ಬುಧವಾರ, 24 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ರಂಜಾನ್‌: ಕಲ್ಲಂಗಡಿ, ಕರ್ಬೂಜ ಹಣ್ಣಿಗೆ ಬೇಡಿಕೆ

ತರಕಾರಿಗಳ ಬೆಲೆ ಸ್ವಲ್ಪ ಹೆಚ್ಚಳ; ಹಸಿರು ಬಟಾಣಿ ಕೆ.ಜಿಗೆ ₹ 90
Last Updated 23 ಮಾರ್ಚ್ 2023, 19:30 IST
ಅಕ್ಷರ ಗಾತ್ರ

ಉಡುಪಿ: ಮುಸ್ಲಿಮರ ಪವಿತ್ರ ರಂಜಾನ್ ಮಾಸ ಆರಂಭವಾಗಿರುವ ಹಿನ್ನೆಲೆಯಲ್ಲಿ ಮಾರುಕಟ್ಟೆಯಲ್ಲಿ ಕಲ್ಲಂಗಡಿ, ಕರ್ಬೂಜ ಸೇರಿದಂತೆ ಹಣ್ಣುಗಳಿಗೆ ಬೇಡಿಕೆ ಹೆಚ್ಚಾಗಿದೆ.

ಆದಿ ಉಡುಪಿಯ ಎಪಿಎಂಸಿ ಮಾರುಕಟ್ಟೆ, ಉಡುಪಿಯ ಹಳೆ ಕೆಎಸ್‌ಆರ್‌ಟಿಸಿ ಬಸ್ ನಿಲ್ದಾಣದ ಬಳಿಯ ತರಕಾರಿ ಮಾರುಕಟ್ಟೆ ಹಾಗೂ ಹಣ್ಣಿನ ಅಂಗಡಿಗಳಲ್ಲಿ ಗ್ರಾಹಕರು ಕಲ್ಲಂಗಡಿ ಹಾಗೂ ಕರ್ಬೂಜ ಹಣ್ಣುಗಳನ್ನು ಖರೀದಿಸುತ್ತಿದ್ದ ದೃಶ್ಯ ಕಂಡುಬಂತು.

ಬೇಸಗೆಯ ದಗೆಯೂ ಏರುತ್ತಿರುವುದರಿಂದ ಹೆಚ್ಚು ನೀರಿನಂಶ ಹಾಗೂ ದೇಹಕ್ಕೆ ತಂ‍ಪು ನೀಡುವ ಕಲ್ಲಂಗಡಿ ಹಾಗೂ ಕರ್ಬೂಜ ಹಣ್ಣಿಗೆ ಬೇಡಿಕೆ ಹೆಚ್ಚಾಗಿದೆ. ಕಲ್ಲಂಗಡಿ ಕೆ.ಜಿಗೆ 20 ರಿಂದ 25 ಇದ್ದರೆ, ಕರ್ಬೂಜ 35 ರಿಂದ 40 ಇದೆ. ಗ್ರಾಹಕರ ಅಗತ್ಯಕ್ಕೆ ತಕ್ಕಷ್ಟು ಹಣ್ಣು ಮಾರುಕಟ್ಟೆಗೆ ಬರುತ್ತಿಲ್ಲವಾದ್ದರಿಂದ ಬೆಲೆ ಏರಿಕೆಯಾಗುತ್ತಿದೆ ಎನ್ನುತ್ತಾರೆ ವ್ಯಾಪಾರಿಗಳು.

ರಂಜಾನ್ ಮಾಸದಲ್ಲಿ ಹೆಚ್ಚು ಬೇಡಿಕೆ ಸೃಷ್ಟಿಯಾಗುವ ಹೇರಳ ಪೌಷ್ಟಿಕಾಂಶಗಳನ್ನು ಹೊಂದಿರುವ ಖರ್ಜೂರದ ಹಣ್ಣಿನ ಮಾರಾಟ ಹೆಚ್ಚಾಗಿದೆ. ಹೊರ ರಾಜ್ಯ, ವಿದೇಶಗಳಿಂದ ಹೆಚ್ಚಿನ ಪ್ರಮಾಣದಲ್ಲಿ ಖರ್ಜೂರ ಮಾರುಕಟ್ಟೆಗೆ ಬರುತ್ತಿದೆ ಎಂದು ವ್ಯಾಪಾರಿ ರಫೀಕ್ ಮಾಹಿತಿ ನೀಡಿದರು.

ಪಪ್ಪಾಯ ದರ ಹೆಚ್ಚಳ: ಸಾಮಾನ್ಯವಾಗಿ ಕೆ.ಜಿಗೆ 30ಕ್ಕೆ ಲಭ್ಯವಾಗುತ್ತಿದ್ದ ಪಪ್ಪಾಯ 50 ಮುಟ್ಟಿದೆ. ಏಲಕ್ಕಿ ಬಾಳೆಹಣ್ಣಿನ ದರವೂ ಏರುಗತಿಯಲ್ಲಿದ್ದು ಕೆ.ಜಿಗೆ 85 ರಿಂದ 90 ಇದೆ. ಚಳಿಗಾಲದ ಬಳಿಕ ಮಾರುಕಟ್ಟೆಗೆ ಸೇಬಿನ ಆವಕ ಕಡಿಮೆಯಾಗಿದ್ದು ದರ ಹೆಚ್ಚಾಗಿದೆ. 2 ತಿಂಗಳ ಹಿಂದೆ ಕೆ.ಜಿಗೆ 120ಕ್ಕೆ ಸಿಗುತ್ತಿದ್ದ ಶಿಮ್ಲಾ ಸೇಬು ₹ 180ಕ್ಕೆ ಏರಿಕೆಯಾಗಿದೆ.

ಮೋಸಂಬಿಯೂ 100 ಮುಟ್ಟಿದ್ದು, ಕಿತ್ತಲೆ 80, ಸಪೋಟ 70, ದಾಳಿಂಬೆ 200, ಹಸಿರು ದ್ರಾಕ್ಷಿ 70, ಕಪ್ಪು ದ್ರಾಕ್ಷಿ 120ಕ್ಕೆ ಮಾರಾಟವಾಗುತ್ತಿದೆ.

ತರಕಾರಿ ದರ ಏರಿಳಿತ: ಬಿಸಿಲಿನ ಪ್ರಖರತೆ ಹೆಚ್ಚಾಗುತ್ತಿದ್ದಂತೆ ತರಕಾರಿಗಳ ಬೆಲೆಯೂ ನಿಧಾನವಾಗಿ ಏರಿಕೆ ಕಾಣುತ್ತಿದೆ. ಹಸಿರು ಬಟಾಣಿ (ಗ್ರೀನ್ ಪೀಸ್‌) ದರ ದಿಢೀರ್ ಹೆಚ್ಚಳ ಕಂಡಿದ್ದು ಕಳೆದವಾರ ಕೆ.ಜಿಗೆ ₹ 60 ಇದ್ದ ಹಸಿರು ಬಟಾಣಿ ಸದ್ಯ ₹ 90 ಮುಟ್ಟಿದ್ದು ಶತಕದ ಗಡಿ ದಾಟುವ ಹಂತದಲ್ಲಿದೆ. ಬೀನ್ಸ್‌ ಬೆಲೆಯೂ ಏರುಗತಿಯಲ್ಲಿದ್ದು ಕೆ.ಜಿಗೆ 75 ರಿಂದ 80ಕ್ಕೆ ಮಾರಾಟವಾಗುತ್ತಿದೆ.

ಈರುಳ್ಳಿ, ಟೊಮೆಟೊ ದರ ಸ್ಥಿರವಾಗಿದ್ದು ಎರಡೂ ತರಕರಿಗಳು ಕೆ.ಜಿಗೆ ತಲಾ 25 ರಿಂದ 30 ಇದೆ. ಕ್ಯಾರೆಟ್‌ ದರವೂ ಕಡಿಮೆ ಇದ್ದು ಕೆ.ಜಿಗೆ 30 ರಿಂದ 35, ಈರೇಕಾಯಿ 50, ಬೆಂಡೆಕಾಯಿ 60, ಸೋರೆಕಾಯಿ ₹ 30, ಎಲೆಕೋಸು ಕೆ.ಜಿಗೆ 20, ಆಲೂಗಡ್ಡೆ 30, ಬದನೆಕಾಯಿ 30, ಸಾಂಬಾರ್ ಸೌತೆ 20, ಹೂಕೋಸು ₹ 25 ದರ ಇದೆ.

ತೊಂಡೆಕಾಯಿ 50, ಬೀಟ್‌ರೂಟ್‌ 35, ಕುಂಬಳಕಾಯಿ 20, ಬೂದು ಕುಂಬಳ 30, ಬೆಳ್ಳುಳ್ಳಿ ₹ 140, ಸಿಹಿ ಗೆಣಸು 35, ಮೂಲಂಗಿ 35, ಸೌತೆಕಾಯಿ 25, ಪಡವಲಕಾಯಿ 30, ಹಸಿ ಮೆಣಸಿನಕಾಯಿ 80, ಶುಂಠಿ 70, ಬೆಳ್ಳುಳ್ಳಿ 125 ದರ ಇದೆ.

ಸೊಪ್ಪಿನ ದರ ಸ್ಥಿರವಾಗಿದ್ದು ಹಸಿರು ದಂಟು ಕಟ್ಟಿಗೆ ₹ 10, ಕೆಂಪು ದಂಟು ₹ 10, ಕರಿಬೇವು ₹ 5, ಕೊತ್ತಂಬರಿ ₹ 5, ಸಬ್ಬಸ್ಸಿಗೆ ₹ 5, ಮೆಂತೆ ₹ 5, ಪಾಲಕ್ ₹ 5, ಪುದೀನ ₹ 5 ದರ ಇತ್ತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT