ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಶುದ್ಧ ಆಯುರ್ವೇದ ಚಿಕಿತ್ಸಾ ಪದ್ಧತಿ ಅನುಸರಿಸಿ: ಡಾ.ವೀರೇಂದ್ರ ಹೆಗ್ಗಡೆ

Last Updated 26 ನವೆಂಬರ್ 2021, 16:24 IST
ಅಕ್ಷರ ಗಾತ್ರ

ಉಡುಪಿ: ಆಯುರ್ವೇದ ಚಿಕಿತ್ಸಾ ಪದ್ಧತಿಯ ಹೆಸರಿನಲ್ಲಿ ಆಲೊಪತಿ ಔಷಧಗಳನ್ನು ನೀಡಲಾಗುತ್ತದೆ ಎಂಬ ಗುರುತರವಾದ ಆರೋಪಗಳಿವೆ. ಆದರೆ, ಎಸ್‌ಡಿಎಂ ಸಂಸ್ಥೆಯ ಆಸ್ಪತ್ರೆಗಳಲ್ಲಿ ರೋಗಿಗಳಿಗೆ ಆಯುರ್ವೇದ ಔಷಧಗಳನ್ನು ಮಾತ್ರ ನೀಡಲಾಗುತ್ತದೆ ಎಂದು ಧರ್ಮಸ್ಥಳ ಮಂಜುನಾಥೇಶ್ವರ ವಿಶ್ವವಿದ್ಯಾಲಯದ ಕುಲಪತಿ ಡಾ.ಡಿ.ವೀರೇಂದ್ರ ಹೆಗ್ಗಡೆ ಹೇಳಿದರು.

ಕುತ್ಪಾಡಿಯ ಎಸ್‌ಡಿಎಂ ಕಾಲೇಜಿನಲ್ಲಿ ಶುಕ್ರವಾರ ಹಮ್ಮಿಕೊಂಡಿದ್ದ ಪದವಿ ಪ್ರದಾನ ಸಮಾರಂಭದಲ್ಲಿ ಮಾತನಾಡಿದ ಅವರು, ಎಸ್‌ಡಿಎಂ ಆಸ್ಪತ್ರೆಯು ಆಯುರ್ವೇದ ಉತ್ಪನ್ನಗಳ ಸಂಶೋಧನಾ ಕೇಂದ್ರವನ್ನು ಒಳಗೊಂಡಿದ್ದು, ಪ್ರಾಕೃತಿಕ ಉತ್ಪನ್ನಗಳನ್ನು ಬಳಸಿ ಆಯುರ್ವೇದ ಔಷಧವನ್ನು ತಯಾರಿಸಲಾಗುತ್ತದೆ. ಎಲ್ಲ ರೋಗಿಗಳಿಗೂ ಆಯುರ್ವೇದ ಮದ್ದಾಗಬಲ್ಲದು ಎಂಬುದನ್ನು ಸಾಬೀತು ಪಡಿಸುತ್ತಿದೆ ಎಂದರು.

ಅಲೊಪತಿ ಚಿಕಿತ್ಸಾ ವಿಧಾನದಲ್ಲಿ ಬಳಸುವ ಅತ್ಯಾಧುನಿಕ ವೈದ್ಯಕೀಯ ಯಂತ್ರೋಪಕರಣಗಳನ್ನು ಒಳಗೊಂಡ ಸುಸಜ್ಜಿತ ಪ್ರಯೋಗಾಲಯ ಆಸ್ಪತ್ರೆಯಲ್ಲಿದ್ದು, ರೋಗ ನಿರ್ಣಯದ ಬಳಿಕ ಪರಿಣಾಮಕಾರಿ ಆಯುರ್ವೇದ ಚಿಕಿತ್ಸಾ ಪದ್ಧತಿಯನ್ನು ಅನುಸರಿಸಿ ರೋಗ ಗುಣಪಡಿಸಲಾಗುತ್ತದೆ ಎಂದು ಹೆಗ್ಗಡೆ ಅವರು ಹೇಳಿದರು.

ಚಿಕಿತ್ಸಾ ವಿಧಾನಕ್ಕಿಂತ ರೋಗ ಗುಣಮುಖವಾಗುವುದು ಬಹಳ ಮುಖ್ಯ. ಈ ನಿಟ್ಟಿನಲ್ಲಿ ಆಯುರ್ವೇದ ವೈದ್ಯರು ರೋಗವನ್ನು ಸಂಪೂರ್ಣ ಗುಣ ಮಾಡುವತ್ತ ಗಮನ ಹರಿಸಬೇಕು. ಆಯುರ್ವೇದ ಶಿಕ್ಷಣ ಪಡೆದು ವೃತ್ತಿಯಲ್ಲಿ ತೊಡಗಿಸಿಕೊಂಡಾಗ ಆಯರ್ವೇದ ಚಿಕಿತ್ಸಾ ವಿಧಾನವನ್ನೇ ಬಳಸಬೇಕು ಎಂದು ಸಲಹೆ ನೀಡಿದರು.

ಬೋರ್ಡ್ ಆಫ್‌ ಎಥಿಕ್ಸ್‌ ಅಂಡ್ ರಿಜಿಸ್ಟ್ರೇಷನ್‌ ಫಾರ್ ಇಂಡಿಯನ್‌ ಸಿಸ್ಟಮ್‌ ಮೆಡಿಸನ್‌ ಅಧ್ಯಕ್ಷ ರಾಕೇಶ್‌ ಶರ್ಮಾ ಮಾತನಾಡಿ, ಮಹಿಳಾ ವಿದ್ಯಾರ್ಥಿಗಳು ಆಯುರ್ವೇದ ಶಿಕ್ಷಣದತ್ತ ಚಿತ್ತ ಹರಿಸಬೇಕು. ದೇಶದ ಜನಸಂಖ್ಯೆಗೆ ಹೋಲಿಸಿದರೆ ವೈದ್ಯರ ಕೊರತೆ ಹೆಚ್ಚಾಗಿದ್ದು, ಆಯುರ್ವೇದ ಕ್ಷೇತ್ರದಲ್ಲಿ ಉತ್ತಮ ಭವಿಷ್ಯವಿದೆ ಎಂದರು.

ಆಯುರ್ವೇದಕ್ಕೆ 5 ಸಾವಿರ ವರ್ಷಗಳ ಇತಿಹಾಸವಿದೆ ಎಂದು ಕೆಲವರು ಹೇಳುತ್ತಾರೆ. ಆದರೆ, ಸೃಷ್ಟಿ ರಚನೆಯಾದ ಸಂದರ್ಭ ಆಯುರ್ವೇದ ಕೂಡ ಸೃಷ್ಟಿಯಾದ ಬಗ್ಗೆ ಪುರಾಣಗಳಲ್ಲಿ ಮಾಹಿತಿ ಸಿಗುತ್ತದೆ. ಸಕಲ ರೋಗಗಳನ್ನು ಗುಣಪಡಿಸುವ ಶಕ್ತಿ ಆಯುರ್ವೇದಕ್ಕಿದೆ ಎಂದು ಹೇಳಿದರು.

ಸಮಾರಂಭದಲ್ಲಿ ಎಸ್‌ಡಿಎಂ ಕಾಲೇಜಿನ ಪ್ರಾಂಶುಪಾಲ ಕೆ.ವಿ.ಮಮತಾ, ಮೆಡಿಕಲ್‌ ಸೂಪರಿಂಟೆಂಡೆಂಟ್‌ ಎಸ್‌.ನಾಗರಾಜ್, ಸ್ನಾತಕೋತ್ತರ ಪದವಿ ಹಾಗೂ ಪಿಎಚ್‌ಡಿ ವಿಭಾಗದ ಡೀನ್‌ ನಿರಂಜನ್ ರಾವ್‌, ಡಾ.ವೀರಕುಮಾರ್ ವೇದಿಕೆಯಲ್ಲಿ ಉಪಸ್ಥಿತರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT