ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

‘ಪ್ರತಿ ಕರ್ಮಗಳಲ್ಲಿ ಭಗವತ್ ಚಿಂತನೆ ಇರಲಿ’

ಸಪ್ತೋತ್ಸವದ ಅಂಗವಾಗಿ ಪರ್ಯಾಯ ಪಂಚ ಶತಮಾನೋತ್ಸವ ಕಾರ್ಯಕ್ರಮದಲ್ಲಿ ಅದಮಾರು ಶ್ರೀ
Last Updated 10 ಜನವರಿ 2021, 14:01 IST
ಅಕ್ಷರ ಗಾತ್ರ

ಉಡುಪಿ: ಯಾವುದೇ ಕೆಲಸ ಮಾಡಿದರೂ ಒಳಿತು ಕೆಡಕುಗಳು ಇರುತ್ತವೆ. ಸಜ್ಜನರ ಹಿತ ಕಾಯುವ ಎಲ್ಲ ಕರ್ಮಗಳು ಸಮಾಜಕ್ಕೆ ಶ್ರೇಯಸ್ಸು, ಭಗವಂತನಿಗೆ ಪ್ರಿಯವಾದವು ಎಂದು ಅದಮಾರು ಮಠದ ಈಶಪ್ರಿಯ ತೀರ್ಥ ಸ್ವಾಮೀಜಿ ಹೇಳಿದರು.

ಕೃಷ್ಣಮಠದ ರಾಜಾಂಗಣದಲ್ಲಿ ಭಾನುವಾರ ಸಪ್ತೋತ್ಸವದ ಅಂಗವಾಗಿ ನಡೆದ ಪರ್ಯಾಯ ಪಂಚ ಶತಮಾನೋತ್ಸವ ಕಾರ್ಯಕ್ರಮದಲ್ಲಿ ಮಾತನಾಡಿದ ಶ್ರೀಗಳು, ‘ಮನುಷ್ಯನ ಕರ್ಮಗಳಲ್ಲಿ ಭಗವಂತನ ಚಿಂತನೆ ಇರಬೇಕು. ನಾನು ಎಂಬ ದೋಷವನ್ನು ಬದಿಗಿಟ್ಟು ಭಗವತ್‌ ಪ್ರೀತಿಗಾಗಿ ಕರ್ಮದಲ್ಲಿ ತೊಡಗಿಸಿಕೊಂಡರೆ ಫಲ ಸಿಗುತ್ತದೆ. ಪ್ರತಿ ಕಾರ್ಯವೂ ಕೃಷ್ಣನಿಗೆ ಅರ್ಪಣವಾಗಲಿ’ ಎಂದರು.

ಸಿದ್ಧಿ ಹೊಂದಬೇಕಾದರೆ ಮನಸ್ಥಿತಿ ಬಹಳ ಮುಖ್ಯ. ಪರ್ಯಾಯ ಪಂಚ ಶತಮಾನೋತ್ಸವ ಹಾಗೂ ಸಪ್ತೋತ್ಸವ ನಡೆಯುತ್ತಿರುವ ಈ ಶುಭ ಸಂದರ್ಭದಲ್ಲಿ ಸಮಾಜಮುಖಿ ಚಿಂತನೆಗಳನ್ನು ರೂಢಿಸಿಕೊಂಡವರನ್ನು ಸನ್ಮಾನಿಸುತ್ತಿರುವುದು ಸಂತಸ ತಂದಿದೆ ಎಂದರು.

ಕಾಪು ಶಾಸಕ ಲಾಲಾಜಿ ಆರ್‌.ಮೆಂಡನ್ ಮಾತನಾಡಿ, ‘ಅಷ್ಠಮಠಗಳ ಪೈಕಿ, ಅದಮಾರು, ಶೀರೂರು, ಪುತ್ತಿಗೆ, ಪಲಿಮಾರು ಮಠಗಳ ಮೂಲಮಠಗಳು ಕಾಪು ವಿಧಾನಸಭಾ ಕ್ಷೇತ್ರ ವ್ಯಾಪ್ತಿಯಲ್ಲಿವೆ. ಮಧ್ವಾಚಾರ್ಯರ ಜನ್ಮಸ್ಥಳವಾದ ಪಾಜಕವೂ ಕಾಪುವಿನಲ್ಲಿದೆ. ಪ್ರತಿ ಪರ್ಯಾಯ ಮಹೋತ್ಸವದ ಸಂದರ್ಭ ಪರ್ಯಾಯ ಪೀಠವೇರುವ ಯತಿಗಳು ಕಾಪುವಿನ ದಂಡತೀರ್ಥದಲ್ಲಿ ಮಿಂದು ಉಡುಪಿಗೆ ಬರುವುದು ಸಂಪ್ರದಾಯ. ಹೀಗೆ ಧಾರ್ಮಿಕವಾಗಿ ಕಾಪು ಕ್ಷೇತ್ರ ಉಡುಪಿಯ ಅಷ್ಠಮಠಗಳೊಂದಿಗೆ ಬೆಸೆದುಕೊಂಡಿದೆ’ ಎಂದರು.

ಸಮಾರಂಭದಲ್ಲಿ ಲಕ್ಷ್ಮಿ ನಾರಾಯಣ ಭಟ್ಟರು, ಸದ್ಯೋಜ್ಯಾತ ಭಟ್ಟರು, ಭಾರತೀಶ್ ಬಲ್ಲಾಳ್ ಅವರನ್ನು ಗೌರವಿಸಲಾಯಿತು.

ಸಪ್ತೋತ್ಸವಕ್ಕೆ ಚಾಲನೆ:ಶನಿವಾರ ರಾತ್ರಿ ಸಪ್ತೋತ್ಸವ ಕಾರ್ಯಕ್ರಮಕ್ಕೆ ಕೃಷ್ಣಮಠದಲ್ಲಿ ಚಾಲನೆ ನೀಡಲಾಯಿತು. ರಾಜಾಂಗಣದಲ್ಲಿ ನಡೆದ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದ ಪಲಿಮಾರು ಮಠದ ವಿದ್ಯಾಧೀಶ ತೀರ್ಥ ಸ್ವಾಮೀಜಿ, ಸಮುದ್ರವನ್ನು ಶಾಂತಗೊಳಿಸಿದ ಕೃಷ್ಣನ ದರ್ಶನವನ್ನು ಉತ್ಸವ ಕಾಲದಲ್ಲಿ ಪಡೆದರೆ, ಮನಸ್ಸಿನ ತುಮುಲಗಳ ಸಮುದ್ರ ಕೂಡ ಶಾಂತವಾಗುತ್ತದೆ ಎಂದರು.

ಕೋವಿಡ್‌ ಹಾವಳಿ ತಣಿಯಿತು ಎನ್ನುವಾಗಲೇ ಸೋಂಕು ರೂಪಾಂತರಗೊಂಡು ಮತ್ತೆ ಬಂದಿದೆ. ಜಗತ್ತಿಗೆ ವ್ಯಾಪಿಸಿ ಎಲ್ಲರನ್ನೂ ಹೈರಾಣಾಗಿಸಿರುವ ಕೋವಿಡ್‌ ಸಂಕಷ್ಟವನ್ನು ಭಗವಂತ ನಿವಾರಿಸಲಿ. ತಿಂಗಳುಗಳ ಕಾಲ ಮುಚ್ಚಿದ್ದ ಶಾಲೆಗಳ ಬಾಗಿಲುಗಳು ಈಗ ತೆರೆದಿವೆ. ಮಕ್ಕಳವಿದ್ಯಾಭ್ಯಾಸಕ್ಕೆ ಅಡ್ಡಿಯಾಗದಿರಲಿ ಎಂದು ಆಶಿಸಿದರು.

ಸಂಸದೆ ಶೋಭಾ ಕರಂದ್ಲಾಜೆ ಮಾತನಾಡಿ, ಎಲ್ಲ ಧರ್ಮಗಳಿಗೆ ಆಶ್ರಯ ಕೊಟ್ಟಿರುವ ದೇಶದಲ್ಲಿ ಧರ್ಮ, ಸಂಸ್ಕೃತಿ, ಸಂಪ್ರದಾಯಗಳಿಗೆ ಧಕ್ಕೆ ತರುವ ಕೆಲಸಗಳು ನಡೆಯುತ್ತಿವೆ ಎಂದು ವಿಷಾದಿಸಿದರು.

ಮೀನುಗಾರಿಕಾ ಸಚಿವ ಕೋಟ ಶ್ರೀನಿವಾಸ ಪೂಜಾರಿ, ಶಾಸಕ ಕೆ.ರಘುಪತಿ ಭಟ್, ಉಡುಪಿ ನಗರಸಭೆ ಅಧ್ಯಕ್ಷೆ ಸುಮಿತ್ರಾ ನಾಯಕ್ ಉಪಸ್ಥಿತರಿದ್ದರು. ಕಾರ್ಯಕ್ರಮದಲ್ಲಿ ಕೊರಂಗ್ರಪಾಡಿ ವಿದ್ವಾನ್ ಸೀತಾರಾಮ ಆಚಾರ್ಯ, ಪೂರ್ಣಪ್ರಜ್ಞ ಪದವಿಪೂರ್ವ ಕಾಲೇಜಿನ ನಿವೃತ್ತ ಪ್ರಾಂಶುಪಾಲ ನಾಗರತ್ನ ರಾವ್ ಮತ್ತು ಉಡುಪಿಯ ಮಲಬಾರ್ ಗೋಲ್ಡ್ ಶಾಖೆಯ ವ್ಯವಸ್ಥಾಪಕ ರಾಘವೇಂದ್ರ ನಾಯಕ್ ಅವರನ್ನು ಪರ್ಯಾಯ ಶ್ರೀಗಳು ಸನ್ಮಾನಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT