ಶನಿವಾರ, 27 ಜುಲೈ 2024
×
ADVERTISEMENT
ಈ ಕ್ಷಣ :
ADVERTISEMENT

ಹೆಜಮಾಡಿ ಟೋಲ್‌ಗೇಟ್: ವ್ಯಾಪಾರವಿಲ್ಲದಿರುವ ಗೂಡಂಗಡಿಗಳ ತೆರವು

Published 27 ಮೇ 2024, 14:15 IST
Last Updated 27 ಮೇ 2024, 14:15 IST
ಅಕ್ಷರ ಗಾತ್ರ

ಪಡುಬಿದ್ರಿ: ಹೆಜಮಾಡಿ ಟೋಲ್‌ಗೇಟ್ ಬಳಿ ಇಕ್ಕೆಲದಲ್ಲಿ ಅನಧಿಕೃತವಾಗಿ ನಿರ್ಮಿಸಿರುವ ಗೂಡಂಗಡಿಗಳ ತೆರವು ಕಾರ್ಯಾಚರಣೆಗೆ ಟೊಲ್‌ಗೇಟ್ ಮುಂದಾಗಿದ್ದು, ಪ್ರಥಮ ಹಂತದಲ್ಲಿ ವ್ಯಾಪಾರ ನಡೆಸದೆ ಇರುವ ಚಪ್ಪರಗಳನ್ನು ಸೋಮವಾರ ತೆರವುಗೊಳಿಸಲಾಯಿತು.

ಸರ್ಕಾರಿ ಜಾಗದಲ್ಲಿ ಅನಧಿಕೃತವಾಗಿ ಚಪ್ಪರ ನಿರ್ಮಿಸಿ ಹೆಚ್ಚಿನ ಮೊತ್ತ ಪಡೆದು ಪರಭಾರೆ ಮಾಡಿ ಬಾಡಿಗೆ ಪಡೆಯುತ್ತಿರುವುದರ ಬಗ್ಗೆ ದೂರುಗಳು ಬಂದಿದ್ದ ಕಾರಣ ವ್ಯಾಪಾರ ನಡೆಸದೆ ಇರುವ ಗೂಡಂಗಡಿಗಳನ್ನು ತೆರವುಗೊಳಿಸಲಾಯಿತು.

ಅನಧಿಕೃತವಾಗಿ ನಿರ್ಮಿಸಿರುವ ಗೂಡಂಗಡಿಗಳಿಗೆ ಕಳೆದ ವಾರವೇ ನೋಟಿಸ್‌ ನೀಡಲಾಗಿತ್ತು. ಬೀಗ ಹಾಕಿರುವ, ವ್ಯಾಪಾರ ವಹಿವಾಟುಗಳು ನಡೆಯದಿರುವ 8 ಗೂಡಂಗಡಿಗಳನ್ನು ತೆರವುಗೊಳಿಸಲಾಯಿತು. ಮುಂದಿನ ಕಾರ್ಯಾಚರಣೆಯಲ್ಲಿ ಸುರತ್ಕಲ್‌ನಿಂದ ಕುಂದಾಪುರದವರೆಗಿನ ರಾಷ್ಟ್ರೀಯ ಹೆದ್ದಾರಿ 66ರ ಪಕ್ಕದಲ್ಲಿನ ಅನಧಿಕೃತ ಗೂಡಂಗಡಿಗಳನ್ನು ತೆರವುಗೊಳಿಸಲು ಪ್ರಕಟಣೆ ನೀಡಲಾಗುವುದು ಎಂದು  ಹೆಜಮಾಡಿಯ ಕೆಕೆಆರ್ ಟೋಲ್ ಗೇಟ್ ಪ್ರಬಂಧಕ ತಿಮ್ಮಯ್ಯ ತಿಳಿಸಿದರು.

ಕಾರ್ಯಾಚರಣೆ ವೇಳೆ ಕೆಲವು ಗೂಡಂಗಡಿಗಳಲ್ಲಿ ಅನೈತಿಕ ಚಟುವಟಿಕೆ ಹಾಗೂ ಡ್ರಗ್ಸ್‌ ಮಾರಾಟ ನಡೆಸುತ್ತಿರುವ ಬಗ್ಗೆ ಸ್ಥಳೀಯರು ದೂರು ನೀಡಿದರು. ಅನೈತಿಕ ಚಟುವಟಿಕೆ ಬಗ್ಗೆ ದೂರು ಬಂದಲ್ಲಿ ಕ್ರಮ ಕೈಗೊಳ್ಳಲಾಗುವುದು ಎಂದು ಪಿಎಸ್‌ಐ ಪ್ರಸನ್ನ ಎಚ್ಚರಿಸಿದರು.

ಸರ್ಕಾರಿ ಜಾಗ ಮಾರಿದವರ ವಿರುದ್ಧ ಮತ್ತು ಇತರರಿಂದ ಬಾಡಿಗೆ ಪಡೆದುಕೊಳ್ಳುವವರ ವಿರುದ್ಧ ಇಲಾಖೆ ಮುಂದಿನ ದಿನಗಳಲ್ಲಿ ಕ್ರಮ ಕೈಗೊಳ್ಳಲಿದೆ. ಯಾವುದೇ ಕಾರಣಕ್ಕೂ ಹೆದ್ದಾರಿ ಪ್ರದೇಶದಲ್ಲಿ ಟೇಬಲ್‌ ಇರಿಸಿ ವ್ಯಾಪಾರ ಮಾಡುವಂತಿಲ್ಲ. ಪರವಾನಗಿ ಪಡೆದ ಅಂಗಡಿಗಳು ರಾತ್ರಿ 12 ಗಂಟೆ ನಂತರವೂ ಅಂಗಡಿ ತೆರೆದಿದ್ದಲ್ಲಿ ಅವುಗಳ ವಿರುದ್ಧ ಕೂನೂನು ಕ್ರಮಗ ತೆಗೆದುಕೊಳ್ಳಲಾಗುವುದು ಎಂದರು.

ಸೊರಕೆ ಮಧ್ಯಸ್ಥಿಕೆ: ಟೋಲ್‌ಗೇಟ್ ಬಳಿ ಇರುವ ಅನಧಿಕೃತ ಗೂಡಂಗಡಿಗಳ ತೆರವುಗೊಳಿಸುವ ಕಾರ್ಯಾಚರಣೆ ಅಂಗವಾಗಿ ಬೆಳಗ್ಗೆ ಪೊಲೀಸ್ ಬಂದೋಬಸ್ತ್ ನಡೆಸಲಾಗಿತ್ತು. ವ್ಯಾಪಾರ ನಡೆಸುವ ಗೂಡಂಗಡಿಗಳನ್ನು ತೆರವುಗೊಳಿಸದಂತೆ ಟೋಲ್‌ಗೇಟ್ ಪ್ರಬಂಧಕರಿಗೆ ಮುಖಂಡರು ಮನವಿ ಮಾಡಿದರು. ಮಾಜಿ ಸಚಿವ ವಿನಯಕುಮಾರ್ ಸೊರಕೆ ಅವರೊಂದಿಗೆ ಮಾತುಕತೆ ನಡೆಸಿ ವ್ಯಾಪಾರ ನಡೆಸುತ್ತಿರುವ ಗೂಡಂಗಡಿಗಳನ್ನು ತೆರೆವುಗೊಳಿಸದಂತೆ ಟೋಲ್‌ಪ್ರಬಂಧಕ ತಿಮ್ಮಯ್ಯ ಅವರಿಗೆ ಹೇಳಿದರು. ಆ ಬಳಿಕ ವ್ಯಾಪಾರ ನಡೆಸದೆ ಇರುವ ಗೂಡಂಗಡಿಗಳನ್ನು ಮಾತ್ರ ತೆರೆವುಗೊಳಿಸಲಾಯಿತು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT