ಶನಿವಾರ, 7 ಸೆಪ್ಟೆಂಬರ್ 2024
×
ADVERTISEMENT
ಈ ಕ್ಷಣ :
ADVERTISEMENT

ಉಡುಪಿ | 27ರಂದು ಹುಲಿವೇಷ ಸ್ಪರ್ಧೆ: ಪುತ್ತಿಗೆ ಶ್ರೀ

ಶ್ರೀಕೃಷ್ಣ ಜಯಂತಿಯ ಅಂಗವಾಗಿ ಕೃಷ್ಣ ಮಠದಲ್ಲಿ ವಿವಿಧ ಕಾರ್ಯಕ್ರಮ
Published 17 ಆಗಸ್ಟ್ 2024, 6:03 IST
Last Updated 17 ಆಗಸ್ಟ್ 2024, 6:03 IST
ಅಕ್ಷರ ಗಾತ್ರ

ಉಡುಪಿ: ಶ್ರೀಕೃಷ್ಣ ಜಯಂತಿಯ ಅಂಗವಾಗಿ ಇದೇ 27ರಂದು ಸಂಜೆ 4ರಿಂದ ಶ್ರೀಕೃಷ್ಣ ಮಠದ ರಾಜಾಂಗಣದಲ್ಲಿ ಹುಲಿವೇಷ, ಜಾನಪದ ವೇಷ, ಪೌರಾಣಿಕ ನೃತ್ಯ ಸ್ಪರ್ಧೆಗಳು ನಡೆಯಲಿವೆ ಎಂದು ಪರ್ಯಾಯ ಪುತ್ತಿಗೆ ಮಠದ ಸುಗುಣೇಂದ್ರತೀರ್ಥ ಸ್ವಾಮೀಜಿ ಹೇಳಿದರು.

ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಹುಲಿವೇಷ ಸ್ಪರ್ಧೆಯಲ್ಲಿ ವಿಜೇತರಿಗೆ ಪ್ರಥಮ ಬಹುಮಾನವಾಗಿ ₹1.15 ಲಕ್ಷ ಮೌಲ್ಯದ ಟಿವಿಎಸ್​ ​ ಎಲೆಕ್ಟ್ರಿಕಲ್​ ಸ್ಕೂಟರ್​, ದ್ವಿತೀಯ ಬಹುಮಾನ ₹50 ಸಾವಿರ, ತೃತೀಯ ಬಹುಮಾನ ₹25 ಸಾವಿರ, ಜಾನಪದ ಸ್ಪರ್ಧೆಯಲ್ಲಿ ಪ್ರಥಮ ಬಹುಮಾನ ₹25 ಸಾವಿರ, ದ್ವಿತೀಯ ಬಹುಮಾನ ₹15 ಸಾವಿರ, ತೃತೀಯ ಬಹುಮಾನ ₹10 ಸಾವಿರ, ಪೌರಾಣಿಕ ನೃತ್ಯ ಸ್ಪರ್ಧೆಯಲ್ಲಿ ಪ್ರಥಮ ಬಹುಮಾನ ₹30 ಸಾವಿರ, ದ್ವಿತೀಯ ಬಹುಮಾನ ₹20 ಸಾವಿರ, ತೃತೀಯ ಬಹುಮಾನ ₹10 ಸಾವಿರ ನೀಡಲಾಗುವುದು ಎಂದರು.

ಮಠದ ದಿವಾನ್​ ನಾಗರಾಜ ಆಚಾರ್ಯ ಮಾತನಾಡಿ, ಆ. 22ರಂದು ಸಂಜೆ 5ಗಂಟೆಗೆ ಗೀತಾ ಮಂದಿರದಲ್ಲಿ ಕರಕುಶಲ ವಸ್ತುಗಳ ಪ್ರದರ್ಶನ ನಡೆಯಲಿದ್ದು, ಶಿವಮೊಗ್ಗ ಸಂಸದ ಬಿ.ವೈ. ರಾವೇಂದ್ರ ಉದ್ಘಾಟಿಸುವರು. 23ರಂದು ಸಂಜೆ 5ಗಂಟೆಗೆ ಲಡ್ಡು ಉತ್ಸವವನ್ನು ಮುಜರಾಯಿ ಸಚಿವ ರಾಮಲಿಂಗಾ ರೆಡ್ಡಿ ಉದ್ಘಾಟಿಸುವರು. 24ರಂದು ಸಂಜೆ 5ಗಂಟೆಗೆ ಗೀತೋತ್ಸವಕ್ಕೆ ಕಾನೂನು ಸಚಿವ ಎಚ್​.ಕೆ. ಪಾಟೀಲ್​ ಚಾಲನೆ ನೀಡಲಿದ್ದಾರೆ. 25ರಂದು ಸಂಜೆ 5ಗಂಟೆಗೆ ರಾಜಾಂಗಣದಲ್ಲಿ ನಡೆಯುವ ನೃತ್ಯೋತ್ಸವವನ್ನು ರಾಜ್ಯಪಾಲ ಥಾವರ್‌ ಚಂದ್‌ ಗೆಹಲೋತ್​ ಉದ್ಘಾಟಿಸುವರು. ಚಿತ್ರನಟ ರಿಷಬ್​ ಶೆಟ್ಟಿ ಮುಖ್ಯ ಅತಿಥಿಯಾಗಿರುವರು ಎಂದು ವಿವರಿಸಿದರು.

26ರಂದು ಬೆಳಿಗ್ಗೆ 9 ಗಂಟೆಗೆ ಮಧ್ವ ಮಂಟಪದಲ್ಲಿ ಡೋಲೋತ್ಸವ ನಡೆಯಲಿದ್ದು, ಕೇಂದ್ರ ಸಚಿವರಾದ ಎಚ್​.ಡಿ. ಕುಮಾರಸ್ವಾಮಿ, ನಿರ್ಮಲಾ ಸೀತಾರಾಮನ್​, ಕಿಶನ್​ ರೆಡ್ಡಿ, ಸಂಸದ ಬೃಜೇಶ್​ ಚೌಟ ಪಾಲ್ಗೊಳ್ಳಲಿದ್ದಾರೆ ಎಂದು ಹೇಳಿದರು.

ಆ. 27ರಂದು ಮಧ್ಯಾಹ್ನ 12ರಿಂದ ರಥಬೀದಿಯಲ್ಲಿ ಮಲ್ಲಕಂಬ ಪ್ರದರ್ಶನ ನಡೆಯಲಿದ್ದು, 2ಗಂಟೆಗೆ ಶ್ರೀಕೃಷ್ಣ ಲೀಲೋತ್ಸವ ಸಭಾ ಕಾರ್ಯಕ್ರಮವನ್ನು ಜಿಲ್ಲಾ ಉಸ್ತುವಾರಿ ಸಚಿವೆ ಲಕ್ಷ್ಮಿ ಹೆಬ್ಬಾಳಕರ​ ಉದ್ಘಾಟಿಸುವರು. 28ರಂದು ಸಂಜೆ 5ಗಂಟೆಗೆ ರಾಜಾಂಗಣದಲ್ಲಿ ವಿವಿಧ ಸ್ಪರ್ಧೆಗಳ ವಿಜೇತರಿಗೆ ಬಹುಮಾನ ವಿತರಣೆ ನಡೆಯಲಿದ್ದು, ಸಾಹಿತಿ ಎಸ್​.ಎಲ್.ಭೈರಪ್ಪ ಉಪನ್ಯಾಸ ನೀಡಲಿದ್ದಾರೆ ಎಂದರು.

ವಿದ್ವಾನ್​ ಮಹಿತೋಷ್​ ಆಚಾರ್ಯ ಮಾತನಾಡಿ, ಶ್ರೀಕೃಷ್ಣ ಮಾಸೋತ್ಸವ ಅಂಗವಾಗಿ ರಾಜಾಂಗಣದಲ್ಲಿ ವಿವಿಧ ವಿದ್ವಾಂಸರಿಂದ ಉಪನ್ಯಾಸ ಕಾರ್ಯಕ್ರಮ ಆಯೋಜಿಸಲಾಗಿದೆ ಎಂದು ಹೇಳಿದರು.

ಆ. 18ರಂದು ಸಾಂಪ್ರದಾಯಿಕ ಕ್ರೀಡೋತ್ಸವವನ್ನು ರಥಬೀದಿಯಲ್ಲಿ ಆಯೋಜಿಸಲಾಗಿದ್ದು, ಅಂದು ಬೆಳಿಗ್ಗೆ 9.30ಕ್ಕೆ ಕನಕ ಗೋಪುರದ ಮುಂಭಾಗದಲ್ಲಿ ಪರ್ಯಾಯ ಶ್ರೀಗಳು ಚಾಲನೆ ನೀಡಲಿದ್ದಾರೆ ಎಂದು ತಿಳಿಸಿದರು.

ಮಾಜಿ ಶಾಸಕ ರಘುಪತಿ ಭಟ್, ಪರ್ಯಾಯ ಸಮಿತಿಯ ರಮೇಶ್ ಆಚಾರ್ಯ, ರವೀಂದ್ರ ಆಚಾರ್ಯ ಇದ್ದರು.

ಶ್ರೀಕೃಷ್ಣ ಜಯಂತಿಯಲ್ಲಿ ಗಣ್ಯರು ಭಾಗಿ ವಿವಿಧ ವಿದ್ವಾಂಸರಿಂದ ಉಪನ್ಯಾಸ ಕಾರ್ಯಕ್ರಮ ತುಳುನಾಡಿನ ಆಟ ನೆನಪಿಸುವ ಸಾಂಪ್ರದಾಯಿಕ ಕ್ರೀಡೋತ್ಸವ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT