ಬುಧವಾರ, 31 ಮೇ 2023
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕೃಷ್ಣನೂರಿನ ಗದ್ದುಗೆಗೆ ಶುರುವಾಯ್ತು ಪೈಪೋಟಿ

ಟಿಕೆಟ್‌ಗಾಗಿ ಆಕಾಂಕ್ಷಿಗಳ ಕಸರತ್ತು; ಮತದಾರರ ಓಲೈಕೆಗೆ ಒತ್ತು
Last Updated 1 ಏಪ್ರಿಲ್ 2023, 12:58 IST
ಅಕ್ಷರ ಗಾತ್ರ

ಉಡುಪಿ: ವಿಧಾನಸಭಾ ಚುನಾವಣೆಗೆ ಮುಹೂರ್ತ ನಿಗದಿಯಾದ ಬೆನ್ನಲ್ಲೇ ಜಿಲ್ಲೆಯಲ್ಲಿ ರಾಜಕೀಯ ಚಟುವಟಿಕೆಗಳು ಗರಿಗೆದರಿವೆ. ಕೃಷ್ಣನೂರಿನ ಅಧಿಕಾರ ಗದ್ದುಗೆ ಹಿಡಿಯಲು ರಾಜಕೀಯ ಪಕ್ಷಗಳ ಪೈಪೋಟಿ ಜೋರಾಗಿ ನಡೆಯುತ್ತಿದೆ.

ಬಿಲ್ಲವರು, ಮೊಗವೀರರು, ಬಂಟರು, ಬ್ರಾಹ್ಮಣರು, ಮುಸ್ಲಿಮರು ಹಾಗೂ ಕ್ರಿಶ್ಚಿಯನ್ ಸಮುದಾಯಗಳ ಬಾಹುಳ್ಯ ಹೆಚ್ಚಾಗಿರುವ ಉಡುಪಿ ಜಿಲ್ಲೆಯಲ್ಲಿ ಮತದಾರರು ಯಾವ ಪಕ್ಷದ ಕಡೆಗೆ ವಾಲುತ್ತಾರೆ ಎಂಬುದು ಕುತೂಹಲ.

ಜಾಗತಿಕ ಮಟ್ಟದಲ್ಲಿ ಸದ್ದು ಮಾಡಿದ ಹಿಜಾಬ್ ವಿವಾದ, ಧಾರ್ಮಿಕ ಕ್ಷೇತ್ರಗಳಲ್ಲಿ ಅನ್ಯಧರ್ಮೀಯರಿಗೆ ವ್ಯಾಪಾರ ನಿರ್ಬಂಧ, ಪಠ್ಯ ಪುಸ್ತಕದಿಂದ ನಾರಾಯಣ ಗುರುಗಳ ಪಠ್ಯ ಕೈಬಿಟ್ಟ ವಿಚಾರಗಳು ರಾಜಕೀಯ ರೂಪ ಪಡೆದುಕೊಂಡು ಈಗಾಗಲೇ ಸದ್ದು ಮಾಡಿದ್ದು, ಚುನಾವಣೆಯ ಮೇಲೂ ಪರಿಣಾಮ ಬೀರುವ ಸಾಧ್ಯತೆಗಳು ನಿಚ್ಚಳವಾಗಿವೆ.

ಸಮಾರಂಭ ಪಾಲಿಟಿಕ್ಸ್‌:

ನಗರ ಹಾಗೂ ಗ್ರಾಮೀಣ ಭಾಗಗಳಲ್ಲಿ ಮತದಾರರನ್ನು ಸೆಳೆಯುವ ಕಾರ್ಯ ಆರಂಭವಾಗಿದ್ದು, ಧಾರ್ಮಿಕ ಸಮಾರಂಭ, ಕ್ರಿಕೆಟ್ ಟೂರ್ನಿ, ಉತ್ಸವ, ಮದುವೆ ಸೇರಿದಂತೆ ಶುಭ ಸಮಾರಂಭಗಳಲ್ಲಿ ರಾಜಕೀಯ ನಾಯಕರ ಹಾಜರಿ ಎದ್ದು ಕಾಣುತ್ತಿದೆ. ಮತಬೇಟೆಗೆ ನಾಯಕರು ಹೊಸ ದಾರಿಗಳನ್ನು ಕಂಡುಕೊಳ್ಳುತ್ತಿದ್ದಾರೆ.

ಕಾಮಗಾರಿ ಸದ್ದು:

ಚುನಾವಣಾ ವರ್ಷವಾಗಿರುವ ಕಾರಣ ಬಹುಕಾಲದಿಂದ ಜಿಲ್ಲೆಯಾದ್ಯಂತ ನನೆಗುದಿಗೆ ಬಿದ್ದಿದ್ದ ಕಾಮಗಾರಿಗಳ ಸದ್ದು ಜೋರಾಗಿದೆ. ಗುಂಡಿಬಿದ್ದ ರಸ್ತೆಗಳನ್ನು ದುರಸ್ತಿ ಮಾಡಲಾಗಿದೆ. ಹೊಸದಾಗಿ ಸಿಮೆಂಟ್‌ ರಸ್ತೆಗಳು, ಸೇತುವೆ, ಭವನಗಳು ನಿರ್ಮಾಣವಾಗಿದ್ದು ಮತದಾರರಿಗೆ ಚುನಾವಣೆ ಹತ್ತಿರ ಬರುತ್ತಿದೆ ಎಂಬ ಸ್ಪಷ್ಟವಾದ ಸಂದೇಶ ರವಾನೆಯಾಗಿದೆ. ನೀತಿ ಸಂಹಿತೆ ಜಾರಿಯಾಗುವವರೆಗೂ ಜಿಲ್ಲೆಯಲ್ಲಿ ಕಾಮಗಾರಿಗಳ ಸದ್ದು ಜೋರಾಗಿ ಕೇಳಿಬಂತು.

ಟಿಕೆಟ್‌ಗಾಗಿ ಪೈಪೋಟಿ:

ಮತ್ತೊಂದೆಡೆ ಅಭ್ಯರ್ಥಿಗಳು ಟಿಕೆಟ್‌ ಗಿಟ್ಟಿಸಲು ತೆರೆಮರೆಯಲ್ಲಿ ಕಸರತ್ತು ನಡೆಸುತ್ತಿದ್ದು ವರಿಷ್ಠರ ಓಲೈಕೆಗೆ ಮುಂದಾಗಿದ್ದಾರೆ. ಸಾಮಾಜಿಕ ಜಾಲತಾಣದಲ್ಲಿ ಟಿಕೆಟ್‌ ಆಕಾಂಕ್ಷಿತರ ಪರವಾಗಿ ಅಬ್ಬರದ ಪ್ರಚಾರದ ನಡೆಯುತ್ತಿದೆ. ನಾನೇ ‘ಅಭ್ಯರ್ಥಿ’ ಎಂದು ಬಿಂಬಿಸಿಕೊಂಡು ಕ್ಷೇತ್ರದಲ್ಲಿ ಓಡಾಡುವ ಆಕಾಂಕ್ಷಿಗಳು ಕಾಣಸಿಗುತ್ತಿದ್ದಾರೆ.

ಚುನಾವಣಾ ರಣತಂತ್ರ:

ಉಡುಪಿ, ಕಾಪು, ಕುಂದಾಪುರ, ಬೈಂದೂರು ಹಾಗೂ ಕಾರ್ಕಳ ಐದು ವಿಧಾನಸಭಾ ಕ್ಷೇತ್ರಗಳು ಉಡುಪಿ ಜಿಲ್ಲೆಯ ವ್ಯಾಪ್ತಿಗೊಳಪಟ್ಟಿವೆ. ಪ್ರಸ್ತುತ ರಾಜಕೀಯ ಸನ್ನಿವೇಶ ನೋಡುವುದಾದರೆ ಕಾಂಗ್ರೆಸ್‌ ಮೂರು ಕ್ಷೇತ್ರಗಳಿಗೆ ಅಭ್ಯರ್ಥಿಗಳನ್ನು ಅಂತಿಮಗೊಳಿಸಿದ್ದು ಕಾಪು ಕ್ಷೇತ್ರದಿಂದ ವಿನಯ ಕುಮಾರ್ ಸೊರಕೆ, ಕುಂದಾಪುರದಿಂದ ಕೆ.ದಿನೇಶ್ ಹೆಗ್ಡೆ ಹಾಗೂ ಬೈಂದೂರು ವಿಧಾನಸಭಾ ಕ್ಷೇತ್ರದಿಂದ ಕೆ.ಗೋಪಾಲ್ ಪೂಜಾರಿ ಅವರಿಗೆ ಟಿಕೆಟ್‌ ಘೋಷಿಸಿದೆ.

ಉಡುಪಿ ಹಾಗೂ ಕಾರ್ಕಳ ಕ್ಷೇತ್ರಕ್ಕೆ ಕೆಲವೇ ದಿನಗಳಲ್ಲಿ ಅಭ್ಯರ್ಥಿಗಳ ಆಯ್ಕೆ ಅಂತಿಮವಾಗಲಿದೆ. ಕಾರ್ಕಳದಲ್ಲಿ ಬಿಜೆಪಿಯ ಸಂಭವನೀಯ ಅಭ್ಯರ್ಥಿ ವಿ.ಸುನಿಲ್ ಕುಮಾರ್ ಅವರಿಗೆ ಪೈಪೋಟಿ ನೀಡಬೇಕಾದರೆ ಬಂಟ ಸಮುದಾಯದ ಪ್ರಬಲ ನಾಯಕನನ್ನು ಕಣಕ್ಕಿಳಿಸುವ ಲೆಕ್ಕಾಚಾರದಲ್ಲಿದೆ ಕಾಂಗ್ರೆಸ್‌.

ಬಂಟ ಸಮುದಾಯದ ಉದಯ ಕುಮಾರ್ ಶೆಟ್ಟಿ ಅವರಿಗೆ ಟಿಕೆಟ್ ನೀಡುವಂತೆ ಸ್ಥಳೀಯ ಮುಖಂಡರು ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜನ ಖರ್ಗೆ ಅವರಿಗೆ ಪತ್ರ ಬರೆದಿದ್ದು, ಕ್ಷೇತ್ರದ ಮೇಲೆ ಹಿಡಿತ ಇರುವ ಮಾಜಿ ಮುಖ್ಯಮಂತ್ರಿ ವೀರಪ್ಪ ಮೊಯ್ಲಿ ಅವರ ಮೇಲೂ ಒತ್ತಡ ಹಾಕಿದ್ದಾರೆ. ಅಂತಿಮವಾಗಿ ಹೈಕಮಾಂಡ್ ಯಾರಿಗೆ ಮಣೆ ಹಾಕಲಿದೆ ಕಾದು ನೋಡಬೇಕು.

ಉಡುಪಿ ಕ್ಷೇತ್ರದಿಂದ ಕಾಂಗ್ರೆಸ್‌ ಜಿಲ್ಲಾ ಘಟಕದ ಅಧ್ಯಕ್ಷ ಅಶೋಕ್ ಕುಮಾರ್ ಕೊಡವೂರು, ಉಡುಪಿ ತಾಲ್ಲೂಕು ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ರಮೇಶ್ ಕಾಂಚನ್‌, ಉದ್ಯಮಿ ಪ್ರಸಾದ್ ಕಾಂಚನ್‌, ಕೃಷ್ಣಮೂರ್ತಿ ಆಚಾರ್ಯ, ಅಮೃತ್ ಶೆಣೈ, ಶಂಕರ್ ಕುಂದರ್‌, ಪ್ರಖ್ಯಾತ್ ಶೆಟ್ಟಿ ಟಿಕೆಟ್‌ಗೆ ಅರ್ಜಿ ಸಲ್ಲಿಸಿದ್ದು, ಪ್ರಸಾದ್ ಕಾಂಚನ್, ರಮೇಶ್ ಕಾಂಚನ್, ಕೃಷ್ಣಮೂರ್ತಿ ಆಚಾರ್ಯ ಪೈಕಿ ಒಬ್ಬರಿಗೆ ಟಿಕೆಟ್‌ ಸಾಧ್ಯತೆಗಳಿವೆ ಎನ್ನುತ್ತಾರೆ ಕಾಂಗ್ರೆಸ್‌ ನಾಯಕರು.

‌ಬಿಜೆಪಿ ಪಟ್ಟಿ ಬಿಡುಗಡೆ ವಿಳಂಬ:

ಬಿಜೆಪಿ ಪಟ್ಟಿ ಬಿಡುಗಡೆ ವಿಳಂಬವಾಗಿದ್ದು ಕಾದುನೋಡುವ ತಂತ್ರ ಅನುಸರಿಸುತ್ತಿದೆ. ಐದು ಕ್ಷೇತ್ರಗಳಿಗೆ ಇದುವರೆಗೂ ಅಧಿಕೃತವಾಗಿ ಅಭ್ಯರ್ಥಿಗಳ ಹೆಸರು ಘೋಷಿಸಿಲ್ಲ. ಆದರೆ, ಐದೂ ಕ್ಷೇತ್ರಗಳಲ್ಲಿ ಬಿಜೆಪಿಯಿಂದ ಸ್ಪರ್ಧಿಸಲು ಅಭ್ಯರ್ಥಿಗಳ ದಂಡು ದೊಡ್ಡದಿದೆ. ಈಗಾಗಲೇ ಎಲ್ಲ ಕ್ಷೇತ್ರಗಳಲ್ಲಿ ಸರ್ವೆ ನಡೆದಿದ್ದು ಕಾರ್ಯಕರ್ತರ ಅಭಿಪ್ರಾಯ ಹಾಗೂ ಮತ ಸಂಗ್ರಹಿಸಲಾಗಿದೆ. ಶೀಘ್ರ ಪಟ್ಟಿ ಬಿಡುಗಡೆಯಾಗಲಿದೆ ಎನ್ನುತ್ತಾರೆ ಬಿಜೆಪಿ ನಾಯಕರು.

ಜೆಡಿಎಸ್‌ ಪಕ್ಷದಿಂದ ಅಧಿಕೃತ ಅಭ್ಯರ್ಥಿಗಳ ಪಟ್ಟಿ ಬಿಡುಗಡೆಯಾಗಿಲ್ಲ. ಕರ್ನಾಟಕ ರಾಷ್ಟ್ರ ಸಮಿತಿ ಪಕ್ಷವು ಉಡುಪಿ ಕ್ಷೇತ್ರದಿಂದ ಸಂಭವನೀಯ ಅಭ್ಯರ್ಥಿಯಾಗಿ ರಾಮದಾಸ್ ಭಟ್‌ ಹಾಗೂ ಬೈಂದೂರು ಕ್ಷೇತ್ರದಿಂದ ರಮೇಶ್‌ ನಾಯ್ಕ್ ಅವರ ಹೆಸರು ಘೋಷಿಸಿದೆ. ಉಳಿದ ಮೂರು ಕ್ಷೇತ್ರಗಳಿಗೂ ಶೀಘ್ರ ಅಭ್ಯರ್ಥಿ ಆಯ್ಕೆ ಮಾಡುವುದಾಗಿ ಸ್ಪಷ್ಟಪಡಿಸಿದೆ. ಆಮ್‌ ಆದ್ಮಿ ಪಕ್ಷದಿಂದ ಉಡುಪಿ ಕ್ಷೇತ್ರದಿಂದ ಪ್ರಭಾಕರ ಪೂಜಾರಿ ತೊಟ್ಟಂ ಹೆಸರು ಅಂತಿಮವಾಗಿದೆ. ಉಳಿದ ಕ್ಷೇತ್ರಗಳಿಗೆ ಅಭ್ಯರ್ಥಿಗಳ ಆಯ್ಕೆ ಅಂತಿಮವಾಗಿಲ್ಲ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ADVERTISEMENT
ADVERTISEMENT

ಇನ್ನಷ್ಟು ಸುದ್ದಿ

ಇನ್ನಷ್ಟು
ADVERTISEMENT
ADVERTISEMENT
ADVERTISEMENT
ಪ್ರಜಾವಾಣಿ ವಿಡಿಯೊ
ಸಿನಿಮಾ
ADVERTISEMENT