ಬುಧವಾರ, 24 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ವಿಶ್ವ ಮಹಿಳಾ ದಿನಾಚರಣೆ: ಅಲೆಗಳನ್ನು ಸೀಳಿ ಮುನುಗ್ಗಿದ ಯುವತಿಯರ ಪಡೆ

ವಿಶ್ವ ಮಹಿಳಾ ದಿನಾಚರಣೆ ಅಂಗವಾಗಿ ಮಲ್ಪೆಯಿಂದ ಸೇಂಟ್ ಮೇರಿಸ್ ದ್ವೀಪಕ್ಕೆ ಕಯಾಕಿಂಗ್‌
Last Updated 8 ಮಾರ್ಚ್ 2021, 14:48 IST
ಅಕ್ಷರ ಗಾತ್ರ

ಉಡುಪಿ: ವಿಶ್ವ ಅಂತರರಾಷ್ಟ್ರೀಯ ಮಹಿಳಾ ದಿನದ ಅಂಗವಾಗಿ ಸೋಮವಾರ ಯುವತಿಯರ ತಂಡ ಮಲ್ಪೆಯ ಕಡಲ ತೀರದಿಂದ ಸೇಂಟ್ ಮೇರಿಸ್ ದ್ವೀಪದವರೆಗೂ ಕಯಾಕಿಂಗ್ ನಡೆಸಿ ಎಲ್ಲರ ಗಮನ ಸೆಳೆಯಿತು. ಸಮುದ್ರದಲ್ಲಿ ನುಗ್ಗಿ ಬರುತ್ತಿದ್ದ ದೈತ್ಯ ಅಲೆಗಳನ್ನು ಸೀಳಿಕೊಂಡು ಮುನುಗ್ಗಿದ ಸಾಹಸಿ ಯುವತಿಯರ ಪಡೆ ಯಶಸ್ವಿಯಾಗಿ ದ್ವೀಪವನ್ನು ತಲುಪಿ ಸಾಧನೆ ಮಾಡಿತು.

ಡಾ.ಜಿ ಶಂಕರ್ ಮಹಿಳಾ ಪ್ರಥಮ ದರ್ಜೆ ಕಾಲೇಜು, ಎಂಜಿಎಂ ಕಾಲೇಜು ಮತ್ತು ಕ್ರೀಡಾ ಇಲಾಖೆ ಹಾಸ್ಟೆಲ್‌ನ 40 ವಿದ್ಯಾರ್ಥಿನಿಯರು ಜನರಲ್ ತಿಮ್ಮಯ್ಯ ಸಾಹಸ ಅಕಾಡೆಮಿಯ ಸಹಯೋಗದಲ್ಲಿ ಕಯಾಕಿಂಗ್ ಸಾಹಸಯಾತ್ರೆಯ ತರಬೇತಿ ಪಡೆದಿದ್ದರು. ಅವರಲ್ಲಿ 24 ವಿದ್ಯಾರ್ಥಿನಿಯರು ಮಲ್ಪೆಯಿಂದ ಸೇಂಟ್ ಮೆರೀಸ್ ದ್ವೀಪಕ್ಕೆ ಕಯಾಕಿಂಗ್ ಯಾತ್ರೆಯನ್ನು ಯಶಸ್ವಿಯಾಗಿ ಪೂರೈಸಿದರು.

ಕಯಾಕಿಂಗ್‌ನಲ್ಲಿ ಇಬ್ಬರು ಯುವತಿಯರು ಲಯಬದ್ಧವಾಗಿ ಹುಟ್ಟುಹಾಕುತ್ತಾ ಸಾಗುತ್ತಿದ್ದರೆ, ಹಲವರು ತಂಡವನ್ನು ಹುರಿದುಂಬಿಸಿದರು. ಕಡಲಿನ ಅಬ್ಬರವನ್ನೂ ಮೀರಿ ಯುವತಿಯರು ಉತ್ಸಾಹದಿಂದ ದ್ವೀಪ ಮುಟ್ಟಿದರು. ಎಲ್ಲರ ಮೊಗದಲ್ಲೂ ಮಂದಹಾಸ ಎದ್ದು ಕಾಣುತ್ತಿತ್ತು.

ಇದಕ್ಕೂ ಮೊದಲು ನಡೆದ ವೇದಿಕೆ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದ ನಗರಸಭೆ ಅಧ್ಯಕ್ಷೆ ಸುಮಿತ್ರಾ ನಾಯಕ್‌, ಮಹಿಳೆಯರು ಎಲ್ಲ ಕ್ಷೇತ್ರದಲ್ಲಿ ಸಿಕ್ಕ ಅವಕಾಶವನ್ನು ಸದುಪಯೋಗಪಡಿಸಿಕೊಂಡು ದಿಟ್ಟ ಹೆಜ್ಜೆಯನ್ನಿಟ್ಟು ಮುನ್ನುಗ್ಗಿದರೆ ಸುಲಭವಾಗಿ ಗುರಿ ಮುಟ್ಟಬಹುದು ಎಂದು ಕಿವಿಮಾತು ಹೇಳಿದರು.

ಜಿಲ್ಲಾ ಪಂಚಾಯತ್ ಉಪಾಧ್ಯಕ್ಷೆ ಶೀಲಾ ಕೆ.ಶೆಟ್ಟಿ ಮಾತನಾಡಿ, ಮಹಿಳೆಯರಿಗೆ ವಿದ್ಯೆ, ಜ್ಞಾನಾರ್ಜನೆ ಮತ್ತು ಉತ್ತಮ ಶಿಕ್ಷಣಕ್ಕೆ ಅಗತ್ಯ ಯೋಜನೆಗಳಿವೆ. ಮಹಿಳೆಯರು ಒಂದು ರಂಗಕ್ಕೆ ಸೀಮಿತವಾಗದೆ ಎಲ್ಲ ರಂಗಗಳಲ್ಲೂ ಛಾಪು ಮೂಡಿಸಬೇಕು ಎಂದರು.

ಹೆಚ್ಚುವರಿ ಜಿಲ್ಲಾಧಿಕಾರಿ ಸದಾಶಿವಪ್ರಭು ಮಾತನಾಡಿ, ಯುದ್ಧ ವಿಮಾನದ ಪೈಲಟ್ ಆಗಿರುವ ಮಹಿಳಾ ಸಾಧಕಿಯರ ಸಾಧನೆ ಕಣ್ಮುಂದೆ ಇದೆ. ದೇಶದ ಏಳಿಗೆಗೆ ಮಹಿಳೆಯರ ಕೊಡುಗೆ ಅನನ್ಯ ಎಂದರು.

ಜಿಲ್ಲಾ ಪಂಚಾಯಿತಿ ಅಧ್ಯಕ್ಷ ದಿನಕರ ಬಾಬು ಅಧ್ಯಕ್ಷತೆ ವಹಿಸಿದ್ದರು. ಡಾ.ಜಿ.ಶಂಕರ್ ಕಾಲೇಜಿನ ಪ್ರಾಂಶುಪಾಲ ಡಾ.ಭಾಸ್ಕರ್ ಶೆಟ್ಟಿ, ನಗರಸಭಾ ಉಪಾದ್ಯಕ್ಷೆ ಲಕ್ಷ್ಮಿ ಮಂಜುನಾಥ್, ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆಯ ಉಪ ನಿರ್ದೇಶಕ ಡಾ.ರೋಶನ್‌ಕುಮಾರ್ ಶೆಟ್ಟಿ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT