ಬುಧವಾರ, 24 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಜವಾಬ್ದಾರಿಯುತ ವರದಿಗಾರಿಕೆಯಿಂದ ಆತ್ಮಹತ್ಯೆ ಪ್ರಮಾಣ ಕುಸಿತ

‘ಆತ್ಮಹತ್ಯೆ ನಿಯಂತ್ರಣ: ಸಾಮಾಜಿಕ ಜವಾಬ್ದಾರಿ’ ಕುರಿತ ವಿಚಾರ ಸಂಕಿರಣದಲ್ಲಿ ಮನೋವೈದ್ಯ ಡಾ.ಪಿ.ವಿ.ಭಂಡಾರಿ ಸಲಹೆ
Last Updated 7 ಅಕ್ಟೋಬರ್ 2021, 13:52 IST
ಅಕ್ಷರ ಗಾತ್ರ

ಉಡುಪಿ: ಆತ್ಮಹತ್ಯೆ ತಡೆಯುವ ಹೊಣೆಗಾರಿಕೆ ವೈದ್ಯರು ಹಾಗೂ ಸಾರ್ವಜನಿಕರದ್ದು ಮಾತ್ರವಲ್ಲ, ಮಾಧ್ಯಮ ಪ್ರತಿನಿಧಿಗಳ ಕರ್ತವ್ಯವೂ ಹೌದು. ಜವಾಬ್ದಾರಿಯುತ ವರದಿಗಾರಿಕೆಯಿಂದ ಆತ್ಮಹತ್ಯೆ ಪ್ರಮಾಣವನ್ನು ತಗ್ಗಿಸಬಹುದು ಎಂದು ಮನೋವೈದ್ಯ ಡಾ.ಪಿ.ವಿ.ಭಂಡಾರಿ ಅಭಿಪ್ರಾಯಪಟ್ಟರು.

ಪ್ರೆಸ್‌ಕ್ಲಬ್‌ನಲ್ಲಿ ಗುರುವಾರ ಡಾ.ಎ.ವಿ.ಬಾಳಿಗ ಸ್ಮಾರಕ ಆಸ್ಪತ್ರೆ, ರೋಟರಿ ಮಣಿಪಾಲ, ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘದ ಸಹಯೋಗದಲ್ಲಿ ಹಮ್ಮಿಕೊಂಡಿದ್ದ ‘ಆತ್ಮಹತ್ಯೆ ನಿಯಂತ್ರಣ: ಸಾಮಾಜಿಕ ಜವಾಬ್ದಾರಿ’ ವಿಷಯ ಕುರಿತ ವಿಚಾರ ಸಂಕಿರಣದಲ್ಲಿ ಅವರು ಮಾತನಾಡಿದರು.

ಈಚೆಗೆ ಸೆಲೆಬ್ರಿಟಿಗಳ ಆತ್ಮಹತ್ಯೆ ಮಾಡಿಕೊಂಡ ಸುದ್ದಿಗಳನ್ನು ಮಾಧ್ಯಮಗಳು ಅತಿಯಾಗಿ ವೈಭವೀಕರಿಸಿದ್ದು ಹಾಗೂ ರಂಜನೀಯಗೊಳಿಸಿದ್ದು ಸಮಾಜದ ಹಿತದೃಷ್ಟಿಯಿಂದ ಸರಿಯಲ್ಲ. ಆತ್ಮಹತ್ಯೆ ಸುದ್ದಿ ವರದಿ ಮಾಡುವಾಗ ವರದಿಗಾರನಿಗೆ ಸೂಕ್ಷ್ಮತೆ ಹಾಗೂ ಎಚ್ಚರಿಕೆ ಅಗತ್ಯ ಎಂದು ಸಲಹೆ ನೀಡಿದರು.

ಆತ್ಮಹತ್ಯೆ ವರದಿ ಅಥವಾ ಸುದ್ದಿಗಳು ಮಾಧ್ಯಮದಲ್ಲಿ ಪ್ರಕಟವಾದ ಬಳಿಕ ವರದಿಯ ಪರಿಣಾಮ 3 ರಿಂದ 15 ದಿನಗಳವರೆಗೂ ಇರುತ್ತದೆ. ಈ ಅವಧಿಯಲ್ಲಿ ಆತ್ಮಹತ್ಯೆಗೆ ಪ್ರಚೋದನೆಯಾಗುವ ಸಾಧ್ಯತೆಗಳು ಹೆಚ್ಚಾಗಿರುತ್ತವೆ ಎಂಬುದನ್ನು ಸಂಶೋಧನೆಗಳು ದೃಢಪಡಿಸಿವೆ. ಪತ್ರಕರ್ತರು ಜವಾಬ್ದಾರಿಯುತವಾಗಿ ವರದಿ ಮಾಡಿದರೆ ಆತ್ಮಹತ್ಯೆ ಪ್ರಮಾಣವನ್ನು ಶೇ 2 ರಿಂದ 3ರವರೆಗೆ ತಗ್ಗಿಸಬಹುದು ಎಂದರು.

ಒಬ್ಬ ವ್ಯಕ್ತಿ ಆತ್ಮಹತ್ಯೆ ಮಾಡಿಕೊಂಡರೆ 50ರಿಂದ 100 ಜನರ ಮನಸ್ಸಿನ ಮೇಲೆ ಗಂಭೀರ ಪರಿಣಾಮ ಬೀರುತ್ತದೆ. ಪ್ರತಿವರ್ಷ ವಿಶ್ವದಲ್ಲಿ ನಡೆಯುವ ಒಟ್ಟು ಆತ್ಮಹತ್ಯೆಗಳ ಪೈಕಿ ಏಷ್ಯಾ ಖಂಡದಲ್ಲಿಯೇ ಶೇ 61ರಷ್ಟು ಆತ್ಮಹತ್ಯೆಗಳು ನಡೆಯುತ್ತವೆ ಎಂದು ಡಾ.ಪಿ.ವಿ.ಭಂಡಾರಿ ವಿವರ ನೀಡಿದರು.

ಶೇ 70ರಷ್ಟು ಆತ್ಮಹತ್ಯೆಗಳು ಮಾನಸಿಕ ಅನಾರೋಗ್ಯದಿಂದ ಸಂಭವಿಸುತ್ತವೆ. ಕುಟುಂಬದಲ್ಲಿ ಯಾರಾದರೂ ಆತ್ಮಹತ್ಯೆ ಮಾಡಿಕೊಂಡಿದ್ದರೆ, ಖಿನ್ನತೆಯ ಸಮಸ್ಯೆ ಹೊಂದಿದ್ದರೆ ಹಾಗೂ ಜೀವನದಲ್ಲಿ ಸಮಸ್ಯೆಗಳನ್ನು ಎದುರಿಸಲಾಗದೆ ಕೈಚೆಲ್ಲುವುದು ಕೂಡ ಆತ್ಮಹತ್ಯೆ ಮಾಡಿಕೊಳ್ಳಲು ಪ್ರಮುಖ ಕಾರಣ ಎಂದು ತಿಳಿಸಿದರು.

ಆತ್ಮಹತ್ಯೆ ವರದಿ ಮಾಡುವಾಗ ಡಬ್ಲ್ಯುಎಚ್‌ಒ, ಪ್ರೆಸ್‌ ಕೌನ್ಸಿಲ್‌, ಐಎಎಸ್‌ಪಿ, ಐಪಿಎಸ್‌ ಮಾರ್ಗಸೂಚಿಗಳನ್ನು ಪಾಲಿಸುವುದು ಅವಶ್ಯ. ಆತ್ಮಹತ್ಯೆ ತಡೆ ಸಹಾಯವಾಣಿ ಕೇಂದ್ರಗಳ ದೂರವಾಣಿ ಸಂಖ್ಯೆಗಳನ್ನು ವರದಿಯಲ್ಲಿ ಹಾಕಬೇಕು. ಹೇಗೆ ಆತ್ಮಹತ್ಯೆ ಮಾಡಿಕೊಂಡರು, ಯಾವ ವಸ್ತುವನ್ನು ಸೇವಿಸಿದರು ಎಂಬ ಆತ್ಮಹತ್ಯೆಗೆ ಪ್ರಚೋದಿಸುವ ಯಾವ ಮಾಹಿತಿಗಳು ವರದಿಯಲ್ಲಿ ಇರದಂತೆ ಎಚ್ಚರವಹಿಸಬೇಕು ಎಂದು ಸಲಹೆ ನೀಡಿದರು.

ಮಣಿಪಾಲ ಇನ್‌ಸ್ಟಿಟ್ಯೂಟ್ ಆಫ್ ಕಮ್ಯುನಿಕೇಷನ್‌ ಹಾಗೂ ಮಾಧ್ಯಮ ಅಧ್ಯಯನ ಕೇಂದ್ರದ ಮುಖ್ಯಸ್ಥೆ ಡಾ.ಎಚ್‌.ಶುಭಾ ಮಾತನಾಡಿ, ಆತ್ಮಹತ್ಯೆ ಸುದ್ದಿಗಳನ್ನು ವರದಿ ಮಾಡುವಾಗ ಧನಾತ್ಮಕ ಅಂಶಗಳ ಕಡೆಗೆ ಹೆಚ್ಚು ಒತ್ತು ಹಾಗೂ ಜವಾಬ್ದಾರಿಯುತ ವರದಿಗಾರಿಕೆ ಮಾಡುವುದು ಬಹಳ ಮುಖ್ಯ. ಆತ್ಮಹತ್ಯೆಗೆ ಪ್ರಚೋದನೆ ನೀಡುವಂತಹ ಅಂಶಗಳು ವರದಿಯಲ್ಲಿ ಇರದಂತೆ ಎಚ್ಚರ ವಹಿಸಬೇಕು ಎಂದರು.

ಮನೋವೈದ್ಯ ವಿರೂಪಾಕ್ಷ ದೇವರಮನೆ ಪ್ರಾಸ್ತಾವಿಕವಾಗಿ ಮಾತನಾಡಿದರು. ಜಿಲ್ಲಾ ವಾರ್ತಾಧಿಕಾರಿ ಮಂಜುನಾಥ್, ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘದ ಅಧ್ಯಕ್ಷ ರಾಜೇಶ್ ಶೆಟ್ಟಿ ಅಲೆವೂರು ಅಧ್ಯಕ್ಷತೆ ವಹಿಸಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT