ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ವಿದ್ಯಾರ್ಥಿಗಳ ಸುಲಿಗೆ ಪ್ರಕರಣ: ಇಬ್ಬರ ಬಂಧನ

ಆರೋಪಿಗಳು ಶಿವಮೊಗ್ಗದವರು, ಮೂರನೇ ಆರೋಪಿಗೆ ಶೋಧ: ಎಸ್‌ಪಿ ವಿಷ್ಣುವರ್ಧನ್‌
Last Updated 7 ಫೆಬ್ರುವರಿ 2021, 13:58 IST
ಅಕ್ಷರ ಗಾತ್ರ

ಉಡುಪಿ: ಈಚೆಗೆ ಮಣಿಪಾಲದ ಕೆಎಫ್‌ಸಿ ಬಳಿ ರಾತ್ರಿ ವಿದ್ಯಾರ್ಥಿಗಳಿಗೆ ಚಾಕು ತೋರಿಸಿ ಜೀವ ಬೆದರಿಕೆ ಹಾಕಿ ವಾಚ್‌, ನಗದು ಸುಲಿಗೆ ಮಾಡಿದ್ದ ಇಬ್ಬರು ಆರೋಪಿಗಳನ್ನು ಮಣಿಪಾಲ ಠಾಣೆ ಪೊಲೀಸರು ಬಂಧಿಸಿದ್ದಾರೆ.

ಶಿವಮೊಗ್ಗ ಟಿಪ್ಪು ನಗರದ ಆಸೀಫ್‌ (24) ಹಾಗೂ ಬೈಪಾಸ್‌ ರಸ್ತೆಯ ಸಮೀಪ ವಾಸವಿರುವ ದಸ್ತಗೀರ್ ಬೇಗ್ (24) ಬಂಧಿತರು. ಮತ್ತೊಬ್ಬ ಆರೋಪಿಗೆ ಶೋಧ ಮುಂದುವರಿದಿದೆ ಎಂದು ಎಸ್‌ಪಿ ವಿಷ್ಣುವರ್ಧನ್‌ ಭಾನುವಾರ ಸುದ್ದಿಗೋಷ್ಠಿಯಲ್ಲಿ ಮಾಹಿತಿ ನೀಡಿದರು.

ಆರೋಪಿಗಳ ಮಾಹಿತಿ ಮೇರೆಗೆ ದಾಳಿ ನಡೆಸಿದ ಪೊಲೀಸರು ಭಾನುವಾರ ಬೆಳಿಗ್ಗೆ ಮಣಿಪಾಲದಲ್ಲಿ ಬಂಧಿಸಿದ್ದಾರೆ. ಕೃತ್ಯಕ್ಕೆ ಬಳಸಿದ್ದ ಕಾರು, ಚಾಕು, ಮೊಬೈಲ್, ನಗದು ವಶಪಡಿಸಿಕೊಳ್ಳಲಾಗಿದೆ. ಆರೋಪಿಗಳನ್ನು ನ್ಯಾಯಾಧೀಶರ ಮುಂದೆ ಹಾಜರು ಪಡಿಸಿ ಹೆಚ್ಚಿನ ವಿಚಾರಣೆಗೆ ವಶಕ್ಕೆ ಪಡೆಯಲಾಗುವುದು. ಪ್ರಕರಣದಲ್ಲಿ ಭಾಗಿಯಾರುವ ಎಲ್ಲರನ್ನು ಬಂಧಿಸಲಾಗುವುದು. ಆಸೀಪ್ ವಿರುದ್ಧ ಶಿವಮೊಗ್ಗದ ಹಲವು ಠಾಣೆಗಳಲ್ಲಿ ಪ್ರಕರಣಗಳು ದಾಖಲಾಗಿವೆ. ದಸ್ತಗಿರ್ ಅಪರಾಧ ಹಿನ್ನೆಲೆಯ ಕುರಿತು ಮಾಹಿತಿ ಸಂಗ್ರಹಿಸಲಾಗುತ್ತಿದೆ ಎಂದು ಎಸ್‌ಪಿ ತಿಳಿಸಿದರು.

ಘಟನೆ ಹಿನ್ನೆಲೆ:

ಜ.31ರಂದು ರಾತ್ರಿ 12.15ರ ಸಮಯದಲ್ಲಿ ಮಣಿಪಾಲದ ಕೆಎಫ್‌ಸಿ ಬಳಿ ವಿದ್ಯಾರ್ಥಿ ಹಾಗೂ ವಿದ್ಯಾರ್ಥಿನಿ ಮಾತನಾಡುವಾಗ ಸಿಗರೇಟ್ ಕೇಳುವ ನೆಪದಲ್ಲಿ ವಿದ್ಯಾರ್ಥಿನಿಯ ಬಳಿ ಬಂದ ಆರೋಪಿಗಳು ಅವಳ ಕುತ್ತಿಗೆಗೆ ಚಾಕು ಹಿಡಿದು ಬೆದರಿಸಿ 2 ಮೊಬೈಲ್‌ ₹ 250 ನಗದು ಸುಲಿಗೆ ಮಾಡಿ ಪರಾರಿಯಾಗಿದ್ದರು.

ಆರೋಪಿಗಳ ಪತ್ತೆಗೆ ಹೆಚ್ಚುವರಿ ಎಸ್‌ಪಿ ಕುಮಾರಚಂದ್ರ, ಡಿವೈಎಸ್‌ಪಿ ಸುಧಾಕರ ನಾಯಕ್ ಉಸ್ತುವಾರಿಯಲ್ಲಿ ಮಣಿಪಾಲ ಇನ್‌ಸ್ಪೆಕ್ಟರ್ ಮಂಜುನಾಥ ಅವರ ನೇತೃತ್ವದಲ್ಲಿ ತಂಡ ರಚಿಸಲಾಗಿತ್ತು. ಆರೋಪಿಗಳ ಬೆನ್ನುಬಿದ್ದ ತಂಡ ಬಂಧಿಸುವಲ್ಲಿ ಯಶಸ್ವಿಯಾಗಿದೆ ಎಂದು ಎಸ್‌ಪಿ ವಿಷ್ಣುವರ್ಧನ್ ತಿಳಿಸಿದರು.

ಮಣಿಪಾಲ ಪಿಎಸ್‌ಐ ರಾಜ್‌ಶೇಖರ ವಂದಲಿ, ನಿರಂಜನ್‌ ಗೌಡ, ದೇವರಾಜ ಬಿರಾದರ್‌, ಎಎಸ್‌ಐ ಶೈಲೇಶ್‌ ಕುಮಾರ್‌ , ಎಚ್‌ಸಿ ಮಹೇಶ್‌, ಅಬ್ದುಲ್ ರಜಾಕ್‌, ಥಾಮ್ಸನ್‌, ಪ್ರಸನ್ನ, ವಿಶ್ವಜಿತ್‌, ಸಿಬ್ಬಂದಿ ಮೊಹಮ್ಮದ್ ರಫೀಕ್, ಆದರ್ಶ ನಾಯ್ಕ ದಿನೇಶ್‌ ಕಾರ್ಯಾಚರಣೆಯಲ್ಲಿದ್ದರು. ಮಣಿಪಾಲ ವ್ಯಾಪ್ತಿಯಲ್ಲಿ ರಾತ್ರಿವೇಳೆ ಸಂಚರಿಸುವಾಗ ವಿದ್ಯಾರ್ಥಿಗಳು ಎಚ್ಚರದಿಂದ ಇರಬೇಕು ಎಂದು ಎಸ್‌ಪಿ ತಿಳಿಸಿದರು.

ಬೆದರಿಕೆ: ಆರೋಪಿ ಬಂಧನ

ಮಣಿಪಾಲದ ಇಂಡಿಯನ್ ನರ್ಸರಿಯಲ್ಲಿ ಕೆಲಸ ಮಾಡುತ್ತಿದ್ದ ಬಾಗಲಕೋಟೆಯ ಬಸವರಾಜ್ ಎಂಬಾತ ಈಚೆಗೆ ನರ್ಸರಿ ಮಾಲೀಕದಿಲೀಪ್ ಕುಮಾರ್ ರೈ ಅವರಿಗೆ 10,000 ನೀಡುವಂತೆ ಬೆದರಿಕೆ ಹಾಕಿ ಪರಾರಿಯಾಗಿದ್ದ. ಈ ಪ್ರಕರಣದಲ್ಲಿ ಬಾಗಲಕೋಟೆಯಲ್ಲಿ ತಲೆಮರೆಸಿಕೊಂಡಿದ್ದ ಆರೋಪಿ ಬಸವರಾಜ್ (25)ನನ್ನು ಮಣಿಪಾಲ ಪೊಲೀಸರು ಬಂಧಿಸಿದ್ದಾರೆ ಎಂದು ಎಸ್‌ಪಿ ತಿಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT