ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಅಖಿಲ ಭಾರತ ಅಂತರ ವಿವಿ ಮಟ್ಟದ ವಾಲಿಬಾಲ್ ಟೂರ್ನಿ

ಜ.4ರಿಂದ 8ರವರೆಗೆ ಆಯೋಜನೆ: 4 ವಲಯಗಳ 16 ತಂಡಗಳು ಭಾಗಿ
Last Updated 2 ಜನವರಿ 2023, 14:08 IST
ಅಕ್ಷರ ಗಾತ್ರ

ಉಡುಪಿ: 2022-23ನೇ ಸಾಲಿನ ಅಖಿಲ ಭಾರತ ಅಂತರ ವಿಶ್ವವಿದ್ಯಾಲಯ ಮಟ್ಟದ ಪುರುಷರ ವಾಲಿಬಾಲ್ ಟೂರ್ನಿ ಉಡುಪಿಯ ಪೂರ್ಣಪ್ರಜ್ಞ ಕಾಲೇಜಿನಲ್ಲಿ ಜ. 4 ರಿಂದ 8 ರವರೆಗೆ ನಡೆಯಲಿದೆ ಎಂದು ಮಂಗಳೂರು ವಿಶ್ವವಿದ್ಯಾಲಯದ ಕುಲಸಚಿವ ಡಾ.ಕಿಶೋರ್ ತಿಳಿಸಿದರು

ಪಿಪಿಸಿ ಉಡುಪಿ ಕಾಲೇಜಿನ ಸಭಾಂಗಣದಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ಮಂಗಳೂರು ವಿಶ್ವವಿದ್ಯಾಲಯ ಮತ್ತು ಪೂರ್ಣಪ್ರಜ್ಞ ಕಾಲೇಜು ಹಾಗೂ ಸ್ನಾತಕೋತ್ತರ ಕೇಂದ್ರ ಉಡುಪಿ ಇದರ ಜಂಟಿ ಆಶ್ರಯದಲ್ಲಿ ಟೂರ್ನಿ ನಡೆಯುತ್ತಿದ್ದು, ಜ.4 ರಂದು ಬೆಳಿಗ್ಗೆ 7.30ಕ್ಕೆ ಭೂಮಿಪೂಜೆಯೊಂದಿಗೆ ಕ್ರೀಡಾಕೂಟಕ್ಕೆ ಚಾಲನೆ ಸಿಗಲಿದೆ. 5ರಂದು ಬೆಳಗ್ಗೆ 10.30ಕ್ಕೆ ಅದಮಾರು ಮಠದ ಯತಿಗಳಾದ ವಿಶ್ವಪ್ರಿಯತೀರ್ಥರು ಹಾಗೂ ಈಶಪ್ರಿಯತೀರ್ಥರ ಆಶೀರ್ವಚನ ನೀಡಲಿದ್ದಾರೆ.

ದಕ್ಷಿಣ ಭಾರತದಲ್ಲಿ ಪ್ರಪ್ರಥಮ ಬಾರಿಗೆ ಒಳಾಂಗಣ ಕ್ರೀಡಾಂಗಣದಲ್ಲಿ ವಾಲಿಬಾಲ್ ಟೂರ್ನಿ ನಡೆಯುತ್ತಿದ್ದು ಬೆಳಿಗ್ಗೆ 7 ರಿಂದ ರಾತ್ರಿ 11 ರವರೆಗೆ ನಡೆಯಲಿದೆ. ಐದು ದಿನಗಳ ಕ್ರೀಡಾಕೂಟದಲ್ಲಿ ನಾಲ್ಕು ವಲಯಗಳಿಂದ ಹದಿನಾರು ತಂಡಗಳು, 250 ಕ್ರೀಡಾಪಟುಗಳು, 40 ಕ್ರೀಡಾ ತರಬೇತುದಾರರು, 50 ತಂಡ ವ್ಯವಸ್ಥಾಪಕರು ಹಾಗೂ ತೀರ್ಪುಗಾರರು ಭಾಗವಹಿಸಲಿದ್ದಾರೆ.

ವಿಶ್ವ ಚಾಂಪಿಯನ್‌ಶಿಪ್‌ಗೆ ಭಾರತವನ್ನು ಪ್ರತಿನಿಧಿಸಲಿರುವ ತಂಡವನ್ನು ಟೂರ್ನಿಯಲ್ಲಿ ಆಯ್ಕೆ ಮಾಡಲಾಗುವುದು. ಸ್ಪರ್ಧಿಗಳಿಗೆ ಊಟ, ಉಪಹಾರ ವಾಸ್ತವ್ಯದ ವ್ಯವಸ್ಥೆ ಮಾಡಲಾಗಿದೆ. ಜ.7 ರಂದು ಸಂಜೆ 5:30ಕ್ಕೆ 'ಪ್ರಜ್ಞಾಗೌರವ' ವಿಶೇಷ ಕಾರ್ಯಕ್ರಮದ ಮೂಲಕ ವಾಲಿಬಾಲ್‌ ಕ್ರೀಡೆಯಲ್ಲಿ ರಾಷ್ಟ್ರ, ಅಂತರ ರಾಷ್ಟ್ರೀಯ ಮಟ್ಟದಲ್ಲಿ ಸಾಧನೆ ಮಾಡಿದ ಕ್ರೀಡಾಸಾಧಕರನ್ನು ಸನ್ಮಾನಿಸಲಾಗುತ್ತದೆ.

ರಾಜ್ಯಪಾಲ ಥಾವರ್ ಚಂದ್ ಗೆಹ್ಲೋಟ್, ಭಾರತೀಯ ವಿಶ್ವವಿದ್ಯಾಲಯಗಳ ಸಂಘದ ಜಂಟಿ ಕಾರ್ಯದರ್ಶಿ ಡಾ.ಬಲ್ವಿತ್ ಸಿಂಗ್, ಜಿಲ್ಲಾ ಉಸ್ತುವಾರಿ ಸಚಿವ ಎಸ್. ಅಂಗಾರ, ಸಚಿವರಾದ ಕೋಟ ಶ್ರೀನಿವಾಸ ಪೂಜಾರಿ, ವಿ.ಸುನಿಲ್ ಕುಮಾರ್, ಉಡುಪಿಯ ಶಾಸಕ ರಘುಪತಿ ಭಟ್, ಮಂಗಳೂರು ವಿವಿ ಕುಲಪತಿ ಪ್ರೊ.ಪಿ.ಸುಬ್ರಹ್ಮಣ್ಯ ಯಡಪಡಿತ್ತಾಯ, ಮಂಗಳೂರು ವಿಶ್ವವಿದ್ಯಾಲಯದ ಕುಲಸಚಿವ ಡಾ. ಕಿಶೋರ್ ಕುಮಾರ್ ಸಿ.ಕೆ., ಪೂರ್ಣಪ್ರಜ್ಞ ಆಡಳಿತ ಮಂಡಳಿಯ ಗೌರವ ಕೋಶಾಧಿಕಾರಿ ಸಿ.ಎ.ಪ್ರಶಾಂತ್ ಹೊಳ್ಳ, ಕಾಲೇಜಿನ ಪ್ರಾಂಶುಪಾಲ ಡಾ. ರಾಘವೇಂದ್ರ ಉಪಸ್ಥಿತರಿರಲಿದ್ದಾರೆ. ಪೂರ್ಣಪ್ರಜ್ಞ ಆಡಳಿತ ಮಂಡಳಿಯ ಗೌರವ ಕಾರ್ಯದರ್ಶಿ ಡಾ. ಜಿ.ಎಸ್. ಚಂದ್ರಶೇಖರ್ ಅಧ್ಯಕ್ಷತೆ ವಹಿಸಲಿದ್ದಾರೆ.

ಜ.8ರಂದು ಸಂಜೆ 7 ಗಂಟೆಗೆ ಸಮಾರೋಪ ಸಮಾರಂಭ ನಡೆಯಲಿದ್ದು, ಯತಿಗಳಾದ ವಿಶ್ವಪ್ರಿಯ ತೀರ್ಥರು, ಈಶಪ್ರಿಯ ತೀರ್ಥರು, ಕೇಂದ್ರ ಕೃಷಿ ಮತ್ತು ರೈತರ ಕಲ್ಯಾಣ ಖಾತೆ ರಾಜ್ಯ ಸಚಿವ ಶೋಭಾ ಕರಂದ್ಲಾಜೆ, ರಾಜ್ಯದ ಕ್ರೀಡಾಸಚಿವ ನಾರಾಯಣ ಗೌಡ, ಮಾಜಿ ಸಚಿವ ಪ್ರಮೋದ್ ಮಧ್ವರಾಜ್, ಕರ್ನಾಟಕ ಬ್ಯಾಂಕಿನ ವ್ಯವಸ್ಥಾಪಕ ನಿರ್ದೇಶಕ ಮಹಾಬಲೇಶ್ವರ ರಾವ್ ಭಾಗವಹಿಸಲಿದ್ದಾರೆ ಎಂದರು.

ಪತ್ರಿಕಾಗೋಷ್ಠಿಯಲ್ಲಿ ಪೂರ್ಣಪ್ರಜ್ಞಾ ಆಡಳಿತ ಮಂಡಳಿಯ ಗೌರವ ಕಾರ್ಯದರ್ಶಿ ಡಾ.ಜಿ.ಎಸ್. ಚಂದ್ರಶೇಖರ್, ಮಂಗಳೂರು ವಿವಿ ದೈಹಿಕ ಶಿಕ್ಷಣ ವಿಭಾಗದ ನಿರ್ದೇಶಕ ಡಾ.ಜೆರಾಲ್ಡ್ ಸಂತೋಷ್ ಡಿಸೋಜ, ಪಿಪಿಸಿ ಕಾಲೇಜು ಪ್ರಾಂಶುಪಾಲ ಡಾ.ರಾಘವೇಂದ್ರ, ಕಾಲೇಜಿನ ದೈಹಿಕ ಶಿಕ್ಷಣ ವಿಭಾಗದ ಮುಖ್ಯಸ್ಥ ಸುಕುಮಾರ್ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT