ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ವರುಣ: ಬದುಕು ಹೈರಾಣ

ತಗ್ಗು ಪ್ರದೇಶಗಳಲ್ಲಿ ನೆರೆ ಭೀತಿ, ಮನೆಗಳು ಕುಸಿದು ನಷ್ಟ
Last Updated 1 ಜುಲೈ 2022, 2:26 IST
ಅಕ್ಷರ ಗಾತ್ರ

ಕುಂದಾಪುರ: ಬುಧವಾರ ರಾತ್ರಿಯಿಂದ ಬಿಡುವಿಲ್ಲದೆ ಸುರಿಯುತ್ತಿರುವ ವರುಣನ ಅಬ್ಬರಕ್ಕೆ ಕುಂದಾಪುರ ಹಾಗೂ ಬೈಂದೂರು ತಾಲ್ಲೂಕಿನ ಜನರ ದೈನಂದಿನ ಬದುಕು ಅಸ್ತವ್ಯಸ್ಥವಾಗಿದೆ. ತಗ್ಗು ಪ್ರದೇಶಗಳಲ್ಲಿ ನೀರು ತುಂಬುತ್ತಿದ್ದು, ಜನರು ಆತಂಕಕ್ಕೆ ಒಳಗಾಗಿದ್ದಾರೆ.

ಕಳೆದ ರಾತ್ರಿಯಿಂದ ಕುಂಭದ್ರೋಣವಾಗಿ ಸುರಿಯುತ್ತಿರುವ ವರ್ಷಧಾರೆಯಿಂದಾಗಿ ಉಭಯ ತಾಲ್ಲೂಕುಗಳಲ್ಲಿ ಹರಿಯುತ್ತಿರುವ ವರಾಹಿ, ಸೌಪರ್ಣಿಕಾ, ಚಕ್ರಾ, ಕುಬ್ಜಾ, ಖೇಟಕಿ ನದಿಗಳ ನೀರಿನ ಹರಿವಿನ ಪ್ರಮಾಣ ಹೆಚ್ಚಿದ್ದು, ನೀರಿನ ಮಟ್ಟ ಕ್ಷಣ ಕ್ಷಣಕ್ಕೂ ಏರುತ್ತಿದೆ. ನದಿ ನೀರು ಮಣ್ಣಿನ ಬಣ್ಣಕ್ಕೆ ಬದಲಾವಣೆಯಾಗಿದ್ದು, ಗಾಳಿಯ ಒತ್ತಡ ಹೆಚ್ಚುವ ಸಾಧ್ಯತೆ ಇದ್ದು ನದಿ ತೀರ ಪ್ರದೇಶಗಳಲ್ಲಿ ನೆರೆ ಭೀತಿ ಕಾಡುತ್ತಿದೆ.

ನಾವುಂದದ ಸಾಲ್ಬುಡ, ಮರವಂತೆ, ಚಿಕ್ಕಳ್ಳಿ, ಹಡವು, ಆನಗಳ್ಳಿ, ಬಳ್ಕೂರು ಭಾಗಗಳಲ್ಲಿ ನೀರಿನ ಮಟ್ಟ ಹೆಚ್ಚಾಗುತ್ತಿದ್ದು, ಇಲ್ಲಿನ ತೋಡು ಹಾಗೂ ಗದ್ದೆಗಳಲ್ಲಿ, ಕೃಷಿ ತೋಟಗಳಲ್ಲಿ, ಅಂಗಳದಲ್ಲಿ ಮಳೆ ನೀರು ಸಂಗ್ರಹವಾಗುತ್ತಿದೆ. ಮಳೆಯ ಪರಿಸ್ಥಿತಿ ಗುರುವಾರ ರಾತ್ರಿಯೂ ಇದೇ ರೀತಿ ಮುಂದುವರಿದರೆ ಸೇನಾಪುರ, ಚಿಕ್ಕಳ್ಳಿ, ಬಡಾಕೆರೆ, ಕುರು, ಪಡುಕೋಣೆ, ಕಟ್ಟು, ಕನ್ನಡಕುದ್ರು, ಬಟ್ಟೆಕುದ್ರು, ಮುವತ್ತುಮುಡಿ, ಯಳೂರು, ತೊಪ್ಲು, ಸಾಲ್ಬುಡ ಮುಂತಾದ ಪ್ರದೇಶಗಳಲ್ಲಿ ನೆರೆ ಸಾಧ್ಯತೆ ಇದೆ.

ಕುಂದಾಪುರ ನಗರದ ರಾಷ್ಟ್ರೀಯ ಹೆದ್ದಾರಿಯ ಸರ್ವೀಸ್ ರಸ್ತೆಗಳಲ್ಲಿ ನೀರು ನಿಂತಿದ್ದು, ವಾಹನ ಸವಾರರಿಗೆ ಹಾಗೂ ದಾರಿ ಹೋಕರಿಗೆ ಸಮಸ್ಯೆ ಉಂಟು ಮಾಡಿದೆ. ನಗರದ ತಗ್ಗು ಪ್ರದೇಶಗಳಲ್ಲಿ ಮಳೆ ನೀರಿನ ಸುಗಮ ಸಂಚಾರಕ್ಕೆ ತೊಡಕಾಗಿರುವುದರಿಂದ ಎಲ್ಲೆಂದರಲ್ಲಿ ಮಳೆ ನೀರು ನಿಂತು ಆವಾಂತರಗಳನ್ನು ಸೃಷ್ಟಿ ಮಾಡುತ್ತಿದೆ. ಮಾರಣಕಟ್ಟೆಯ ಬ್ರಹ್ಮಲಿಂಗೇಶ್ವರ ದೇವಸ್ಥಾನ ಆವರಣಕ್ಕೆ ಮಳೆ ನೀರು ನುಗ್ಗಿದೆ. ಎಡೆಬಿಡದೆ ಸುರಿಯುತ್ತಿರುವ ಮಳೆಯಿಂದಾಗಿ ಮರವಂತೆಯಲ್ಲಿ ಸಮುದ್ರದ ಭಾರಿ ಅಲೆಗಳು, ಕಡಲಕೊರೆತ ತಡೆಗಾಗಿ ಹಾಕಿರುವ ತಡೆಗೋಡೆಗಳಿಗೆ ಅಪ್ಪಳಿಸುತ್ತಿದೆ. ಉಭಯ ತಾಲ್ಲೂಕಿನ ಕಡಲ ತೀರ ಪ್ರದೇಶಗಳಲ್ಲಿ ಕಡಲ್ಕೊರೆತದ ಭೀತಿ ತಲೆದೋರಿದೆ.

ಮನೆಗೆ ನುಗ್ಗಿದ ನೀರು: ಗೋಪಾಡಿಯ ಕಾಂತೇಶ್ವರ ದೇವಸ್ಥಾನ ಸಮೀಪ ವಿವೇಕಾನಂದ ರಸ್ತೆಯ ಮನೆಗಳಿಗೆ ನೀರು ನುಗ್ಗಿ ಅಪಾರ ಹಾನಿ ಉಂಟಾಗಿದೆ. ಚರಂಡಿ ವ್ಯವಸ್ಥೆ ಸರಿಯಾಗಿಲ್ಲದ ಕಾರಣ ಮಳೆಯ ನೀರು ಮನೆವರೆಗೂ ಬಂದಿದೆ. ಈ ಕುರಿತು ಸಂಬಂಧಿತರಿಗೆ ದೂರು ನೀಡಿದರೂ ಸ್ಪಂದಿಸಿಲ್ಲ ಎಂದು ಸ್ಥಳೀಯ ನಿವಾಸಿಗಳು ಆಕ್ಷೇಪ ವ್ಯಕ್ತಪಡಿಸುತ್ತಿದ್ದಾರೆ.

ಹೆಮ್ಮಾಡಿಯಲ್ಲಿ 2, ಶಂಕರನಾರಾಯಣದಲ್ಲಿ 2 ಹಾಗೂ ಗುಜ್ಜಾಡಿಯಲ್ಲಿ 1 ಮನೆ ಭಾಗಶ: ಕುಸಿದು ಲಕ್ಷಾಂತರ ರೂಪಾಯಿ ನಷ್ಟ ಉಂಟಾಗಿರುವ ಕುರಿತು ಕಂದಾಯ ಇಲಾಖೆಯ ಮೂಲಗಳು ಮಾಹಿತಿ ತಿಳಿಸಿವೆ. ಹಕ್ಲಾಡಿ ಗ್ರಾಮ ಭಜನಾ ಮಂದಿರ ಬಳಿ ವಾಣಿಜ್ಯ ಸಂಕೀರ್ಣ ಹಾಗೂ ಮನೆಗೆ ನೀರು ನುಗ್ಗಿ, ಎಲೆಕ್ಟ್ರಾನಿಕ್ ಉಪಕರಣಗಳು ನಾಶವಾಗಿದ್ದು, 20 ಸಾವಿರಕ್ಕೂ ಹೆಚ್ಚು ನಷ್ಟ ಸಂಭಸಿದೆ. ಹಕ್ಲಾಡಿಯ ಟೈಲರ್ ಅಂಗಡಿಗೆ ನೀರು ನುಗ್ಗಿದ್ದು, ಬಟ್ಟೆಗಳು ಮಳೆ ನೀರಲ್ಲಿ ತೇಲುತ್ತಿದ್ದು, ಸಾವಿರಾರು ರೂಪಾಯಿ ನಷ್ಟ ಉಂಟಾಗಿದೆ. ಸೆಲೂನ್, ಬ್ಯೂಟಿ ಪಾರ್ಲರ್, ಕೋಳಿ ಫಾರ್ಮ್‌ಗೂ ಮಳೆ ನೀರು ನುಗ್ಗಿದ್ದು, ಪಾತ್ರೆಗಳಲ್ಲಿ ನೀರನ್ನು ಹೊರ ಚೆಲ್ಲುವ ಕೆಲಸ ನಿರಂತರವಾಗಿ ಸಾಗಿದೆ.

ವಿದ್ಯಾರ್ಥಿಗಳ ಪರದಾಟ: ರಾತ್ರಿಯಿಂದ ಸುರಿಯುತ್ತಿರುವ ಮಳೆ, ಗುರುವಾರ ಬೆಳಿಗ್ಗೆಯೂ ತನ್ನ ರೌದ್ರಾವತಾರವನ್ನು ತೋರಿರುವುದರಿಂದ ಶಾಲಾ-ಕಾಲೇಜುಗಳಿಗೆ ತೆರಳುವ ವಿದ್ಯಾರ್ಥಿಗಳು ಮಳೆಯಿಂದಾಗಿ ತೋಯ್ದ ಬಟ್ಟೆಗಳಲ್ಲಿ ತರಗತಿಗಳಲ್ಲಿ ಕುಳಿತು ಪಾಠ ಕೇಳಬೇಕಾದ ಅನೀವಾರ್ಯತೆ ನಿರ್ಮಾಣವಾಗಿತ್ತು. ಮಧ್ಯಾಹ್ನದ ಬಳಿಕವೂ ಮುಂದುವರೆದ ವರ್ಷಧಾರೆಯಿಂದಾಗಿ ವಿದ್ಯಾರ್ಥಿಗಳು ಮಳೆಯ ನಡುವಿನಲ್ಲಿಯೇ ಮನೆ ಸೇರಿದ್ದಾರೆ.

ಪರಿಸ್ಥಿತಿ ಎದುರಿಸಲು ಸಿದ್ಧತೆ

ಬುಧವಾರದಿಂದ ಸುರಿಯುತ್ತಿರುವ ವರ್ಷಧಾರೆಯ ಕುರಿತಂತೆ ‘ಪ್ರಜಾವಾಣಿ’ ಯೊಂದಿಗೆ ಮಾತನಾಡಿದ ಉಪ ವಿಭಾಗಾಧಿಕಾರಿ ಕೆ.ರಾಜು, ಉಭಯ ತಾಲ್ಲೂಕುಗಳಲ್ಲಿಯೂ ಪರಿಸ್ಥಿತಿಯನ್ನು ಸೂಕ್ಷ್ಮವಾಗಿ ಗಮನಿಸಲಾಗುತ್ತಿದೆ. ಹವಾಮಾನ ಇಲಾಖೆ ಹಾಗೂ ತಜ್ಞರ ಸೂಚನೆಯಂತೆ ಪರಿಸ್ಥಿತಿ ಎದುರಿಸಲು ಎಚ್ಚರದ ಸ್ಥಿತಿಯಲ್ಲಿ ಇರುವಂತೆ ಕಂದಾಯ ಹಾಗೂ ಪಂಚಾಯತ್ ಇಲಾಖೆಯ ಅಧಿಕಾರಿಗಳು ಹಾಗೂ ಸಿಬ್ಬಂದಿಗೆ ಸೂಚನೆಯನ್ನು ನೀಡಲಾಗುತ್ತಿದೆ. ನೆರೆ ಪರಿಸ್ಥಿತಿ ಉಂಟಾದರೆ ಅಗತ್ಯವಾಗಿರುವ ರಕ್ಷಣಾ ವ್ಯವಸ್ಥೆಯನ್ನು ಸಿದ್ಧವಾಗಿರಿಸಿಕೊಳ್ಳಲಾಗಿದೆ. ಮಳೆಯಿಂದಾಗಿ ಅನಾಹುತ ಸಂಭವಿಸಿದ ಸ್ಥಳಗಳಿಗೆ ತೆರಳಿ ಕೂಡಲೇ ವರದಿ ನೀಡಲು ಸೂಚಿಸಲಾಗಿದೆ. ಯಾವುದೇ ಪರಿಸ್ಥಿತಿ ಎದುರಿಸಲು ಪೊಲೀಸ್, ಆರೋಗ್ಯ, ಅಗ್ನಿಶಾಮಕ ಹಾಗೂ ಗೃಹರಕ್ಷಕ ಇಲಾಖೆಯೊಂದಿಗೂ ಸಮನ್ವಯ ಇಟ್ಟುಕೊಳ್ಳಲಾಗಿದೆ ಎಂದು ತಿಳಿಸಿದ್ದಾರೆ.

ಕೃಷಿ ಭೂಮಿ ಜಲಾವೃತ

ಬೈಂದೂರು: ತಾಲ್ಲೂಕಿನ ನಾವುಂದ ಗ್ರಾಮದ ಅರೆಹೊಳೆಯಲ್ಲಿ ಮಳೆಯಿಂದಾಗಿ ನೂರಾರು ಎಕರೆ ಕೃಷಿ ಭೂಮಿ ಸಂಪೂರ್ಣ ಜಲಾವೃತವಾಗಿದೆ. ಈ ಭಾಗದಲ್ಲಿ ಅವೈಜ್ಞಾನಿಕವಾಗಿ ನಿರ್ಮಿಸಲಾಗಿರುವ ರೈಲ್ವೆ ಅಂಡರ್ ಪಾಸ್‌ನಿಂದಾಗಿ ನೀರಿನ ಸುಗಮ ಸಂಚಾರಕ್ಕೆ ತೊಡಕಾಗಿದೆ. ರಾಜ ಕಾಲುವೆಯೂ ಸಣ್ಣದಾಗಿರುವುದರಿಂದಾಗಿ ಕೃತಕ ನೆರೆ ನಿರ್ಮಾಣಗಿದೆ.

ಪರಿಹಾರಕ್ಕಾಗಿ ಮನವಿ ಮಾಡಿದರೂ ಇನ್ನೂ ಸಮಸ್ಯೆ ಉಳಿದುಕೊಂಡಿದೆ. ಇದರಿಂದಾಗಿ ಹಲವು ಎಕರೆ ಕೃಷಿ ಭೂಮಿಗಳು ನಾಟಿ ಮಾಡದೆ ಹಡಿಲು ಬಿದ್ದಿದೆ. ಭತ್ತದ ನಾಟಿ ಮಾಡಿರುವ ಗದ್ದೆಗಳಲ್ಲಿ ನಿಂತಿರುವ ನೀರಿನಿಂದ ಭತ್ತದ ಗಿಡಗಳು ಕೊಳೆತು ಹೋಗುತ್ತಿದೆ ಎಂದು ಸ್ಥಳೀಯರು ಅಸಮಾಧಾನ ವ್ಯಕ್ತಪಡಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT