ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಭಗವದ್ಗೀತೆಯಲ್ಲಿ ಮಹಾಭಾರತದ ದಾರ್ಶನಿಕ ನೆಲೆ

ಹಿರಿಯ ಚಿಂತಕ ಲಕ್ಷ್ಮೀಶ ತೋಳ್ಪಾಡಿ ಅಭಿಮತ
Last Updated 22 ಜುಲೈ 2019, 20:20 IST
ಅಕ್ಷರ ಗಾತ್ರ

ಉಡುಪಿ: ಮಹಾಭಾರತದ ದಾರ್ಶನಿಕ ನೆಲೆ ಇರುವುದು ಭಗವದ್ಗೀತೆಯಲ್ಲಿ ಎಂದು ಹಿರಿಯ ಚಿಂತಕ ಲಕ್ಷ್ಮೀಶ ತೋಳ್ಪಾಡಿ ಅಭಿಪ್ರಾಯಪಟ್ಟರು.

ಮಣಿಪಾಲದ ಮಾಹೆ ವಿವಿ ತತ್ತ್ವಶಾಸ್ತ್ರ ವಿಭಾಗದಲ್ಲಿ ತತ್ತ್ವಶಾಸ್ತ್ರ ವಿಭಾಗ ಹಾಗೂ ಸುಬ್ರಹ್ಮಣ್ಯ ಮಠದ ವೇದವ್ಯಾಸ ಸಂಶೋಧನಾ ಕೇಂದ್ರದಿಂದ ಸೋಮವಾರ ಹಮ್ಮಿಕೊಂಡಿದ್ದ ‘ಮಹಾಭಾರತ ಮತ್ತು ಅದರ ತತ್ವ ಶಾಸ್ತ್ರೀಯ ದೃಷ್ಟಿ’ ವಿಷಯ ಕುರಿತು ಮಾತನಾಡಿದರು.

ಕಾಲದ ಸ್ವರೂಪವೇ ಕಬಳಿಸುವುದು. ಕಳೆದುಹೋದ ಕಾಲ ಮತ್ತೆ ಮರಳುವುದಿಲ್ಲ. ಕಳೆಯುವುದೇ ಕಾಲದ ಕೆಲಸ; ಬದಲಾಗಿ ಕೂಡಿಸುವುದಿಲ್ಲ. ಪ್ರತಿಯೊಬ್ಬರೂ ಲೋಕಕ್ಷಯ ಮಾಡಲು ಹುಟ್ಟಿದವರು ಎಂದರು.

ಬದುಕಲೇಬೇಕು ಎಂದು ನಿಶ್ಚಯಮಾಡಿಕೊಂಡ ವ್ಯಕ್ತಿಗೆ ಬದುಕಿನದ್ದೇ ಇನ್ನೊಂದು ಮುಖವಾದ ಸಾವಿನ ಬಗ್ಗೆ ತಿಳಿದುಕೊಳ್ಳುವ ಸಂವೇದನೆ ಹೊರಟು ಹೋಗಿರುತ್ತದೆ. ಸಾವಿನ ಮುಖ ತಿಳಿಯಲು ಸಾಧ್ಯವಾಗದಿದ್ದರೆ ಜೀವನವನ್ನೂ ತಿಳಿದಹಾಗಲ್ಲ ಎಂದು ಪ್ರತಿಪಾದಿಸಿದರು.

ಸುಪ್ತ ಪ್ರಜ್ಞೆಗೆ ಸಾವು ಹಾಗೂ ಬದುಕು ಏನು ಎಂಬುದು ಗೊತ್ತಿಲ್ಲ. ಗೊತ್ತಿರುವ ಸ್ಥಿತಿಯಿಂದ ಗೊತ್ತಿಲ್ಲದ ಸ್ಥಿತಿಗೆ ಹೋಗುವುದೇ ನಿಜವಾದ ಬಿಡುಗಡೆ. ಇದನ್ನು ಮಹಾಜ್ಞಾನಿಗಳು ಪ್ರತಿಪಾದಿಸಿದ್ದಾರೆ ಎಂದರು.

ಪ್ರತಿಯೊಬ್ಬರೂ ಲೋಕದ ದಾಸ್ಯಕ್ಕೆ ಸಿಲುಕಿ ಬದುಕುತ್ತಿದ್ದಾರೆ. ದೇವರ ದಾಸನಾದರೆ ಮಾತ್ರ ಲೋಕದ ದಾಸ್ಯದಿಂದ ಬಿಡುಗಡೆ ಹೊಂದಬಹುದು ಎಂದರು.

ವೇದವ್ಯಾಸರು ಸಮಾಜದ ಅಭಿವ್ಯಕ್ತಿಯನ್ನು ತೋರಿಸಿದರು. ಲೋಕವನ್ನು ಇರುವ ಹಾಗೆಯೇ ನೋಡುವ ಮನೋಧರ್ಮವನ್ನು ಮಹಾಭಾರತದ ತಿಳಿವಳಿಕೆ ಬೆಳೆಸುತ್ತದೆ ಎಂದರು.

ಸಂವೇದನಶೀಲನಾದ ವ್ಯಕ್ತಿ ಮಾತ್ರ ಸಮುದಾಯದ ಅನುಭವಗಳನ್ನು ಕಾಣುತ್ತಾನೆ. ಅದು ಅನುಭವಗಳಿಂದ ಪಾರಾಗುವ ಮಾರ್ಗವೂ ಹೌದು ಎಂದರು.

ಸುಬ್ರಹ್ಮಣ್ಯ ಮಠದ ವಿದ್ಯಾಪ್ರಸನ್ನತೀರ್ಥರು ಮಾತನಾಡಿ,ಪೂರ್ವಿಕರು ಕಷ್ಟಪಟ್ಟು ರಚಿಸಿದ ಪ್ರಾಚೀನ ಗ್ರಂಥಗಳ ಸಂಶೋಧನೆ, ವಿಮರ್ಶೆ ನಡೆಯುವ ಮೂಲಕ ಪರಂಪರೆಯನ್ನು ಬೆಳೆಸುವ ಅಗತ್ಯವಿದೆ ಎಂದರು.

ಸೆಂಟರ್ ಫಾರ್ ಯೂರೋಪಿಯನ್ ಸ್ಟಡೀಸ್ ನಿರ್ದೇಶಕರಾದ ಡಾ.ನೀತಾ ಇನಾಂದಾರ್ ಶುಭ ಹಾರೈಸಿದರು. ತತ್ವಶಾಸ್ತ್ರ ವಿಭಾಗದ ಸಹ ಪ್ರಾಧ್ಯಾಪಕ ಶ್ರೀನಿವಾಸ ಕುಮಾರ್ ಆಚಾರ್ಯ ಸ್ವಾಗತಿಸಿದರು. ಡಾ.ಎಸ್.ಆರ್. ಅರ್ಜುನ ವಂದಿಸಿದರು. ಸಂಶೋಧಕ ಡಾ.ಆನಂದತೀರ್ಥ ಕಾರ್ಯಕ್ರಮ ನಿರ್ವಹಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT