ಗುರುವಾರ , ಸೆಪ್ಟೆಂಬರ್ 23, 2021
22 °C
ಜುಲೈನಲ್ಲಿ 59,237 ಅರ್ಜಿಗಳ ಸ್ವೀಕಾರ, 1,094 ತಿರಸ್ಕೃತ

ಸಕಾಲ ಸೇವೆ: ಉಡುಪಿಗೆ ಪ್ರಥಮ ಸ್ಥಾನ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಉಡುಪಿ: ಸಕಾಲ ಯೋಜನೆಯಡಿ ಅರ್ಜಿ ವಿಲೇವಾರಿಯಲ್ಲಿ ಉಡುಪಿ ಜಿಲ್ಲೆ ಜುಲೈ ತಿಂಗಳಲ್ಲಿ ರಾಜ್ಯಕ್ಕೆ ಪ್ರಥಮ ಸ್ಥಾನ ಪಡೆದುಕೊಂಡಿದ್ದು, ಮುಂದೆಯೂ ಸಾರ್ವಜನಿಕರಿಗೆ ಉತ್ತಮ ಸೇವೆ ನೀಡುವುದರ ಜತೆಗೆ, ಜಿಲ್ಲೆ ಪ್ರಥಮ ಸ್ಥಾನ ಕಾಯ್ದುಕೊಳ್ಳಬೇಕು ಎಂದು ಹೆಚ್ಚುವರಿ ಜಿಲ್ಲಾಧಿಕಾರಿ ಸದಾಶಿವ ಪ್ರಭು ಅಧಿಕಾರಿಗಳಿಗೆ ತಿಳಿಸಿದರು.

ಜಿಲ್ಲಾಧಿಕಾರಿಗಳ ಕಚೇರಿ ಸಭಾಂಗಣದಲ್ಲಿ ಸೋಮವಾರ ಸಕಾಲ ಯೋಜನೆಯ ಅನುಷ್ಠಾನ ಕುರಿತ ಸಭೆಯಲ್ಲಿ ಮಾತನಾಡಿ, ಸಾರ್ವಜನಿಕರಿಗೆ ನಿಗದಿತ ಅವಧಿಯಲ್ಲಿ ಸರ್ಕಾರದ ಸೇವೆಯನ್ನು ಒದಗಿಸುವುದು ಸಕಾಲದ ಉದ್ದೇಶ. ಸರ್ಕಾರದ 101 ಇಲಾಖೆಗಳಲ್ಲಿ 1,112 ಸೇವೆಗಳನ್ನು ಅರ್ಜಿ ಸಲ್ಲಿಸುವುದರ ಮೂಲಕ ನಾಗರಿಕರು ಪಡೆದುಕೊಳ್ಳಬಹುದು ಎಂದರು.

ಸಾರ್ವಜನಿಕರು ಸಕಾಲದಡಿ ಅರ್ಜಿಯನ್ನು ಸಲ್ಲಿಸಿದಾಗ ಅಗತ್ಯ ದಾಖಲೆಗಳನ್ನು ಸಲ್ಲಿಸಬೇಕು. ಇದರಿಂದ ಶೀಘ್ರ ಅರ್ಜಿಗಳನ್ನು ವಿಲೇವಾರಿ ಮಾಡಲು ಸಾಧ್ಯವಾಗುತ್ತದೆ. ಅಧಿಕಾರಿಗಳು ನಿಗದಿತ ಕಾಲಾವಧಿಯಲ್ಲಿ ಕಡತಗಳನ್ನು ವಿಲೇವಾರಿ ಮಾಡಬೇಕು ಎಂದು ನಿರ್ದೇಶನ ನೀಡಿದರು.

ನಾಗರಿಕರು ಸಲ್ಲಿಸುವ ಅರ್ಜಿಗಳ ತಿರಸ್ಕಾರದ ಪ್ರಮಾಣವನ್ನು ಕಡಿಮೆ ಮಾಡಬೇಕು. ಸಕಾರಣವಿಲ್ಲದೆ ಅರ್ಜಿಗಳನ್ನು ತಿರಸ್ಕಾರ ಮಾಡಬಾರದು. ತಿರಸ್ಕಾರ ಮಾಡಿದರೆ ಸರಿಯಾದ ಕಾರಣವನ್ನು ಅರ್ಜಿದಾರರಿಗೆ ಕೊಡಬೇಕು ಎಂದರು.

ಜುಲೈ ತಿಂಗಳಲ್ಲಿ ವಿವಿಧ ಇಲಾಖೆಗಳು 59,237 ಅರ್ಜಿಗಳನ್ನು ಸ್ವೀಕರಿಸಿದ್ದು, ಅವುಗಳಲ್ಲಿ 52,511 ಅರ್ಜಿಗಳು ಪುರಸ್ಕೃತಗೊಂಡು, 1,094 ಅರ್ಜಿಗಳು ತಿರಸ್ಕೃತಗೊಂಡಿವೆ ಎಂದು ಮಾಹಿತಿ ನೀಡಿದರು.

ಸಕಾಲ ಯೋಜನೆಯು 2011ರಿಂದ ರಾಜ್ಯದಲ್ಲಿ ಜಾರಿಗೆ ಬಂದಿದ್ದು ಇದುವರೆಗೂ 6.53 ಕೋಟಿ ಅರ್ಜಿಗಳು ಸ್ವೀಕೃತಗೊಂಡು 5.98 ಕೋಟಿ  ಅರ್ಜಿಗಳು ಪುರಸ್ಕೃತಗೊಂಡು, 45.02 ಲಕ್ಷ ಅರ್ಜಿಗಳು ತಿರಸ್ಕೃತಗೊಂಡಿವೆ. ಜಿಲ್ಲೆಯಲ್ಲಿ 14.15 ಲಕ್ಷ ಅರ್ಜಿಗಳು ಬಂದಿದ್ದು, 13.58 ಲಕ್ಷ ಅರ್ಜಿಗಳು ಪುರಸ್ಕೃತಗೊಂಡು 42,194 ಅರ್ಜಿಗಳು ತಿರಸ್ಕೃತಗೊಂಡಿವೆ ಎಂದರು.

ಅಧಿಕಾರಿಗಳು ಮುತುವರ್ಜಿ ವಹಿಸಿ ಅರ್ಜಿಗಳನ್ನು ವಿಲೇವಾರಿ ಮಾಡಬೇಕು. ವಿಳಂಬ ಮಾಡಿದರೆ ದಂಡ ವಿಧಿಸುವ ಅವಕಾಶವಿದೆ. ಮೇಲ್ಮನವಿ ಸಲ್ಲಿಸಲೂ ಅರ್ಜಿದಾರರಿಗೆ ಅವಕಾಶವಿದೆ ಎಂದರು.

ಸಭೆಯಲ್ಲಿ ಜಿಲ್ಲೆಯ ವಿವಿಧ ಇಲಾಖೆಯ ಅಧಿಕಾರಿಗಳು ಹಾಗೂ ಸಕಾಲ ಯೋಜನೆಯ ನೋಡೆಲ್ ಅಧಿಕಾರಿಗಳು ಇದ್ದರು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.