ಬುಧವಾರ, 1 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ವೈಭವದ ಚೂರ್ಣೋತ್ಸವ, ಸಪ್ತೋತ್ಸವಕ್ಕೆ ತೆರೆ

ಹಗಲು ಬ್ರಹ್ಮರಥೋತ್ಸವ, ಅವಭೃತ ಸ್ನಾನ
Last Updated 15 ಜನವರಿ 2020, 14:37 IST
ಅಕ್ಷರ ಗಾತ್ರ

ಉಡುಪಿ: ಮಕರ ಮಾಸದ ಮೊದಲ ದಿನವಾದ ಬುಧವಾರ ಕೃಷ್ಣಮಠದಲ್ಲಿ ವೈಭವದ ಹಗಲು ಬ್ರಹ್ಮರಥೋತ್ಸವ ನೆರವೇರಿತು. ಸಾವಿರಾರು ಭಕ್ತರು ರಥ ಎಳೆದು ದೇವರಿಗೆ ಭಕ್ತಿ ಸಮರ್ಪಿಸಿದರು. ಚೂರ್ಣೋತ್ಸವದೊಂದಿಗೆ ಸಪ್ತೋತ್ಸವಕ್ಕೆ ತೆರೆಬಿತ್ತು.

ದ್ವೈತ ಮತ ಸಂಸ್ಥಾಪಕರಾದ ಮಧ್ವಾಚಾರ್ಯರು ಮಕರ ಸಂಕ್ರಮಣದ ದಿನ ಉಡುಪಿಯಲ್ಲಿ ಶ್ರೀಕೃಷ್ಣನನ್ನು ಪ್ರತಿಷ್ಠಾಪಿಸಿದರು ಎಂಬ ಪ್ರತೀತಿ ಇದೆ. ಕೃಷ್ಣ ಉಡುಪಿಯಲ್ಲಿ ನೆಲೆನಿಂತ ಘಳಿಗೆಯಲ್ಲಿ ಪ್ರತಿವರ್ಷ ಸಪ್ತೋತ್ಸವ ಆಚರಿಸುವ ಸಂಪ್ರದಾಯ ಆಚರಿಸಿಕೊಂಡು ಬರಲಾಗಿದೆ.‌

ಸಪ್ತೋತ್ಸವದ ಮೊದಲ ಐದು ದಿನ ಎರಡು ರಥೋತ್ವವಗಳು ನಡೆದು, 6ನೇ ದಿನ ರಾತ್ರಿ ಮಕರ ಸಂಕ್ರಮಣ ತ್ರಿರಥೋತ್ಸವ ನೆರವೇರಿತ್ತು. ಕೊನೆಯ ದಿನವಾದ ಬುಧವಾರ ಹಗಲು ಬ್ರಹ್ಮರಥೋತ್ಸವ ಹಾಗೂ ಚೂರ್ಣೋತ್ಸವ ನಡೆಯಿತು.

ವೇದಘೋಷ ಹಾಗೂ ವಾದ್ಯಘೋಷಗಳೊಂದಿಗೆ ಅಷ್ಠಮಠಾಧೀಶರು ಬ್ರಹ್ಮ ರಥವನ್ನು ಎಳೆದರು. ಮೊದಲುಕೃಷ್ಣ ಮುಖ್ಯಪ್ರಾಣ ಉತ್ಸವ ಮೂರ್ತಿಯನ್ನು ಚಿನ್ನದ ಪಲಕ್ಕಿಯಲ್ಲಿ ತಂದು ಬ್ರಹ್ಮರಥದಲ್ಲಿಡಲಾಯಿತು. ಬಳಿಕ ಪೂಜೆ ಸಲ್ಲಿಸಿ, ನೈವೇದ್ಯ ಸಮರ್ಪಿಸಿ, ಮಹಾ ಮಂಗಳಾರತಿ ಮಾಡಲಾಯಿತು.

ದೇವರಿಗೆ ಸಮರ್ಪಿಸಿದ ನೈವೇದ್ಯವನ್ನು ಅಷ್ಠಮಠಗಳ ಯತಿಗಳು ಭಕ್ತರಿಗೆ ವಿತರಿಸಿದರು. ಬಳಿಕ ರಥೋತ್ಸವಕ್ಕೆ ಚಾಲನೆ ನೀಡಲಾಯಿತು. ರಥ ಮುಂದಕ್ಕೆ ಸಾಗುತ್ತಿದ್ದಂತೆ ಭಕ್ತರ ಉದ್ಘೋಷ ಮುಗಿಲು ಮುಟ್ಟಿತು. ಗೋವಿಂದಾ ನಾಮಸ್ಮರಣೆ ಮಾಡುತ್ತಾ ಭಕ್ತರು ರಥವನ್ನು ರಥಬೀದಿಯ ಸುತ್ತ ಒಂದು ಸುತ್ತು ಎಳೆದರು.

ಬಿರುದಾವಳಿ, ಡೋಲು, ಚಂಡೆಯ ಸದ್ದು ರಥೋತ್ಸವದ ಕಳೆ ಹೆಚ್ಚಿಸಿತ್ತು. ಚೂರ್ಣೋತ್ಸವದ ಬಳಿಕ ದೇವರಿಗೆವಸಂತ ಪೂಜೆ ನಡೆಯಿತು. ಬಳಿಕ ಓಕಳಿ ಎರಚಿ ಸಂಭ್ರಮಿಸಲಾಯಿತು. ನಂತರ ಮಧ್ವ ಸರೋವರದಲ್ಲಿ ಅವಭೃತ ಸ್ನಾನ ನಡೆಯಿತು.

ಅನ್ನ ಸಂತರ್ಪಣೆ:ಸಪ್ತೋತ್ಸವದ ಕೊನೆಯ ದಿನ ಕೃಷ್ಣನಿಗೆ ಮಹಾಪೂಜೆ ನೇರವೇರಿದ ಬಳಿಕ ಭಕ್ತರಿಗೆ ಅನ್ನ ಸಂತರ್ಪಣೆ ನಡೆಯಿತು. ಸಾವಿರಾರು ಭಕ್ತರು ಪ್ರಸಾದ ಸ್ವೀಕರಿಸಿದರು.‌

ಅಷ್ಠಮಠಗಳ ಯತಿಗಳು ಉಪಸ್ಥಿತಿ:ಪರ್ಯಾಯ ಪಲಿಮಾರು ಮಠದ ವಿದ್ಯಾಧೀಶತೀರ್ಥರು, ಕಿರಿಯ ಯತಿ ವಿದ್ಯಾರಾಜೇಶ್ವರ ತೀರ್ಥರು, ಕೃಷ್ಣಾಪುರ ಮಠದ ವಿದ್ಯಾಸಾಗರತೀರ್ಥರು, ಅದಮಾರು ಮಠದ ಹಿರಿಯ ಯತಿ ವಿಶ್ವಪ್ರಿಯತೀರ್ಥರು, ಕಿರಿಯ ಯತಿ ಈಶಪ್ರಿಯತೀರ್ಥರು, ಪೇಜಾವರ ಮಠದ ವಿಶ್ವಪ್ರಸನ್ನತೀರ್ಥರು, ಸೋದೆ ಮಠದ ವಿಶ್ವವಲ್ಲಭ ತೀರ್ಥರು, ಕಾಣಿಯೂರು ಮಠದ ವಿದ್ಯಾವಲ್ಲಭ ತೀರ್ಥರು ಉಪಸ್ಥಿತರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT