ಶುಕ್ರವಾರ, 10 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಅರಬ್ಬಿ ಸಮುದ್ರ ಸೇರಿದ 74 ಕಡಲಾಮೆ ಮರಿಗಳು

Last Updated 11 ಫೆಬ್ರುವರಿ 2022, 12:08 IST
ಅಕ್ಷರ ಗಾತ್ರ

ಕುಂದಾಪುರ: ಇಲ್ಲಿನ ಕೋಡಿ ಲೈಟ್‌ಹೌಸ್ ಎದುರುಗಡೆ 55 ದಿನಗಳ ಹಿಂದೆ ಪತ್ತೆಯಾದ ಕಡಲಾಮೆ ಮೊಟ್ಟೆಗಳಿಂದ ಹೊರಬಂದ 74 ಮರಿಗಳನ್ನು ಗುರುವಾರ ರಾತ್ರಿ ಅರಬ್ಬಿ ಸಮುದ್ರಕ್ಕೆ ಬಿಡಲಾಗಿದೆ.

ಅಪರೂಪದ ‘ಆಲೀವ್ ರಿಡ್ಲಿ’ ಜಾತಿಗೆ ಸೇರಿದ ಕಡಲಾಮೆ ಮೊಟ್ಟೆಗಳನ್ನು ಕಡಲ ತೀರದಲ್ಲಿ ತಾತ್ಕಾಲಿಕ ರಕ್ಷಣಾ ಕೇಂದ್ರದಲ್ಲಿ ಸಂರಕ್ಷಣೆ ಮಾಡಲಾಗಿತ್ತು. ಅರಣ್ಯ ಇಲಾಖೆ, ಎಫ್.ಎಸ್.ಎಲ್ ಇಂಡಿಯಾ ಸ್ವಯಂ ಸೇವಾ ಸಂಘಟನೆ, ಸ್ಥಳೀಯ ಮೀನುಗಾರರು ಹಾಗೂ ರೀಫ್ ವಾಚ್ ಸಂಸ್ಥೆಯವರು ಹಗಲು- ರಾತ್ರಿ ಕಾವಲು ಕಾದು, ಮೊಟ್ಟೆಗಳ ಸಂರಕ್ಷಣೆ ಮಾಡಿದ್ದರಲ್ಲದೆ, ಮೊಟ್ಟೆಗಳಿಂದ ಮರಿಗಳು ಹೊರಗಡೆ ಬರುವುದನ್ನು ನಿರೀಕ್ಷೆ ಮಾಡುತ್ತಿದ್ದರು.

ಗುರುವಾರ ರಾತ್ರಿ ಸುಮಾರು 9.45ಕ್ಕೆ ಕಡಲಾಮೆ ಮರಿಗಳು ಒಂದೊಂದಾಗಿ ಸಂರಕ್ಷಣಾ ಕೇಂದ್ರಗಳಿಂದ ಹೊರ ಬರಲು ಆರಂಭಿಸಿವೆ. ಮರಳುಗೂಡಿನಿಂದ ಹೊರ ಬಂದ ಮರಿಗಳನ್ನು ಸುರಕ್ಷಿತವಾಗಿ ಕಡಲು ಸೇರಿಸುವ ಕಾರ್ಯವನ್ನು ಯಶಸ್ವಿಯಾಗಿ ನಡೆಸಲಾಗಿದೆ.

ಕಾರ್ಯಾಚರಣೆಯಲ್ಲಿ ಅರಣ್ಯ ಇಲಾಖೆಯ ಅಧಿಕಾರಿಗಳಾದ ಉದಯ ಬಿ, ಬಸವರಾಜ್, ರಂಜಿತ್ ಪೂಜಾರಿ, ಎಫ್.ಎಸ್.ಎಲ್ ಸಂಸ್ಥೆಯ ದಿನೇಶ್ ಸಾರಂಗ, ನಾಗರಾಜ ಶೆಟ್ಟಿ ಸಬ್ಲಾಡಿ, ವೆಂಕಟೇಶ್ ಎಂ, ರೀಫ್ ವಾಚ್ ಸಂಸ್ಥೆಯ ಕಾರ್ಯಕರ್ತರಾದ ತೇಜಸ್ವಿನಿ, ವಿರೀಲ್ ಕುಮಾರ್, ಸಿಕೆಪಿವೈಎ ಸಂಘಟನೆಯ ಸಂತೋಷ, ಕುಂದಾಪುರದ ಮೀನು ವ್ಯಾಪಾರಿ ಸುಬ್ರಹ್ಮಣ್ಯ ಸಾರಂಗ, ಧನುಷ್ ಬಿ.ಆರ್, ಸ್ಥಳೀಯ ಮೀನುಗಾರರಾದ ಭರತ್ ಖಾರ್ವಿ, ಲಕ್ಷ್ಮಣ ಪೂಜಾರಿ, ಉದಯ ಖಾರ್ವಿ ಭಾಗವಹಿಸಿದ್ದರು.

‘ತಾತ್ಕಾಲಿಕಾ ಸಂರಕ್ಷಣಾ ಕೇಂದ್ರದಲ್ಲಿ ಇನ್ನೂ 4 ಗೂಡುಗಳಲ್ಲಿ ಕಡಲಾಮೆ ಮೊಟ್ಟೆಗಳಿಗೆ ರಕ್ಷಣೆ ಒದಗಿಸಲಾಗಿದೆ. ಎಲ್ಲಾ ಮರಿಗಳ ಸುರಕ್ಷತೆಗಾಗಿ ಮುತುವರ್ಜಿ ವಹಿಸಲಾಗಿದೆ’ ಎಂದು ಎಫ್.ಎಸ್.ಎಲ್ ಸಂಸ್ಥೆಯ ಅಧ್ಯಕ್ಷ ರಾಕೇಶ್ ಸೋನ್ಸ್ ತಿಳಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT