ಗುರುವಾರ, 10 ಅಕ್ಟೋಬರ್ 2024
×
ADVERTISEMENT
ಈ ಕ್ಷಣ :
ADVERTISEMENT

ಉಡುಪಿ | ‘ಶೋಷಣೆ ತಡೆಗೆ ಕಾರ್ಯಪ್ರವೃತ್ತರಾಗಿ’

ಅಧಿಕಾರಿಗಳಿಗೆ ನ್ಯಾಯಾಧೀಶ ಕಿರಣ್ ಎಸ್. ಗಂಗಣ್ಣವರ್ ಸಲಹೆ
Published : 11 ಸೆಪ್ಟೆಂಬರ್ 2024, 5:06 IST
Last Updated : 11 ಸೆಪ್ಟೆಂಬರ್ 2024, 5:06 IST
ಫಾಲೋ ಮಾಡಿ
Comments

ಉಡುಪಿ: ಮಕ್ಕಳ ಮೇಲಿನ ಶೋಷಣೆ, ದೌರ್ಜನ್ಯಗಳನ್ನು ತಡೆಗಟ್ಟುವ ನಿಟ್ಟಿನಲ್ಲಿ ಸರ್ಕಾರ ಹಲವಾರು ಕಾನೂನು ಹಾಗೂ ಕಾಯಿದೆಗಳನ್ನು ಜಾರಿಗೆ ತಂದಿದ್ದು, ಅವುಗಳನ್ನು ಅಧಿಕಾರಿಗಳು ಪರಿಣಾಮಕಾರಿಯಾಗಿ ಅನುಷ್ಠಾನಗೊಳಿಸಬೇಕು ಎಂದು ಪ್ರಧಾನ ಜಿಲ್ಲಾ ಮತ್ತು ಸೆಷನ್ಸ್ ನ್ಯಾಯಾಧೀಶ ಕಿರಣ್ ಎಸ್. ಗಂಗಣ್ಣವರ್ ಹೇಳಿದರು.

ಮಣಿಪಾಲ ರಜತಾದ್ರಿಯ ಅಟಲ್ ಬಿಹಾರಿ ವಾಜಪೇಯಿ ಸಭಾಂಗಣದಲ್ಲಿ ಜಿಲ್ಲಾಡಳಿತ, ಜಿಲ್ಲಾ ಪಂಚಾಯಿತಿ, ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರ, ಪೊಲೀಸ್ ಇಲಾಖೆ, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಹಾಗೂ ಜಿಲ್ಲಾ ಮಕ್ಕಳ ರಕ್ಷಣಾ ಘಟಕದ ಸಂಯುಕ್ತ ಆಶ್ರಯದಲ್ಲಿ ಮಂಗಳವಾರ ಹಮ್ಮಿಕೊಂಡಿದ್ದ ಒಂದು ದಿನದ ತರಬೇತುದಾರರ ತರಬೇತಿ ಕಾರ್ಯಾಗಾರವನ್ನು ಉದ್ಘಾಟಿಸಿ ಅವರು ಮಾತನಾಡಿದರು.

ತರಬೇತುದಾರರು ಕೆಲಸದ ವೇಳೆ ಎದುರಿಸುವ ಸವಾಲುಗಳನ್ನು ಮುಕ್ತವಾಗಿ ಹಂಚಿಕೊಂಡು ಪರಿಹಾರ ಕಂಡುಕೊಳ್ಳಿ ಎಂದ ಅವರು ಸೇವೆಯ ಉತ್ಕೃಷ್ಟತೆಯನ್ನು ಹೆಚ್ಚಿಸಿಕೊಳ್ಳುವಲ್ಲಿ ಇದೊಂದು ಉತ್ತಮ ವೇದಿಕೆಯಾಗಿದೆ ಎಂದರು.

ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಡಾ. ಅರುಣ್ ಕೆ. ಮಾತನಾಡಿ, ಮಕ್ಕಳ ರಕ್ಷಣಾ ನೀತಿಯಲ್ಲಿ ಮಕ್ಕಳ ಆರೈಕೆ ಮತ್ತು ಪುನರ್ವಸತಿಗೆ ಒತ್ತು ನೀಡಿ ಕಾಯಿದೆಗಳನ್ನು ಜಾರಿಗೆ ತರಲಾಗಿದೆ ಎಂದರು.

ಜಿಲ್ಲಾಧಿಕಾರಿ ಕೆ.ವಿದ್ಯಾಕುಮಾರಿ ಮಾತನಾಡಿ, ಮಗುವಿನ ಬೆಳವಣಿಗೆಯಲ್ಲಿ ಸಾಮಾಜೀಕರಣ ಪ್ರಕ್ರಿಯೆಯು ಮಹತ್ತರ ಪಾತ್ರ ವಹಿಸುತ್ತದೆ. ಅದು ಮಗುವನ್ನು ಉತ್ತಮ ವ್ಯಕ್ತಿಯಾಗಿ ಅಥವಾ ಸಮಾಜಘಾತುಕ ವ್ಯಕ್ತಿಯಾಗಿ ರೂಪಿಸುವ ಸಾಧ್ಯತೆಗಳಿದ್ದು, ಅಂತಹ ಯಾವುದೇ ಅಹಿತಕರ ಘಟನೆಗಳು ನಡೆಯದಂತೆ ಪೋಷಕರು ಹಾಗೂ ಸಮಾಜ ಎಚ್ಚರ ವಹಿಸಬೇಕು ಎಂದರು.

ಹಿರಿಯ ಸಿವಿಲ್ ನ್ಯಾಯಾಧೀಶ ಹಾಗೂ ಜಿಲ್ಲಾ ಕಾನೂನು ಸೇವಾ ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿ ಎಂ. ಪುರುಷೋತ್ತಮ, 2ನೇ ಹೆಚ್ಚುವರಿ ಸಿವಿಲ್ ನ್ಯಾಯಾಧೀಶ ಮತ್ತು ಹೆಚ್ಚುವರಿ ಮುಖ್ಯ ನ್ಯಾಯಿಕ ದಂಡಾಧಿಕಾರಿ ಹಾಗೂ ಜಿಲ್ಲಾ ಬಾಲನ್ಯಾಯ ಮಂಡಳಿಯ ಪ್ರಧಾನ ನ್ಯಾಯಾಧೀಶ ಮನು ಪಟೇಲ್ ಬಿ.ವೈ., ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯ ಉಪನಿರ್ದೇಶಕಿ ಶ್ಯಾಮಲಾ ಸಿ.ಕೆ., ವಿವಿಧ ಜಿಲ್ಲಾ ಹಾಗೂ ತಾಲ್ಲೂಕು ಮಟ್ಟದ ಅಧಿಕಾರಿಗಳು, ಪಂಚಾಯಿತಿ ಅಭಿವೃದ್ಧಿ ಅಧಿಕಾರಿಗಳು, ಗ್ರಾಮ ಲೆಕ್ಕಿಗರು, ಪೊಲೀಸರು, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯ ಮೇಲ್ವಿಚಾರಕಿಯರು ಉಪಸ್ಥಿತರಿದ್ದರು.

ಯುನಿಸೆಫ್ ಕೊಪ್ಪಳ ಮಕ್ಕಳ ಸಂರಕ್ಷಣಾ ಯೋಜನೆಯ ಪ್ರಾದೇಶಿಕ ಸಂಯೋಜಕ ಡಾ. ರಾಘವೇಂದ್ರ ಭಟ್ ಮತ್ತು ಬೆಂಗಳೂರು ಕ್ರೈಸ್ಟ್ ಯುನಿವರ್ಸಿಟಿಯ ಮನಃಶಾಸ್ತ್ರ ವಿಭಾಗದ ಸಹಾಯಕ ಭೋಧಕಿ ವೀಣಾಶ್ರೀ ಸಂಪನ್ಮೂಲ ವ್ಯಕ್ತಿಗಳಾಗಿ ಭಾಗವಹಿಸಿ, ಮಕ್ಕಳ ರಕ್ಷಣೆಯ ಕಾನೂನು, ಸರ್ಕಾರದಿಂದ ಸಿಗುವ ಸೌಲಭ್ಯಗಳ ಕುರಿತು ಮಾಹಿತಿ ನೀಡಿದರು.

ಜಿಲ್ಲಾ ಮಕ್ಕಳ ರಕ್ಷಣಾ ಘಟಕದ ಮಕ್ಕಳ ರಕ್ಷಣಾಧಿಕಾರಿ ನಾಗರತ್ನ ನಾಯಕ್ ಸ್ವಾಗತಿಸಿದರು. ಚೈಲ್ಡ್‌ಲೈನ್ ಯೋಜನಾ ಸಂಯೋಜಕಿ ಜ್ಯೋತಿ ನಿರೂಪಿಸಿದರು.

ವ್ಯಕ್ತಿಯ ವ್ಯಕ್ತಿತ್ವ ನಿರ್ಮಾಣದಲ್ಲಿ ಬಾಲ್ಯದ ಅನುಭವ ಪ್ರಮುಖ ಪಾತ್ರ ವಹಿಸುತ್ತದೆ. ಬಾಲ್ಯದ ಜೀವನಕ್ಕೆ ಪೂರಕವಾದ ವಾತಾವರಣ ಕಲ್ಪಿಸಿದಾಗ ಉತ್ತಮ ವ್ಯಕ್ತಿತ್ವ ರೂಪುಗೊಳ್ಳುತ್ತದೆ

-ಕಿರಣ್ ಎಸ್. ಗಂಗಣ್ಣವರ್ ಪ್ರಧಾನ ಜಿಲ್ಲಾ ಮತ್ತು ಸೆಷನ್ಸ್ ನ್ಯಾಯಾಧೀಶ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT