ಮಂಗಳವಾರ, 16 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮೂರು ಮಸೂದೆಗಳು ರೈತರ ಪರ; ಅನುಮಾನ ಬೇಡ

ರೈತರಿಗೆ ಬಲ ತುಂಬಲು, ಕೃಷಿ ಲಾಭದಾಯಕವಾಗಿಸಲು ಕೇಂದ್ರದ ಶ್ರಮ: ಸಂಸದೆ ಶೋಭಾ ಕರಂದ್ಲಾಜೆ
Last Updated 10 ಅಕ್ಟೋಬರ್ 2020, 14:53 IST
ಅಕ್ಷರ ಗಾತ್ರ

ಉಡುಪಿ: ರೈತರ ಆತ್ಮಹತ್ಯೆ ತಡೆಯಲು, ಕೃಷಿಯನ್ನು ಲಾಭದಾಯಕವಾಗಿಸಲು, ಬೆಳೆಗೆ ಸೂಕ್ತ ಬೆಲೆ ಕೊಡಿಸಲು ಕೇಂದ್ರ ಸರ್ಕಾರ ಮೂರು ರೈತಪರ ಮಸೂದೆಗಳನ್ನು ಜಾರಿಗೆ ತರುತ್ತಿದೆ ಎಂದು ಸಂಸದೆ ಶೋಭಾ ಕರಂದ್ಲಾಜೆ ಹೇಳಿದರು.

ಶನಿವಾರ ಮಾಧ್ಯಮ ಪ್ರತಿನಿಧಿಗಳ ಜತೆ ಮಾತನಾಡಿದ ಅವರು, ರಾಜ್ಯದಲ್ಲಿ ಎಪಿಎಂಸಿಗಳು ಬಿಳಿಯಾನೆಗಳಾಂತಾಗಿದ್ದು, ದಲ್ಲಾಳಿಗಳ ಕಿರುಕುಳ ಮಿತಿಮೀರಿದೆ. ಇದಕ್ಕೆ ಕಡಿವಾಣ ಹಾಕಲು, ರೈತ ಬೆಳೆದ ಬೆಳೆಯನ್ನು ಎಲ್ಲಿ ಬೇಕಾದರೂ, ಯಾರಿಗೆ ಬೇಕಾದರೂ ಮಾರಲು ಅವಕಾಶ ನೀಡುವ ಉದ್ದೇಶದಿಂದ ರೈತರ ಉತ್ಪನ್ನ, ವ್ಯಾಪಾರ ಮತ್ತು ವಾಣಿಜ್ಯ ಮಸೂದೆ ಜಾರಿಗೆ ತರಲಾಗುತ್ತಿದೆ ಎಂದರು.

ಹಾಗೆಯೇ ರೈತರಿಗೆ ಬೆಲೆ ಭರವಸೆ ಹಾಗೂ ಸೇವಾ ಒಪ್ಪಂದ ಮಸೂದೆ ಹಾಗೂ ಅಗತ್ಯ ಸರಕುಗಳ ತಿದ್ದುಪಡಿ ಮಸೂದೆಯನ್ನು ಲೋಕಸಭೆ ಹಾಗೂ ರಾಜ್ಯಸಭೆ ಅಂಗೀಕರಿಸಿದೆ. ಈ ಮೂರು ಮಸೂದೆಗಳು ರೈತರ ಬದುಕಿಗೆ ಆಧಾರವಾಗಲಿವೆ ಎಂದು ಶೋಭಾ ಕರಂದ್ಲಾಜೆ ಹೇಳಿದರು.

ಮಸೂದೆಗಳು ಜಾರಿಯಾದರೆ ಕನಿಷ್ಠ ಬೆಂಬಲ ಬೆಲೆ ಸಿಗುವುದಿಲ್ಲ, ಎಪಿಎಂಸಿಗಳು ಮುಚ್ಚಲಿವೆ ಎಂದು ಪ್ರತಿಪಕ್ಷಗಳು ಆರೋಪಿಸಿ ಪ್ರತಿಭಟನೆ ಮಾಡುತ್ತಿವೆ. ವಾಸ್ತವವಾಗಿ ಎಪಿಎಂಸಿಗಳನ್ನು ಮುಚ್ಚುವುದಿಲ್ಲ, ಕನಿಷ್ಟ ಬೆಂಬಲ ಬೆಲೆಯನ್ನು ರದ್ದು ಮಾಡುವುದಿಲ್ಲ ಎಂದರು.

ಗುತ್ತಿಗೆ ಕೃಷಿ ಪದ್ಧತಿಯಿಂದ ರೈತರಿಗೆ ಹೆಚ್ಚು ಅನುಕೂಲವಾಗಲಿದೆ. ಕೃಷಿಯಲ್ಲಿ ಸ್ಪರ್ಧಾತ್ಮಕತೆ ಹೆಚ್ಚಾಗಲಿದ್ದು, ಮಾರುಕಟ್ಟೆ ವಿಸ್ತಾರವಾಗಲಿದೆ. ಬೀಳುಬಿಟ್ಟ ಕೃಷಿ ಜಮೀನು ಉಳುಮೆಯಾಗಲಿದೆ. ಇದರಿಂದ ಸಣ್ಣ ಹಾಗೂ ಅತಿ ಸಣ್ಣ ರೈತರಿಗೆ ಹೆಚ್ಚಿನ ಲಾಭವಾಗಲಿದೆ. ರೈತರಿಂದ ಉದ್ಯಮಿಗಳು ಬಲವಂತವಾಗಿ ಭೂಮಿಯನ್ನು ಕಿತ್ತುಕೊಳ್ಳುತ್ತಾರೆ ಎಂಬ ಆರೋಪವೂ ಸುಳ್ಳು. ರೈತರು ಭೂಮಿ ಮಾರಲು ನಿರಾಕರಿಸಿದರೆ, ಉದ್ಯಮಿಗಳು ಖರೀದಿಸುವ ಪ್ರಶ್ನೆಯೇ ಬರುವುದಿಲ್ಲ ಎಂದರು.

ಮೂರು ಮಸೂದೆಗಳು ರೈತರಿಗೆ ಅನ್ಯಾಯ ಮಾಡುವುದಿಲ್ಲ; ಬದಲಾಗಿ ಬಲ ತುಂಬಲಿವೆ. ಒಂದು ವೇಳೆ ಭವಿಷ್ಯದಲ್ಲಿ ತೊಂದರೆಯಾಗುವುದು ಕಂಡುಬಂದರೆ ಕೇಂದ್ರ ಸರ್ಕಾರ ಕಾಯ್ದೆಯನ್ನು ತಿದ್ದುಪಡಿ ಮಾಡಲು ಸಿದ್ಧವಿದೆ. ರೈತರು, ರೈತ ಮುಖಂಡರು ಮಸೂದೆಯ ಅಂಶಗಳನ್ನು ಅರಿಯಬೇಕು ಎಂದು ಮನವಿ ಮಾಡಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT