಯುತ್ ಕಂಬಗಳಿಗೆ ಹಾನಿಯಾಗಿ ಪೂರೈಕೆಗೆ ಸಮಸ್ಯೆಯಾಗಿದೆ.

ಸಮುದ್ರದಲ್ಲಿ ಅಲೆಗಳ ಉಬ್ಬರವೂ ಹೆಚ್ಚಾಗಿದ್ದು, ಸಮುದ್ರಕ್ಕಿಳಿಯದಂತೆ ಮೀನುಗಾರರಿಗೆ ಸೂಚನೆ ನೀಡಲಾಗಿದೆ. ಸಮುದ್ರದಂಚಿನಲ್ಲಿ ವಾಸಿಸುವವರಿಗೂ ಎಚ್ಚರಿಕೆ ನೀಡಲಾಗಿದೆ.

ಹವಾಮಾನ ಇಲಾಖೆ ಎಚ್ಚರಿಕೆ

ಜೂನ್‌ 19ರವರೆಗೂ ಕರಾವಳಿ ಪ್ರದೇಶಗಳಲ್ಲಿ ಭಾರಿ ಮಳೆಯಾಗಲಿದೆ ಎಂದು ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ. ಜೂನ್ 15ರಂದು125 ಮಿ.ಮೀಗೂ ಹೆಚ್ಚು ಮಳೆ ಸುರಿಯುವ ಸಾಧ್ಯತೆ ಇದೆ. ‌ 16ರಿಂದ 19ರವರೆಗೆ 65 ಮಿ.ಮೀಗೂ ಹೆಚ್ಚು ಮಳೆ ಬೀಳಲಿದೆ ಎಂದು ತಿಳಿಸಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT