ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಉಡುಪಿ: ಮರಳಿ ಶಾಲೆಗೆ ಬಂದರು ಮಕ್ಕಳು

ಜಿಲ್ಲಾಧಿಕಾರಿಯಾಗಿ ಅಧಿಕಾರ ಸ್ವೀಕರಿಸಿದ ದಿನವೇ ಮಕ್ಕಳಿಗೆ ಸ್ವಾಗತ ಕೋರಿದ ಡಿಸಿ ಕೂರ್ಮರಾವ್‌
Last Updated 1 ಸೆಪ್ಟೆಂಬರ್ 2021, 12:57 IST
ಅಕ್ಷರ ಗಾತ್ರ

ಉಡುಪಿ: ಕೋವಿಡ್‌–10 ಕಾರಣದಿಂದ ಸುಧೀರ್ಘ ಅವಧಿಯವರೆಗೂ ಶಾಲೆಗಳಿಂದ ದೂರ ಉಳಿದಿದ್ದ ವಿದ್ಯಾರ್ಥಿಗಳು ಬುಧವಾರ ಸಂಭ್ರಮದಿಂದ ಶಾಲೆಗಳತ್ತ ಹೆಜ್ಜೆ ಹಾಕಿದರು. ಬಿಕೋ ಎನ್ನುತ್ತಿದ್ದ ಶಾಲೆಗಳಲ್ಲಿ ಮತ್ತೆ ಮಕ್ಕಳ ಕಲರವ ಕೇಳಿಬಂತು. ಜಿಲ್ಲೆಯ ನೂತನ ಜಿಲ್ಲಾಧಿಕಾರಿ ಕುರ್ಮರಾವ್ ಉಡುಪಿಯ ಬಾಲಕಿಯರ ಸರ್ಕಾರಿ ಪ್ರೌಢಶಾಲೆಗೆ ಭೇಟಿನೀಡಿ ವಿದ್ಯಾರ್ಥಿಗಳನ್ನು ಸ್ವಾಗತಿಸಿದರು.

ಬಳಿಕ ಮಾತನಾಡಿದ ಅವರು, ಜಿಲ್ಲಾಧಿಕಾರಿಯಾಗಿ ಅಧಿಕಾರ ಸ್ವೀಕರಿಸಿದ ದಿನವೇ ಜಿಲ್ಲೆಯಲ್ಲಿ ಶಾಲೆಗಳು ಆರಂಭವಾಗಿರುವುದು ಖುಷಿ ಕೊಟ್ಟಿದೆ. ಜತೆಗೆ, ಶಾಲಾರಂಭದ ದಿನ ಮಕ್ಕಳನ್ನು ಸ್ವಾಗತಿಸಲು, ಭೇಟಿಮಾಡಲು ಹಾಗೂ ಸಂವಹನ ನಡೆಸಲು ಅವಕಾಶ ಸಿಕ್ಕಿದ್ದು ಮತ್ತಷ್ಟು ಸಂತಸ ತಂದಿದೆ ಎಂದರು.

ಕೊರೊನಾ ವೈರಸ್‌ ಸೋಂಕಿನಿಂದ ವಿದ್ಯಾರ್ಥಿಗಳು ಶಾಲೆಗೆ ಬರಲು ಸಾಧ್ಯವಾಗಿರಲಿಲ್ಲ. ಈಗ ಮತ್ತೆ ಶಾಲೆಗಳು ಆರಂಭವಾಗಿದ್ದು, ವಿದ್ಯಾರ್ಥಿಗಳು ಸುರಕ್ಷತಾ ಕ್ರಮಗಳನ್ನು ಪಾಲಿಸಿ ಪಾಠ ಕೇಳಬೇಕು ಎಂದು ಸಲಹೆ ನೀಡಿದರು.

ಮೊದಲ ದಿನವೇ ನಿರೀಕ್ಷೆಗೂ ಮೀರಿ ವಿದ್ಯಾರ್ಥಿಗಳು ಶಾಲೆಗೆ ಹಾಜರಾಗಿರುವುದು ಖುಷಿಯ ವಿಚಾರ. ಬಹುತೇಕ ಸರ್ಕಾರಿ ಶಿಕ್ಷಕರು ಕೋವಿಡ್‌ ಲಸಿಕೆ ಪಡೆದಿರುವುದು ಕೂಡ ಶ್ಲಾಘನೀಯ. ಅನುದಾನಿತ ಶಾಲೆಗಳ ಶೇ 98, ಖಾಸಗಿ ಶಾಲೆಗಳ ಶೇ 96ರಷ್ಟು ಶಿಕ್ಷಕರು ಲಸಿಕೆ ಹಾಕಿಸಿಕೊಂಡಿದ್ದು, ಉಳಿದವರು ಕೂಡ ಶೀಘ್ರ ಲಸಿಕೆ ಹಾಕಿಸಿಕೊಳ್ಳಬೇಕು ಎಂದರು. ಬಳಿಕ ವಿದ್ಯಾರ್ಥಿಗಳೊಂದಿಗೆ ಸಂವಹನ ನಡೆಸಿದರು. ಈ ಸಂದರ್ಭ ವಿದ್ಯಾರ್ಥಿಗಳು ಆನ್‌ಲೈನ್ ಶಿಕ್ಷಣಕ್ಕಿಂತ ತರಗತಿ ಶಿಕ್ಷಣ ಹೆಚ್ಚು ಪರಿಣಾಮಕಾರಿ ಎಂದು ಅನಿಸಿಕೆಗಳನ್ನು ಹಂಚಿಕೊಂಡರು.

ಸಿಂಗಾರಗೊಂಡ ಶಾಲೆಗಳು:

ಜಿಲ್ಲೆಯಲ್ಲಿ ಕೋವಿಡ್‌ ಪಾಸಿಟಿವಿಟಿ ದರ ಶೇ 2ಕ್ಕಿಂತ ಕಡಿಮೆಯಾಗಿರುವ ಹಿನ್ನೆಲೆಯಲ್ಲಿ 9 ರಿಂದ 12ನೇ ತರಗತಿ ಆರಂಭಕ್ಕೆ ಸರ್ಕಾರ ಅನುಮತಿ ನೀಡಿದ ಬೆನ್ನಲ್ಲೇ ಶಿಕ್ಷಣ ಶಾಲೆಗಳನ್ನು ತೆರೆಯಲು ಅಗತ್ಯ ಸಿದ್ಧತೆಗಳನ್ನು ಮಾಡಿಕೊಂಡಿತ್ತು. ಶಾಲೆಗಳನ್ನು ಸ್ಯಾನಿಟೈಸ್‌ ಮಾಡಿಸಿ ಸ್ವಚ್ಛಗೊಳಿಸಲಾಗಿತ್ತು. ಹಲವು ಶಾಲೆಗಳನ್ನು ಮಾವಿನ ತೋರಣ, ಹೂ ಹಾಗೂ ಬಲೂನ್‌ಗಳಿಂದ ಸಿಂಗರಿಸಲಾಗಿತ್ತು.

ಬುಧವಾರ ಬೆಳಿಗ್ಗೆ ಶಾಲೆಗೆ ಬಂದ ವಿದ್ಯಾರ್ಥಿಗಳಿಗೆ ಶಿಕ್ಷಕರು ಆರತಿ ಬೆಳಗಿ, ತಿಲಕವಿಟ್ಟು, ಸಿಹಿ ನೀಡಿ ಬರಮಾಡಿಕೊಂಡರು. ಸ್ವತಃ ಡಿಡಿಪಿಐ ಎನ್‌.ಎಚ್‌.ನಾಗೂರ ಬ್ಯಾಂಡ್‌ ಬಾರಿಸಿ ಜಾಥಾ ನಡೆಸುವ ಮೂಲಕ ವಿದ್ಯಾರ್ಥಿಗಳನ್ನು ಸ್ವಾಗತಿಸಿ ಗುಲಾಬಿ ಹೂಗಳನ್ನು ನೀಡಿ ಬರಮಾಡಿಕೊಂಡರು. ಉಡುಪಿಯ ರಾಜೀವ್ ನಗರದ ಸರ್ಕಾರಿ ಶಾಲೆಯಲ್ಲಿ ವಿದ್ಯಾರ್ಥಿಗಳಿಗೆ ಪಠ್ಯಪಸ್ತಕಗಳನ್ನು ವಿತರಣೆ ಮಾಡಲಾಯಿತು. ವಿದ್ಯಾರ್ಥಿಗಳು ಮಾಸ್ಕ್ ಧರಿಸಿ, ಅಂತರ ಕಾಪಾಡಿಕೊಂಡು ಪಾಠ ಕೇಳಿದರು.

ಮೊದಲ ದಿನ ಹಾಜರಾತಿ ಎಷ್ಟು:

ಶಾಲಾರಂಭದ ಮೊದಲ ದಿನ ಸರ್ಕಾರಿ ಶಾಲೆಗಳ 9ನೇ ತರಗತಿಯ 3,905 ವಿದ್ಯಾರ್ಥಿಗಳು ತರಗತಿಗೆ ಹಾಜರಾದರೆ, 10ನೇ ತರಗತಿಯ 4,496 ವಿದ್ಯಾರ್ಥಿಗಳು, ಅನುದಾನಿತ ಶಾಲೆಗಳ 9ನೇ ತರಗತಿಯ 1,931 ವಿದ್ಯಾರ್ಥಿಗಳು ಹಾಗೂ 10ನೇ ತರಗತಿ 2,131 ಹಾಗೂ ಖಾಸಗಸಿ ಶಾಲೆಗಳ 9ನೇ ತರಗತಿಯ 3,455 ಹಾಗೂ 10ನೇ ತರಗತಿಯ 3,994 ವಿದ್ಯಾರ್ಥಿಗಳು ಹಾಜರಾಗಿದ್ದರು.

ಸರ್ಕಾರಿ ಶಾಲೆಗಳ 9ಹಾಗೂ 10ನೇ ತರಗತಿಯ 4414, ಅನುದಾನಿತ ಶಾಲೆಗಳ 2,128, ಖಾಸಗಿ ಶಾಲೆಗಳ 5406 ವಿದ್ಯಾರ್ಥಿಗಳು ಆನ್‌ಲೈನ್‌ ಹಾಗೂ ಪರ್ಯಾಯ ಶಿಕ್ಷಣ ಪಡೆದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT