ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಹಿರಿಯ ವಿದ್ವಾಂಸ ಬನ್ನಂಜೆ ಗೋವಿಂದಾಚಾರ್ಯ ಇನ್ನಿಲ್ಲ

Last Updated 13 ಡಿಸೆಂಬರ್ 2020, 11:38 IST
ಅಕ್ಷರ ಗಾತ್ರ
ADVERTISEMENT
""

ಉಡುಪಿ: ನಾಡಿನ ಹಿರಿಯ ವಿದ್ವಾಂಸರು ಹಾಗೂ ಪದ್ಮಶ್ರೀ ಪುರಸ್ಕೃತರಾದ ಡಾ.ಬನ್ನಂಜೆ ಗೋವಿಂದಾಚಾರ್ಯ (84) ಭಾನುವಾರ ಬೆಳಿಗ್ಗೆ 11.15ಕ್ಕೆ ಅಂಬಲಪಾಡಿಯಲ್ಲಿರುವ ಸ್ವಗೃಹದಲ್ಲಿ ನಿಧನರಾದರು.

ಮೃತರಿಗೆ ನಾಲ್ವರು ಪುತ್ರಿಯರು, ಇಬ್ಬರು ಪುತ್ರರು ಇದ್ದಾರೆ.12 ದಿನಗಳ ಹಿಂದಷ್ಟೆ ಗೋವಿಂದಾಚಾರ್ಯರ ಪುತ್ರ ವಿಜಯಭೂಷಣ ಆಚಾರ್ಯ ಅವರು ನಿಧನರಾಗಿದ್ದರು. ಅಂತ್ಯಕ್ರಿಯೆ ಸಂಜೆ ಸರ್ಕಾರಿ ಗೌರವಗಳೊಂದಿಗೆ ಮನೆಯ ಆವರಣದಲ್ಲಿ ನೆರವೇರಲಿದೆ ಎಂದು ಕುಟುಂಬದರು ತಿಳಿಸಿದ್ದಾರೆ.

ಪಡುಮನ್ನೂರು ನಾರಾಯಣ ಆಚಾರ್ಯರ ಪುತ್ರರಾದ ಬನ್ನಂಜೆ ಗೋವಿಂದಾಚಾರ್ಯರು ಪ್ರಾಚೀನ ಜ್ಞಾನಶಾಖೆಗಳಾದ ವೇದ, ಉಪನಿಷತ್ತು, ಪುರಾಣ, ರಾಮಾಯಣ, ಮಹಾಭಾರತದ ಕುರಿತು ದೇಶ ವಿದೇಶಗಳಲ್ಲಿ ಇಲ್ಲಿಯವರೆಗೂ 26,000 ಗಂಟೆಗೂ ಹೆಚ್ಚು ಕಾಲ ಉಪನ್ಯಾಸ ಹಾಗೂ ಪ್ರವಚನ ನೀಡಿದ್ದಾರೆ.

ಕೃಷ್ಣ ಮಠ, ಅಷ್ಟಮಠಗಳು ಸೇರಿದಂತೆ ನಾಡಿನ ಪ್ರಸಿದ್ಧ ಮಠ ಹಾಗೂ ಸಂಸ್ಥಾನಗಳಿಂದ ವಿದ್ಯಾ ವಾಚಸ್ಪತಿ, ವಿದ್ಯಾ ರತ್ನಾಕರ, ಪಂಡಿತ ರತ್ನ, ಸಂಶೋಧನಾ ವಿಚಕ್ಷಣ ಪಂಡಿತಾಚಾರ್ಯ ಬಿರುದುಗಳನ್ನು ಅವರಿಗೆ ಪ್ರದಾನ ಮಾಡಲಾಗಿದೆ. ಉಡುಪಿಯ ಕೃಷ್ಣ ಮಠದ ಆಸ್ಥಾನ‌ ವಿದ್ವಾನ್ ಆಗಿಯೂ ಕಾರ್ಯ ನಿರ್ವಹಿಸಿದ್ದರು.

ಡಾ.ಬನ್ನಂಜೆ ಗೋವಿಂದಾಚಾರ್ಯ

2009ರಲ್ಲಿ ಪ್ರತಿಷ್ಠಿತ ಪದ್ಮಶ್ರೀ ಪ್ರಶಸ್ತಿ, ಕೇಂದ್ರ ಸಾಹಿತ್ಯ ಅಕಾಡೆಮಿ ಪ್ರಶಸ್ತಿ, ಕರ್ನಾಟಕ ರಾಜ್ಯೋತ್ಸವ ಪ್ರಶಸ್ತಿ, ಕರ್ನಾಟಕ ಸಾಹಿತ್ಯ ಅಕಾಡೆಮಿ ಪ್ರಶಸ್ತಿ, ಆಳ್ವಾಸ್ ನುಡಿಸಿರಿ ಪ್ರಶಸ್ತಿ, ಉಡುಪಿ ಜಿಲ್ಲಾ ಕನ್ನಡ ಸಾಹಿತ್ಯ ಸಮ್ಮೇಳನಾಧ್ಯಕ್ಷತೆ, ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನದ ಕವಿಗೋಷ್ಠಿಯ ಅಧ್ಯಕ್ಷತೆ, ಮಂಗಳೂರು ವಿಶ್ವವಿದ್ಯಾಲಯದಿಂದ ಗೌರವ ಡಾಕ್ಟರೇಟ್ ದೊರೆತಿದೆ. ‌1979ರಲ್ಲಿ ಅಮೆರಿಕಾದಲ್ಲಿ ನಡೆದ ವಿಶ್ವಶಾಂತಿ ಸಮ್ಮೇಳನಕ್ಕೆ ವಿಶೇಷ ಆಹ್ವಾನಿತರಾಗಿ ಬನ್ನಂಜೆ ಗೋವಿಂದಾಚಾರ್ಯರು ಭಾಗವಹಿಸಿದ್ದರು.

ಧೀಮಂತ ಬಹುಶ್ರುತ ವಿದ್ವಾಂಸರಾಗಿದ್ದ ಬನ್ನಂಜೆ ಗೋವಿಂದಾಚಾರ್ಯರು ಸಂಸ್ಕೃತ ಹಾಗೂ ಕನ್ನಡ ಸಮನ್ವಯದ ಕೊಂಡಿಯಾಗಿ ಸಾಹಿತ್ಯ ಸೇವೆ ಸಲ್ಲಿಸಿದ್ದರು. ಸಂಸ್ಕೃತದಲ್ಲಿ 30ಕ್ಕೂ ಅಧಿಕ ಗ್ರಂಥಗಳು ಹಾಗೂ ಕನ್ನಡದಲ್ಲಿ 130ಕ್ಕೂ ಅಧಿಕ ಕೃತಿಗಳನ್ನು ರಚಿಸಿದ್ದಾರೆ. 45 ಗ್ರಂಥಗಳು ಪ್ರಕಾಶನಕ್ಕೆ ಬಾಕಿ ಇವೆ. ವೇದ, ಉಪನಿಷತ್ತು, ಬ್ರಹ್ಮಸೂತ್ರ, ಮಹಾಭಾರತ, ರಾಮಾಯಣ, ಪುರಾಣಗಳ ಬಗ್ಗೆ ಅಗಾಧ ಸಂಶೋಧನೆ ನಡೆಸಿದ್ದಾರೆ. ಅವರ ಹಲವು ಕೃತಿಗಳು ಸಂಸ್ಕೃತ ಭಾಷೆಯ ಅಧ್ಯಯನಾಸಕ್ತರಿಗೆ ಆಕರ ಗ್ರಂಥಗಳಾಗಿವೆ. ಅಮೆರಿಕಾ, ಆಸ್ಟ್ರೇಲಿಯಾ, ಯುರೋಪ್, ಇಂಡೋನೇಷ್ಯಾ, ರಷ್ಯಾ, ನೆದರ್‌ಲೆಂಡ್‌, ಸ್ವಿಟ್ಜರ್‌ಲೆಂಡ್‌, ಗ್ರೀಸ್ ಸೇರಿದಂತೆ ಹಲವು ದೇಶಗಳಿಂದ ವಿದ್ಯಾರ್ಥಿಗಳು ಗೋವಿಂದಾಚಾರ್ಯ ಅವರ ಬಳಿ ಸಂಶೋಧನಾ ಅಧ್ಯಯನ ನಡೆಸಿದ್ದಾರೆ.

ವಿದ್ಯಾವಾಚಸ್ಪತಿ, ಪದ್ಮಶ್ರೀ ಪುರಸ್ಕೃತ, ಡಾ.ಬನ್ನಂಜೆ ಗೋವಿಂದಾಚಾರ್ಯ ಪರಿಚಯ:

ಹೆಸರು: ಡಾ ಬನ್ನಂಜೆ ಗೋವಿಂದಾಚಾರ್ಯ
ತಂದೆ: ದಿವಂಗತ ಪಡುಮನ್ನೂರು ನಾರಾಯಣ ಆಚಾರ್ಯ
ಊರು: ಉಡುಪಿ ತಾಲೂಕು
ಸಾಧನೆಯ ಕ್ಷೇತ್ರ : ಪತ್ರಕರ್ತ - ಸಾಹಿತ್ಯ -ಸಂಶೋಧಕ - ಕವಿ - ಅನುವಾದಕ - ಉಪನ್ಯಾಸಕ - ಪ್ರವಚನ ವಿದ್ವಾಂಸ
ಉದ್ಯೋಗ : ಪ್ರತಿಷ್ಠಿತ ಉದಯವಾಣಿ ದಿನಪತ್ರಿಕೆಯಲ್ಲಿ ಪತ್ರಕರ್ತ, ಸಾಪ್ತಾಹಿಕ ವಿಭಾಗ ಸಂಪಾದಕರಾಗಿ ಸುದೀರ್ಘ ಸೇವೆ ಸಲ್ಲಿಸಿ ನಿವೃತ್ತಿ .
ಸಾಹಿತ್ಯಿಕ ಸಾಧನೆಗಳು : ಈ ತನಕ ಸಂಸ್ಕೃತದಲ್ಲಿ ಸುಮಾರು ಕೃತಿಗಳು ಕನ್ನಡದಲ್ಲಿ ಸುಮಾರು 120 ಕೃತಿಗಳ (ಸಂಸ್ಕೃತದಿಂದ ಕನ್ನಡಕ್ಕೆ ಅನುವಾದ ಸುಮಾರು 50 ಕೃತಿ ಸೇರಿ) ರಚನೆ ಮತ್ತು ಪ್ರಕಾಶನ. ಭಾರತದ ಪ್ರಾಚೀನ ಜ್ಞಾನ ಶಾಖೆಗಳಾದ ವೇದ - ಉಪನಿಷತ್ತು - ಪುರಾಣ- ರಾಮಾಯಣ - ಮಹಾಭಾರತ ಇತ್ಯಾದಿಗಳ ಕುರಿತು ದೇಶ ವಿದೇಶಗಳಲ್ಲಿ ಈ ತನಕ ಸುಮಾರು 26,000 ಗಂಟೆಗೂ ಹೆಚ್ಚು ಕಾಲ ಉಪನ್ಯಾಸ ಪ್ರವಚನಗೈದ ದಾಖಲೆ .

ಸಾಧನೆಗೆ ಸಂದ ಪ್ರಶಸ್ತಿ ಪುರಸ್ಕಾರಗಳು :

ರಾಜ್ಯ ಮಟ್ಟದ ಪ್ರಶಸ್ತಿಗಳು :
ಉಡುಪಿ ಶ್ರೀ ಕೃಷ್ಣ ಮಠ ಅಷ್ಟಮಠಗಳು ಸೇರಿದಂತೆ ಅನೇಕ ಪ್ರಸಿದ್ಧ ಮಠ ಸಂಸ್ಥಾನಗಳಿಂದ ವಿದ್ಯಾ ವಾಚಸ್ಪತಿ, ವಿದ್ಯಾರತ್ನಾಕರ , ಪಂಡಿತರತ್ನ, ಸಂಶೋಧನಾ ವಿಚಕ್ಷಣ ಪಂಡಿತಾಚಾರ್ಯ ಇತ್ಯಾದಿ ಬಿರುದು ಪ್ರದಾನ,
ಉಡುಪಿ ಶ್ರೀ ಕೃಷ್ಣ ಮಠದ ಆಸ್ಥಾನ‌ ವಿದ್ವಾನ್,
ಕರ್ನಾಟಕ ರಾಜ್ಯೋತ್ಸವ ಪ್ರಶಸ್ತಿ 1974,
ಕರ್ನಾಟಕ ಸಾಹಿತ್ಯ ಅಕಾಡೆಮಿ ಪ್ರಶಸ್ತಿ,
ಆಳ್ವಾಸ್ ನುಡಿಸಿರಿ ಪ್ರಶಸ್ತಿ,
ಉಡುಪಿ ಜಿಲ್ಲಾ ಕನ್ನಡ ಸಾಹಿತ್ಯ ಸಮ್ಮೇಳನಾಧ್ಯಕ್ಷತೆ,
ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನದ ಕವಿಗೋಷ್ಠಿಯ ಅಧ್ಯಕ್ಷತೆ,
ಮಂಗಳೂರು ವಿಶ್ವವಿದ್ಯಾನಿಲಯದ ಗೌರವ ಡಾಕ್ಟರೇಟ್.

ರಾಷ್ಟ್ರೀಯ ಪ್ರಶಸ್ತಿಗಳು :
ಕೇಂದ್ರ ಸಾಹಿತ್ಯ ಅಕಾಡೆಮಿ ಪ್ರಶಸ್ತಿ,
ಭಾರತ ಸರ್ಕಾರದ ಪ್ರತಿಷ್ಠಿತ ಪದ್ಮಶ್ರೀ ಪ್ರಶಸ್ತಿ–2009.

ಅಂತರರಾಷ್ಟ್ರೀಯ ಮಾನ್ಯತೆ :
1979ರಲ್ಲಿ ಅಮೇರಿಕಾದಲ್ಲಿ ( ಪ್ರಿನ್ಸ್ಟನ್) ನಡೆದ ವಿಶ್ವಶಾಂತಿ ಸಮ್ಮೇಳನಕ್ಕೆ ವಿಶೇಷ ಆಹ್ವಾನಿತರಾಗಿ ಭಾಗಿ

ಸಾಮಾಜಿಕ ಸೇವೆ : ನೆರೆ ಪ್ರವಾಹಗಳ ಸಂದರ್ಭಗಳಲ್ಲಿ ಸಂತ್ರಸ್ತರ ನೆರವಿಗಾಗಿ ಮಾನವೀಯತೆಯ ನೆಲೆಯಲ್ಲಿ ರಾಜ್ಯ ಮುಖ್ಯಮಂತ್ರಿಗಳ ಪರಿಹಾರ ನಿಧಿಗೆ ಲಕ್ಷಕ್ಕೂ ಹೆಚ್ಚು ಆರ್ಥಿಕ ದೇಣಿಗೆ, ಕೊರೊನಾ ಲಾಕ್ ಡೌನ್ ಸಂದರ್ಭದಲ್ಲಿ ಸಂತ್ರಸ್ತರಾದ ಬಡವರಿಗೆ ಆಹಾರ ಸಾಮಗ್ರಿ‌ ವಿತರಣೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT