ಭಾನುವಾರ, 28 ಮೇ 2023
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

‘ಉಡುಪಿ ಜಿಲ್ಲೆಗೆ ಬೇಕು ಸರ್ಕಾರಿ ಮೆಡಿಕಲ್‌ ಕಾಲೇಜು’: ಜಾಲತಾಣಗಳಲ್ಲಿ ಅಭಿಯಾನ

ಸಹಕಾರಿ ಸಂಘದಲ್ಲಿ ವೈದ್ಯಕೀಯ ಕಾಲೇಜು ಸ್ಥಾಪನೆಗೆ ಒತ್ತಾಯ
Last Updated 15 ಜುಲೈ 2021, 13:20 IST
ಅಕ್ಷರ ಗಾತ್ರ

ಉಡುಪಿ: ‘ಜಿಲ್ಲೆಗೊಂದು ಸರ್ಕಾರಿ ಮೆಡಿಕಲ್ ಕಾಲೇಜು ಬೇಕು’ ಎಂಬ ಕೂಗು ಉಡುಪಿಯಲ್ಲಿ ಬಲಗೊಳ್ಳುತ್ತಿದೆ. ಸಮಾಜಪರ ಚಿಂತಕರು, ವೈದ್ಯರು, ವಿದ್ಯಾರ್ಥಿಗಳು ಗಟ್ಟಿ ಧ್ವನಿಯಲ್ಲಿ ‘ಮೆಡಿಕಲ್ ಕಾಲೇಜು’ ಸ್ಥಾಪನೆ ಅಭಿಯಾನ ಆರಂಭಿಸಿದ್ದಾರೆ. ಇದರ ಭಾಗವಾಗಿ ಜಿಲ್ಲೆಯ ಜನಪ್ರತಿನಿಧಿಗಳ ಗಮನ ಸೆಳೆಯಲು ಲೇಖಕ ರಾಜಾರಾಂ ತಲ್ಲೂರು ಬಹಿರಂಗ ಪತ್ರ ಬರೆದಿದ್ದಾರೆ.

ಪತ್ರದಲ್ಲಿ ಏನಿದೆ ?

ಶಿಕ್ಷಣ ಕ್ಷೇತ್ರದಲ್ಲಿ ಮುಂಚೂಣಿಯಲ್ಲಿರುವ ಉಡುಪಿ ಈಗಾಗಲೇ ದೇಶದ ಪ್ರತಿಷ್ಠಿತ ಖಾಸಗಿ ವೈದ್ಯಕೀಯ ಕಾಲೇಜನ್ನು ಹೊಂದಿದೆ. ಹಾಗಾಗಿ, ಇಲ್ಲಿ ಮತ್ತೊಂದು ಖಾಸಗಿ ವೈದ್ಯಕೀಯ ಕಾಲೇಜು ಸ್ಥಾಪನೆ ಅಪ್ರಸ್ತುತ. ಗಂಭೀರ ಸ್ವರೂಪ ತಳೆದಿರುವ ದೇಶದ ಸಂಪನ್ಮೂಲಗಳ ಅಸಮತೋಲನ ನೀಗಲು ಹಾಗೂ ಜನಸಾಮಾನ್ಯರು ದೇಶದ ಆರ್ಥಿಕತೆಯ ಮುಖ್ಯವಾಹಿನಿಯಲ್ಲಿ ಪಾಲ್ಗೊಳ್ಳಲು ಇರುವ ಏಕೈಕ ಪರಿಹಾರ ಸಹಕಾರಿ ರಂಗ.

ಉಡುಪಿಯಲ್ಲಿ ಸಹಕಾರಿ ರಂಗದಲ್ಲಿ ಸರ್ಕಾರಿ ವೈದ್ಯಕೀಯ ಕಾಲೇಜು ಆರಂಭಿಸುವ ಮೂಲಕ ಸಂಪನ್ಮೂಲ ಹಂಚಿಕೆಯಲ್ಲಿ ಹೊಸ ಮಾದರಿಯನ್ನು ರಾಜ್ಯದ ಮುಂದಿಡಬೇಕು. ಸಹಕಾರಿ ರಂಗದಲ್ಲಿ ವೈದ್ಯಕೀಯ ಆಸ್ಪತ್ರೆಗಳು, ಕಾಲೇಜುಗಳೇನು ಹೊಸ ಬೆಳವಣಿಗೆಯಲ್ಲ. ಈಗಾಗಲೇ 52 ಸಹಕಾರಿ ರಂಗದ ಆಸ್ಪತ್ರೆಗಳು ಯಶಸ್ವಿಯಾಗಿ ಕಾರ್ಯಾಚರಿಸುತ್ತಿವೆ. ನೆರೆಯ ಕೇರಳದಲ್ಲಿ ಹಲವು ಸಹಕಾರಿ ವೈದ್ಯಕೀಯ ಕಾಲೇಜುಗಳಿವೆ.

ಸಹಕಾರಿ ರಂಗದಲ್ಲಿ ರಾಜಕೀಯ ಬದಿಗಿಟ್ಟು, ನಾಡಿನ ಹಿತಾಸಕ್ತಿಯ ದೃಷ್ಟಿಯಿಂದ ಮೆಡಿಕಲ್ ಕಾಲೇಜು ಸ್ಥಾಪಿಸಲು ಮುಂದಾಗಬೇಕು. ಇದರಿಂದ ಹಣವಂತರು, ಕಾರ್ಪೋರೇಟ್ ಶಕ್ತಿಗಳು ಜನರ ಸುಲಿಗೆ ಮಾಡುವುದು ತಪ್ಪಲಿದೆ.

ಕೊರೊನಾ ಕಾಲದಲ್ಲಿ ಆರೋಗ್ಯ ರಂಗಕ್ಕೆ ಸಹಕಾರಿ ಪ್ರವೇಶವನ್ನು ಪ್ರೋತ್ಸಾಹಿಸಲು ಕೇಂದ್ರ ಸರ್ಕಾರ ‘ಆಯುಷ್ಮಾನ್ ಸಹಕಾರ್’ ಯೋಜನೆಯನ್ವಯ (ಎನ್‌ಸಿಡಿಸಿ) ಯೋಜನೆಯ ಶೇ 90 ಹಣಕಾಸು ಒದಗಿಸಲು ಸಿದ್ಧ ಎಂದು ಪ್ರಕಟಿಸಿದೆ. ₹ 10,000 ಕೋಟಿ ತೆಗೆದಿರಿಸಿರುವುದಾಗಿ ಹಿಂದಿನ ಕೃಷಿ ಇಲಾಖೆಯ ರಾಜ್ಯ ಸಚಿವ ಪುರುಷೋತ್ತಮ್ ರುಪಾಲಾ ಅವರೇ ಪ್ರಕಟಿಸಿದ್ದಾರೆ.

ಈಗ ಉಡುಪಿ–ಚಿಕ್ಕಮಗಳೂರು ಕ್ಷೇತ್ರದ ಸಂಸದರೇ ಕೃಷಿ ಸಚಿವರು. ಉಡುಪಿಯಲ್ಲಿ ಸಹಕಾರಿ ರಂಗದ ಮೂಲಕ ಮೆಡಿಕಲ್ ಕಾಲೇಜು ಸ್ಥಾಪನೆಗೆ ಅಗತ್ಯ ಪ್ರಯತ್ನ ಮಾಡಲು ಇದು ಸಕಾಲ. ಮೆಡಿಕಲ್ ಕಾಲೇಜು ಸ್ಥಾಪನೆಗೆ 30 ಎಕರೆ ಜಾಗ ಸಿದ್ಧವಿದೆ ಎಂದು ಉಡುಪಿ ಶಾಸಕರು ಹೇಳಿದ್ದು, ಜಿಲ್ಲೆಯ ಆಸಕ್ತ ಖಾಸಗಿ ವೈದ್ಯರು, ಹಿರಿಯ ಸಹಕಾರಿಗಳು, ಜನಪ್ರತಿನಿಧಿಗಳು ಹಾಗೂ ಅಗತ್ಯ ಬಿದ್ದರೆ ಸಹಕಾರಿ ಹೂಡಿಕೆದಾರರು ಸೇರಿ ಸಹಕಾರಿಯೊಂದನ್ನು ರಚಿಸಿಕೊಂಡು, ಜಿಲ್ಲೆಯಲ್ಲಿ ಸಹಕಾರಿ ರಂಗದ ಮೆಡಿಕಲ್ ಕಾಲೇಜು ಸ್ಥಾಪಿಸುವ ಪ್ರಸ್ತಾವವನ್ನು ರಾಜ್ಯ ಸರ್ಕಾರದ ಮುಂದಿರಿಸಬೇಕಿದೆ.

ಇದರಿಂದ ಉಡುಪಿ ಜಿಲ್ಲೆ ಹಾಗೂ ಆಸುಪಾಸಿನಲ್ಲಿರುವ ಬಡ, ಮಧ್ಯಮ ವರ್ಗದ ಜನರಿಗೆ ವೈದ್ಯಕೀಯ ಸೇವೆಗಳು ಸುಲಭ ಹಾಗೂ ಕೈಗೆಟುಕುವ ದರದಲ್ಲಿ ಸಿಗಲಿದ್ದು, ಸಾವಿರಾರು ಉದ್ಯೋಗಾವಕಾಶಗಳು ತೆರೆದುಕೊಳ್ಳಲಿವೆ. ಉಡುಪಿ ನಾಗರಿಕರು ಈ ಸಂಬಂಧ ಕ್ಷೇತ್ರದ ಜನಪ್ರತಿನಿಧಿಗಳಿಗೆ ಹಕ್ಕೊತ್ತಾಯ ಮಾಡಬೇಕಿದೆ.

‘ಇಚ್ಛಾಶಕ್ತಿ ಇದ್ದರೆ ಸಾಧ್ಯ’

ಉಡುಪಿ ಜಿಲ್ಲೆಗೆ ಸರ್ಕಾರಿ ವೈದ್ಯಕೀಯ ಕಾಲೇಜು ಅಗತ್ಯವಾಗಿ ಬೇಕು. ಬಹುದಿನಗಳ ಬೇಡಿಕೆ ಈಡೇರಿಕೆಗೆ ಸದ್ಯ ಪ್ರಶಸ್ತ ಕಾಲ. ಕಾರಣ, ಜಿಲ್ಲೆ, ರಾಜ್ಯ ಹಾಗೂ ಕೇಂದ್ರದಲ್ಲಿ ಬಿಜೆಪಿ ಅಧಿಕಾರದಲ್ಲಿದೆ. ಕೇಂದ್ರದ ಕೃಷಿ ಖಾತೆ ರಾಜ್ಯ ಸಚಿವರೂ ಉಡುಪಿ–ಚಿಕ್ಕಮಗಳೂರು ಕ್ಷೇತ್ರದ ಶೋಭಾ ಕರಂದ್ಲಾಜೆ. ಪ್ರಧಾನಿ ಹಾಗೂ ಆರೋಗ್ಯ ಸಚಿವರನ್ನು ಮನವೊಲಿಸಿದರೆ ಸರ್ಕಾರಿ ವೈದ್ಯಕೀಯ ಕಾಲೇಜು ಸ್ಥಾಪನೆಯಾಗುವುದು ಖಚಿತ. ಜಿಲ್ಲೆಗೆ ಸರ್ಕಾರಿ ವೈದ್ಯಕೀಯ ಕಾಲೇಜಿನ ಅವಶ್ಯಕತೆ ಏಕಿದೆ ಎಂದರೆ, ಜಿಲ್ಲೆಯಲ್ಲಿ ಈಗಿರುವ ಜಿಲ್ಲಾ ಆಸ್ಪತ್ರೆ ಕೇವಲ 150 ಬೆಡ್‌ಗಳನ್ನು ಹೊಂದಿದೆ. ಜಿಲ್ಲಾ ಆಸ್ಪತ್ರೆಯಾದರೆ 250 ಬೆಡ್‌ಗಳಿಗೆ ಹೆಚ್ಚಳವಾಗಲಿದೆ. ಜಿಲ್ಲೆಯಲ್ಲಿ ವೈದ್ಯಕೀಯ ಕಾಲೇಜು ಸ್ಥಾಪನೆಯಾದರೆ ವೈದ್ಯರ ಕೊರತೆ ನೀಗಲಿದೆ. ವೈದ್ಯಕೀಯ ಕಾಲೇಜಿನಲ್ಲಿ ಕೆಲಸ ಯುವ ವೈದ್ಯರಿಗೆ ಹೆಚ್ಚು ಆಕರ್ಷಣೀಯ ಕೂಡ. ಜತೆಗೆ, ವೈದ್ಯಕೀಯ ಕಾಲೇಜು ಬೆಳೆದಂತೆಲ್ಲಾ ಸ್ನಾತಕೋತ್ತರ ಪದವಿ ಶಿಕ್ಷಣ ಪ್ರಾರಂಭವಾಗುತ್ತದೆ. ಪ್ರತಿ ವಿಷಯದಲ್ಲೂ ಹಲವಾರು ವೈದ್ಯಕೀಯ ಘಟಕಗಳು ಅಸ್ತಿತ್ವಕ್ಕೆ ಬರುತ್ತವೆ. ಒಂದು ಘಟಕದಲ್ಲಿ ತಲಾ ಒಬ್ಬರು ಪ್ರೊಫೆಸರ್, ರೀಡರ್, ಅಸಿಸ್ಟೆಂಟ್ ಪ್ರೊಫೆಸರ್, ಸೀನಿಯರ್ ರೆಸಿಡೆಂಟ್ ಇರುತ್ತಾರೆ. ವೈದ್ಯರ ಸಂಖ್ಯೆ ಹೆಚ್ಚಾಗುತ್ತದೆ. ಈ ವ್ಯವಸ್ಥೆಯನ್ನು ಜಿಲ್ಲಾ ಆಸ್ಪತ್ರೆಗಳಲ್ಲಿ ಕಾಣಲು ಸಾಧ್ಯವಿಲ್ಲ.

–ಡಾ.ಪಿ.ವಿ.ಭಂಡಾರಿ, ಮನೋ ವೈದ್ಯರು

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ADVERTISEMENT
ADVERTISEMENT

ಇನ್ನಷ್ಟು ಸುದ್ದಿ

ಇನ್ನಷ್ಟು
ADVERTISEMENT
ADVERTISEMENT
ADVERTISEMENT
ಪ್ರಜಾವಾಣಿ ವಿಡಿಯೊ
ಸಿನಿಮಾ
ADVERTISEMENT