ನಿಷ್ಕ್ರಿಯ ಸಂಸದೆ ಬೇಕೊ ಕ್ರಿಯಾಶೀಲ ಸಂಸದ ಬೇಕೊ: ಪ್ರಮೋದ್ ಮಧ್ವರಾಜ್ ಪ್ರಶ್ನೆ

ಗುರುವಾರ , ಏಪ್ರಿಲ್ 25, 2019
31 °C
ಅಭಿವೃದ್ಧಿ ಮುಂದಿಟ್ಟುಕೊಂಡು ಮತಯಾಚನೆ

ನಿಷ್ಕ್ರಿಯ ಸಂಸದೆ ಬೇಕೊ ಕ್ರಿಯಾಶೀಲ ಸಂಸದ ಬೇಕೊ: ಪ್ರಮೋದ್ ಮಧ್ವರಾಜ್ ಪ್ರಶ್ನೆ

Published:
Updated:
Prajavani

ಉಡುಪಿ: ಉಡುಪಿ–ಚಿಕ್ಕಮಗಳೂರು ಕ್ಷೇತ್ರದ ಜೆಡಿಎಸ್ ಅಭ್ಯರ್ಥಿ ಪ್ರಮೋದ್ ಮಧ್ವರಾಜ್ ಉಭಯ ಕ್ಷೇತ್ರಗಳಲ್ಲಿ ಬಿರುಸಿನ ಪ್ರಚಾರ ನಡೆಸುತ್ತಿದ್ದಾರೆ. ಉಡುಪಿಯಲ್ಲಿ ರಾಜಕೀಯ ಅಸ್ತಿತ್ವವೇ ಇಲ್ಲದ ಜೆಡಿಎಸ್‌ ಪಕ್ಷಕ್ಕೆ ನೆಲೆ ಕಲ್ಪಿಸಿಕೊಡಬೇಕು ಎಂದು ಕಾಲಿಗೆ ಚಕ್ರ ಕಟ್ಟಿಕೊಂಡವರಂತೆ ಕ್ಷೇತ್ರ ಸುತ್ತುತ್ತಿದ್ದಾರೆ. ಇದರ ಮಧ್ಯೆ ಪಕ್ಷದೊಳಗಿನ ಬಂಡಾಯ, ರಾಜಕೀಯ ಭವಿಷ್ಯ, ತಂತ್ರಗಾರಿಕೆಯ ಕುರಿತು ಪ್ರಮೋದ್ ‘ಪ್ರಜಾವಾಣಿ’ ಜತೆ ಮಾತನಾಡಿದರು.

l ಯಾವ ವಿಚಾರಗಳನ್ನು ಮುಂದಿಟ್ಟುಕೊಂಡು ಚುನಾವಣೆ ಎದುರಿಸುತ್ತಿದ್ದೀರಿ?

ಉಡುಪಿ–ಚಿಕ್ಕಮಗಳೂರು ಕ್ಷೇತ್ರಕ್ಕೆ ನಿಷ್ಕ್ರಿಯವಾದ ಸಂಸದರು ಬೇಕೊ, ಕ್ರಿಯಾಶೀಲ ಸಂಸದರು ಬೇಕೊ, ಕ್ಷೇತ್ರದ ಒಳಗಿನವರು ಬೇಕೊ, ಹೊರಗಿನವರು ಬೇಕೊ, ಅಭಿವೃದ್ಧಿಯಲ್ಲಿ ದಾಖಲೆ ಮಾಡಿರುವ ಅಭ್ಯರ್ಥಿಯನ್ನು ಆರಿಸುತ್ತೀರಾ? ಕೆಲಸವನ್ನೇ ಮಾಡದಿರುವ ಜನಪ್ರತಿನಿಧಿಯನ್ನು ಆಯ್ಕೆ ಮಾಡುತ್ತೀರಾ? ಈ ಪ್ರಶ್ನೆಗಳನ್ನು ಮತದಾರರ ಮುಂದಿಟ್ಟು ಮತ ಕೇಳುತ್ತಿದ್ದೇನೆ.

l ಕ್ಷೇತ್ರದಲ್ಲಿ ಮೋದಿ ಅಲೆ ಪರಿಣಾಮ ಬೀರಲಿದೆಯಾ? 

ಮೋದಿ ಅಲೆಯಲ್ಲಿ ಗೆದ್ದುಬಂದ ಶಾಸಕರು ಹೇಗೆ ಕೆಲಸ ಮಾಡುತ್ತಿದ್ದಾರೆ ಎಂದು ಜನರಿಗೆ ಮನವರಿಕೆಯಾಗಿದೆ. ಮೋದಿಯನ್ನು ನಂಬಿ ಕೆಲಸ ಬಾರದವರಿಗೆ ವೋಟ್ ಕೊಟ್ಟರೆ ತೊಂದರೆ ಕಟ್ಟಿಟ್ಟಬುತ್ತಿ ಎಂಬುದು ಮತದಾರರಿಗೆ ತಿಳಿದಿದೆ. 

l ಎರಡು ದೋಣಿಯಲ್ಲಿ ಕಾಲಿಟ್ಟಿದ್ದೀರ ಎನಿಸುವುದಿಲ್ಲವೇ?

ಕಾಂಗ್ರೆಸ್‌ ಹಾಗೂ ಜೆಡಿಎಸ್‌ ಎಂಬ ದೋಣಿಯಲ್ಲಿ ಎರಡು ಕಾಲಿಟ್ಟಿದ್ದೇನೆ. ಚುನಾವಣೆ ಬಳಿಕವೂ ಇದು ಬದಲಾಗುವುದಿಲ್ಲ.

l ಚುನಾವಣೆ ಬಳಿಕ ಮೈತ್ರಿ ಸರ್ಕಾರ ಬಿದ್ದುಹೋಗಲಿದೆ ಎಂಬ ಟೀಕೆಗಳಿಗೆ ಏನಂತೀರಿ?

ಈಗಾಗಲೇ ಎಲ್‌.ಕೆ.ಅಡ್ವಾಣಿ, ಅನಂತ್ ಕುಮಾರ್ ಪತ್ನಿ ತೇಜಸ್ವಿನಿ ಅವರನ್ನು ಬಿಜೆಪಿ ಬದಿಗಿಟ್ಟಿದೆ. ಮುಂದೆ ಯಡಿಯೂರಪ್ಪ ಅವರಿಗೆ ಏನಾಗಲಿದೆ ಎಂಬುದನ್ನು ಕಾದು ನೋಡಬೇಕು. ಮೈತ್ರಿ ಸರ್ಕಾರಕ್ಕೆ ಏನೂ ಆಗುವುದಿಲ್ಲ.

l ಜೆಡಿಎಸ್‌ ಚಿಹ್ನೆಯನ್ನು ಮತದಾರರಿಗೆ ಪರಿಚಯಿಸುವ ಸವಾಲು ಇದೆಯಲ್ಲವೇ?

ಕಳೆದ ಬೈಂದೂರು ವಿಧಾನಸಭಾ ಕ್ಷೇತ್ರದ ಚುನಾವಣೆಯಲ್ಲಿ ಜೆಡಿಎಸ್‌ ಪಕ್ಷಕ್ಕೆ ಕೇವಲ 2 ಸಾವಿರ ಮತಗಳು ಸಿಕ್ಕಿದ್ದವು. ಅದರ ಬೆನ್ನಿಗೆ ನಡೆದ ಶಿವಮೊಗ್ಗ ಲೋಕಸಭಾ ಕ್ಷೇತ್ರದ ಉಪ ಚುನಾವಣೆಯಲ್ಲಿ ಮಧು ಬಂಗಾರಪ್ಪ ಅವರಿಗೆ 59000 ಮತಗಳು ಬಿದ್ದವು. ಈ ಬದಲಾವಣೆ ನೋಡಿದರೆ, ಕಾಂಗ್ರೆಸ್‌ ಹಾಗೂ ಜೆಡಿಎಸ್‌ ಮೈತ್ರಿ ಅಭ್ಯರ್ಥಿಗೆ ಖಚಿತವಾಗಿ ಈ ಬಾರಿ ಹೆಚ್ಚು ಮತ ಬೀಳುವ ವಿಶ್ವಾಸ ಇದೆ.

l ಕಾಂಗ್ರೆಸ್‌ನಲ್ಲಿರುವ ಬಂಡಾಯದ ಬಿಸಿ ತಟ್ಟಲಿದೆಯಾ ?

ಕ್ಷೇತ್ರದಲ್ಲಿ ಪ್ರಚಾರ ಮಾಡುವಾಗ ಎಲ್ಲಿಯೂ ಬಂಡಾಯದ ಬಿಸಿ ತಟ್ಟಿಲ್ಲ. ಯಾವ ಸಭೆಗಳಲ್ಲೂ ಅಪಸ್ವರ, ಪ್ರಶ್ನೆ, ಸಂದೇಹಗಳು ಎದ್ದಿಲ್ಲ. 

l ನಿಮಗೆ ಯಾಕೆ ಮತ ಹಾಕಬೇಕು?

ನನ್ನನ್ನು ಕಳೆದುಕೊಂಡು ಉಡುಪಿ ಕ್ಷೇತ್ರದಲ್ಲಿ ಯಾವ ದುಷ್ಪರಿಣಾಮಗಳು ಆಗಿವೆ ಎಂಬುದು ಜನರಿಗೆ ಮನವರಿಕೆಯಾಗಿದೆ. ಶಾಸಕನಾಗಿದ್ದಾಗ ದಿನಕ್ಕೆ 24 ಗಂಟೆ ವಿದ್ಯುತ್ ಕೊಡಲಾಗುತ್ತಿತ್ತು. ಕುಡಿಯುವ ನೀರಿನ ಸಮಸ್ಯೆಗೆ ತಕ್ಕಮಟ್ಟಿನ ಪರಿಹಾರ ಸಿಕ್ಕಿತ್ತು. ಅಭಿವೃದ್ಧಿ ಕೆಲಸಗಳು ವೇಗವಾಗಿದ್ದವು. ಈಗಿನ ಪರಿಸ್ಥಿತಿಯ ಬಗ್ಗೆ ಜನರಿಗೆ ಅರಿವಾಗಿದೆ.

l ಮೀನುಗಾರರು ನಾಪತ್ತೆಯಾಗಿ ಮೂರು ತಿಂಗಳು ಕಳೆದರೂ ಸುಳಿವು ಸಿಕ್ಕಿಲ್ಲವಲ್ಲ?

ವಿಧಾನಸಭಾ ಚುನಾವಣೆಯಲ್ಲಿ ಪರಾಭವಗೊಂಡಿದ್ದರೂ ಇತಿ–ಮಿತಿಯಲ್ಲಿ ನಾಪತ್ತೆಯಾದ ಮೀನುಗಾರರ ಪತ್ತೆಗೆ ಶ್ರಮಿಸಿದ್ದೇನೆ. ಗೆದ್ದಾಗಲೂ ನನ್ನ ಮೇಲೆ ಗೂಬೆ ಕೂರಿಸಿದ್ದರು. ಸೋತಾಗಲೂ ಕೂರಿಸುತ್ತಿದ್ದಾರೆ. ಜನಪ್ರತಿನಿಧಿಗಳು ಮೀನುಗಾರರ ಪತ್ತೆ ವಿಚಾರದಲ್ಲಿ ಯಾವ ಕ್ರಮ ಕೈಗೊಂಡಿದ್ದಾರೆ ಎಂಬುದನ್ನು ತಿಳಿಸಲಿ.

l ಮೋದಿ ಹೆಸರು ಕೇಳಿಕೊಂಡು ಮತ ಕೇಳಲಾಗುತ್ತಿದೆಯಲ್ಲ ?

ಮೋದಿ ಅವರ ಮುಖ ನೋಡಿಕೊಂಡು ಮತ ಹಾಕಿದರೆ ಮುಂದೆ ಮೋದಿ ಯಾರ ಕೈಗೂ ಸಿಗುವುದಿಲ್ಲ. ಕ್ಷೇತ್ರದಲ್ಲಿ ಸಮಸ್ಯೆಗಳು ಎದುರಾದಾಗ ಬಂದು ಬಗೆಹರಿಸುವುದಿಲ್ಲ. ಜನರ ಕೈಗೆ ಸಿಗುವುದು ಪ್ರಮೋದ್ ಮಧ್ವರಾಜ್ ಅಂಥವರು ಮಾತ್ರ. 

l ನಿಮ್ಮ ಮೃದು ಹಿಂದುತ್ವದ ಬಗ್ಗೆ ಏನು ಹೇಳುತ್ತೀರಿ? 

ಹಿಂದೂ, ಮುಸ್ಲಿಂ, ಕ್ರಿಶ್ಚಿಯನ್‌, ಬೌದ್ಧರು, ಜೈನರನ್ನು ಸಮಾನವಾಗಿ ಪ್ರೀತಿಸುತ್ತೇನೆ. ಅದನ್ನೇ ಮೃಧು ಹಿಂದುತ್ವ ಎಂದು ಕರೆದರೆ ನನ್ನ ಅಭ್ಯಂತರ ಇಲ್ಲ.

l ಟಿಪ್ಪು ಜಯಂತಿಗೆ ಗೈರಾದ ಹೇಳಿಕೆ ವಿವಾದ ಸೃಷ್ಟಿಸಿಲ್ಲವೇ?

ಅದರ ಬಗ್ಗೆ ಮಾತನಾಡುವುದಿಲ್ಲ.

---

‘ಪ್ರಶ್ನೆಗಳಿಗೆ ಉತ್ತರಿಸಿ’

ಐಎನ್‌ಎಸ್‌ ನೌಕೆಯ ತಳಭಾಗಕ್ಕೆ ಮೀನುಗಾರಿಕಾ ಬೋಟ್‌ ಡಿಕ್ಕಿ ಹೊಡೆದಿದ್ದು ಹೌದಾ ಅಥವಾ ಇಲ್ಲವಾ ಎಂಬ ವಿಚಾರವನ್ನು ಅಧಿಕಾರಿಗಳು ಸ್ಪಷ್ಟಪಡಿಸಬೇಕು. ಡಿಕ್ಕಿ ಹೊಡೆದಿಲ್ಲ ಎಂದಾದರೆ ನೌಕೆಯ ತಳಭಾಗಕ್ಕೆ ಹಾನಿ ಹೇಗಾಯಿತು? ಮೀನುಗಾರರ ಬೋಟ್‌ ನಾಪತ್ತೆಯಾಗಿದ್ದು ಹೇಗೆ? ಬೋಟ್‌ ಸುಳಿವು ಸಿಗದಿರಲು ಕಾರಣ ಏನು ಎಂಬ ಪ್ರಶ್ನೆಗಳಿಗೆ ಉತ್ತರ ನೀಡಬೇಕು ಎಂದು ಪ್ರಮೋದ್ ಮಧ್ವರಾಜ್ ಒತ್ತಾಯಿಸಿದರು.

‘ಸ್ಪಷ್ಟೀಕರಣ ಕೊಟ್ಟಿದ್ದೇನೆ’

ಚುನಾವಣಾ ಆಯೋಗಕ್ಕೆ ಆಸ್ತಿ ವಿವಾದ ಸಲ್ಲಿಕೆ ವಿಚಾರವಾಗಿ ಉಂಟಾಗಿರುವ ಗೊಂದಲ ಸಂಬಂಧ ಆದಾಯ ತೆರಿಗೆ ಇಲಾಖೆ ಅಧಿಕಾರಿಗಳು ಸ್ಟಷ್ಟೀಕರಣಗಳನ್ನು ಕೇಳಿದ್ದರು. ₹ 2.5 ಲಕ್ಷ ಠೇವಣಿಯ ವ್ಯತ್ಯಾಸವಿದ್ದು, ಇಲಾಖೆಗೆ ಸೂಕ್ತ ಉತ್ತರ ಕೊಟ್ಟಿದ್ದೇನೆ ಎಂದು ಪ್ರಮೋದ್ ಮಧ್ವರಾಜ್ ತಿಳಿಸಿದರು.   

ಬರಹ ಇಷ್ಟವಾಯಿತೆ?

 • 6

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !