ಮಂಗಳವಾರ, 23 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಗುರು ನೆನೆದು ಗೋಳಾಡಿದ ಉಮಾಭಾರತಿ

ಪೇಜಾವರ ಶ್ರೀಗಳ ಶ್ವಾಸಕೋಶ ಅಲ್ಪ ಚೇತರಿಕೆ
Last Updated 25 ಡಿಸೆಂಬರ್ 2019, 19:31 IST
ಅಕ್ಷರ ಗಾತ್ರ

ಉಡುಪಿ: ‘ಗುರುಗಳೇ ನಿಮ್ಮನ್ನು ನೋಡಲು ಬಂದಿದ್ದೀನಿ, ದಯವಿಟ್ಟು ಕಣ್ಣುಬಿಟ್ಟು ನೋಡಿ’ ಎಂದು ಪೇಜಾವರ ಶ್ರೀಗಳ ಶಿಷ್ಯೆ ಉಮಾ ಭಾರತಿ ಕೆಎಂಸಿ ಆಸ್ಪತ್ರೆಯ ತೀವ್ರ ನಿಗಾ ಘಟಕದ ಎದುರು ಕೆಲಹೊತ್ತು ಗೋಳಾಡಿದರು ಎಂದು ಪ್ರತ್ಯಕ್ಷದರ್ಶಿಯೊಬ್ಬರು ತಿಳಿಸಿದರು.

ತೀವ್ರ ದುಃಖಿತರಾಗಿದ್ದ ಉಮಾ ಭಾರತಿ, ಶ್ರೀಗಳನ್ನು ನೆನೆದು ನಾಲ್ಕೈದು ಬಾರಿ ಕೂಗಿ ಕರೆಯುತ್ತಲೇ ಇದ್ದರು. ಅಲ್ಲಿನ ಸಿಬ್ಬಂದಿ ಅವರನ್ನು ಸಮಾಧಾನಪಡಿಸಿದರು. ಬಳಿಕ ವೈದ್ಯರ ಬಳಿ ತೆರಳಿದ ಅವರು ‘ಸ್ವಾಮೀಜಿ ಬಳಿ ಹೋಗಿ ನಿಮ್ಮ ಶಿಷ್ಯೆ ಉಮಾ ಭಾರತಿ ಬಂದಿರುವುದಾಗಿ ಹೇಳಿ, ಖಂಡಿತ ಎಚ್ಚರವಾಗುತ್ತಾರೆ’ ಎಂದು ಮನವಿ ಮಾಡಿದರು.ಉಮಾಭಾರತಿ ಅವರ ಅಭಿಮಾನ ಕಂಡು ಅಲ್ಲಿದ್ದವರ ಕಣ್ಣು ತೇವವಾಯಿತು ಎಂದು ಘಟನೆಯನ್ನು ವಿವರಿಸಿದರು.

ಉಮಾಭಾರತಿ 30 ವರ್ಷಗಳ ಹಿಂದೆ ಪೇಜಾವರ ಶ್ರೀಗಳಿಂದ ಸನ್ಯಾಸತ್ವ ಸ್ವೀಕರಿಸಿದ್ದಾರೆ. ಅಂದಿನಿಂದ ಗುರು ಶಿಷ್ಯೆಯ ಬಾಂಧವ್ಯ ಗಟ್ಟಿಯಾಗಿತ್ತು. ಹಲವು ಬಾರಿ ಅವರು ಮಠಕ್ಕೆ ಬಂದು ಶ್ರೀಗಳ ಆಶೀರ್ವಾದ ಪಡೆದು ಗುರುವಂದನೆ ಸಲ್ಲಿಸಿದ್ದಾರೆ.

ಮೂರು ದಿನಗಳಿಂದ ಉಮಾ ಭಾರತಿ ಉಡುಪಿಯಲ್ಲಿಯೇ ಉಳಿದುಕೊಂಡಿದ್ದು, ನಿರಂತರವಾಗಿ ಆರೋಗ್ಯದ ಬಗ್ಗೆ ಮಾಹಿತಿ ಪಡೆಯುತ್ತಿದ್ದಾರೆ.

ಸೋಂಕು ಕಡಿಮೆ:

ಸ್ವಾಮೀಜಿಯ ಶ್ವಾಸಕೋಶ ಸೋಂಕು ನಿಧಾನವಾಗಿ ಕಡಿಮೆಯಾಗುತ್ತಿದೆ. ಆರೋಗ್ಯ ಸ್ಥಿರವಾಗಿದೆ ಎಂದು ಕೆಎಂಸಿ ವೈದ್ಯರು ತಿಳಿಸಿದ್ದಾರೆ.ಶ್ವಾಸಕೋಶ ನಿಧಾನವಾಗಿ ಚೇತರಿಸಿಕೊಳ್ಳುತ್ತಿದೆ. ಇನ್ನೂ ಪ್ರಜ್ಞೆ ಬಂದಿಲ್ಲ. ಪರಿಸ್ಥಿತಿ ಗಂಭೀರವಾಗಿಯೇ ಇದೆ ಎಂದು ಮಾಹಿತಿ ನೀಡಿದ್ದಾರೆ.

ಗಣ್ಯರ ಭೇಟಿ:

ಬುಧವಾರ ಕಾಂಗ್ರೆಸ್‌ ನಾಯಕರಾದ ವೀರಪ್ಪ ಮೊಯ್ಲಿ ಶ್ರೀಗಳ ಆರೋಗ್ಯ ವಿಚಾರಿಸಿದರು. ಬಳಿಕ ಮಾತನಾಡಿದ ಅವರು, ಸ್ವಾಮೀಜಿಯ ಶೀಘ್ರ ಚೇತರಿಕೆಗೆ ದೇವರಲ್ಲಿ ಪ್ರಾರ್ಥಿಸುವುದಾಗಿ ತಿಳಿಸಿದರು. ಉದ್ಯಮಿ ಡಾ.ಬಿ.ಆರ್‌.ಶೆಟ್ಟಿ, ಕಾಳಹಸ್ತೇಂದ್ರ ಸರಸ್ವತಿ ಸ್ವಾಮೀಜಿ, ಸಿ.ಟಿ.ರವಿ,ಉದ್ಯಮಿ ವಿಠಲ‌ಹೆಗ್ಡೆ ಆಸ್ಪತ್ರೆಗೆ ಭೇಟಿ ನೀಡಿದರು.

ಮತ್ತೊಂದೆಡೆ ಶ್ರೀಗಳ ಚೇತರಿಕೆಗೆ ಹಲವೆಡೆ ಪೂಜೆ, ಪ್ರಾರ್ಥನೆಗಳು ಮುಂದುವರಿದಿವೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT