ಶನಿವಾರ, ಜನವರಿ 28, 2023
13 °C

ಸುರತ್ಕಲ್ ಟೋಲ್‌ ಕಾಂಗ್ರೆಸ್‌ ಪಾಪದ ಕೂಸು: ಸಚಿವ ಸುನಿಲ್ ಕುಮಾರ್

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಉಡುಪಿ: ಹೆಜಮಾಡಿ ಟೋಲ್‌ ಕೇಂದ್ರದಲ್ಲಿ ಉಡುಪಿ ನೋಂದಣಿ ಸಂಖ್ಯೆಯ ವಾಹನಗಳಿಂದ ಹಳೆಯ ಟೋಲ್‌ ದರ ಮಾತ್ರ ಸ್ವೀಕರಿಸಬೇಕು. ಹೆಜಮಾಡಿ ಟೋಲ್‌ ಕೇಂದ್ರದ ಮೇಲೆ ಬಿದ್ದಿರುವ ಸುರತ್ಕಲ್ ಟೋಲ್‌ ಹೊರೆಯನ್ನು ತಗ್ಗಿಸಬೇಕು ಎಂಬ ನಿರ್ಣಯವನ್ನು ಜಿಲ್ಲಾಧಿಕಾರಿ ಕಚೇರಿಯಲ್ಲಿ ಶನಿವಾರ ನಡೆದ ಸಭೆಯಲ್ಲಿ ತೆಗೆದುಕೊಳ್ಳಲಾಗಿದೆ ಎಂದು ಇಂಧನ, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಚಿವ ವಿ.ಸುನಿಲ್ ಕುಮಾರ್ ಹೇಳಿದರು.

ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರದ ಅವೈಜ್ಞಾನಿಕ ನಿರ್ಧಾರದಿಂದ ಸುರತ್ಕಲ್‌ ಟೋಲ್ ಹೊರೆ ಹೆಜಮಾಡಿ ಮೇಲೆ ಬಿದ್ದಿದೆ. ಜಿಲ್ಲೆಯ ಸಂಸದರು ಹಾಗೂ ಜನಪ್ರತಿನಿಧಿಗಳು ದೆಹಲಿ ಮಟ್ಟದಲ್ಲಿ ಸಮಸ್ಯೆಯನ್ನು ಚರ್ಚಿಸಿ, ಮನವರಿಕೆ ಮಾಡಿ ಬಗೆಹರಿಸಲಿದ್ದಾರೆ ಎಂದರು.

ಸುರತ್ಕಲ್‌ ಅಕ್ರಮ ಟೋಲ್ ಸಂಗ್ರಹ ಕೇಂದ್ರವಾಗಿರಲಿಲ್ಲ. 25 ಕಿ.ಮೀ ರಾಷ್ಟ್ರೀಯ ಹೆದ್ದಾರಿ ನಿರ್ಮಾಣ ಮಾಡಿದ್ದಕ್ಕೆ ಪ್ರತಿಯಾಗಿ 2035ರವರೆಗೆ ಸುರತ್ಕಲ್‌ ಟೋಲ್‌ ಕೇಂದ್ರದಲ್ಲಿ ಸುಂಕ ವಸೂಲಿ ಮಾಡಲು  2014–15ರಲ್ಲಿದ್ದ ಸರ್ಕಾರ ಅನುಮತಿ ನೀಡಿತ್ತು.

ಸುರತ್ಕಲ್‌ ಟೋಲ್‌ ಎಂಬ ಪಾಪದ ಕೂಸು ಹುಟ್ಟಿದ್ದು 2012–13ರಲ್ಲಿ. ಅಂದಿನ ಸರ್ಕಾರ ಮಾಡಿದ ತಪ್ಪಿಗೆ ಇಂದಿನ ಸರ್ಕಾರ ಬೆನ್ನು ತೋರಿಸುವುದಿಲ್ಲ. ಸಮಸ್ಯೆಯನ್ನು ಪರಿಹರಿಸಲು ಪ್ರಯತ್ನಿಸಲಾಗುವುದು ಎಂದರು.

ಕಾರ್ಕಳದಿಂದಲೇ ಸ್ಪರ್ಧೆ:

ಮುಂದಿನ ವಿಧಾನಸಭಾ ಚುನಾವಣೆಯಲ್ಲಿ ಕಾರ್ಕಳ ಕ್ಷೇತ್ರದಿಂದಲೇ ಸ್ಪರ್ಧಿಸುತ್ತೇನೆ. ಚುನಾವಣೆ ಹತ್ತಿರ ಬಂದಾಗ ಅಭಿವೃದ್ಧಿ ವಿಚಾರಗಳು ಹಿನ್ನಲೆಗೆ ಸರಿದು ಅಪಪ್ರಚಾರ ಸದ್ದು ಮಾಡುತ್ತವೆ. ಅಭಿವೃದ್ಧಿ ಬಗ್ಗೆ ಚರ್ಚಿಸದ ಕಾಂಗ್ರೆಸ್‌ ಪಕ್ಷ ಬಿಜೆಪಿ ಸರ್ಕಾರದ ವಿರುದ್ಧ ಹಾಗೂ ವೈಯಕ್ತಿಕ ಅಪಪ್ರಚಾರಕ್ಕಿಳಿದಿದೆ ಎಂದರು.

ರೌಡಿಗಳಿಗೆ ಸ್ವಾಗತ ಇಲ್ಲ:

ಅಪರಾಧ ಚಟುವಟಿಕೆಗಳಿಗೆ ಭಾಗಿಯಾದವರನ್ನು ಪಕ್ಷ ಸ್ವಾಗತಿಸುವುದಿಲ್ಲ, ವೈಭವಿಸುವುದೂ ಇಲ್ಲ. ಈ ವಿಚಾರದಲ್ಲಿ ತಪ್ಪುಗಳಾಗಿದ್ದರೆ ಸರಿಪಡಿಸಲಾಗುವುದು ಎಂದ ಸಚಿವ ಸುನಿಲ್ ಕುಮಾರ್, ಕಾಂಗ್ರೆಸ್‌ ಜನಮಾನಸದಿಂದ ದೂರವಾಗಿದೆ. ಚುನಾವಣೆಗಳಲ್ಲಿ ಸೋತಾಗ ಇವಿಎಂ ಸರಿ ಇಲ್ಲ ಎಂದಿತ್ತು. ಈಗ ಮತದಾರರ ಪಟ್ಟಿ ಸರಿ ಇಲ್ಲ ಎನ್ನುತ್ತಿದೆ. ಮುಂದೆ ಮತದಾರರೇ ಸರಿ ಇಲ್ಲ ಎಂದು ಹೇಳಬಹುದು ಎಂದು ವ್ಯಂಗ್ಯವಾಡಿದರು.

ಇಂಧನ ಇಲಾಖೆಯಲ್ಲಿ ಸುಧಾರಣಾ ಪ್ರಯತ್ನಗಳು ನಡೆಯುತ್ತಿದ್ದು ನಷ್ಟ ಸೋರಿಕೆ ಪತ್ತೆ ಹಚ್ಚಿ  ತಡೆಯಲಾಗಿದೆ. ಇಂಧನ ಶುಲ್ಕವನ್ನು 70 ಪೈಸೆಯಿಂದ ₹ 2ರವರೆಗೆ ಕಡಿಮೆ ಮಾಡುವಂತೆ ಹೆಸ್ಕಾಂ ಪ್ರಸ್ತಾವ ನೀಡಿದೆ. ದರ ಪರಿಷ್ಕರಣೆ ಸಂಬಂಧ ಕೆಇಆರ್‌ಸಿ ಅಂತಿಮ ನಿರ್ಧಾರ ತೆಗೆದುಕೊಳ್ಳಲಿದೆ ಎಂದು ಸಚಿವ ಸುನಿಲ್ ಕುಮಾರ್ ತಿಳಿಸಿದರು.

 

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು