ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಉಡುಪಿ: ಸರ್ಕಾರಿ ಬಸ್‌ ಮಾರ್ಗಗಳಲ್ಲಿ ಖಾಸಗಿ ಬಸ್‌ ವ್ಯವಸ್ಥೆ

ಮುಂದುವರಿದ ಮುಷ್ಕರ: ಗುರುವಾರವೂ ಕರ್ತವ್ಯಕ್ಕೆ ಗೈರಾದ ಕೆಎಸ್‌ಆರ್‌ಟಿಸಿ ಚಾಲಕರು ಹಾಗೂ ನಿರ್ವಾಹಕರು
Last Updated 8 ಏಪ್ರಿಲ್ 2021, 13:05 IST
ಅಕ್ಷರ ಗಾತ್ರ

ಉಡುಪಿ: ಸಾರಿಗೆ ನೌಕರರ ಮುಷ್ಕರದ ಹಿನ್ನೆಲೆಯಲ್ಲಿ ಸಾರ್ವಜನಿಕರಿಗೆ ಸಮಸ್ಯೆಯಾಗಬಾರದು ಎಂಬ ಕಾರಣಕ್ಕೆ ಸರ್ಕಾರಿ ಬಸ್‌ಗಳ ಸಂಚಿರುವ ಮಾರ್ಗಗಳಲ್ಲಿ ಗಂಟೆಗೊಂದರಲ್ಲಿ ಖಾಸಗಿ ಬಸ್‌ಗಳ ಓಡಾಟಕ್ಕೆ ಅನುವು ಮಾಡಿಕೊಡಲಾಗಿದೆ ಎಂದು ಪ್ರಾದೇಶಿಕ ಸಾರಿಗೆ ಅಧಿಕಾರಿ ಜಿ.ಪಿ.ಗಂಗಾಧರ್ ತಿಳಿಸಿದರು.

ಮುಷ್ಕರ ಹಿನ್ನೆಲೆಯಲ್ಲಿ ಗುರುವಾರ ನಗರದ ಖಾಸಗಿ, ಸರ್ವೀಸ್‌ ಹಾಗೂ ಕೆಎಸ್‌ಆರ್‌ಟಿಸಿ ಬಸ್ ನಿಲ್ದಾಣಗಳಿಗೆ ಭೇಟಿನೀಡಿ ಪ್ರಯಾಣಿಕರ ಸಮಸ್ಯೆಗಳನ್ನು ಆಲಿಸಿದ ಆರ್‌ಟಿಒ ಅಧಿಕಾರಿ, ಮುಷ್ಕರದ ಕಾರಣಕ್ಕೆ ಪ್ರಯಾಣಿಕರಿಗೆ ತೊಂದರೆಯಾಗಬಾರದು ಎಂಬ ಕಾರಣಕ್ಕೆ ಹಲವು ಕ್ರಮಗಳನ್ನು ತೆಗೆದುಕೊಂಡಿದೆ ಎಂದರು.

ಉಡುಪಿ-ಮಂಗಳೂರು ಮಾರ್ಗದಲ್ಲಿ ಖಾಸಗಿ ಬಸ್‍ಗಳ ಸಂಚಾರ ಅಧಿಕವಾಗಿರುವುದರಿಂದ ಪ್ರಯಾಣಿಕರಿಗೆ ಯಾವುದೇ ಸಮಸ್ಯೆಗಳು ಕಂಡುಬಂದಿಲ್ಲ. ಆದರೆ, ಸರ್ಕಾರಿ ಬಸ್‌ಗಳು ಸಂಚರಿಸುವ ಮಾರ್ಗಗಳಲ್ಲಿ ಪ್ರಯಾಣಿಕರಿಗೆ ಸಮಸ್ಯೆಯಾಗಿರುವುದರಿಂದ ಈ ಮಾರ್ಗಗಳಲ್ಲಿ ಗಂಟೆಗೆ ಒಂದು ಬಸ್‌ ಓಡಿಸುವಂತೆ ಖಾಸಗಿ ಬಸ್ ಮಾಲೀಕರಿಗೆ ಸೂಚಿಸಲಾಗಿದೆ ಎಂದರು.

ಖಾಸಗಿ ಬಸ್ ಮಾಲೀಕರು ಹಾಗೂ ಚಾಲಕರು ಸಾರ್ವಜನಿಕರ ಸಮಸ್ಯೆಗೆ ಉತ್ತಮವಾಗಿ ಸ್ಪಂದಿಸುತ್ತಿದ್ದು, ಸಮಸ್ಯೆಯಾಗದಂತೆ ಬಸ್‌ಗಳನ್ನು ಓಡಿಸುತ್ತಿದ್ದಾರೆ. ಟಿಕೆಟ್‌ ದರ ಹೆಚ್ಚು ವಸೂಲಿ ಮಾಡಿರುವ ಬಗ್ಗೆಯಾಗಲಿ, ಬಸ್ ಸಿಗಲಿಲ್ಲ ಎಂದು ಯಾರೂ ಇಲಾಖೆಗೆ ದೂರು ನೀಡಿಲ್ಲ ಎಂದು ಪ್ರಾದೇಶಿಕ ಸಾರಿಗೆ ಅಧಿಕಾರಿ ಜಿ.ಪಿ.ಗಂಗಾಧರ್ ಮಾಹಿತಿ ನೀಡಿದರು.

ಸರ್ಕಾರಿ ಬಸ್ ನಿಲ್ದಾಣದಲ್ಲಿ ಹೊನ್ನಾವರಕ್ಕೆ ತೆರಳಲು ಬಂದಿದ್ದ ಮಹಿಳೆಗೆ ಹಾಗೂ ಹಾಸನಕ್ಕೆ ಹೋಗಲು ನಿಲ್ದಾಣದಲ್ಲಿ ಕಾಯುತ್ತಿದ್ದ ಯುವಕನಿಗೆ ಬಸ್‌ ವ್ಯವಸ್ಥೆ ಮಾಡಿಕೊಟ್ಟರು. ಪ್ರಯಾಣಿಕರ ಸಂಖ್ಯೆ ಕಡಿಮೆ ಇದ್ದರೂ ಬಸ್‌ಗಳನ್ನು ಓಡಿಸಬೇಕು. ಘಾಟಿ ಹಾಗೂ ಬಸ್ ಸಂಚಾರ ವಿರಳವಾಗಿರುವ ಕಡೆಗಳಲ್ಲಿ ಪರವಾನಗಿ ರಹಿತ ಹಾಗೂ ಸರೆಂಡರ್ ಮಾಡಿದ ಬಸ್‍ಗಳನ್ನು ‘ವಿಶೇಷ ಸಂದರ್ಭ' ಎಂದು ಪರಿಗಣಿಸಿ ಓಡಿಸಲು ಸರ್ಕಾರದ ಅಧೀನ ಕಾರ್ಯದರ್ಶಿ ಅನುಮತಿ ನೀಡಿದ್ದಾರೆ. ಅದರಂತೆ ಇಲಾಖೆ ಕ್ರಮ ತೆಗೆದುಕೊಂಡಿದೆ ಎಂದು ತಿಳಿಸಿದರು.

ಸಾರಿಗೆ ಸಂಸ್ಥೆಯ ನೌಕರರು ಅಥವಾ ಇತರರು ಖಾಸಗಿ ಬಸ್‌ಗಳ ಸಂಚಾರಕ್ಕೆ ಅಡ್ಡಿ ಮಾಡಿದರೆ ಪೊಲೀಸ್‌ ಠಾಣೆ ಅಥವಾ ಸಾರಿಗೆ ಇಲಾಖೆಗೆ ದೂರು ನೀಡಬಹುದು ಎಂದು ಮಾಹಿತಿ ನೀಡಿದರು. ಇಲಾಖೆ ಪರವೀಕ್ಷಕರಾದ ಮಾರುತಿ ನಾಯಕ್ ಇದ್ದರು.

ಜಿಲ್ಲೆಯಲ್ಲಿ ಕೋವಿಡ್‌ ಹೆಚ್ಚುತ್ತಿರುವ ಹಿನ್ನೆಲೆಯಲ್ಲಿ ಬಸ್‌ ಪ್ರಯಾಣಿಕರ ಸಂಖ್ಯೆಯಲ್ಲಿ ಇಳಿಮುಖವಾಗಿತ್ತು. ತರಗತಿಗೆ ಅನುಮತಿ ಇಲ್ಲದ ಕಾರಣ ಶಾಲಾ ವಿದ್ಯಾರ್ಥಿಗಳು ಇರಲಿಲ್ಲ.

ಬೆರಳೆಣಿಕೆ ಸಾರಿಗೆ ಬಸ್‌ಗಳ ಸಂಚಾರ‌

ಸಾರಿಗೆ ನೌಕರರ ಮುಷ್ಕರ ಮುಂದುವರಿದಿರುವ ಹಿನ್ನೆಲೆಯಲ್ಲಿ ಗುರುವಾರವೂ ಉಡುಪಿ ಡಿಪೋದಲ್ಲಿ ಚಾಲಕರು ಹಾಗೂ ನಿರ್ವಾಹಕರು ಕರ್ತವ್ಯಕ್ಕೆ ಹಾಜರಾಗಿರಲಿಲ್ಲ. ಪರಿಣಾಮ ಬಹುತೇಕ ಬಸ್‌ಗಳು ನಿಟ್ಟೂರಿನಲ್ಲಿರುವ ಡಿಪೋದಲ್ಲಿ ನಿಂತಿದ್ದವು. ಬೆಳಿಗ್ಗೆ 9.30ಕ್ಕೆ ಮಂಗಳೂರು ಡಿಪೋದಿಂದ ವೋಲ್ವೊ ಬಸ್‌ ಬೆಂಗಳೂರಿಗೆ ಪ್ರಯಾಣ ಬೆಳೆಸಿದೆ. ಸಂಜೆ 5.15ಕ್ಕೆ ಉಡುಪಿಯಿಂದ ಸಾಮಾನ್ಯ ಬಸ್‌ ಬೆಂಗಳೂರಿಗೆ ತೆರಳಿದೆ. ಉಳಿದಂತೆ ಯಾವುದೇ ಬಸ್‌ಗಳು ಸಂಚರಿಸಲಿಲ್ಲ ಎಂದು ಡಿಪೋ ಸಿಬ್ಬಂದಿ ಮಾಹಿತಿ ನೀಡಿದರು.

ಖಾಸಗಿ ಬಸ್‌ಗಳ ಸಂಚಾರಕ್ಕಿಲ್ಲ ಅಡ್ಡಿ

ಸಾರಿಗೆ ಮುಷ್ಕರದ ಹಿನ್ನೆಲೆಯಲ್ಲಿ ಗುರುವಾರವೂ ಹೆಚ್ಚುವರಿ ಖಾಸಗಿ ಬಸ್‌ಗಳು ರಸ್ತೆಗಿಳಿದಿದ್ದವು. ಜಿಲ್ಲಾ ವ್ಯಾಪ್ತಿಯ ಬಹುತೇಕ ಮಾರ್ಗಗಳಲ್ಲಿ ಖಾಸಗಿ ಬಸ್‌ಗಳು ನಿರಂತರವಾಗಿ ಸಂಚರಿಸಿದವು. ಹೊರ ಜಿಲ್ಲೆಗಳಿಗೂ ಹೆಚ್ಚುವರಿ ಖಾಸಗಿ ಬಸ್‌ಗಳನ್ನು ಓಡಿಸಲಾಯಿತು. ಕೆಎಸ್‌ಆರ್‌ಟಿಸಿ ಬಸ್‌ಗಳ ಅಲಭ್ಯ ಹಿನ್ನೆಲೆಯಲ್ಲಿ ಖಾಸಗಿ ಬಸ್‌ಗಳಲ್ಲಿ ಪ್ರಯಾಣಿಕರ ದಟ್ಟಣೆ ಹೆಚ್ಚಾಗಿತ್ತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT