ಮಂಗಳವಾರ, ಸೆಪ್ಟೆಂಬರ್ 28, 2021
22 °C
ರಾಷ್ಟ್ರೀಯ ಹೆದ್ದಾರಿ ಅಂಚಿನ ಮರವಂತೆ-–ತ್ರಾಸಿ ಬೀಚ್

ವಿಹಾರಿಗಳಿಗೆ ಮುದ ನೀಡುವ ತೀರ

ಜನಾರ್ದನ ಎಸ್‌.ಮರವಂತೆ Updated:

ಅಕ್ಷರ ಗಾತ್ರ : | |

Prajavani

ಬೈಂದೂರು: ನದಿ-ಕಡಲಿನ ಸಾಮೀಪ್ಯ, ಅವುಗಳ ನಡುವೆ ಸಮುದ್ರಕ್ಕೆ ಸಮಾನಾಂತರವಾಗಿ ಸಾಗುವ ಹೆದ್ದಾರಿ, ಅದಕ್ಕೆ ಅಂಟಿಕೊಂಡಿರುವ ಮರವಂತೆ-ತ್ರಾಸಿ ಸಮುದ್ರತೀರ, ವಿಹಾರಿಗಳ ಮೆಚ್ಚಿನ ತಾಣ. ಇಲ್ಲಿ ಅಳವಡಿಸಿರುವ ಅಲೆ ತಡೆಗೋಡೆಗಳ ಮೇಲಿನ ನಡೆದಾಟ, ನಲಿದಾಟ ವಿಹಾರಿಗಳಿಗೆ ಇನ್ನಷ್ಟು ಮುದ ನೀಡುತ್ತಿದೆ.

ಇಲ್ಲಿನ ಇಕ್ಕಟ್ಟಾದ ಕಡಲ ದಂಡೆಯ ಮೇಲೆ ಸಾಗುವ 2.5 ಕಿ.ಮೀ ಉದ್ದದ ರಾಷ್ಟ್ರೀಯ ಹೆದ್ದಾರಿಗೆ ಸದಾ ಕಾಡುವ ಕಡಲ್ಕೊರೆತದ ಭೀತಿ ದೂರಮಾಡಲು ಎರಡು ವರ್ಷಗಳ ಹಿಂದೆ ಅನುಷ್ಠಾನಗೊಂಡ ಸುಸ್ಥಿರ ಕಡಲತೀರ ನಿರ್ವಹಣಾ ಯೋಜನೆಯ ಗ್ರಾಯಿನ್‌ಗಳು ಅಥವಾ ಅಲೆತಡೆಗೋಡೆಗಳು ಪ್ರವಾಸಿಗಳ ವಿಶೇಷ ಆಕರ್ಷಣೆ.

ಈ ಯೋಜನೆಯಲ್ಲಿ ಸಮುದ್ರದ ದಂಡೆಯುದ್ದಕ್ಕೆ ಕಲ್ಲುಗಳನ್ನು ಜೋಡಿಸುವ ಬದಲಿಗೆ, ದಂಡೆಗೆ ಲಂಬವಾಗಿ ಸಮುದ್ರದೊಳಕ್ಕೆ ಚಾಚಿರುವ ಗ್ರಾಯಿನ್ ಎಂದು ಕರೆಯಲಾಗುವ ಕಲ್ಲಿನ ನಿರ್ಮಾಣಗಳನ್ನು ರಚಿಸಲಾಗಿದೆ. ಇವು ತೀರ ಪ್ರದೇಶದ ಸವಕಳಿಯನ್ನು ತಡೆಯುತ್ತವೆ. ಅದರ ಜತೆಗೆ ಎರಡು ಗ್ರಾಯಿನ್‌ಗಳ ನಡುವೆ ಅಲೆಗಳ ಸಹಜ ಪ್ರಕ್ರಿಯೆಯ ಪರಿಣಾಮವಾಗಿ ಮರಳು ಶೇಖರಣೆಯಾಗಿ ಸಮುದ್ರ ದಂಡೆ ವಿಸ್ತರಿಸುತ್ತದೆ. ಅದರಿಂದ ದಂಡೆಯ ರಕ್ಷಣೆಯ ಜತೆಗೆ ಬೀಚ್‌ನ ಸೌಂದರ್ಯ ಹೆಚ್ಚುತ್ತದೆ ಎನ್ನುವುದು ಅವುಗಳ ನಿರ್ಮಾಣದ ಹಿಂದಿರುವ ಉದ್ದೇಶ. ಈಗ ಇದೇ ತಾಣ ಜನರಿಗೆ ಅಚ್ಚುಮೆಚ್ಚು ಆಗಿದೆ.

ಮಳೆ ಇಲ್ಲದಾಗ ಅಥವಾ ವಿರಳವಾದಾಗ ಇಲ್ಲಿಗೆಂದೇ ಬರುವ ಪ್ರವಾಸಿಗಳು ಮತ್ತು ಈ ಮಾರ್ಗವಾಗಿ ಸಾಗುವ ಪ್ರಯಾಣಿಕರು ಹಿಂದಿನಂತೆ ಸಮುದ್ರದ ಮರಳಿನಲ್ಲಿ ವಿಹರಿಸುವ ಬದಲು ತಡೆಗೋಡೆಯ ಮೇಲೆ ವಿಹರಿಸುತ್ತಾರೆ. ಮೂರು ದಿಕ್ಕುಗಳಲ್ಲಿ ಗೋಡೆಗೆ ಅಪ್ಪಳಿಸುವ ತೆರೆಗಳು, ಚಿಮ್ಮುವ ನೀರು, ನೊರೆಯ ಸಾಮೀಪ್ಯ
ದಿಂದ ಪುಳಕಿತರಾಗುತ್ತಾರೆ. ಸೆಲ್ಫಿ
ತೆಗೆದುಕೊಂಡು ವಿಶಿಷ್ಟ ಅನುಭವ
ದೊಂದಿಗೆ ಮುಂದೆ ಸಾಗುತ್ತಾರೆ.

ಆದರೆ, ಈ ಗೋಡೆಗಳ ಮೇಲೆ ನಲಿಯುವಾಗ ಪ್ರವಾಸಿಗಳು ಮೈಮರೆಯುವಂತಿಲ್ಲ. ಗೋಡೆಯ ಇಳಿಜಾರಿನಲ್ಲಿ ನಡೆಯುವುದಾಗಲಿ, ನೀರಿಗೆ ಇಳಿಯುವುದಾಗಲಿ ಕೂಡದು. ಗೋಡೆಯ ಸುತ್ತ ಸಮುದ್ರ ಹೆಚ್ಚು ಆಳವಾಗಿರುವುದರಿಂದ ಉರುಳಿದರೆ ಅಪಾಯ ಖಚಿತ.

 

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು