ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸಂಕಷ್ಟ ಕಾಲದಲ್ಲಿ ಅನಗತ್ಯ ರಾಜಕೀಯ: ಸಂಸದ ಬಿ.ವೈ.ರಾಘವೇಂದ್ರ ಬೇಸರ

ಮಾರಣಕಟ್ಟೆಯಲ್ಲಿ ಕಿಟ್ ವಿತರಣೆಗೆ ಚಾಲನೆ ನೀಡಿದ ಸಂಸದ ರಾಘವೇಂದ್ರ
Last Updated 8 ಜೂನ್ 2021, 7:20 IST
ಅಕ್ಷರ ಗಾತ್ರ

ಕುಂದಾಪುರ: ಇಡೀ ವಿಶ್ವವು ಕೋವಿಡ್ ಸಂಕಷ್ಟದಲ್ಲಿ ನರಳುತ್ತಿದೆ. ಜನರ ಪ್ರಾಣ ಉಳಿಸಲು ಕೇಂದ್ರ ಹಾಗೂ ರಾಜ್ಯ ಸರ್ಕಾರಗಳು ಲಸಿಕೆ ನೀಡಿಕೆಯ ದಿಟ್ಟ ಹೆಜ್ಜೆಯನ್ನು ಇಟ್ಟರೆ, ಸಂಕಷ್ಟ ಕಾಲದಲ್ಲಿ ಒಗ್ಗಟ್ಟಿನಿಂದ ಬೆಂಬಲಿಸಬೇಕಾದ ರಾಜಕೀಯ ಪಕ್ಷದ ಮುಖಂಡರು, ಅನಗತ್ಯ ರಾಜಕೀಯ ಮಾಡುತ್ತಿರುವುದು ಖೇದವನ್ನು ಉಂಟು ಮಾಡಿದೆ ಎಂದು ಸಂಸದ ಬಿ.ವೈ.ರಾಘವೇಂದ್ರ ಬೇಸರ ವ್ಯಕ್ತಪಡಿಸಿದರು.

ಇಲ್ಲಿಗೆ ಸಮೀಪದ ಮಾರಣಕಟ್ಟೆಯಲ್ಲಿ ಮೂಕಾಂಬಿಕಾ ಸಭಾಭವನದಲ್ಲಿ ಸೋಮವಾರ ನಡೆದ ಕಾರ್ಯಕ್ರಮದಲ್ಲಿ ಸೇವಾ ಭಾರತಿ, ಶಿವಮೊಗ್ಗದ ಪ್ರೇರಣಾ ಎಜುಕೇಶನಲ್ ಟ್ರಸ್ಟ್ ಹಾಗೂ ಕುಂದಾಪುರ ಎಜುಕೇಶನಲ್ ಸೊಸೈಟಿ ಜತೆಯಾಗಿ ಕೋವಿಡ್ ಕಾರಣದಿಂದ ಸಂಕಷ್ಟಕ್ಕೆ ಒಳಗಾದ ಹಾಗೂ ಕೋವಿಡ್ ಸೇನಾನಿಗಳಾಗಿ ದುಡಿಯುತ್ತಿರುವವರಿಗೆ ನೀಡುತ್ತಿರುವ ಅಗತ್ಯ ವಸ್ತುಗಳ ಕಿಟ್ ವಿತರಣೆ ಮಾಡಿ ಅವರು ಮಾತನಾಡಿದರು.

‘ಸಂಕಷ್ಟ ಕಾಲದಲ್ಲಿ ರಾಜ್ಯದ ನೊಂದ ಜನರ ರಕ್ಷಣೆಗೆ ನಿಂತಿರುವ ಸರ್ಕಾರ, ಅರ್ಹ ವರ್ಗಗಗಳಿಗೆ ಪ್ಯಾಕೇಜ್‌ಗಳನ್ನು ಘೋಷಣೆ ಮಾಡಿ ಅವರ ಕಣ್ಣೀರು ಒರೆಸುವ ಕೆಲಸ ಮಾಡುತ್ತಿದೆ. ಸಮಾಜದಲ್ಲಿ ಸ್ಥಾನ-ಮಾನಗಳನ್ನು ಗಳಿಸಿರುವ ನಮ್ಮ ಮೇಲೆ ಸಮಾಜದ ಋಣವಿದೆ. ಶಿವಮೊಗ್ಗ ಲೋಕಸಭಾ ಕ್ಷೇತ್ರ ವ್ಯಾಪ್ತಿಯ 35 ಸಾವಿರ ಕುಟುಂಬಗಳನ್ನು ಗುರುತಿಸಿ ಅವರಿಗೆ ಕಿಟ್‌ಗಳನ್ನು ನೀಡುವ ಕೆಲಸ ಮಾಡುತ್ತಿದ್ದೇವೆ’ ಎಂದರು.

ಕಾರ್ಯಕ್ರಮಕ್ಕೆ ಚಾಲನೆ ನೀಡಿ ಮಾತನಾಡಿದ ರಾಜ್ಯ ಮುಜರಾಯಿ ಸಚಿವ ಕೋಟ ಶ್ರೀನಿವಾಸ ಪೂಜಾರಿ ಅವರು, ಪ್ರಸ್ತುತ ನಾಡು ಎದುರಿಸುತ್ತಿರುವ ಸಂಕಷ್ಟ ಕಾಲದಲ್ಲಿ ಪ್ರೇರಣಾ ಟ್ರಸ್ಟಿನ ಪ್ರೇರಣೆಯಿಂದ ನೆರವಾಗುತ್ತಿರುವುದು ದೊಡ್ಡ ಸಾಧನೆಯಾಗಿದೆ ಎಂದರು. ಬೈಂದೂರು ಶಾಸಕ ಬಿ.ಎಂ.ಸುಕುಮಾರ್ ಶೆಟ್ಟಿ, ಸೇವಾ ಭಾರತಿ ಪ್ರಮುಖ ಪ್ರಸನ್ನ ಉಪ್ಪುಂದ, ಜಿಲ್ಲಾ ಪಂಚಾಯಿತಿ ಮಾಜಿ ಸದಸ್ಯರಾದ ಬಾಬು ಶೆಟ್ಟಿ ತಗ್ಗರ್ಸೆ, ಶಂಕರ ಪೂಜಾರಿ ಯಡ್ತರೆ, ಸುರೇಶ್ ಬಟವಾಡೆ, ತಾಲ್ಲೂಕು ಪಂಚಾಯಿತಿ ಮಾಜಿ ಅಧ್ಯಕ್ಷ ಮಹೇಂದ್ರ ಪೂಜಾರಿ ಇದ್ದರು.

ಬೈಂದೂರು ಬಿಜೆಪಿ ಮಂಡಲ ಅಧ್ಯಕ್ಷ ದೀಪಕಕುಮಾರ್ ಶೆಟ್ಟಿ ಸ್ವಾಗತಿಸಿದರು. ಪ್ರಧಾನ ಕಾರ್ಯದರ್ಶಿ ಪ್ರಕಾಶ್ ಪೂಜಾರಿ ಜಡ್ಡು ವಂದಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT