ಶುಕ್ರವಾರ, ಮಾರ್ಚ್ 31, 2023
25 °C
ಜಿಲ್ಲೆಯಲ್ಲಿ ಪರೀಕ್ಷಾ ಕೇಂದ್ರಗಳಿಗೆ ಬರಲು ಸಾರಿಗೆ ವ್ಯವಸ್ಥೆ ಇಲ್ಲದ ವಿದ್ಯಾರ್ಥಿಗಳ ಸಂಖ್ಯೆ 295

ಪರೀಕ್ಷಾ ಕೇಂದ್ರಗಳಿಗೆ ಬರಲು ಕಾರು, ಆಟೊ ವ್ಯವಸ್ಥೆ

ಬಾಲಚಂದ್ರ ಎಚ್‌. Updated:

ಅಕ್ಷರ ಗಾತ್ರ : | |

Prajavani

ಉಡುಪಿ: ಜುಲೈ 19 ಹಾಗೂ 22ರಂದು ರಾಜ್ಯದಾದ್ಯಂತ ಎಸ್ಸೆಸ್ಸೆಲ್ಸಿ ಪರೀಕ್ಷೆಗಳು ನಡೆಯುತ್ತಿವೆ. ಆದರೆ, ಕರಾವಳಿಯಲ್ಲಿ ಎಡೆಬಿಡದೆ ಸುರಿಯುತ್ತಿರುವ ಮಳೆಯು ಪರೀಕ್ಷೆ ಬರೆಯಲು ಅಡ್ಡಿಯಾಗುವ ಆತಂಕ ಕಾಡುತ್ತಿದೆ. ಜತೆಗೆ ಸಾರಿಗೆ ವ್ಯವಸ್ಥೆ ಇಲ್ಲದ ವಿದ್ಯಾರ್ಥಿಗಳು ಮಳೆಯ ಮಧ್ಯೆ ಪರೀಕ್ಷಾ ಕೇಂದ್ರಗಳಿಗೆ ಬರುವುದು ಹೇಗೆ ಎಂಬ ಪ್ರಶ್ನೆ ಎದುರಾಗಿದೆ.

ಜಿಲ್ಲೆಯಲ್ಲಿ ಮೊಬೈಲ್‌ ನೆಟ್‌ವರ್ಕ್‌ ಇಲ್ಲದ, ಸಮರ್ಪಕ ವಿದ್ಯುತ್ ಸಂಪರ್ಕ ಹೊಂದಿರದ, ಬಸ್‌ಗಳ ಸಂಚಾರ ಇಲ್ಲದ ಹಲವು ಗ್ರಾಮಗಳಿವೆ. ಈ ಗ್ರಾಮಗಳಿಂದ ನೂರಾರು ವಿದ್ಯಾರ್ಥಿಗಳು ಪಟ್ಟಣದ ಶಾಲೆಗಳಿಗೆ ಬರುತ್ತಾರೆ. ಹೆಚ್ಚಿನವರ ಬಳಿ ವಾಹನಗಳಿಲ್ಲ, ಸಾರಿಗೆ ವ್ಯವಸ್ಥೆಯೂ ಇಲ್ಲ. ಜತೆಗೆ ಜಿಲ್ಲೆಯಲ್ಲಿ ವರುಣನ ಅಬ್ಬರ ಹೆಚ್ಚಾಗಿರುವುದರಿಂದ ವಿದ್ಯಾರ್ಥಿಗಳಿಗೆ ಪರೀಕ್ಷಾ ಕೇಂದ್ರಗಳಿಗೆ ಬರಲು ಸಮಸ್ಯೆ ಎದುರಾಗಿದೆ.

ಹಳ್ಳಿಗಳಲ್ಲಿ ಸಾರಿಗೆ ಸಮಸ್ಯೆ ಇರುವುದು ಶಿಕ್ಷಣ ಇಲಾಖೆಯ ಗಮನಕ್ಕೂ ಬಂದಿದ್ದು, ಪರೀಕ್ಷೆಯ ದಿನ ವಿದ್ಯಾರ್ಥಿಗಳು ಹೇಗೆ ಪರೀಕ್ಷಾ ಕೇಂದ್ರ ತಲುಪಲಿದ್ದಾರೆ ಎಂಬ ಮಾಹಿತಿಯನ್ನು ಸಂಗ್ರಹಿಸಿದೆ. ಮಾಹಿತಿ ಪ್ರಕಾರ ಜಿಲ್ಲೆಯಲ್ಲಿ ಕಾಲ್ನಡಿಗೆಯಲ್ಲಿ ಪರೀಕ್ಷಾ ಕೇಂದ್ರಗಳಿಗೆ ಬರುವ ವಿದ್ಯಾರ್ಥಿಗಳು 1,938. ತಂದೆ ಅಥವಾ ತಾಯಿಯ ಜತೆ ಬರುವವರು 2,867. ಸೈಕಲ್‌ ಮೂಲಕ ಬರುವ ವಿದ್ಯಾರ್ಥಿಗಳು 761.

ಬೈಕ್‌ ಮೂಲಕ ಬರುವವರು 1,307, ಬಸ್‌ಗಳಲ್ಲಿ ಬರುವವರು 3,668, ಸ್ವಂತ ವಾಹನಗಳಲ್ಲಿ ಬರುವವರು 1,588 ಹಾಗೂ ಶಾಲಾ ವಾಹನಗಳಲ್ಲಿ 457 ವಿದ್ಯಾರ್ಥಿಗಳು ಪರೀಕ್ಷಾ ಕೇಂದ್ರಕ್ಕೆ ಬರಲಿದ್ದಾರೆ. ಆದರೆ, ಬೈಕ್, ಸೈಕಲ್ ಸೇರಿದಂತೆ ಯಾವುದೇ ಸಾರಿಗೆ ವ್ಯವಸ್ಥೆ ಇಲ್ಲದ 295 ವಿದ್ಯಾರ್ಥಿಗಳು ಜಿಲ್ಲೆಯಲ್ಲಿದ್ದಾರೆ.

ಬೈಂದೂರು ತಾಲ್ಲೂಕಿನಲ್ಲಿ 144, ಕುಂದಾಪುರ ತಾಲ್ಲೂಕಿನಲ್ಲಿ 79 ಹಾಗೂ ಕಾರ್ಕಳ ತಾಲ್ಲೂಕಿನ 67 ವಿದ್ಯಾರ್ಥಿಗಳಿಗೆ ಪರೀಕ್ಷಾ ಕೇಂದ್ರಗಳಿಗೆ ಬರಲು ಸಾರಿಗೆ ವ್ಯವಸ್ಥೆಯೇ ಇಲ್ಲ. ಇವರನ್ನು ಕೇಂದ್ರಗಳಿಗೆ ಕರೆತರುವುದು ಶಿಕ್ಷಣ ಇಲಾಖೆಯ ಮುಂದಿರುವ ಸವಾಲು.

ಆಟೊ, ಕಾರಿನ ವ್ಯವಸ್ಥೆ:

ಪರೀಕ್ಷಾ ಕೇಂದ್ರಕ್ಕೆ ಬರಲು ಸಾರಿಗೆ ಸಮಸ್ಯೆ ಎದುರಿಸುತ್ತಿರುವ ವಿದ್ಯಾರ್ಥಿಗಳ ಪಟ್ಟಿಯನ್ನು ಪ್ರತಿ ಶಾಲೆಯಿಂದಲೂ ಪಡೆಯಲಾಗಿದೆ. ಸಾರಿಗೆ ವ್ಯವಸ್ಥೆ ಇಲ್ಲದ ಹಳ್ಳಿಗಳಿಂದ ಬರುವ ವಿದ್ಯಾರ್ಥಿಗಳನ್ನು ಆಟೋಗಳ ಮೂಲಕ ಪರೀಕ್ಷಾ ಕೇಂದ್ರಕ್ಕೆ ಕರೆತರಲಾಗುತ್ತಿದೆ. ಜತೆಗೆ, ಕಾರುಗಳನ್ನು ಹೊಂದಿರುವ ಶಿಕ್ಷಕರು ಸ್ವಯಂಪ್ರೇರಿತರಾಗಿ ಮಕ್ಕಳನ್ನು ಪರೀಕ್ಷಾ ಕೇಂದ್ರಕ್ಕೆ ಕರೆತರುವ ಹಾಗೂ ಮನೆಗೆ ಕರೆದೊಯ್ಯಲು ಮುಂದೆ ಬಂದಿದ್ದಾರೆ. ಪ್ರತಿ ಪರೀಕ್ಷಾ ಕೇಂದ್ರದಲ್ಲಿ ಎರಡು ಹೆಚ್ಚುವರಿ ವಾಹನಗಳನ್ನು ಮೀಸಲಿರಿಸಲಾಗಿದ್ದು, ಸಮಸ್ಯೆ ಎದುರಾದರೆ ತಕ್ಷಣ ವಿದ್ಯಾರ್ಥಿಗಳನ್ನು ಪರೀಕ್ಷಾ ಕೇಂದ್ರಗಳಿಗೆ ಕರೆತರುವ ವ್ಯವಸ್ಥೆ ಮಾಡಿಕೊಳ್ಳಲಾಗಿದೆ ಎಂದು ಡಿಡಿಪಿಐ ಎನ್‌.ಎಚ್‌.ನಾಗೂರ ತಿಳಿಸಿದರು.

ವಿದ್ಯಾರ್ಥಿಗಳಿಗೆ ಮಾಹಿತಿ ರವಾನೆ

ಬದಲಾಗಿರುವ ಪರೀಕ್ಷಾ ಮಾದರಿಯ ಸ್ವರೂಪವನ್ನು ಪ್ರತಿ ವಿದ್ಯಾರ್ಥಿಗೂ ತಿಳಿಸಲಾಗಿದೆ. ಪರೀಕ್ಷೆ ಹೇಗಿರಲಿದೆ ಎಂಬ ಮಾಹಿತಿಯನ್ನೂ ವಿದ್ಯಾರ್ಥಿಗಳಿಗೆ ಮುಟ್ಟಿಸಲಾಗಿದೆ. ಶಾಲಾವಾರು ವಿಷಯಾವಾರು ವಾಟ್ಸ್‌ ಆ್ಯಪ್‌ ಗ್ರೂಪ್‌ಗಳನ್ನು ರಚಿಸಿ ಬದಲಾದ ಪರೀಕ್ಷಾ ಪದ್ಧತಿಯ ಬಗ್ಗೆ ವಿದ್ಯಾರ್ಥಿಗಳಿಗೆ ಮನವರಿಕೆ ಮಾಡಿಕೊಡಲಾಗಿದೆ. ವಾಟ್ಸ್‌ ಆ್ಯಪ್ ಮೂಲಕ ಮಾದರಿ ಪ್ರಶ್ನೆ ಪತ್ರಿಕೆ ಕಳಿಸಿ ಸಜ್ಜುಗೊಳಿಸಲಾಗಿದೆ. ಆನ್‍ಲೈನ್‌ನಲ್ಲಿ ಪೂರ್ವ ಸಿದ್ಧತಾ ಪರೀಕ್ಷೆ ನಡೆಸಲಾಗಿದೆ. ಎರಡು ದಿನಗಳಿಗೊಮ್ಮೆ ಗೂಗಲ್ ಮೀಟ್‍ಮಾಡಿ ಮಕ್ಕಳ ಕಲಿಕಾ ಪ್ರಗತಿ ಪರಿಶೀಲಿಸಲಾಗಿದೆ. ಶಿಕ್ಷಕರಿಗೂ ಬದಲಾದ ಪರೀಕ್ಷಾ ಪದ್ಧತಿಯ ಕುರಿತು ಸಮಗ್ರ ಮಾಹಿತಿ ಕೊಡಲಾಗಿದೆ. ಜೂನ್‌ 15ರಂದು ಫೋನ್‌ ಕನ್‌ ಕಾರ್ಯಕ್ರಮ ನಡೆಸಿ, ಪಾಲಕರ ವಿದ್ಯಾರ್ಥಿಗಳ ಮನಸ್ಸಿನಲ್ಲಿದ್ದ ಪರೀಕ್ಷಾ ಗೊಂದಲ ನಿವಾರಿಸಲಾಗಿದೆ ಎನ್ನುತ್ತಾರೆ ಡಿಡಿಪಿಐ ಎನ್‌.ಎಚ್.ನಾಗೂರ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.