ಹಾಂಗ್‌ಝೌ : ವಿಶ್ವ ಚಾಂಪಿಯನ್‌ಷಿಪ್ ಕಂಚಿನ ಪದಕ ವಿಜೇತ ದೀಪಕ್ ಭೋರಿಯಾ ಅವರ ಏಷ್ಯನ್ ಗೇಮ್ಸ್ ಅಭಿಯಾನ ಪ್ರಿಕ್ವಾರ್ಟರ್‌ಫೈನಲ್‌ನಲ್ಲಿ ಸೋಲಿನೊಡನೆ ಅಂತ್ಯಗೊಂಡಿತು. ಆದರೆ ಭಾರತದ ಇನ್ನಿಬ್ಬರು ಬಾಕ್ಸರ್‌ಗಳು– ನಿಶಾಂತ್ ದೇವ್ ಮತ್ತು ಜೈಸ್ಮಿನ್ ಲಂಬೋರಿಯಾ ಅವರು ಗುರುವಾರ ಎಂಟರ ಘಟ್ಟವನ್ನು ಪ್ರವೇಶಿಸಿದರು.
ಕಾಮನ್ವೆಲ್ತ್ ಗೇಮ್ಸ್‌ನಲ್ಲಿ ಕಂಚಿನ ಪದಕ ಗಳಿಸಿದ್ದ ಜೈಸ್ಮಿನ್ ಮಹಿಳೆಯರ 60 ಕೆ.ಜಿ. ವಿಭಾಗದಲ್ಲಿ ಶಕ್ತಿಶಾಲಿ ಪ್ರಹಾರಗಳ ಮೂಲಕ ಸೌದಿ ಅರೇಬಿಯಾದ ಹದೀಲ್ ಘಜ್ವಾನ್ ಅಶೌರ್ ಅವರನ್ನು ಸೋಲಿಸಿ ಕ್ವಾರ್ಟರ್‌ಫೈನಲ್ ತಲುಪಿಸಿದರು. ಆರ್‌ಎಸ್‌ಸಿ (ರೆಫ್ರಿ ಸೆಣಸಾಟವನ್ನು ಕೊನೆ ಗೊಳಿಸಿದ) ಆಧಾರದಲ್ಲಿ ಅವರು ಜಯಗಳಿಸಿದರು. ಮೊದಲ ಸುತ್ತಿನಲ್ಲಿ ‘ಬೈ’ ಪಡೆದಿದ್ದ ಜೈಸ್ಮಿನ್ ಉತ್ತಮ ಲಯದಲ್ಲಿದ್ದು ಗೆಲುವಿಗೆ ತೆಗೆದುಕೊಂಡಿದ್ದು ಐದು ನಿಮಿಷ ಮಾತ್ರ. ಅವರ ಸೆಮಿಫೈನಲ್ ಎದುರಾಳಿ ಉತ್ತರ ಕೊರಿಯಾದ ವೊನ್ ಉಂಗ್‌ಯಾಂಗ್.
ಸುಲಭ ಜಯ:
ವಿಶ್ವ ಚಾಂಪಿಯನ್‌ಷಿಪ್ ಕಂಚಿನ ಪದಕ ವಿಜೇತ ನಿಶಾಂತ್ 71 ಕೆ.ಜಿ. ವಿಭಾಗದಲ್ಲಿ ವಿಯೆಟ್ನಾಮಿನ ಬುಯ್ ಫುವೊಕ್ ತುಂಗ್ ಅವರನ್ನು ನಾಕೌಟ್ ಆಧಾರದಲ್ಲಿ ಸೋಲಿಸಲು ತೆಗೆದುಕೊಂಡಿದ್ದು ಎರಡು ನಿಮಿಷಗಳನ್ನಷ್ಟೇ. ಅವರು ಸೆಮಿಫೈನಲ್‌ನಲ್ಲಿ ಜಪಾನ್‌ನ ಒಕಾಝಾವ ಅವರನ್ನು ಎದುರಿಸುವರು.
ನಿಶಾಂತ್ ಮತ್ತು, ಜೈಸ್ಮಿನ್ ಇನ್ನೊಂದು ಪಂದ್ಯ ಗೆದ್ದರೆ ಅವರಿಗೆ ಪದಕಗಳು ಖಚಿತವಾಗಲಿವೆ. ಜೈಸ್ಮಿನ್ ಸೆಮಿಫೈನಲ್ ತಲುಪಿದರೆ ಪ್ಯಾರಿಸ್ ಒಲಿಂಪಿಕ್ಸ್‌ಗೆ ‘ಟಿಕೆಟ್’ ಸಿಗಲಿದೆ. ನಿಶಾಂತ್ ಅವರು ಒಲಿಂಪಿಕ್ಸ್‌ಗೆ ಅರ್ಹತೆ ಪಡೆಯಬೇಕಾದರೆ ಫೈನಲ್ ತಲುಪಬೇಕಾಗುತ್ತದೆ.
ಆದರೆ 51 ಕೆ.ಜಿ. ವಿಭಾಗದಲ್ಲಿ ದೀಪಕ್ ಅದೃಷ್ಟಶಾಲಿಯಾಗಿರಲಿಲ್ಲ. ಅವರಿಗೆ ‘ಡ್ರಾ’ದಲ್ಲಿ 2021ರ ಬ್ಯಾಂಟಮ್‌ವೇಟ್ ಚಾಂಪಿಯನ್ ಟೊಮೊಯಾ ತ್ಸುಬೊಯಿ (ಜಪಾನ್) ಬೇಗನೇ ಎದುರಾಗಿದ್ದು 1–4 ಅಂತರದಲ್ಲಿ ಸೋತರು. ಟೊಮೊಯಾ ಅವರು ಸರಣಿ ಪಂಚ್‌ಗಳ ಮೂಲಕ ದೀಪಕ್ ಅವರಿಗೆ ಆಕ್ರಮಣಕ್ಕೆ ಅವಕಾಶವನ್ನೇ ನೀಡಲಿಲ್ಲ.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.