ಶನಿವಾರ, 27 ಜುಲೈ 2024
×
ADVERTISEMENT
ಈ ಕ್ಷಣ :
ADVERTISEMENT

ಸಂಕೋಲೆಗಳಿಂದ ಹೊರಬರಲು ಹೋರಾಟವೇ ಅಸ್ತ್ರ

ಮಹಿಳಾ ಚೈತನ್ಯ ದಿನ: ಹಕ್ಕೊತ್ತಾಯ ಜಾಥಾ, ಸಾರ್ವಜನಿಕ ಸಮಾವೇಶದಲ್ಲಿ ಹೋರಾಟಗಾರ್ತಿ ವೆನೆಲಾ ಗದ್ದರ್‌
Published 9 ಮಾರ್ಚ್ 2024, 14:51 IST
Last Updated 9 ಮಾರ್ಚ್ 2024, 14:51 IST
ಅಕ್ಷರ ಗಾತ್ರ

ಉಡುಪಿ: ಶಿಕ್ಷಣ, ಸಂಘಟನೆ ಹಾಗೂ ಹೋರಾಟ ಎಂಬ ಅಸ್ತ್ರಗಳನ್ನು ಬಳಸಿಕೊಂಡು ಮಹಿಳೆ ಸಂಕೋಲೆಗಳಿಂದ ಹೊರಬರಬೇಕು ಎಂದು ಹೋರಾಟಗಾರ್ತಿ, ಹೈದರಾಬಾದ್‌ನ ವೆನೆಲಾ ಗದ್ದರ್‌ ಕರೆ ನೀಡಿದರು.

ಮಹಿಳಾ ಚೈತನ್ಯ ದಿನದ ಅಂಗವಾಗಿ ರಾಜ್ಯ ಮಹಿಳಾ ದೌರ್ಜನ್ಯ ವಿರೋಧಿ ಒಕ್ಕೂಟ ಮಿಷನ್ ಕಾಂಪೌಂಡ್‌ನ ಬಿ.ಎಂ.ಎಂ ಸಭಾಂಗಣದಲ್ಲಿ ಹಮ್ಮಿಕೊಂಡಿದ್ದ ಹಕ್ಕೊತ್ತಾಯ ಜಾಥಾ ಹಾಗೂ ಸಾರ್ವಜನಿಕ ಸಮಾವೇಶದಲ್ಲಿ ಮಾತನಾಡಿದ ಅವರು, ದೇಶ ಮಾತ್ರವಲ್ಲ ವಿಶ್ವದೆಲ್ಲೆಡೆ ಮಹಿಳೆ ಎರಡನೇ ದರ್ಜೆಯ ಪ್ರಜೆಯಾಗಿ ಬದುಕುತ್ತಿದ್ದಾಳೆ. ಲಿಂಗ ತಾರತಮ್ಯ, ಅಸಮಾನತೆ, ಮಾನಸಿಕ, ದೈಹಿಕ ಶೋಷಣೆಗೆ ಒಳಗಾಗುತ್ತಿದ್ದಾಳೆ. ಮಹಿಳೆಯರು ಶೋಷಣೆ, ದೌರ್ಜನ್ಯ, ಲಿಂಗ ತಾರತಮ್ಯದ ವಿರುದ್ಧ ಸಂಘಟಿತ ಹೋರಾಟ ಮಾಡಬೇಕು. ರಾಜಕೀಯ ಹಾಗೂ ಸಂವಿಧಾನಾತ್ಮಕ ಅಧಿಕಾರಗಳನ್ನು ಪಡೆದುಕೊಂಡರೆ ಮಾತ್ರ ಸಮಸ್ಯೆಗಳಿಗೆ ಪರಿಹಾರ ಸಿಗುತ್ತದೆ. ಮಹಿಳೆ ಶಸ್ತ್ರಾಸ್ತ್ರಗಳಿಗಿಂತ ಶಕ್ತಿವಂತೆ ಎಂಬ ಸತ್ಯ ಅರಿವಿಗೆ ಬರಬೇಕು ಎಂದು ಸಲಹೆ ನೀಡಿದರು.

ಲಿಂಗದ ಆಧಾರದ ಮೇಲೆ ಎಲ್ಲ ಕ್ಷೇತ್ರಗಳಲ್ಲಿ ಮಹಿಳೆಯರಿಗೆ ಹಕ್ಕುಗಳನ್ನು ನಿರಾಕರಿಸುತ್ತಿರುವುದು ಖಂಡನೀಯ. ಮಹಿಳೆ ಲಿಂಗ ಅಸಮಾನತೆ ವಿರುದ್ಧ ದನಿ ಎತ್ತಬೇಕು, ಮಹಿಳೆಯರು ಹೆಚ್ಚಿನ ಸಂಖ್ಯೆಯಲ್ಲಿ ರಾಜಕೀಯ ಕ್ಷೇತ್ರವನ್ನು ಪ್ರವೇಶಿಸುವ ಮೂಲಕ ರಾಜಕೀಯ ಸಮಾನತೆ ಪಡೆದುಕೊಳ್ಳಬೇಕು ಎಂದು ಕರೆ ನೀಡಿದರು.

ಅಧ್ಯಕ್ಷತೆ ವಹಿಸಿದ್ದ ವೆರೊನಿಕಾ ಕರ್ನೆಲಿಯೊ ಮಾತನಾಡಿ, ಹೆಣ್ಣು ಭಾವನಾತ್ಮಕವಾಗಿ ಪೂಜ್ಯನೀಯಳಾಗಿ‌ದ್ದರೂ, ಸಮಾಜದಲ್ಲಿ ಅತಿ ಹೆಚ್ಚು ಶೋಷಣೆಗೆ ಒಳಗಾಗಿರುವುದು ದುರಂತ. ದೇಶಕ್ಕೆ ಸ್ವಾತಂತ್ರ್ಯ ಬಂದು 75 ವರ್ಷ ಕಳೆದರೂ ಮಹಿಳೆ ಸ್ವತಂತ್ರವಾಗಿ ಬದುಕಲಾಗದಂತಹ ಪರಿಸ್ಥಿತಿ ಇದೆ. ಮಹಿಳೆಯರ ಮೇಲೆ ನಡೆಯುತ್ತಿರುವ ದೌರ್ಜನ್ಯ, ಅತ್ಯಾಚಾರ, ಕೊಲೆಗಳನ್ನು ಕಂಡಾಗ ಸಮಾಜ ಎತ್ತ ಸಾಗುತ್ತಿದೆ ಎಂಬ ಭಯ ಕಾಡುತ್ತಿದೆ ಎಂದರು.

ದಲಿತ ಮುಖಂಡ ಸುಂದರ್ ಮಾಸ್ತರ್‌ ಸ್ವಾಗತಿಸಿದರು. ಸಾಮಾಜಿಕ ಕಾರ್ಯಕರ್ತೆ ಗೌರಿ, ಗ್ರೇಸಿ  ಕುವೆಲ್ಲೊ, ಅಬೂಬಕ್ಕರ್, ಸರೋಜಾ, ರೆಹಾನಾ ಸುಲ್ತಾನಾ, ಮಂಜುನಾಥ್ ಗಿಳಿಯಾರು, ಸರಳಾ ಕಾಂಚನ್‌, ಅಬೂಬಕ್ಕರ್ ನೇಜಾರ್‌, ನಾಗಮ್ಮ ಬೈಂದೂರು, ಸಂತೋಷ್ ಕರ್ನೆಲಿಯೋ, ಹುಸೇನ್ ಕೋಡಿಬೆಂಗ್ರೆ, ಸುಶೀಲಾ ನಾಡ, ಸಂತೋಷ್ ಬಲ್ಲಾಳ್‌, ಮೆಬೆಲ್‌ ಅಲ್ಮೆಡಾ, ಸಂಜೀವ್‌ ವಂಡ್ಸೆ, ಪ್ರಶಾಂತ್ ಜತ್ತನ್ನ, ಶಾಂತಿ ನರೋನ್ಹಾ, ರಾಬರ್ಟ್‌ ಮಿನೇಜಸ್‌, ದೇವಿಕಾ ನಾಗೇಶ್‌, ಸರಸ್ವತಿ, ಮಲ್ಲ ಕುಂಬಾರ, ರಶ್ಮೀ, ಸಲೀಂ ಜಾನ್‌, ಸರೋಜಾ ಎಂ.ಎನ್‌, ಪ್ರಭಾವತಿ, ಪೂರ್ಣಿಮಾ, ಶಾಂತಾ, ಮಲ್ಲಿಕಾ ಬಸವರಾಜು, ವಾಣಿ ಪೆರೋಡಿ ಇದ್ದರು.

ಮಹಿಳಾ ಚೈತನ್ಯ ದಿನದ ಅಂಗವಾಗಿ ಹಮ್ಮಿಕೊಂಡಿದ್ದ ಹಕ್ಕೊತ್ತಾಯ ಜಾಥಾದಲ್ಲಿ ಭಾಗವಹಿಸಿದ್ದ ಮಹಿಳೆಯರು
ಮಹಿಳಾ ಚೈತನ್ಯ ದಿನದ ಅಂಗವಾಗಿ ಹಮ್ಮಿಕೊಂಡಿದ್ದ ಹಕ್ಕೊತ್ತಾಯ ಜಾಥಾದಲ್ಲಿ ಭಾಗವಹಿಸಿದ್ದ ಮಹಿಳೆಯರು

‘ಜಾಗೃತಿ ಮೂಡಿಸುತ್ತಿರುವ ಒಕ್ಕೂಟ’

2012ರಲ್ಲಿ ಮಂಗಳೂರು ಅನೈತಿಕ ಪೊಲೀಸ್‌ ಗಿರಿಗೆ ತುತ್ತಾಗಿ ಹಿಂದುತ್ವದ ಅಮಲೇರಿಸಿಕೊಂಡಿದ್ದ ಸಂದರ್ಭದಲ್ಲಿ ಕರ್ನಾಟಕ ಮಹಿಳಾ ದೌರ್ಜನ್ಯ ವಿರೋಧಿ ಒಕ್ಕೂಟ ಹುಟ್ಟಿಕೊಂಡು ಸರ್ವಧರ್ಮೀಯರನ್ನು ಒಟ್ಟಾಗಿಸಿಕೊಂಡು ಸಮಾಜದಲ್ಲಿ ಶಾಂತಿ ಸೌಹಾರ್ದ ನೆಲೆಗೊಳ್ಳಲು ಹಲವು ಕಾರ್ಯಕ್ರಮ ಹೋರಾಟಗಳನ್ನು ರೂಪಿಸಿತು. ನಂತರ ಒಕ್ಕೂಟದ ಕಾರ್ಯಗಳು ಹೋರಾಟಗಳು ರಾಜ್ಯದ ಮೂಲೆಗಳಿಗೆ ವಿಸ್ತರಿಸಿತು. ಹೆಣ್ಣಿನ ಮೇಲಿನ ದೌರ್ಜನ್ಯದ ವಿರುದ್ಧ  ಒಕ್ಕೂಟ ಕಿವಿಯಾಯಿತು. ಪ್ರತಿವರ್ಷ ಮಹಿಳಾ ದಿನಾಚರಣೆಯ ಸಂದರ್ಭದಲ್ಲಿ ರಾಜ್ಯದೆಲ್ಲೆಡೆ ಹಕ್ಕೊತ್ತಾಯ ಜಾಥಾ ಸಮಾವೇಶ ಸಂವಾದ ವಿಚಾರಗೋಷ್ಠಿಗಳನ್ನು ಆಯೋಜಿಸಿ ಸಮಾಜದಲ್ಲಿ ಜಾಗೃತಿ ಮೂಡಿಸಲಾಗುತ್ತಿದೆ. ಆಯಾ ಜಿಲ್ಲೆಯ ಸ್ಥಳೀಯ ವಿಚಾರಗಳನ್ನು ಮುನ್ನಲೆಗೆ ತಂದು ಅರಿವು ಮೂಡಿಸಲಾಗುತ್ತಿದೆ ಎಂದು ರಾಜ್ಯ ಮಹಿಳಾ ದೌರ್ಜನ್ಯ ವಿರೋಧಿ ಒಕ್ಕೂಟದ ಗೌರಿ ವಿವರಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT