ಸೋಮವಾರ, ಏಪ್ರಿಲ್ 6, 2020
19 °C
ರಸ್ತೆ ಕಾಮಗಾರಿ ವಿಚಾರಕ್ಕೆ ಸಂಬಂಧಿಸಿ ಅರಣ್ಯಾಧಿಕಾರಿ–ಶಾಸಕರ ಮಧ್ಯೆ ಜಟಾಪಟಿ

ಅರಣ್ಯಾಧಿಕಾರಿ ವಿರುದ್ಧ ಗುಡುಗಿದ ಶಾಸಕ ರಘುಪತಿ ಭಟ್‌

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

prajavani

ಉಡುಪಿ: ‘ಕಾನೂನು ಬಾಹಿರವಾಗಿ ಕೆಲಸ ಮಾಡಲು ಸಾಧ್ಯವಿಲ್ಲ’ ಎಂಬ ಹೆಬ್ರಿ ವಲಯ ಅರಣ್ಯಾಧಿಕಾರಿ ಮುನಿರಾಜ್‌ ಮಾತಿಗೆ ರೊಚ್ಚಿಗೆದ್ದ ಉಡುಪಿ ಶಾಸಕ ರಘುಪತಿ ಭಟ್‌, ಅಧಿಕಾರಿಯನ್ನು ತೀವ್ರ ತರಾಟೆಗೆ ತೆಗೆದುಕೊಂಡ ಘಟನೆ ಸೋಮವಾರ ತಾಲ್ಲೂಕು ಪಂಚಾಯಿತಿ ಸಾಮಾನ್ಯ ಸಭೆಯಲ್ಲಿ ನಡೆಯಿತು.

ಹೆಬ್ರಿ ವಲಯ ಅರಣ್ಯಾಧಿಕಾರಿ ಕಚೇರಿ ವ್ಯಾಪ್ತಿಯ ಉಡುಪಿ ವಿಧಾನಸಭಾ ಕ್ಷೇತ್ರಕ್ಕೆ ಒಳಪಡುವ ರಸ್ತೆ ವಿಚಾರಕ್ಕೆ ಸಂಬಂಧಿಸಿದಂತೆ ಅರಣ್ಯಾಧಿಕಾರಿ ಮುನಿರಾಜ್‌ ಅವರನ್ನು ಸಭೆಗೆ ಕರೆಸಲಾಗಿತ್ತು. ಮೀಸಲು ಅರಣ್ಯದಲ್ಲಿರುವ ರಸ್ತೆ ನಿರ್ಮಿಸಲು ಅನುಮತಿ ನೀಡದ ಹಿನ್ನೆಲೆಯಲ್ಲಿ ಮುನಿರಾಜ್‌ ವಿರುದ್ಧ ಶಾಸಕರು ತೀವ್ರ ವಾಗ್ದಾಳಿ ನಡೆಸಿದರು.

ಇದಕ್ಕೆ ಉತ್ತರಿಸಿದ ಮುನಿರಾಜ್‌, ‘ಕಾನೂನಿನಲ್ಲಿ ಅವಕಾಶ ಇರುವ ಕೆಲಸವನ್ನು ಮಾತ್ರ ಮಾಡುತ್ತೇನೆ. ತಪ್ಪು ಕಂಡುಬಂದರೆ ಮೇಲಾಧಿಕಾರಿಗಳಿಗೆ ದೂರು ನೀಡಬಹುದು. ಕಾನೂನು ಬಾಹಿರ ಕೆಲಸ ಮಾಡಲು ಸಾಧ್ಯವಿಲ್ಲ ಎಂದು’ ಸಭೆಗೆ ಏರುಧ್ವನಿಯಲ್ಲಿ ಹೇಳಿದರು

ಇದರಿಂದ ಕೆರಳಿದ ಶಾಸಕರು, ‘ಮೇಲಧಿಕಾರಿಗೆ ಹೇಳುವ ವಿಚಾರ ತಿಳಿದಿದೆ. ಬುದ್ಧಿವಾದ ಹೇಳಿಸಿಕೊಳ್ಳಬೇಕಾದ ಅವಶ್ಯಕತೆ ಇಲ್ಲ ಎಂದು ಏಕವಚನದಲ್ಲಿಯೇ ಸಂಬೋಧಿಸಿದರು.

‘ಆರ್‌ಎಫ್‌ಒ ಆಗಿ ಕೆಲಸ ಮಾಡಲು ಬಂದಿದ್ದು, ಅದರಂತೆ ಕೆಲಸ ಮಾಡಬೇಕು. ಕಾನೂನಿನಲ್ಲಿ ಇದ್ದದನ್ನು ಮಾಡುವುದ ಸರಿಯಲ್ಲ. ರಸ್ತೆ ವಿಸ್ತರಣೆ ಮಾಡುವುದಕ್ಕೂ ಅಡ್ಡಿಪಡಿಸುತ್ತೀರಾ ಅಂದರೆ ಏನು ಅರ್ಥ’ ಎಂದು ತೀವ್ರ ತರಾಟೆಗೆ ತೆಗೆದುಕೊಂಡರು.

ಶಾಸಕರ ಮಾತಿನಿಂದ ಸಿಟ್ಟಿಗೆದ್ದ ಅಧಿಕಾರಿ ಮುನಿರಾಜ್‌, ‘ನಾನು ಕೂಡ ಜವಾಬ್ದಾರಿಯುತ ಸ್ಥಾನದಲ್ಲಿರುವ ಅಧಿಕಾರಿಯಾಗಿದ್ದು, ಕಾನೂನು ಮೀರಿ ಕೆಲಸ ಮಾಡಲು ಸಾಧ್ಯವಿಲ್ಲ. ಅಲ್ಲಿರುವ ರಸ್ತೆಯೇ ಕಾನೂನು ಬಾಹಿರ’ ಎಂದರು.

‘ಕಾನೂನು ಬಾಹಿರ ರಸ್ತೆ ನಿರ್ಮಿಸಿದ್ದು ಯಾರ ತಪ್ಪು ಎಂದಾಗ, ನನ್ನದಲ್ಲ ಎಂದು ಪ್ರತ್ಯುತ್ತರ ನೀಡಿದರು. ಇದರಿಂದ ಮತ್ತಷ್ಟು ಆಕ್ರೋಶಗೊಂಡ ಶಾಸಕರು, ‘ಸರಿಯಾಗಿ ಮಾತನಾಡುವುದನ್ನು ಕಲಿಯಬೇಕು, ಉದ್ಧಟತನ ಪ್ರದರ್ಶಿಸುವುದು ಸರಿಯಲ್ಲ’ ಎಂದು ಅಧಿಕಾರಿಯನ್ನು ತರಾಟೆಗೆ ತೆಗೆದುಕೊಂಡರು.

ಅಧಿಕಾರಿಗಳ ಸಾಲಿನಲ್ಲಿ ಕುಳಿತಿದ್ದ ಮುನಿರಾಜ್ ನಡೆಗೆ ಆಕ್ಷೇಪ ವ್ಯಕ್ತಪಡಿಸಿದ ಶಾಸಕರು, ‘ಜನಪ್ರತಿನಿಧಿಯ ಸಾಲಿನಲ್ಲಿ ಕುಳಿತುಕೊಂಡದ್ದು ಏಕೆ, ನೀನೇನು ಜನಪ್ರತಿನಿಧಿಯೇ. ಇಲ್ಲಿ ಬಂದು (ಅಧಿಕಾರಿಗಳ ಸಾಲಿನಲ್ಲಿ) ಕುಳಿತುಕೊಳ್ಳಿ’ ಎಂದು ಅಧಿಕಾರಿಯ ವಿರುದ್ಧ ಗುಡುಗಿದರು.

‘ಸರ್ಕಾರಿ ಅಧಿಕಾರಿಗಳು ಅಧಿಕಾರಿಗಳಂತೆ ವರ್ತಿಸಬೇಕು. ಜನಪ್ರತಿನಿಧಿಗಳ ಜತೆ ಸರಿಯಾಗಿ ಹಾಗೂ ಸಭೆಯ ಘನತೆಗೆ ತಕ್ಕಂತೆ ಮಾತನಾಡಬೇಕು. ಎಲ್ಲಿಂದಲೋ ಬಂದು ಏನೇನೋ ಮಾತನಾಡುವುದಲ್ಲ. ಅಧಿಕಾರಿಗಳಿಗೆ ವಾದ ಮಾಡಲು ಇರುವ ಸಭೆ ಇದಲ್ಲ’ ಎಂದು ಶಾಸಕರು ಅಧಿಕಾರಿಯ ವಿರುದ್ಧ ಆಕ್ರೋಶ ಹೊರಹಾಕಿದರು.

ಅರಣ್ಯಾಧಿಕಾರಿ ವಿರುದ್ಧ ಆಕ್ರೋಶ: ಬ್ರಹ್ಮಾವರ ರಸ್ತೆ ವಿಸ್ತರಣೆ ವಿಚಾರಕ್ಕೆ ಸಂಬಂಧಿಸಿದಂತೆ ಮರಗಳ ತೆರವಿಗೆ ಅವಕಾಶ ನೀಡಿಲ್ಲ ಎಂಬ ಕಾರಣಕ್ಕೆ ಉಡುಪಿ ವಲಯ ಅರಣ್ಯಾಧಿಕಾರಿ ಕ್ಲಿಫರ್ಡ್‌ ಲೋಬೊ ಅವರನ್ನೂ ಶಾಸಕರು ತೀವ್ರ ತರಾಟೆಗೆ ತೆಗೆದುಕೊಂಡರು.

‘ವನಮಹೋತ್ಸವಕ್ಕೆ ನೆಟ್ಟ ಗಿಡಗಳನ್ನು ರಸ್ತೆ ವಿಸ್ತರಣೆಗೆ ಕಡಿಯಲು ಬಿಡದಿದ್ದರೆ, ಮುಂದೆ ವನಮಹೋತ್ಸವ ಆಚರಿಸಲು ಬಿಡುವುದಿಲ್ಲ. ರಸ್ತೆ ಅಭಿವೃದ್ಧಿಗೆ ಸರ್ಕಾರದಿಂದ ಕಾಡಿಬೇಡಿ ಅನುದಾನ ತರುತ್ತೇವೆ. ಡೀಮ್ಡ್‌ ಫಾರೆಸ್ಟ್‌ ನೆಪವೊಡ್ಡಿ ಅಭಿವೃದ್ಧಿಗೆ ಅನುಮತಿ ನೀಡುತ್ತಿಲ್ಲ.

ಡೀಮ್ಡ್‌ ಫಾರೆಸ್ಟ್‌ ಪದವೇ ಅರಣ್ಯ ಇಲಾಖೆಯ ಕಾನೂನಿನಲ್ಲಿ ಇಲ್ಲ. ಬೆಳಸಿರುವ ಅಕೇಶಿಯಾ ಮರಗಳನ್ನು ಮೊದಲು ತೆರವು ಮಾಡಿ. ರಸ್ತೆ ವಿಸ್ತರಣೆಗೆ ತಡೆಯಾಗುವ ಮರಗಳ ರಕ್ಷಣೆ ಮಾಡುವುದರಿಂದ ಊರು ಉದ್ಧಾರ ಮಾಡಲು ಆಗುವುದಿಲ್ಲ’ ಎಂದು ಆಕ್ರೋಶ ವ್ಯಕ್ತಪಡಿಸಿದರು.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಪ್ರತಿಕ್ರಿಯಿಸಿ (+)

ಈ ವಿಭಾಗದಿಂದ ಇನ್ನಷ್ಟು