ಶುಕ್ರವಾರ, ಸೆಪ್ಟೆಂಬರ್ 24, 2021
21 °C
ಜಿಲ್ಲಾ ಕನ್ನಡ ಸಾಹಿತ್ಯ ಸಮ್ಮೇಳನಾಧ್ಯಕ್ಷೆಯಾದ ಹಿರಿಯ ಲೇಖಕಿ ವೈದೇಹಿ ಮನದಾಳ

ಮಕ್ಕಳಿಗೆ ನೆಲದ ಭಾಷೆ ತಪ್ಪಿಹೋಗದಿರಲಿ- ವೈದೇಹಿ

ಬಾಲಚಂದ್ರ ಎಚ್‌. Updated:

ಅಕ್ಷರ ಗಾತ್ರ : | |

Prajavani

ಉಡುಪಿ: ಜ.26ರಂದು ಬ್ರಹ್ಮಾವರದ ಹಂಗಾರಕಟ್ಟೆಯ ಚೇತನಾ ಶಾಲೆಯ ಆವರಣದಲ್ಲಿ ಜಿಲ್ಲಾ ಕನ್ನಡ ಸಾಹಿತ್ಯ ಸಮ್ಮೇಳನ ನಡೆಯುತ್ತಿದೆ. ಹಿರಿಯ ಲೇಖಕಿ, ಸಾಹಿತಿಯೂ ಆಗಿರುವ ವೈದೇಹಿ ಸಮ್ಮೇಳನಾಧ್ಯಕ್ಷೆಯಾಗಿದ್ದಾರೆ. ಕನ್ನಡದ ಹಬ್ಬ ನಡೆಯುತ್ತಿರುವ ಈ ಹೊತ್ತಿನಲ್ಲಿ ಕನ್ನಡ ಭಾಷೆಯ ಬೆಳವಣಿಗೆ, ಮುಂದಿರುವ ಸವಾಲುಗಳ ಕುರಿತು ‘ಪ್ರಜಾವಾಣಿ’ಯ ಜತೆ ವೈದೇಹಿ ಮಾತನಾಡಿದ್ದಾರೆ.

*ಕನ್ನಡ ಭಾಷೆ ಉಳಿಸಿ ಬೆಳೆಸುವ ಆಶಯ ಕನ್ನಡ ಸಾಹಿತ್ಯ ಸಮ್ಮೇಳನಗಳಿಂದ ಈಡೇರುತ್ತಿವೆಯೇ ?

ಕನ್ನಡ ಪುಸ್ತಕಗಳನ್ನು ನೋಡುವುದು, ಕೊಳ್ಳುವುದು, ಕನ್ನಡ ಕುರಿತ ಮಾತುಗಳನ್ನು ಕೇಳುವುದು, ಕನ್ನಡದ್ದೇ ಆದ ವಾತಾವರಣದಲ್ಲಿ ಒಂದಷ್ಟು ಮಂದಿ ನೆರೆಯುವುದು, ಇವೆಲ್ಲವೂ ತುಸು ಭಾಷಾ ಪ್ರೀತಿ ಮತ್ತು ಭಾಷಾ ಪ್ರಜ್ಞೆ ಮೂಡಿಸುವ ಸಾಧ್ಯತೆಗಳಿವೆ. ಕನ್ನಡ ಭಾಷೆಯನ್ನು ಉಳಿಸುವ ಬೆಳೆಸುವ ಕೆಲಸದಲ್ಲಿ ಇದು ಕ್ವಚಿತ್ ಪೂರಕವಾಗಿ ಒದಗಬಹುದು ಅಷ್ಟೇ ಹೊರತು ಭಾರೀ ಏನು ಕನಸು ಕಾಣುವಂತಿಲ್ಲ. 

*ಕನ್ನಡ ಭಾಷೆ ಬೆಳೆಯಬೇಕಾದರೆ ಆಗಬೇಕಾದ ತುರ್ತು ಕೆಲಸಗಳು ಏನು?

ಮೊಟ್ಟಮೊದಲಿಗೆ ಕನ್ನಡ ಶಾಲೆಗಳನ್ನು ಎಂದಿಗೂ ಮುಚ್ಚದಿರುವದು. ಹೆತ್ತವರು ತಾವಾಗಿಯೇ ತಮ್ಮ ಮಕ್ಕಳಿಗೆ ಕನ್ನಡ ಶಾಲೆಗಳನ್ನು ಇಷ್ಟಪಟ್ಟು ಆಯ್ದುಕೊಳ್ಳುವಂತೆ ಪೂರಕವಾದ ವಾತಾವರಣ ನಿರ್ಮಾಣ ಮಾಡಬಬೇಕು. ಅಂದರೆ, ಕನ್ನಡ ಶಾಲೆಗಳನ್ನು ಅತ್ಯಾಧುನಿಕಗೊಳಿಸುವುದು. ವಿದ್ಯಾರ್ಥಿಗಳ ಸಂಖ್ಯೆ ಪೂರ್ತಿಯಾಗಿ ಕ್ಷೀಣಿಸಿದ ಶಾಲೆಯೊಂದು ಒಬ್ಬ ಶಿಕ್ಷಕರ ಪ್ರಯತ್ನದಿಂದ ನೂರು ಶೇಕಡಾ ಸಂಖ್ಯೆಗೆ ಮುಟ್ಟಿಕೊಂಡ ಉದಾಹರಣೆಗಳಿವೆ. ಅಂತಹ ಶಿಕ್ಷಕರ ಪ್ರಯೋಗಗಳನ್ನು ಮಾದರಿಗಳನ್ನು ಎಲ್ಲೆಡೆ ಬಳಸಿಕೊಳ್ಳುವುದು.

*ಈಚೆಗೆ ರಾಜ್ಯದಲ್ಲಿ ಹಿಂದಿ ಹೇರಿಕೆಯಂತಹ ವಿಚಾರಗಳು ಮುನ್ನಲೆಗೆ ಬರುತ್ತಿವೆ, ಈ ಬಗ್ಗೆ ನಿಮ್ಮ ಅಭಿಪ್ರಾಯ ? 

ಹಿಂದಿ ಹೇರಿಕೆ ತಪ್ಪು. ಬರೀ ತಪ್ಪಲ್ಲ, ಪ್ರಮಾದ. ಇದು ಆಗಲೇ ಕೂಡದು. ಭಾಷೆಗಳನ್ನು ಪ್ರೀತಿಸುವುದು ಬೇರೆ, ಅವುಗಳನ್ನು ಬಲವಂತವಾಗಿ ಅಳವಡಿಸಿಕೊಳ್ಳುವುದು ಬೇರೆ. ಇದು ಆಯಾ ಪ್ರಾದೇಶಿಕ ಭಾಷೆಗಳಿಗೆ ಎಸಗುವ ದ್ರೋಹ. ಒಂದು ರೀತಿಯಯಲ್ಲಿ ಮಾತೃದ್ರೋಹ ಎನ್ನಬಹುದು. 

* ಭಾಷೆ ಉಳಿಸುವ ನಿಟ್ಟಿನಲ್ಲಿ ಕನ್ನಡಿಗರಿಗೆ ಇರಬೇಕಾದ ಕಾಳಜಿಗಳು ಏನು ?

ನಿಮ್ಮ ಉಸಿರಿನ ಬಗ್ಗೆ ಇರಬೇಕಾದ ಕಾಳಜಿಗಳೇನು ಎಂದು ಕೇಳಿದರೆ ಏನು ಹೇಳುವುದು?! 

*ಇತರ ಭಾಷೆಗಳಿಂದ ಭವಿಷ್ಯದಲ್ಲಿ ಕನ್ನಡಕ್ಕೆ ಬಹುದೊಡ್ಡ ಆಪತ್ತು ಎದುರಾಗಲಿದೆ ಎಂಬ ಆತಂಕ ಕಾಡುತ್ತಿದೆಯೇ?

ಇತರ ಭಾಷೆಗಳಿಗೂ ಈ ಆತಂಕ ಇದೆ. ಇದನ್ನೆಲ್ಲಾ ಪರಿಹರಿಸಿಕೊಳ್ಳಬಹುದು. ಶಿಕ್ಷಣ ಕ್ಷೇತ್ರದ ಪರಿಣತರನ್ನು ಪ್ರಯೋಗ ಪಟುಗಳನ್ನು ಮೊದಲು ವಿಶ್ವಾಸಕ್ಕೆ ತೆಗೆದುಕೊಳ್ಳಿ, ಅವರ ಸಲಹೆ, ಸೂಚನೆಗಳಿಗೆ ಗಮನ ಕೊಡಿ. ಅವರ ತಿಳಿವಳಿಕೆಯನ್ನು ದುಡಿಸಿಕೊಳ್ಳಿ. ವಿಷಯಕ್ಕೆ ತಕ್ಕ ಪರಿಜ್ಞಾನದಿಂದ ಶಿಕ್ಷಣ ಕ್ರಮ ಮತ್ತು ನೀತಿ ಮಾಡಿ. ಮನಸ್ಸಿಗೆ ಬಂದ ಹಾಗಲ್ಲ.

‘ಮಾಡಿದ ತಪ್ಪು ಮರುಕಳಿಸದಿರಲಿ’

ಸಮ್ಮೇಳನದ ಅಧ್ಯಕ್ಷೆ ಆದರೂ ಅದರ ಹೊರಗೂ ನನ್ನ ನಿಲುವು ಒಂದೇ. ನಮ್ಮ ಮಕ್ಕಳಿಗೆ ನೆಲದ ಭಾಷೆ ತಪ್ಪಿ ಹೋಗದಂತೆ ತಡೆಯುವುದು. ನಮ್ಮ ಪೀಳಿಗೆ ಹೆಡ್ಡು ಬಿದ್ದು ಮಾಡಿದ ತಪ್ಪನ್ನು ನಮ್ಮ ನಂತರದ ಪೀಳಿಗೆ ಮಾಡದಿರುವಂತೆ ಆದಷ್ಟೂ ಎಚ್ಚರಿಸುವುದು. ಇದನ್ನೆಲ್ಲ ನನ್ನ ಭಾಷಣದಲ್ಲಿ ಹೇಳಿರುವೆ.

-ವೈದೇಹಿ, ಜಿಲ್ಲಾ ಕನ್ನಡ ಸಾಹಿತ್ಯ ಸಮ್ಮೇಳನಾಧ್ಯಕ್ಷೆ

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು