ಶನಿವಾರ, 30 ಸೆಪ್ಟೆಂಬರ್ 2023
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ತಲೆಬೋಳಿಸುವ ಮಾತಿಗೆ ಬದ್ಧ | ಗ್ಯಾರಂಟಿಗಳನ್ನು ಷರತ್ತುಗಳಿಲ್ಲದೆ ಜಾರಿಗೊಳಿಸಿ: ಸುರೇಶ್

Published 4 ಜೂನ್ 2023, 8:44 IST
Last Updated 4 ಜೂನ್ 2023, 8:44 IST
ಅಕ್ಷರ ಗಾತ್ರ

ಉಡುಪಿ: ವಿಧಾನಸಭಾ ಚುನಾವಣೆ ಸಂದರ್ಭ ಘೋಷಿಸಿರುವ 5 ಉಚಿತ ಗ್ಯಾರಂಟಿಗಳನ್ನು ಯಾವುದೇ ಷರತ್ತುಗಳಿಲ್ಲದೆ ಯಥಾಪ್ರಕಾರ 5 ವರ್ಷ ಪೂರ್ತಿ ಅನುಷ್ಠಾನಗೊಳಿಸಿದರೆ 2028ರ ಮೇ ತಿಂಗಳಲ್ಲಿ ತಲೆ ಬೋಳಿಸಿ ಕೆಪಿಸಿಸಿ ಕಚೇರಿಯ ಮುಂದೆ ಕುಳಿತುಕೊಳ್ಳುವ ಸವಾಲಿಗೆ ಈಗಲೂ ಬದ್ಧನಿದ್ದೇನೆ ಎಂದು ಬಿಜೆಪಿ ಜಿಲ್ಲಾ ಘಟಕದ ಅಧ್ಯಕ್ಷ  ಕುಯಿಲಾಡಿ ಸುರೇಶ್ ನಾಯಕ್ ತಿಳಿಸಿದ್ದಾರೆ.

ಉಡುಪಿ ಕಾಂಗ್ರೆಸ್ ಜಿಲ್ಲಾಧ್ಯಕ್ಷರು ಮೊದಲು ಪ್ರಧಾನಿ ಮೋದಿ ಎಲ್ಲರ ಖಾತೆಗೆ ₹ 15 ಲಕ್ಷ ಹಾಕುವುದಾಗಿ ಹೇಳಿರುವುದನ್ನು ದಾಖಲೆ ಸಮೇತ ಸಾಬೀತುಪಡಿಸಲಿ ಎಂದು ಸವಾಲು ಹಾಕಿದ್ದಾರೆ.

ಕಾಂಗ್ರೆಸ್ ಹಿಂದೆ ರಾಜಸ್ಥಾನ, ಹಿಮಾಚಲ ಪ್ರದೇಶ, ಮಣಿಪುರ ರಾಜ್ಯಗಳಲ್ಲಿ ಚುನಾವಣಾ ಸಂದರ್ಭ ಉಚಿತ ಖಚಿತಗಳ ಘೋಷಣೆ ಮಾಡಿ ಯಾವುದನ್ನೂ ಈಡೇರಿಸದೆ ಮತದಾರರಿಗೆ ಪಂಗನಾಮ ಹಾಕಿದೆ. ರಾಜ್ಯದಲ್ಲೂ ಕಾಂಗ್ರೆಸ್ ಸರ್ಕಾರ ಉಚಿತ ಗ್ಯಾರಂಟಿಗಳನ್ನು 5 ವರ್ಷ ಪೂರ್ತಿ ಯಥಾವತ್ತಾಗಿ ಜಾರಿಗೊಳಿಸುವ ಸಾಧ್ಯತೆ ಇಲ್ಲ.

ಅಧಿಕಾರಕ್ಕೆ ಬಂದ 24 ಗಂಟೆಯೊಳಗೆ 5 ಗ್ಯಾರಂಟಿ ಜಾರಿಗೊಳಿಸುವುದಾಗಿ ವಾಗ್ದಾನ ನೀಡಿದ್ದ ಕಾಂಗ್ರೆಸ್ ಮಾತು ತಪ್ಪಿದೆ.  ಇದೀಗ ಹೊಸ ಷರತ್ತು ಹಾಕಿ ಭರವಸೆ ಮುರಿದಿದೆ. ಆದರೂ ಕಾಂಗ್ರೆಸ್ ಜಿಲ್ಲಾಧ್ಯಕ್ಷರು ಗ್ಯಾರಂಟಿ ಕಾರ್ಡಿನ ಎಲ್ಲಾ ಭರವಸೆಗಳನ್ನು ಈಡೇರಿಸಿರುವ ಹಾಗೆ ಪೌರುಷ ತೋರುವುದು ನಾಚಿಕೆಗೇಡು ಎಂದು ಟೀಕಿಸಿದ್ದಾರೆ.

ಗೃಹ ಜ್ಯೋತಿ ಕಾರ್ಯಕ್ರಮದಡಿ 200 ಯೂನಿಟ್ ವಿದ್ಯುತ್‌ ಉಚಿತವಾಗಿ ನೀಡಿಲ್ಲ, ಪ್ರತಿ ಯುನಿಟ್‌ಗೆ ₹ 2ರಂತೆ ವಿದ್ಯುತ್ ದರ ಹೆಚ್ಚಿಸಲಾಗಿದೆ, ಸರ್ಕಾರಿ ಬಸ್‌ಗಳ ಓಡಾಟ ಇಲ್ಲದ ಕಡೆಗಳಲ್ಲಿ ಮಹಿಳೆಯರಿಗೆ ಉಚಿತ ಪ್ರಯಾಣದ ಲಾಭ ಸಿಗುವುದಿಲ್ಲ. ಗೃಹಲಕ್ಷ್ಮಿ ಕಾರ್ಯಕ್ರಮ ಮುಂದೂಡಿ, ಗೊಂದಲ ಸೃಷ್ಟಿಸಿ, ಆನ್ ಲೈನ್ ಅರ್ಜಿ ಎಂಬ ಸಬೂಬು ನೀಡಿ ಕಾಲಹರಣ ಮಾಡುತ್ತಿದೆ. ಅನ್ನಭಾಗ್ಯ ಗ್ಯಾರಂಟಿ ಮುಂದೂಡಿ ಈಗಾಗಲೇ ಕೇಂದ್ರ ಬಿಪಿಎಲ್ ಮತ್ತು ಅಂತ್ಯೋದಯ ಕಾರ್ಡುದಾರರಿಗೆ ನೀಡುತ್ತಿರುವ ಉಚಿತ 5 ಕೆ.ಜಿ ಅಕ್ಕಿಯನ್ನು ಸೇರಿಸಿ 10 ಕೆ.ಜಿ ಕೊಡುವುದಾಗಿ ಮೋಸದ ತಂತ್ರ ಅನುಸರಿಸಿದೆ. ಎಲ್ಲ ನಿರುದ್ಯೋಗಿಗಳಿಗೆ ಮಾಸಾಶನ ಕೊಡುತ್ತಿಲ್ಲ, ಅಧಿಕಾರದ ದುರಾಸೆಯಿಂದ ಉಚಿತ ಗ್ಯಾರಂಟಿ ಘೋಷಿಸಿ ರಾಜ್ಯವನ್ನು ದಿವಾಳಿಯಾಗಿಸಲು ಹೊರಡುತ್ತಿದೆ. ಗ್ಯಾರಂಟಿ ಅನುಷ್ಠಾನಕ್ಕೆ ಆದಾಯದ ಮೂಲ ಸ್ಪಷ್ಟಪಡಿಸಿ ಶ್ವೇತಪತ್ರವನ್ನು ಹೊರಡಿಸಬೇಕು ಎಂದು ಕುಯಿಲಾಡಿ ಆಗ್ರಹಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT