ಪಡುಬಿದ್ರಿ: ಪಡುಬಿದ್ರಿ-ಕಾರ್ಕಳ ರಾಜ್ಯ ಹೆದ್ದಾರಿ 1ರ ಕಂಚಿನಡ್ಕ ಬಳಿ ಪ್ರಸ್ತಾವಿತ ಟೋಲ್ ನಿರ್ಮಾಣವಾದಲ್ಲಿ ಈ ಭಾಗದ ಜನರ ಮೇಲೆ ಹೊರೆಯಾಗಲಿದೆ. ಈ ನಿಟ್ಟಿನಲ್ಲಿ ರಾಜ್ಯ ಸರ್ಕಾರ ಈ ಪ್ರಸ್ತಾವವನ್ನು ಕೈಬಿಡಬೇಕು ಎಂದು ಮಾಜಿ ಸಚಿವ ವಿನಯಕುಮಾರ್ ಸೊರಕೆ ಆಗ್ರಹಿಸಿದರು.
ಟೋಲ್‌ಗೇಟ್ ಪ್ರಸ್ತಾವ ಕೈಬಿಡುವಂತೆ ಆಗ್ರಹಿಸಿ ಕಂಚಿನಡ್ಕದಲ್ಲಿ ಕಾಪು ಬ್ಲಾಕ್ ಕಾಂಗ್ರೆಸ್ ಸಮಿತಿಯ ವತಿಯಿಂದ ಬುಧವಾರ ಹಮ್ಮಿಕೊಂಡ ಬೃಹತ್ ಪ್ರತಿಭಟನಾ ಸಭೆಯನ್ನು ಉದ್ದೇಶಿಸಿ ಅವರು ಮಾತನಾಡಿದರು.
ಬಿಜೆಪಿ ಸರ್ಕಾರದ ಅವಧಿಯಲ್ಲಿ ರಸ್ತೆ ನಿರ್ಮಾಣವಾಗಿತ್ತು. ಅದೇ ಸಂದರ್ಭ ಈ ರಸ್ತೆಗೆ ಬೆಳ್ಮಣ್ಣು ಬಳಿ ಟೋಲ್ ಕೇಂದ್ರಕ್ಕೆ ಅದೇಶವಾಗಿತ್ತು. ಅಲ್ಲಿನ ಪ್ರತಿಭಟನೆ ಬಳಿಕ ಟೋಲ್ ಕೇಂದ್ರ ಕಂಚಿನಡ್ಕಕ್ಕೆ ಸ್ಥಳಾಂತರಗೊಂಡಿದೆ. ಇದರಲ್ಲಿ ಕಾಂಗ್ರೆಸ್ ಪಕ್ಷದ ಪಾತ್ರವೇ ಇಲ್ಲ. ಕಾಂಗ್ರೆಸ್ ಪಕ್ಷದ ಮೇಲೆ ತಪ್ಪು ಅಭಿಪ್ರಾಯ ಬಂದ ಹಿನ್ನೆಲೆಯಲ್ಲಿ ಅನಿವಾರ್ಯವಾಗಿ ಇಂದಿನ ಪ್ರತಿಭಟನೆ ಹಮ್ಮಿಕೊಳ್ಳಲಾಗಿದೆ ಎಂದು ನುಡಿದರು.
ಈ ಭಾಗದಲ್ಲಿ ಈಗಾಗಲೇ ಹೆಜಮಾಡಿ ಟೋಲ್ ಗೇಟ್ ಕಾರ್ಯಾಚರಿಸುತ್ತಿದ್ದು, ಐದು ಕಿಮೀ ವ್ಯಾಪ್ತಿಯಲ್ಲಿ ಮತ್ತೆ ಟೋಲ್ ನಿರ್ಮಾಣದಿಂದ ಈ ಭಾಗದ ಜನರಿಗೆ ಸಮಸ್ಯೆಯಾಗಲಿದೆ. ಈ ನಿಟ್ಟಿನಲ್ಲಿ ನ್ಯಾಯದ ಪರವಾಗಿ ಅಹಿಂಸಾತ್ಮಕವಾಗಿ ಜನರ ಹಕ್ಕಿಗಾಗಿ ಕಾಂಗ್ರೆಸ್ ಪಕ್ಷ ಹೋರಾಟವನ್ನು ನಡೆಸುತ್ತಿದೆ ಎಂದರು.
ಕಾಂಗ್ರೆಸ್ ಮುಖಂಡ ಮುನಿಯಾಲು ಉದಯಕುಮಾರ್ ಶೆಟ್ಟಿ ಮಾತನಾಡಿ, ಕಂಚಿನಡ್ಕ ಟೋಲ್ ಗೇಟ್ ವಿಚಾರದಲ್ಲಿ ಬಿಜೆಪಿಯು ಕಾಂಗ್ರೆಸ್ ಪಕ್ಷದ ವಿರುದ್ಧ ಗೂಬೆ ಕೂರಿಸುವ ಕೆಲಸ ಮಾಡಿರುವ ಕಾರಣ ಪ್ರತಿಭಟನೆ ಅನಿವಾರ್ಯವಾಗಿತ್ತು. ಜನರಿಗೆ ತೊಂದರೆಯಾಗುವುದಕ್ಕೆ ಕಾಂಗ್ರೆಸ್ ಪಕ್ಷದ ವಿರೋಧವಿದೆ. ಯಾವುದೇ ಕಾರಣಕ್ಕೂ ಇಲ್ಲಿ ಟೋಲ್ ಗೇಟ್ ನಿರ್ಮಾಣಕ್ಕೆ ಅವಕಾಶ ನೀಡುವುದಿಲ್ಲ ಎಂದರು.
ಕಾಂಗ್ರೆಸ್ ಮುಖಂಡ ದೇವಿಪ್ರಸಾದ್ ಶೆಟ್ಟಿ ಬೆಳಪು, ಶೇಖರ್ ಹೆಜ್ಮಾಡಿ ಪ್ರತಿಭಟಕಾರರನ್ನು ಉದ್ದೇಶಿಸಿ ಮಾತನಾಡಿದರು. ಉಡುಪಿ ಜಿಲ್ಲೆಯಾದ್ಯಂತ ಸಾವಿರಕ್ಕೂ ಅಧಿಕ ಪ್ರತಿಭಟನಾರರು ಭಾಗವಹಿಸಿದ್ದರು. ಕಂಚಿನಡ್ಕದಿಂದ ಕೆಲವು ಕಾರ್ಯಕರ್ತರು ಮೆರವಣಿಗೆ ಮೂಲಕ ಪ್ರತಿಭಟನಾ ಸ್ಥಳಕ್ಕೆ ಬಂದರು. ಟೋಲ್ ಗೇಟ್ ಬೇಡವೇ ಬೇಡ ಎಂದು ಒತ್ತಾಯಿಸಿದರು.
ಹಕ್ಕೊತ್ತಾಯ: ಪಡುಬಿದ್ರಿ-ಕಾರ್ಕಳ ರಾಜ್ಯ ಹೆದ್ದಾರಿ ಕಂಚಿನಡ್ಕದಲ್ಲಿ ನಿರ್ಮಾಣ ಮಾಡಲು ಉದ್ದೇಶಿಸಿರುವ ಟೋಲ್‌ಗೇಟ್ ಬಗ್ಗೆ ಪರಿಸರದ ನಾಗರಿಕರು ತೀವ್ರ ಆಕ್ಷೇಪ ವ್ಯಕ್ತಪಡಿಸಿದ್ದಾರೆ.
ಈ ಟೋಲ್ ಕೇಂದ್ರವನ್ನು ಸಾರ್ವಜನಿಕರ ಹಿತದೃಷ್ಟಿಯಿಂದ ಈ ಪರಿಸರದಲ್ಲಿ ಯಾವುದೇ ಕಾರಣಕ್ಕೂ ನಿರ್ಮಾಣ ಮಾಡಲು ಅವಕಾಶ ಕೊಡದೆ ಸೂಕ್ತ ಆದೇಶ ನೀಡಿ ಕ್ರಮಕೈಗೊಳ್ಳುವಂತೆ ಹಕ್ಕೊತ್ತಾಯ ಮಾಡಲಾಯಿತು.
ಪಕ್ಷದ ಮುಖಂಡರಾದ ಕಿಶನ್ ಹೆಗ್ಡೆ ಕೊಳ್ಕೆಬೈಲ್, ನವೀನ್‌ಚಂದ್ರ ಜೆ. ಶೆಟ್ಟಿ, ಹರೀಶ್ ಕಿಣಿ, ಭುಜಂಗ ಶೆಟ್ಟಿ, ಗುಲಾಂ ಮುಹಮ್ಮದ್, ಅಬ್ದುಲ್ ಅಝೀಜ್ ಹೆಜ್ಮಾಡಿ, ಶರ್ಫುದ್ದೀನ್ ಶೇಖ್, ವೈ. ಸುಕುಮಾರ್, ಶಾಂತಲತಾ ಶೆಟ್ಟಿ, ದೀಪಕ್ ಕೋಟ್ಯಾನ್ ಇನ್ನಾ, ರೋಲ್ಫಿ ಡಿಕೋಸ್ತಾ, ಶಿವಾಜಿ ಸುವರ್ಣ, ನವೀನ್ ಎನ್.ಶೆಟ್ಟಿ, ರಮೀಝ್ ಹುಸೈನ್, ಗಣೇಶ್ ಕೋಟ್ಯಾನ್, ದೀಪಕ್ ಎರ್ಮಾಳ್, ಕರುಣಾಕರ ಪೂಜಾರಿ ಮತ್ತಿತರರು ಉಪಸ್ಥಿತರಿದ್ದರು.
ಉಡುಪಿ ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಅಶೋಕ್ ಕುಮಾರ್ ಕೊಡವೂರು ಸ್ವಾಗತಿಸಿದರು. ರಾಜೇಶ್ ಶೇರಿಗಾರ್ ಕಾರ್ಯಕ್ರಮ ನಿರ್ವಹಿಸಿದರು. ರಮೇಶ್ ಕಾಂಚನ್ ವಂದಿಸಿದರು.
ಪ್ರಸ್ತಾವ ಕೈಬಿಡಲು ಮನವಿ
ಉಡುಪಿ ಜಿಲ್ಲಾ ಉಸ್ತುವಾರಿ ಸಚಿವರ ಜೊತೆಗೆ ಇಲ್ಲಿನ ಕಾಂಗ್ರೆಸ್ ನಿಯೋಗ ಮುಖ್ಯಮಂತ್ರಿ ಹಾಗೂ ಲೋಕೋಪಯೋಗಿ ಸಚಿವರನ್ನು ಗುರುವಾರ ಭೇಟಿ ಮಾಡಿ ಟೋಲ್ ಗೇಟ್ ಪ್ರಸ್ತಾವ ಕೈಬಿಡುವಂತೆ ಮನವಿ ಸಲ್ಲಿಸಲಾಗುವುದು ಎಂದು ವಿನಯಕುಮಾರ್ ಸೊರಕೆ ಹೇಳಿದರು. ಜನರ ಹಕ್ಕೊತ್ತಾಯದ ಕಾರಣ ಪ್ರತಿಭಟನೆ ನಡೆಸಿದ್ದೇವೆ. ಬೆಂಗಳೂರಿನಲ್ಲಿ ಸಂಬಂಧಪಟ್ಟವರನ್ನು ಭೇಟಿಯಾದ ಬಳಿಕ ಈ ಸಮಸ್ಯೆ ಪರಿಹಾರವಾಗಲಿದೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.
ಪ್ರತಿಭಟನೆಗೆ ಬಿಜೆಪಿ ಬೆಂಬಲ
ಟೋಲ್‌ಗೇಟ್ ರದ್ದುಪಡಿಸುವಂತೆ ಒತ್ತಾಯಿಸಿ ಇದೇ 24ರಂದು ನಡೆಯಲಿರುವ ಪ್ರತಿಭಟನೆಗೆ ಬಿಜೆಪಿ ಬೆಂಬಲ ನೀಡಲಿದೆ ಎಂದು ಬಿಜೆಪಿ ಕ್ಷೇತ್ರ ಘಟಕದ ಅಧ್ಯಕ್ಷ ಜಿತೇಂದ್ರ ಶೆಟ್ಟಿ ಉದ್ಯಾವರ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.