ಶುಕ್ರವಾರ, 10 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

9ರ ಬಾಲೆಯ ಕನಸು ಕಸಿದ ಕ್ಯಾನ್ಸರ್‌

ಬಡ ಕುಟುಂಬದ ಕಣ್ಣೀರು ಒರೆಸಲು ಬೇಕಾಗಿದೆ ಹೃದಯವಂತರ ನೆರವಿನ ಹಸ್ತ
Last Updated 10 ಸೆಪ್ಟೆಂಬರ್ 2019, 4:03 IST
ಅಕ್ಷರ ಗಾತ್ರ

ಕುಂದಾಪುರ: ಆಕೆಗಿನ್ನೂ 9ರ ಹರೆಯ. ಈ ವಯಸ್ಸಿನ ಇತರ ಮಕ್ಕಳಂತೆ ಪುಟ್ಟ ಪುಟ್ಟ ಹೆಜ್ಜೆಯನ್ನು ಇಡುತ್ತಾ, ಬಣ್ಣ ಬಣ್ಣದ ಕನಸುಗಳನ್ನು ಹೊತ್ತು ಶಾಲೆಯ ಆಟ–ಪಾಠಗಳಲ್ಲಿ ಸಂಭ್ರಮಿಸಬೇಕಾಗಿದ್ದ ಪುಟ್ಟ ಮಗು ಇಂದು ಆಸ್ಪತ್ರೆಯ ಮಂಚದ ಹಾಸಿಗೆಯ ಮೇಲೆ ನೋವಿನ ದಿನಗಳೊಂದಿಗೆ ಕಳೆಯಬೇಕಾದ ಸ್ಥಿತಿ ನಿರ್ಮಾಣವಾಗಿದೆ.

ವಿಧಿಯಾಟಕ್ಕೆ ಸಿಲುಕಿರುವ ಈ ಕಂದಮ್ಮನ ಹೆಸರು ಶ್ರಾವ್ಯಾ. ಇಲ್ಲಿಗೆ ಸಮೀದ ಕುಂಭಾಸಿ ಗ್ರಾಮ ಪಂಚಾ
ಯಿತಿ ವ್ಯಾಪ್ತಿಯ ಕೊರವಡಿಯ ನಿವಾಸಿ. ಒಂದೂವರೆ ವರ್ಷದಿಂದ ಲಿಂಪೋಬ್ಲಾಸ್ಟಿಕ್‌ ಲ್ಯುಕೇಮಿಯಾ ಎನ್ನುವ ಕ್ಯಾನ್ಸರ್‌ ಕಾಯಿಲೆಯಿಂದ ಬಳಲುತ್ತಿದ್ದಾಳೆ. ಆಸ್ಪತ್ರೆಯ ವೈದ್ಯರೇ ಹೇಳುವ ಪ್ರಕಾರ ಮಗುವಿನ ಚಿಕಿತ್ಸೆಗೆ ಏನಿಲ್ಲವೆಂದರೂ ಕನಿಷ್ಠ ₹30ರಿಂದ ₹32 ಲಕ್ಷ ಬೇಕು.

ಕೊರವಡಿಯ ಕ್ರಾಸ್‌ನಲ್ಲಿ ಸಣ್ಣ ಪೆಟ್ಟಿ ಅಂಗಡಿಯನ್ನು ಇಟ್ಟುಕೊಂಡಿರುವ ತಂದೆ ಉದಯ್‌ ಕಾಂಚನ್‌ ಬಳಿಯಲ್ಲಿ ಲಕ್ಷದ ಮಾತು ಬಿಡಿ; ಕನಿಷ್ಠ ₹10 ಸಾವಿರ ಒಟ್ಟು ಮಾಡಲಾಗದ ಅಸಹಾಯಕ ಸ್ಥಿತಿಯಲ್ಲಿ ಇದ್ದಾರೆ. ಕಾಯಿಲೆ ಕಾಣಿಸಿ
ಕೊಂಡ ಪ್ರಾರಂಭದಲ್ಲಿ ಚಿಕಿತ್ಸೆಗಾಗಿ ಮಣಿಪಾಲ ಹಾಗೂ ಮಂಗಳೂರಿನ ಆಸ್ಪತ್ರೆಗಳಿಗೆಂದು ಹಣ ಖರ್ಚು ಮಾಡಿ ಈಗ ಬರಿಗೈನಲ್ಲಿ ಕುಳಿತುಕೊಂಡಿದ್ದಾರೆ. ಸರ್ಕಾರದಿಂದ ದೊರಕಬಹುದಾದ ಸೌಲಭ್ಯಗಳನ್ನು ಮಗುವಿಗಾಗಿ ಬಳಸಿಕೊಂಡಿದ್ದಾರೆ. ಕಣ್ಣೆದುರು ಆಟವಾಡಿಕೊಂಡು ಮನೆ ಬೆಳಗಬೇಕಾಗಿದ್ದ ಮಗಳು ಕಾಯಿಲೆಯ ತೊಟ್ಟಿಲಲ್ಲಿ ಮಲಗಿದ್ದಾಳೆ ಎನ್ನುವ ಹೆತ್ತವರ ಬಳಿ ಕಣ್ಣೀರಲ್ಲದೆ ಇನ್ನೇನೂ ಆಸ್ತಿ ಉಳಿದಿಲ್ಲ.

ಹೆಚ್ಚಿನ ಚಿಕಿತ್ಸೆಗೆಂದು ಬೆಂಗಳೂರಿನ ಬೊಮ್ಮಸಂದ್ರದಲ್ಲಿನ ನಾರಾಯಣ ಹೆಲ್ತ್‌ ಸಿಟಿಯ ಮುಜಂದಾರ್‌ ಶಾ ಮೆಡಿಕಲ್‌ ಸೆಂಟರ್‌ಗೆ ಕರೆದೊಯ್ಯಲಾಯಿತು. ಅಲ್ಲಿನ ತಜ್ಞ ವೈದ್ಯರು ಪರೀಕ್ಷೆ ನಡೆಸಿದ ಬಳಿಕ, ಕಾಯಿಲೆಗೆ ಚಿಕಿತ್ಸೆ ನೀಡಬಹುದು ಎಂದರು. ವೈದ್ಯರ ಈ ಅಭಿಪ್ರಾಯ ನೊಂದ ಕುಟುಂಬದಲ್ಲಿ ಒಂದಷ್ಟು ಭರವಸೆಗಳನ್ನು ಹುಟ್ಟು ಹಾಕಿದೆ.

ಸಾವು–ಬದುಕಿನ ನಡುವೆ ಹೋರಾಟ ನಡೆಸುತ್ತಿರುವ ಕಂದನ ಬದುಕಿಗೆ ಆಸರೆಯಾಗುವ ತೀರ್ಮಾನ ಮಾಡಿರುವ ಮೂಡುಗಿಳಿಯಾರಿನ ಜನಸೇವಾ ಟ್ರಸ್ಟ್‌ ಮಗುವಿನ ಚಿಕಿತ್ಸೆಗಾಗಿ ಮಾನವೀಯತೆಯ ಮನಸ್ಸುಗಳನ್ನು ಒಟ್ಟು ಮಾಡುವ ಪ್ರಯತ್ನ ಮಾಡುತ್ತಿದೆ.

ಖ್ಯಾತ ಫೊರೆನ್ಸಿಕ್‌ ತಜ್ಞರಾದ ಡಾ.ಮಹಾಬಲೇಶ್‌ ಶೆಟ್ಟಿ ಅವರ ಮೂಲಕ ಪ್ರಧಾನಿ ಮೋದಿ ಅವರ ‘ಥಿಂಕ್‌ ಟೀಂ’ನ ಡಾ.ವಿಶಾಲ್‌ ರಾವ್‌, ಖ್ಯಾತ ವೈದ್ಯರಾದ ಡಾ.ಸಚಿನ್‌ ಜಾಧವ್‌ ಹಾಗೂ ಬಳ್ಳಾರಿಯ ಆಯುರ್ವೇದ ವೈದ್ಯ ಡಾ.ಗೋಪಿಕೃಷ್ಣ ಅವರನ್ನು ಸಂಪರ್ಕ ಮಾಡಿ ಚಿಕಿತ್ಸೆಗಾಗಿ ಅಭಿಪ್ರಾಯ ಹಾಗೂ ಸಲಹೆ ಪಡೆದುಕೊಳ್ಳಲಾಗುತ್ತಿದೆ.

ಬಡತನದಲ್ಲಿಯೇ ಸಂತೃಪ್ತ ಬದುಕನ್ನು ಕಾಣುತ್ತಿದ್ದ ಕುಟುಂಬ ಇಂದು ಬರಸಿಡಿಲಿನಂತೆ ಎರಗಿದ ಕ್ಯಾನ್ಸರ್‌ ರೂಪದ ಮಹಾಮಾರಿಯಿಂದ ಹೈರಾಣಾಗಿ ಹೋಗಿದೆ. ನೊಂದ ಕುಟುಂಬದ ಕಣ್ಣೀರನ್ನು ಒರೆಸಲು ಒಂದಷ್ಟು ಹೃದಯವಂತ ಮನಸ್ಸುಗಳು ಒಗ್ಗೂಡಬೇಕಿದೆ.

ಮಗುವಿನ ಭವಿಷ್ಯಕ್ಕೆ ನೆರವಾಗುವವರು ತೆಕ್ಕಟ್ಟೆಯ ಎಸ್‌ಬಿಐ ಶಾಖೆಯಲ್ಲಿ ಇರುವ ಉದಯ್‌ ಅವರ ಉಳಿತಾಯ ಖಾತೆ ಸಂಖ್ಯೆ 54058193367 (ಐಎಫ್‌ಎಸ್‌ಸಿ: ಎಸ್‌ಬಿಐಎನ್‌0041032)ಕ್ಕೆ ಅಥವಾ 99006 55495 ದೂರವಾಣಿ ಸಂಖ್ಯೆಗೆ ಗೂಗಲ್‌ ಪೇ, ಪೇಟಿಎಂ ಹಾಗೂ ಪೋನ್‌ ಪೇ ಮೂಲಕವೂ ಹಣ ಸಂದಾಯ ಮಾಡಬಹುದು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT