ಮಂಗಳವಾರ, 23 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

2ನೇ ಹಂತದ ಶಾಲಾರಂಭ; ಮೊದಲ ದಿನ ಶೇ 60 ಹಾಜರಾತಿ

6 ರಿಂದ 8ನೇ ತರಗತಿ ಮಕ್ಕಳಿಗೆ ಭೌತಿಕ ಪಾಠ
Last Updated 7 ಸೆಪ್ಟೆಂಬರ್ 2021, 3:49 IST
ಅಕ್ಷರ ಗಾತ್ರ

ಉಡುಪಿ: ಜಿಲ್ಲೆಯಲ್ಲಿ ಸೋಮವಾರದಿಂದ 6ರಿಂದ 8ನೇತರಗತಿಯ ವಿದ್ಯಾರ್ಥಿಗಳಿಗೆ ಭೌತಿಕ ತರಗತಿಗಳು ಆರಂಭವಾದವು. ಮಕ್ಕಳು ಉತ್ಸಾಹದಿಂದ ಕೋವಿಡ್ ಸುರಕ್ಷತಾ ಕ್ರಮಗಳ ಪಾಲನೆಯೊಂದಿಗೆ ಶಾಲೆಗಳಿಗೆ ಬಂದರು.

ಮೊದಲ ದಿನ 6ನೇ ತರಗತಿಯ ಸರ್ಕಾರಿ ಶಾಲೆಗಳ 3,591 ವಿದ್ಯಾರ್ಥಿಗಳು ಹಾಜರಾಗಿದ್ದು, 7ನೇ ತರಗತಿಯ 3,710 ವಿದ್ಯಾರ್ಥಿಗಳು ಹಾಗೂ 8ನೇ ತರಗತಿಯ 4,278 ವಿದ್ಯಾರ್ಥಿಗಳು ಶಾಲೆಗೆ ಬಂದಿದ್ದರು. ಸರ್ಕಾರಿ ಅನುದಾನಿತ ಶಾಲೆಯ 6 ನೇ ತರಗತಿಯ 1,287, 7ನೇ ತರಗತಿಯ 1,459, 8ನೇ ತರಗತಿಯ 1,588 ಹಾಗೂ ಖಾಸಗಿ ಶಾಲೆಗಳ 6ನೇ ತರಗತಿಯ 2,508, 7ನೇ ತರಗತಿಯ 2,833 ಹಾಗೂ 8ನೇ ತರಗತಿಯ 3,124 ವಿದ್ಯಾರ್ಥಿಗಳು ಹಾಜರಾಗಿದ್ದರು.‌

ಮತ್ತೊಂದೆಡೆ 9 ಹಾಗೂ 10ನೇ ತರಗತಿಗಳಿಗೆ ಸೆ.1ರಿಂದ ಶಾಲೆಗಳು ಆರಂಭವಾಗಿದ್ದು, ಸೋಮವಾರ ಸರ್ಕಾರಿ ಶಾಲೆಯ 9ನೇ ತರಗತಿಯ 3,295, 10ನೇ ತರಗತಿಯ 3,737 ಹಾಗೂ ಅನುದಾನಿತ ಶಾಲೆಗಳ 9ನೇ ತರಗತಿಯ 1,764, 10ನೇ ತರಗತಿಯ 1,933 ಹಾಗೂ ಖಾಸಗಿ ಶಾಲೆಗಳ 9ನೇ ತರಗತಿಯ 3,597, 10ನೇ ತರಗತಿಯ 4,014 ವಿದ್ಯಾರ್ಥಿಗಳು ಶಾಲೆಗೆ ಬಂದಿದ್ದರು.

ಶಾಲಾರಂಭ ಕಾರ್ಯಕ್ರಮ ಸೈಬರಕಟ್ಟೆಯ ಮಹಾತ್ಮಾಗಾಂಧಿ ಪ್ರೌಢಶಾಲೆಯಲ್ಲಿ ನಡೆಯಿತು. ಡಿಡಿಪಿಐ ಎನ್‌.ಎಚ್‌.ನಾಗೂರ ಕಾರ್ಯಕ್ರಮದಲ್ಲಿ ಭಾಗವಹಿಸಿ ವಿದ್ಯಾರ್ಥಿಗಳಿಗೆ ಸಿಹಿಹಂಚಿ, ಲೇಖನಿಗಳನ್ನು ನೀಡಿ ಶಾಲೆಗೆ ಸ್ವಾಗತಿಸಿದರು.

ನಂತರ ಮಾತನಾಡಿ, ‘ಕೋವಿಡ್‌ನಿಂದಾಗಿ ಶಿಕ್ಷಣ ಕ್ಷೇತ್ರಕ್ಕೆ ಹೆಚ್ಚಿನ ಪೆಟ್ಟುಬಿದ್ದಿದ್ದು, ಕಳೆದ ಒಂದೂವರೆ ವರ್ಷಗಳಿಂದ ಶಾಲೆಗಳು ಆರಂಭವಾಗದೆ ವಿದ್ಯಾರ್ಥಿಗಳ ಕಲಿಕಾ ನಿರಂತರತೆಗೆ ಅಡ್ಡಿಯಾಗಿತ್ತು. ಆರೋಗ್ಯ ಇಲಾಖೆ ನಿರ್ದೇಶನದಂತೆ ಶಾಲೆಗಳು ಹಂತ ಹಂತವಾಗಿ ಆರಂಭವಾಗುತ್ತಿವೆ. ವಿದ್ಯಾರ್ಥಿಗಳು ವೈಯಕ್ತಿಕ ಆರೋಗ್ಯ ಕಾಪಾಡಿಕೊಳ್ಳಲು ಆದ್ಯತೆ ನೀಡಿ ಕಲಿಕೆಯಲ್ಲಿ ತೊಡಗಬೇಕು’ ಎಂದು ಡಿಡಿಪಿಐ ಸಲಹೆ ನೀಡಿದರು.

ಶಿಕ್ಷಕರ ಸಭೆ ನಡೆಸಿ ವಿದ್ಯಾರ್ಥಿಗಳ ಹಾಜರಾತಿ ಪ್ರಮಾಣ ಹೆಚ್ಚಳಕ್ಕೆ ಅಗತ್ಯ ಕ್ರಮ ಕೈಗೊಳ್ಳುವಂತೆ ಡಿಡಿಪಿಐ ಸೂಚನೆ ನೀಡಿದರು. ಈ ಸಂದರ್ಭ ಜಿಲ್ಲಾ ದೈಹಿಕ ಶಿಕ್ಷಣಾಧಿಕಾರಿ ರಘುನಾಥ್, ಶಿಕ್ಷಣ ಸಂಯೋಜಕ ರಾಘವ ಶೆಟ್ಟಿ, ಸಿಆರ್‌ಪಿ ಚಂದ್ರಶೇಖರ್ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT