ಉಡುಪಿ: ಶ್ರೀಕೃಷ್ಣ ಜನ್ಮಾಷ್ಟಮಿ ಅಂಗವಾಗಿ ಇಲ್ಲಿನ ಕೃಷ್ಣಮಠದಲ್ಲಿ ಮಂಗಳವಾರ ವಿಟ್ಲಪಿಂಡಿ ಮಹೋತ್ಸವವು ವಿಜೃಂಭಣೆಯಿಂದ ನೆರವೇರಿತು.
ಮಹಾಪೂಜೆಗೂ ಮುನ್ನ ಗರ್ಭಗುಡಿಯಲ್ಲಿ ಕೃಷ್ಣನ ಮೃಣ್ಮಯ (ಮಣ್ಣಿನ) ಮೂರ್ತಿಗೆ ಪರ್ಯಾಯ ಪುತ್ತಿಗೆ ಮಠದ ಸುಗುಣೇಂದ್ರತೀರ್ಥ ಸ್ವಾಮೀಜಿ ಷೋಡಷೋಪಚಾರ ಪೂಜೆ ನೆರವೇರಿಸಿದರು. ಮಧ್ಯಾಹ್ನ 3 ಗಂಟೆಯ ಬಳಿಕ ಮೃಣ್ಮಯ ಉತ್ಸವ ಮೂರ್ತಿಯನ್ನು ಚಿನ್ನದ ಪಲ್ಲಕ್ಕಿಯಲ್ಲಿ ಕೂರಿಸಿ, ರಥಬೀದಿಗೆ ತರಲಾಯಿತು.
ಬಳಿಕ ಆ ಮೂರ್ತಿಯನ್ನು ಸ್ವರ್ಣ ರಥದಲ್ಲಿರಿಸಿ ರಥಬೀದಿಯಲ್ಲಿ ಮೆರವಣಿಗೆ ನಡೆಸಲಾಯಿತು. ಅಪಾರ ಸಂಖ್ಯೆಯ ಭಕ್ತರು ಇದಕ್ಕೆ ಸಾಕ್ಷಿಯಾದರು. ದೇವರ ಮೆರವಣಿಗೆಯ ನಡುವೆ ಪುತ್ತಿಗೆ ಶ್ರೀಗಳು ರಥ ಬೀದಿಯಲ್ಲಿ ಭಕ್ತರತ್ತ ಪ್ರಸಾದ ರೂಪದಲ್ಲಿ ಉಂಡೆ ಚಕ್ಕುಲಿಗಳನ್ನು ಎಸೆದರು.
ಮೆರವಣಿಗೆಯ ಬಳಿಕ ಮೃಣ್ಮಯ ಮೂರ್ತಿಯನ್ನು ಮಧ್ವ ಸರೋವರದಲ್ಲಿ ವಿಸರ್ಜಿಸಲಾಯಿತು. ಸಂಜೆ ರಾಜಾಂಗಣದಲ್ಲಿ ಹುಲಿವೇಷಗಳ ಅಬ್ಬರದ ಕುಣಿತ ಪ್ರದರ್ಶನ ನಡೆಯಿತು.
ಸಂಜೆ ಆರು ಗಂಟೆಯ ಸುಮಾರಿಗೆ ಬಿರುಸಿನ ಮಳೆ ಸುರಿದ ಕಾರಣ ವಿಟ್ಲಪಿಂಡಿಗೆ ಬಂದಿದ್ದ ಜನರಿಗೆ ತೊಂದರೆಯಾಯಿತು.
ಉಡುಪಿಯ ಶ್ರೀಕೃಷ್ಣ ಮಠದ ರಥಬೀದಿಯಲ್ಲಿ ಮಂಗಳವಾರ ನಡೆದ ವಿಟ್ಲಪಿಂಡಿ ಮಹೋತ್ಸವದ ವೇಳೆ ಪರ್ಯಾಯ ಪುತ್ತಿಗೆ ಮಠದ ಸುಗುಣೇಂದ್ರ ತೀರ್ಥ ಸ್ವಾಮೀಜಿ ಭಕ್ತರತ್ತ ಉಂಡೆ ಚಕ್ಕುಲಿಗಳನ್ನು ಎಸೆದರು ಪ್ರಜಾವಾಣಿ ಚಿತ್ರ: ಉಮೇಶ್ ಮಾರ್ಪಳ್ಳಿ