ಶನಿವಾರ, 20 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬ್ರಹ್ಮಾವರ- ಕೃಷಿ ಭೂಮಿಗೆ ನುಗ್ಗಿದ ನೀರು: ರೈತರು ಕಂಗಾಲು

ಹೆರಾಯಿಬೆಟ್ಟು ಕಿಂಡಿ ಅಣೆಕಟ್ಟೆ ಗೇಟ್ ಬಂದ್
Last Updated 20 ನವೆಂಬರ್ 2022, 7:36 IST
ಅಕ್ಷರ ಗಾತ್ರ

ಬ್ರಹ್ಮಾವರ: ಉಪ್ಪೂರು ಹೆರಾಯಿಬೆಟ್ಟು ಬೈಕಾಡಿಯಲ್ಲಿ ಹರಿಯುವ ಮಡಿಸಾಲು ಹೊಳೆಗೆ ಸಣ್ಣ ನೀರಾವರಿ ಇಲಾಖೆಯಿಂದ ಸುಮಾರು ₹ 35 ಕೋಟಿ ಅಂದಾಜಿನಲ್ಲಿ ನಿರ್ಮಿಸಲಾದ ಉಪ್ಪುನೀರು ತಡೆ ಕಿಂಡಿ ಅಣೆಕಟ್ಟೆ, ಸೇತುವೆಯ ಗೇಟ್‌ಗಳನ್ನು ಪ್ರಥಮ ಬಾರಿ ಮುಚ್ಚಿದ ಕಾರಣ ನದಿ ತೀರದ 1.5 ಕಿ.ಮೀ ವ್ಯಾಪ್ತಿಯ ಕೃಷಿಭೂಮಿಯಲ್ಲಿ ನೀರು ನಿಂತು ಸುಗ್ಗಿ ಬೆಳೆ ಮತ್ತು ಉದ್ದಿನ ಬೆಳೆ ನಾಶವಾಗಿದೆ ಎಂದು ಉಪ್ಪೂರು ಗ್ರಾಮದ ಕೃಷಿಕರು ದೂರಿದ್ದಾರೆ.

ಕಿಂಡಿ ಅಣೆಕಟ್ಟೆಯ ನಿರ್ಮಾಣದಿಂದ ಕುಡಿಯುವ ನೀರಿಗೆ ಮತ್ತು ಕೃಷಿ ಭೂಮಿಗೆ ಅನುಕೂಲವಾಗಲಿದೆ ಎಂದು ಸಂತಸದಲ್ಲಿದ್ದ ಇಲ್ಲಿಯ ಕೃಷಿಕರಿಗೆ, ಕಳೆದ ಮೂರ್ನಾಲ್ಕು ದಿನಗಳ ಹಿಂದೆ ಉಪ್ಪು ನೀರು ಬಾರದಂತೆ ಅಣೆಕಟ್ಟೆ ಗೇಟ್‌ ಗಳನ್ನು ಮುಚ್ಚಿದ್ದರಿಂದ ಹೊಳೆಯಲ್ಲಿ ನೀರಿನ ಮಟ್ಟದಲ್ಲಿ ಏರಿಕೆಯಾಗಿ ಗದ್ದೆಗಳಲ್ಲಿ ನೀರು ನಿಲ್ಲಲು ಆರಂಭಿಸಿ ಕಂಗಾಲು ಮಾಡಿದೆ. ಬೆಳೆದ ಉದ್ದು, ನೀರು ನಿಂತು ಕೊಳೆಯಲು ಆರಂಭವಾಗಿದೆ. ಸುಗ್ಗಿ ಬೆಳೆ ಮಾಡಲು ಬೀಜ ಹಾಕಲು ಆಗುತ್ತಿಲ್ಲ. ಉಳುಮೆ ಮಾಡಲು ಆಗುತ್ತಿಲ್ಲ ಎಂದು ರೈತರು ‘ಪ್ರಜಾವಾಣಿ’ಗೆ ತಮ್ಮ ಅಳಲನ್ನು ತೋಡಿಕೊಂಡಿದ್ದಾರೆ.

‘ಪ್ರಥಮ ಬಾರಿ ಕಿಂಡಿ ಅಣೆಕಟ್ಟೆಗೆ ಗೇಟ್‌ಗಳನ್ನು ಅಳವಡಿಸಿದ್ದು, ಇದರಿಂದ ಎಲ್ಲೆಲ್ಲ ನೀರು ಬಂದಿದೆ ಎನ್ನುವುದನ್ನು ಪರಿಶೀಲಿಸಿ ಇದನ್ನು ಮುಂದಿನ ದಿನಗಳಲ್ಲಿ ಸರಿಪಡಿಸಲು ಪ್ರಯತ್ನಿಸುತ್ತೇವೆ. ಈಗಾಗಲೇ ತೊಂದರೆಯಾದ ಪ್ರದೇಶಗಳಿಗೆ ಇಂಜಿನಿಯರ್‌ ಭೇಟಿ ನೀಡಿದ್ದು, ತಾತ್ಕಾಲಿಕವಾಗಿ ಏನು ಮಾಡಬಹುದು ಎನ್ನುವ ಬಗ್ಗೆ ತಿಳಿದು, ಇನ್ನೆರಡು ಮೂರು ದಿನದಲ್ಲಿಯೇ ಕ್ರಮ ತೆಗೆದುಕೊಳ್ಳಲಾಗುವುದು’ ಎಂದು ನೀರಾವರಿ ಇಲಾಖೆಯ ಅಧಿಕಾರಿಗಳು ತಿಳಿಸಿದ್ದಾರೆ.

ಹೊಸ ಕಿಂಡಿ ಅಣೆಕಟ್ಟೆ ನಿರ್ಮಿಸಿದ ನಂತರ ಭತ್ತದ ಮೊದಲ ಬೆಳೆ ಸಮಯದಲ್ಲಿಯೂ ಇದೇ ರೀತಿ ಗದ್ದೆಗಳಲ್ಲಿ ನೀರು ನಿಂತು ಅಷ್ಟೊಂದು ಒಳ್ಳೆಯ ಫಸಲು ಸಿಕ್ಕಿರಲಿಲ್ಲ. ಈಗ ಗದ್ದೆಗಳಲ್ಲಿ ನಿಂತಿದ್ದರಿಂದ ಉದ್ದು ಮತ್ತು ಸುಗ್ಗಿ ಬೆಳೆಗೂ ತೊಂದರೆಯಾಗಿದೆ. ಅಣೆಕಟ್ಟೆ ನಿರ್ಮಿಸುವ ಮೊದಲು ಎಷ್ಟು ಪ್ರಮಾಣದ ನೀರು ಎಲ್ಲೆಲ್ಲಿ ನಿಲ್ಲುತ್ತದೆ ಎನ್ನುವ ಬಗ್ಗೆ ಸರಿಯಾದ
ಮಾಹಿತಿಯನ್ನು ಕಲೆ ಹಾಕಿ
ಮಾಡಿದ್ದಲ್ಲಿ ಇಂದು ಸಮಸ್ಯೆ ಆಗುತ್ತಿರಲಿಲ್ಲ. ನದಿ ತೀರದ ಬಾವಿಗಳು ಈಗ ತುಂಬಿದ್ದರೂ, ನೀರು ವಾಸನೆಯಿಂದ ಕೂಡಿ ಕುಡಿಯಲು ಆಗುತ್ತಿಲ್ಲ ಎನ್ನುವ ಮಾತುಗಳೂ
ಇಲ್ಲಿಯ ಸ್ಥಳಿಯರಿಂದ ಕೇಳಿ ಬರುತ್ತಿದೆ ಎಂದು ಸ್ಥಳೀಯ ಕೃಷಿಕ ಕರುಣಾಕರ ಅಳಲನ್ನು ತೋಡಿಕೊಂಡಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT