ಶನಿವಾರ, ಸೆಪ್ಟೆಂಬರ್ 18, 2021
22 °C

ಗೋಲ್ಡನ್ ಬುಕ್ ಆಫ್ ರೆಕಾರ್ಡ್‌ ಮಾಡಿದ ಉಡುಪಿಯ ತನುಶ್ರೀ ಪಿತ್ರೋಡಿ 

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಉಡುಪಿ: 43 ನಿಮಿಷ 18 ಸೆಕೆಂಡ್‌ಗಳಲ್ಲಿ 245 ಯೋಗಾಸನ ಭಂಗಿಗಳನ್ನು ಪ್ರದರ್ಶಿಸುವ ಮೂಲಕ ಉಡುಪಿಯ 13 ವರ್ಷದ ಬಾಲಕಿ ತನುಶ್ರೀ ಪಿತ್ರೋಡಿ ಗೋಲ್ಡನ್ ಬುಕ್ ಆಫ್‌ ವರ್ಲ್ಡ್‌ ರೆಕಾರ್ಡ್‌ ಮಾಡಿದರು.

ಕೃಷ್ಣಮಠದ ರಾಜಾಂಗಣದಲ್ಲಿ ಭಾನುವಾರ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ತನುಶ್ರೀ ವಿಶ್ವ ದಾಖಲೆಯ ಸಾಧನೆ ಮಾಡಿದ್ದಾಳೆ. ‘ಮೋಸ್ಟ್ ಯೋಗ ಪೋಸಸ್‌ ಪರ್ಫಾರ್ಮಡ್‌ ಇನ್‌ ಎ ರಿಲೇ’ ವಿಭಾಗದಲ್ಲಿ ಒಂದು ಗಂಟೆಯೊಳಗೆ ಕನಿಷ್ಠ 200 ಆಸನಗಳನ್ನು ಪ್ರದರ್ಶಿಸಬೇಕು ಎಂಬ ಗುರಿಯನ್ನು ಸಂಸ್ಥೆ ನೀಡಿತ್ತು. ಕಠಿಣ ಸವಾಲು ಸ್ವೀಕರಿಸಿದ ತನುಶ್ರೀ ನಿಗದಿತ ಅವಧಿಗೂ ಮುನ್ನವೇ ಗುರಿಮುಟ್ಟಿ ದಾಖಲೆ ನಿರ್ಮಿಸಿದರು.

ಗೋಲ್ಡನ್ ಬುಕ್ ಆಫ್‌ ವರ್ಲ್ಡ್‌ ರೆಕಾರ್ಡ್‌ ಸಂಸ್ಥೆಯ ಮುಖ್ಯಸ್ಥ ವೈಷ್ಣವ್ ಮನೀಷ್‌ ಮಾತನಾಡಿ, ‘ಅತ್ಯಂತ ಕಠಿಣವಾದ ಯೋಗಾಸನ ಭಂಗಿಗಳನ್ನು ಲೀಲಾಜಾಲವಾಗಿ ಪ್ರದರ್ಶನ ಮಾಡಿರುವ ತನುಶ್ರೀ ಪಿತ್ರೋಡಿ, ಗೋಲ್ಡನ್ ಬುಕ್ ಆಫ್‌ ರೆಕಾರ್ಡ್‌ನಲ್ಲಿ ಸ್ಥಾನ ಪಡೆದಿದ್ದಾಳೆ. ಆಕೆಯ ಸಾಧನೆ 100 ದಾಖಲೆಗಳಿಗೆ ಸಮ’ ಎಂದು ಬಣ್ಣಿಸಿದರು.

ಕಡಿಮೆ ಅವಧಿಯಲ್ಲಿ ಹೆಚ್ಚು ಯೋಗಾಸನಗಳ ಮೂಲಕ ತನುಶ್ರೀ ನಿರ್ಮಿಸಿರುವ ದಾಖಲೆಯನ್ನು ಸುಲಭವಾಗಿ ಮುರಿಯಲು ಸಾಧ್ಯವಿಲ್ಲ. ಸದ್ಯ ಸಂಸ್ಥೆಯ ಕಡೆಯಿಂದ ತಾತ್ಕಾಲಿಕ ಪ್ರಮಾಣಪತ್ರ ವಿತರಿಸಲಾಗುತ್ತಿದ್ದು, ಶೀಘ್ರವೇ ಮೂಲ ಪ್ರಮಾಣಪತ್ರ ನೀಡಲಾಗುವುದು ಎಂದರು.

ಬಾಲಕಿ ತನುಶ್ರೀ ಪಿತ್ರೋಡಿ ಮಾತನಾಡಿ, 7ನೇ ವಿಶ್ವದಾಖಲೆ ನಿರ್ಮಾಣ ಮಾಡಿರುವುದು ತುಂಬಾ ಖುಷಿ ಕೊಟ್ಟಿದೆ. ಕೊರೊನಾ ಲಾಕ್‌ಡೌನ್ ಸಮಯದಲ್ಲಿ ನಿರಂತರ ಅಭ್ಯಾಸ ಮಾಡಿದ್ದರಿಂದ ದಾಖಲೆ ಮಾಡಲು ಸುಲಭವಾಯಿತು ಎಂದರು.

180 ಯೋಗಾಸನಗಳನ್ನು ಸ್ವತಃ ಕಲಿತು ಅಭ್ಯಾಸ ಮಾಡಿದ್ದೆ. ಉಳಿದ ಆಸನಗಳನ್ನು ಯೋಗಗುರು ನರೇಂದ್ರ ಕಾಮತ್ ಅವರು ಹೇಳಿಕೊಟ್ಟರು. ಮುಂದೆಯೂ ಯೋಗಾಸನದಲ್ಲಿ ದಾಖಲೆಗಳನ್ನು ಮಾಡುವ ಗುರಿ ಹೊಂದಿದ್ದೇನೆ ಎಂದರು.


ಕೃಷ್ಣಮಠದ ರಾಜಾಂಗಣದಲ್ಲಿ ಕಾರ್ಯಕ್ರಮ ಆಯೋಜಿಸಲಾಗಿತ್ತು.

 

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು